ಭೂತಾಕಾರವಾದ ಆ ಛಾಯೆ ಅವನನ್ನು ಕಾಡುತ್ತಿತ್ತು. ಯಾಕೋ ತಿಳಿಯಲಿಲ್ಲ. ಇತ್ತೀಚೆಗೆ ತಾನೇ ಪಂಜಾಗುಟ್ಟಾ ಠಾಣೆಗೆ ಒಂದು ಸಾವಿನ ಸುದ್ದಿ ವರದಿಯಾಯಿತು. ಕ್ರೈಂ ವಿಭಾಗದಲ್ಲಿದ್ದ ದಾನಯ್ಯ ನಾಯುಡುವಿಗೆ ಸರದಿಯಂತೆ ಆ ಕೇಸನ್ನು ಒಪ್ಪಿಸಲಾಯಿತು. ಕೇಸ್ ಬಂದಾಗಲೇ ರಂಗಾ ರೆಡ್ಡಿ ಹೇಳಿದ್ದ: "ದಾನಯ್ಯ ನಾಯ್ಡು, ಇದೊಂದು ಓಪನ್ ಅಂಡ್ ಷಟ್ ಕೇಸು. ನೇರ ಆತ್ಮಹತ್ಯೆ. ದೇಹವನ್ನು ಪೋಸ್ಟ್ ಮಾರ್ಟೆಂಗೆ ಕಳಿಸಿ ಒಂದು ವರದಿ ಗೀಚಿ ಹಾಕು, ಅಷ್ಟೇ"

ಆ ಕೇಸನ್ನು ಪರಿಶೀಲಿಸಲು ದಾನಯ್ಯ ಹೋದ. ಬೇರೆ ಪರಿಸ್ಥಿತಿಯಲ್ಲಾಗಿದ್ದರೆ ರಂಗಾ ರೆಡ್ಡಿ ಹೇಳಿದ ಹಾಗೆ ಯಾಂತ್ರಿಕವಾಗಿ ಒಂದು ವರದಿ ಬರೆದು ಹಾಕುತ್ತಿದ್ದನೇನೋ. ಆದರೆ ಮನೆಯ ಬಳಿ ಹೋಗುತ್ತಿದ್ದಂತೆ ಅವನಿಗೆ ಭಯವಾಯಿತು. ಅದು ತನ್ನ ಸ್ನೇಹಿತ ಕೋಟೇಶ್ವರ ರಾವ್‌ನ ಮನೆ. ಒಳ ಹೋಗಿ ನೋಡಿದಾಗ ಅವನ ಅನುಮಾನ ನಿಜವಾಯಿತು. ಅವನೇ... ಅವನದೇ ಶವ. ಹಲ್ಲಿಂದ ಹೊರಚಾಚಿದ ನಾಲಿಗೆಯನ್ನು ಕಡಿದುಬಿಟ್ಟಿದ್ದ. ಸ್ವಲ್ಪ ರಕ್ತ ಒಸರಿತ್ತು. ಮನೆಯಲ್ಲಿ ಉಯ್ಯಾಲೆಗೆಂದು ಮಾಡಿದ್ದ ಕೊಂಡಿಗೆ ದನ ಕಟ್ಟುವ ಹಗ್ಗ ನೇತಾಡಿಸಿ, ನೇರ ನೇಣುಹಾಕಿಕೊಂಡಿದ್ದ. ಕತ್ತಿನ ಸುತ್ತೂ ರಕ್ತ ಹೆಪ್ಪುಗಟ್ಟಿ ನೀಲಿ ಬಣ್ಣಕ್ಕೆ ತಿರುಗಿತ್ತು. ಪೋಲೀಸರಿಗೂ ಸೇರಿಸಿ, ಎಲ್ಲರಿಗೂ ಪತ್ರ ಬರೆದು, ಉಯಿಲು ತಯಾರಿಸಿ ವ್ಯವಸ್ಥಿತವಾಗಿ ಸತ್ತಿದ್ದ. ಆ ಪರಿಸ್ಥಿತಿಯನ್ನು ನೋಡಿದ ತಕ್ಷಣ ದಾನಯ್ಯ ನಾಯ್ಡುವಿಗೆ ಬಿಕ್ಕಳಿಗೆ ಬಂತು. ಅಲ್ಲಿಂದಲೇ ರಂಗಾ ರೆಡ್ಡಿಗೆ ಫೋನ್ ಮಾಡಿ ಈ ಕೇಸ್ ಅವನೇ ನೋಡಬೇಕೆಂದು ಕೇಳಿಕೊಂಡ... "ಡೋಂಟ್ ವರಿ" ಎಂದು ದಾನಯ್ಯನನ್ನು ಸಮಾಧಾನಪಡಿಸಿದ ರಂಗಾರೆಡ್ಡಿ ಯಾಂತ್ರಿಕವಾಗಿ ಮಹಜರ್ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ.
ಮತ್ತೊಂದು ಆತ್ಮಹತ್ಯೆ!
ಆತ್ಮಹತ್ಯೆ ದಾನಯ್ಯನನ್ನು ಬಹಳ ದಿನಗಳಿಂದ ಕಾಡುತ್ತಿರುವ ವಿಷಯವಾಗಿತ್ತು. ಅವನ ಸರ್ವೀಸಿನಲ್ಲಿ ಎಷ್ಟೋ ಆತ್ಮಹತ್ಯೆಯ ಪ್ರಕರಣಗಳನ್ನು ನೋಡಿದ್ದ. ಆದರೆ ಜನ ತಮ್ಮ ಜೀವವನ್ನು ಮುಗಿಸಿಕೊಳ್ಳುವ ಇಂಥ ನಿರ್ಧಾರವನ್ನು ಹೇಗೆ ಕೈಗೊಳ್ಳುತ್ತಾರೋ ಅವನಿಗಿನ್ನೂ ಅರ್ಥವಾಗಿರಲಿಲ್ಲ. ಪರೀಕ್ಷೆಯಲ್ಲಿ ನಪಾಸಾದ ಒಂದು ಕ್ಷುಲ್ಲಕ ಕಾರಣದಿಂದ ಹಿಡಿದು ಪ್ರೇಮಭಂಗ, ಸಾಂಸಾರಿಕ ತಾಪತ್ರಯಗಳ ವರೆಗೆ.. ಸಾಯುವ ನಿರ್ಧಾರದ ಹಿಂದಿರುವ ತರ್ಕವೇ ಅವನಿಗೆ ಅರ್ಥವಾಗಿರಲಿಲ್ಲ. ಆತ್ಮಹತ್ಯೆಗೂ ಎಷ್ಟು ವಿಧಾನಗಳು! ನಿದ್ರೆಗುಳಿಗೆ ನುಂಗುವುದರಿಂದ, ನೀರಿಗೆ ಹಾರುವ, ನಾಡಿ ಕತ್ತರಿಸಿಕೊಳ್ಳುವ, ಬೆಂಕಿ ಹಚ್ಚಿಕೊಳ್ಳುವ, ತುಫಾಕಿಯನ್ನು ಬಾಯಲ್ಲಿಟ್ಟು ಗುಂಡು ಹಾರಿಸಿಕೊಳ್ಳುವ ಕ್ರೂರ ವಿಧಾನಗಳವರೆಗೆ....
ಈಗ ಹೃದಯಕ್ಕೆ ಹತ್ತಿರವಾದ ಈ ಕೋಟೇಶ್ವರನ ಸಾವು. ಅವನು ಪೋಲೀಸರಿಗೆಂದು ಬರೆದಿಟ್ಟ ಪತ್ರವನ್ನು ಓದಿದ. ಸಾಯಲು ಅವನು ಕಾರಣವನ್ನೇ ಕೊಟ್ಟಿರಲಿಲ್ಲ. ಎಲ್ಲಾ ಸಾಂಸಾರಿಕ ಜವಾಬ್ದಾರಿಗಳೂ ಮುಗಿದಿರುವುದರಿಂದ ಬದುಕಿರುವುದರಲ್ಲಿ ಅರ್ಥವಿಲ್ಲವೆಂದಿದ್ದ! ಅವನು ಸುಮಾರು ಒಂದು ತಿಂಗಳ ಹಿಂದೆ ದಾನಯ್ಯನಿಗೆ ಸಿಕ್ಕಾಗ ಹತ್ತಿರಹತ್ತಿರ ಇಂಥದೇ ಮಾತುಗಳನ್ನಾಡಿದ್ದ. ಆದರೆ ಅದು ಕುಡಿದ ಮತ್ತಿನಲ್ಲಿ ಹಾಸ್ಯದ ಧ್ವನಿಯಲ್ಲಿ ಹೇಳಿದ್ದರಿಂದ ಅದನ್ನು ತಾನು ನಿಜಕ್ಕೂ ಲಘುವಾಗಿ ತೆಗೆದುಕೊಂಡಿದ್ದ. ಅಂದು ನಡೆದ ಸಂಭಾಷಣೆಯನ್ನು ನೆನಪಿಸಿಕೊಂಡು ಅವನ ಸಾವಿಗೆ ಅರ್ಥವನ್ನು ಹುಡುಕಲು ದಾನಯ್ಯ ಪ್ರಯತ್ನಿಸಿದ. ಮನಸ್ಸೆಲ್ಲಾ ರಾಡಿಯಾದಂತಾಯಿತು. ಅವನು ರಂಗಾ ರೆಡ್ಡಿಯ ಕ್ಷಮೆ ಕೋರಿ ನೇರ ನೀಲಿಮಾ ಬಾರಿನ ಪ್ರತ್ಯೇಕ ಕೋಣೆಯಲ್ಲಿ ಹೋಗಿ ಕುಸಿದು ಒಂದು ಕ್ವಾರ್ಟರ್ ರಮ್ - ಕೋಲಾಕ್ಕೆ ಆರ್ಡರ್ ಕೊಟ್ಟು ರಾಜಾ ಮಸಾಲೆಯನ್ನು ಮೆಲ್ಲುತ್ತಾ ಕೂತ. ಪೂರ್ಣವಾಗಿ ಏರಿಸಿಕೊಂಡು ಈ ಪ್ರಪಂಚವನ್ನೇ ಮರೆಯಬೇಕು ಅಂತ ದಾನಯ್ಯನಿಗೆ ಅನ್ನಿಸಿತು.
ದಾನಯ್ಯ ರಮ್‌ನ ಒಂದೊಂದೇ ಗುಟುಕು ಹೀರುತ್ತಿದ್ದಂತೆ ಅವನಿಗೆ ಕೋಟೇಶ್ವರನ ನೆನಪುಗಳು ಕಾಡತೊಡಗಿದವು. ಶಾಲಾದಿನಗಳಿಂದಲೂ ಅವನು ತನಗೆ ಸ್ನೇಹಿತ. ಅದಕ್ಕೇ ಅವನನ್ನು ವಿಂಟೇಜ್ ಫ್ರೆಂಡ್ ಎಂದು ದಾನ್ಯಯ್ಯ ಕರೆಯುತ್ತಿದ್ದ. ಶಾಲೆಯ ನಂತರ ಅವನು ವಿಜ್ಞಾನದ ಬೆನ್ನೇರಿ ನಂತರ ಕೃಷಿ ವಿಶ್ವವಿದ್ಯಾನಿಲಯ ಸೇರಿದ. ದಾನಯ್ಯ ಜೂವಾಲಜಿಯಲ್ಲಿ ಅಸಹ್ಯಕರವಾದ ಜಿರಲೆ, ಕಪ್ಪೆಗಳಂತಹ ಪ್ರಾಣಿಗಳನ್ನು ಕತ್ತರಿಸಬೇಕಾದೀತೆಂಬ ಏಕೈಕ ಭಯದಿಂದ ಕಾಮರ್ಸ್ ಬೆನ್ನೇರಿ ಹೋದ. ಅವನು ಸಹಜವೆಂಬಂತೆ ಬ್ಯಾಂಕ್ ಸೇರಿದ. ದಾನಯ್ಯ ನಾನಾ ರಾಜಕೀಯಗಳನ್ನು ಮಾಡಿ ಅವನಿಗೇ ಅಸಹಜವೆನ್ನಿಸಿದ ಈ ಪೋಲೀಸ್ ಇಲಾಖೆಗೆ ಸೇರಿದ.
ಮೊನ್ನೆ, ಮೊನ್ನೆ, ಕೇವಲ ಒಂದು ತಿಂಗಳ ಹಿಂದೆ ಇದೇ ಬಾರಿನ ಇದೇ ಕೋಣೆಯಲ್ಲಿ ಇಬ್ಬರೂ ಗುಂಡು ಹಾಕಲು ಸೇರಿದ ನೆನಪಿನ ಸೆಂಟಿಮೆಂಟಾಲಿಟಿ ದಾನಯ್ಯನನ್ನು ಕಾಡಿತು. ಬಹಳ ದಿನಗಳ ನಂತರ ನಡೆದ ಭೇಟಿ ಅದು. ಕೋಟೇಶ್ವರ ಮೂರು ವರ್ಷ ನಿರ್ಮಲ್‌ನಲ್ಲಿ ಕೆಲಸ ಮಾಡಿ ಎಂಟು ತಿಂಗಳುಗಳ ಹಿಂದೆ ಹೈದರಾಬಾದಿಗೆ ವರ್ಗ ತೆಗೆದುಕೊಂಡು ಬಂದಿದ್ದ. ನಿರ್ಮಲ್‍ನ ರೈತ ಸೇವಾ ಸಹಕಾರ ಸಂಘಕ್ಕೆ ಮ್ಯಾನೇಜಿಂಗ್ ಡೈರೆಕ್ಟರ್ ಆಗಿ ಅವನನ್ನು ಡೆಪ್ಯೂಟ್ ಮಾಡಿದ್ದರು. ಆ ಪ್ರಾಂತದಲ್ಲಿ ಕೋಟೇಶ್ವರನ ಬಗ್ಗೆ ಬಹಳ ಒಳ್ಳೆಯ ಮಾತುಗಳು ಕೇಳಿಬರುತ್ತವೆ. ಬಹಳ ಹೆಸರು, ಗೌರವಗಳನ್ನು ಅವನು ಸಂಪಾದಿಸಿದ್ದನಂತೆ. ದಾನಯ್ಯ ಅದನ್ನೇ ಹಿಡಿದು ಅಂದು ಅವನನ್ನು ಹೊಗಳಲು ಪ್ರಾರಂಭ ಮಾಡಿದ. ಅವನ ಹೊಗಳಿಕೆ ಹೆಚ್ಚಾದಂತೆ ಕೋಟೇಶ್ವರನ ಚಡಪಡಿಕೆಯೂ ಜಾಸ್ತಿಯಾಗುತ್ತಾ ಹೋಯಿತು ಅನ್ನಿಸುತ್ತದೆ. ಅಂದು ಅವನು ಒಂದೊಂದು ಪೆಗ್ ಹಾಕುವಾಗಲೂ ಒಂದೊಂದು ನಿಗೂಢ ಕಥೆಯನ್ನು ಹೇಳುತ್ತಾ ಹೋದ. ಪೂರ್ತಿ ಅಮಲೇರುವಷ್ಟು ಹೊತ್ತಿಗೆ ಒಳಗಿದ್ದದ್ದನ್ನೆಲ್ಲಾ ವಾಂತಿ ಮಾಡಿಕೊಂಡು ಕುಸಿದಿದ್ದ.
ಕೋಟೇಶ್ವರನ ಕಾಲೇಜಿನ ದಿನಗಳು ಸಹ ಒಂದು ರೀತಿ ರಂಜನೀಯವಾಗೇ ಕಳೆದಿದ್ದವು. ಆಗೆಲ್ಲಾ ಅವನು ಆದರ್ಶದ ಮಾತುಗಳನ್ನಾಡುತ್ತಿದ್ದ. ಜಯ ಎನ್ನುವ ಹುಡುಗಿಯನ್ನು ಪ್ರೀತಿಸಿ, ಆರ್ಯಸಮಾಜದ ರೀತಿಯಲ್ಲಿ ಮದುವಯಾದ. ಏನೇ ಬಂದರೂ ಪ್ರತಿಭಟಿಸುವ ಜಾಯಮಾನ ಅವನದ್ದು. ಒಂದು ಕಡೆ ಸಂಪ್ರದಾಯಸ್ಥರ ನಡುವಿನಲ್ಲಿ ಸಂಪ್ರದಾಯಗಳನ್ನು ಧಿಕ್ಕರಿಸಿದರೆ, ವಿದ್ಯಾರ್ಥಿಗಳ ನಡುವೆ ಬ್ರಾಹ್ಮಣ್ಯದ ಉದಾತ್ತತೆಯ ಬಗ್ಗೆ ಭಾಷಣ ಕೊಚ್ಚುತ್ತಿದ್ದ. ಹೀಗೆ ಅವನೊಬ್ಬ ಸಿನಿಕನೋ, ವಿರೋಧಾಭಾಸಗಳ ಆಗರವೋ, ಏನೋ ಅಂತೂ ಬಿಡಿಸಲಾರದ ಒಗಟಾಗಿದ್ದ.
ಕಳೆದ ತಿಂಗಳು ದಾನಯ್ಯನಿಗೆ ಕೋಟೇಶ್ವರ ಸಿಕ್ಕಾಗ ಮೊದಲಿಗೆ ಇದರ ಬಗ್ಗೆಯೇ ಮಾತನ್ನು ದಾನಯ್ಯ ಸುರು ಮಾಡಿದ. ಅದಕ್ಕೆ ಕೋಟೇಶ್ವರ ನಕ್ಕುಬಿಟ್ಟು
"ಬೇಡವೋ, ಇದನ್ನೆಲ್ಲಾ ಗಂಭೀರವಾಗಿ ತೆಗೋಬೇಡ.. ಇದೆಲ್ಲ ಒಂದು ರೀತಿಯ ಸೋಗು, ಒಪ್ಪಂದ ಅಷ್ಟೇ. ಏನು ಬಂದರೂ ಪ್ರತಿಭಟಿಸೋದರಲ್ಲಿ ನನಗೆ ಖುಷಿ ಸಿಗುತ್ತೆ ಅಷ್ಟೇ. ಅದಕ್ಕೇ ಎಷ್ಟೋ ಸಾರಿ ಸ್ವಂತ ಆಲೋಚನೆಗಳೊಂದಿಗೇ ಒಪ್ಪಂದ ಮಾಡಿಕೊಂಡುಬಿಡುತ್ತೇನೆ. ಈ ಒಪ್ಪಂದಗಳೊಡನೆಯೇ ಬದುಕುತ್ತಿರುವ ನನಗೆ ನನ್ನ ನಿಜವಾದ ತತ್ವವೇನು ಅನ್ನುವುದರ ಬಗ್ಗೆ ಶೋಧನೆ ನಡೆಸಬೇಕಿದೆ. ಒಂದು ರೀತಿಯಲ್ಲಿ ಯಾವುದು ಬಂದರೆ ಅದನ್ನೇ ಪ್ರತಿಭಟಿಸುತ್ತಾ ಬದುಕುವುದು ನನ್ನ ಜೀವನದ ರೀತಿ ಆಗಿಬಿಟ್ಟಿದೆ. ನನಗನ್ನಿಸುತ್ತೆ, ನನ್ನ ಸಾವೂ ಒಂದು ಪ್ರತಿಭಟನೆಯ ಸಾವಾಗಬಹುದೂಂತ... ಎಲ್ಲರೂ ಬದುಕು, ಈ ಪ್ರಪಂಚಕ್ಕೆ ನಿನ್ನ ಅಸ್ತಿತ್ವದ ಅವಶ್ಯಕತೆ ಇದೆ ಅನ್ನುವಾಗಲೇ ಪ್ರತಿಭಟಿಸಿ ಸಾಯುತ್ತೇನೇನೋ ಅನ್ನಿಸಿಬಿಟ್ಟಿದೆ." ಅಂದಿದ್ದ.
ಕಡೆಯ ವಾಕ್ಯ ದಾನಯ್ಯನ ಮನಸ್ಸಿನಲ್ಲಿ ಮತ್ತೆ ರಿಂಗಣಿಸಿತು. ಆದಿನ ಕೋಟೇಶ್ವರ ಹೇಳಿದ ವಿಚಾರ ಕೇಳಿ ಅವನು ನಕ್ಕುಬಿಟ್ಟಿದ್ದ. ಸಾಲದ್ದಕ್ಕೆ ತನ್ನ-ಕೋಟೇಶ್ವರನ ವಿಚಾರಗಳಲ್ಲಿರುವ ಅಂತರವನ್ನು ಗುರುತಿಸಲೂ ಪ್ರಯತ್ನಿಸಿದ್ದ. "ನೋಡು ಕೋಟಿ ನೀನಾದರೆ ಒಂದು ರೀತಿ ಪ್ರತಿಭಟನೆಯನ್ನೇ ಜೀವನವಾಗಿ ಮಾಡಿಕೊಂಡಿದ್ದೀಯ. ನಾನು ನನ್ನ ಮನಸ್ಸಾಕ್ಷಿಯೊಂದಿಗೆ ಪ್ರತಿಭಟಿಸುತ್ತಲೇ ಜೀವನವನ್ನು ಒಂದು ಒಪ್ಪಂದವನ್ನಾಗಿ ಮಾಡಿಕೊಂಡಿದ್ದೇನೆ. ಯಾರು ಯರೋ ತೋರಿಸೋ ಸಣ್ಣ ಸಣ್ಣ ಕರ್ಟಿಸಿಗಳಿಗೆಲ್ಲಾ ಮಣಿಯುವ ದೌರ್ಬಲ್ಯ ಬೆಳೆಸಿಕೊಂಡಿದ್ದೇನೆ. ನಿಜಕ್ಕೆ. ನೀನು ನನ್ನ ಕೆಲಸದಲ್ಲಿ ಇರಬೇಕಿತ್ತು ನೋಡು. ಇಲ್ಲಿ ಪ್ರತಿಭಟಿಸುವವರ ಅವಶ್ಯಕತೆ ವಿಪರೀತವಾಗಿ ಇದೆ."
ಅದಕ್ಕೆ ಅವನೊಂದು ವಿಷಣ್ಣ ನಗೆ ನಕ್ಕುಬಿಟ್ಟಿದ್ದ. "ನೋಡು, ಒಪ್ಪಂದ, ಪ್ರತಿಭಟನೆ ಇತ್ಯಾದಿಯೆಲ್ಲಾ ನಾವು ನಮ್ಮಗಳ ಸೋಗು ಹೆಚ್ಚಿಸೊಕ್ಕೆ ಬಳಸಿಕೊಳ್ಳುವ ಪದಗಳು. ನಿಜಕ್ಕೂ ಯಾರೂ ಯಾವೊಂದು ಪೂರ್ವನಿರ್ಧಾರಿತ ಕನ್ವಿಕ್ಷನ್ ಮೇಲೆ ಸ್ಥಿರವಾಗಿ ನಿಲ್ಲುವುದೇ ಇಲ್ಲ. ಇದು ನಿರಂತರ ಬದಲಾಗುತ್ತಿರುವ ಪ್ರಪಂಚ, ಅದರೊಂದಿಗೆ ನಿನ್ನ ಆಲೋಚನೆಗಳೂ ನಿರಂತರ ಬದಲಾಗುತ್ತಿರುತ್ತವೆ. ನೀನು ಯಾವ ಕ್ಷಣಕ್ಕೆ ಏನು ಮಾಡುತ್ತೀಯೋ ಅದೇ ಸರಿ ಅನ್ನಿಸುತ್ತೆ."
ಮೊದಲ ಪೆಗ್ ಮುಗಿದಿತ್ತು. ಕೋಟೇಶ್ವರ ಜೀವನದ ಬಗ್ಗೆ ಪ್ರವಾದಿಯಂತೆ ಒಂದು ತೀರ್ಪನ್ನು ಕೊಟ್ಟುಬಿಟ್ಟ. ಮತ್ತೊಂದು ಪೆಗ್ ಬಗ್ಗಿಸುತ್ತಾ ದಾನಯ್ಯ ಅವನ ಕೆಲಸದ ಬಗ್ಗೆ ಮಾತನಾಡತೊಡಗಿದ.
"ಏನೋ ನಿರ್ಮಲ್ ಏರಿಯಾದಲ್ಲಿ ಬಹಳ ಒಳ್ಳೆಯ ಹೆಸರು ಮಾಡಿದ್ದೀಯ.. ರಾತ್ರಿ ಹಗಲು ಅನ್ನದೇ ದುಡೀತಿದ್ದೀಯಂತೆ. ಕೇಳಿ ಬಹಳ ಖುಷಿಯಾಯಿತಪ್ಪಾ.. ರೈತರನ್ನು ಉದ್ಧಾರ ಮಾಡುವುದಕ್ಕೆ ನಿನ್ನಂತಹವನೇ ಸರಿ ನೋಡು.."
"ಈ ರೈತರ ಸೇವೆ ಅನ್ನೋದೂ ಒಂದು ಪ್ರತಿಭಟನೆಯ ಚರಿತ್ರೆ ಹೊಂದಿದೆ ಗೊತ್ತಾ? ನನಗೂ ಬ್ಯಾಂಕಿನಲ್ಲಿದ್ದು, ಬಾವಿ ಸಾಲ, ಕುರಿ ಸಾಲ, ಕೋಳಿ ಸಾಲ ನೋಡೀ ನೋಡೀ ಬೇಜಾರಾಗಿತ್ತು. ನಾನು ಎಂ.ಡಿಯಾಗಿ ಹೋದ ಹೊಸತರಲ್ಲೇ ಒಬ್ಬ ರೈತ ಏನೋ ಸಲಹೆ ಕೇಳೋಕ್ಕೆ ಬಂದ. ಸೊಸೈಟಿಯ ಗುಮಾಸ್ತೆ ರೇಗಿ ಸರಕಾರಿ ಎ.ಎ.ಓ ನ ಕೇಳು ಹೋಗೂಂದ. ಅವನು ಹೇಳಿದ್ದಕ್ಕೆ ವಿರುದ್ಧವಾಗಿ ಅವನನ್ನು ಬೈದು ನಾನೇ ಜಮೀನು ನೋಡೊಕ್ಕೆ ಹೋದೆ. ಕಾಂಡ ಕೊರೆಯುವ ಹುಳದ ಧಾಳಿ ನಡೆದಿತ್ತು. ಸೊಸೈಟಿಯಿಂದ ಕೀಟನಾಶಕ ಕೊಂಡೊಯ್ಯಲು ಹೇಳಿದೆ. ಊರಲ್ಲಿ ಅದೇ ದೊಡ್ಡ ಸುದ್ದಿಯಾಯಿತು. ಹಿಂದಿದ್ದ ಎಂ.ಡಿ.ಗಳೆಲ್ಲಾ ರೂಂನಲ್ಲಿ ಕೂತು, ಟೆಲಿಫೋನ್ ತಿರುಗಿಸುತ್ತಾ ಗತ್ತಿನಿಂದ ಇರುತ್ತಿದ್ದರಂತೆ. ಆಮೇಲೆ ಬ್ಯಾಂಕಿನ ಆರ್.ಡಿ.ಓಗಳೆಲ್ಲಾ ’ಯಾಕೋ ಒದ್ದಾಡುತ್ತೀಯ, ನಿನ್ನ ಕೆಲಸ ನೀನು ನೋಡಿಕೋಬಾರದಾ’ ಅಂತ ಕೇಳೊಕ್ಕೆ ಪ್ರಾರಂಭ ಮಾಡಿದರು.. ಸರಿ, ಅವರ ವಿರುದ್ಧವಾಗಿ ಇದೇ ನನ್ನ ಕೆಲಸ, ಅದನ್ನೇ ನೋಡಿಕೊಳ್ಳುತ್ತಾ ಇದ್ದೇನೆಂದು, ರೈತರ ಜೊತೆ ಸ್ನೇಹ ಬೆಳೆಸುವುದಕ್ಕೆ ಪ್ರಾರಂಭ ಮಾಡಿದೆ. ಗೌರವ ಬೆಳೀತು, ಹೆಸರೂ ಬೆಳೀತು, ಈಗಲೂ ಹಾಗೇ ನಡೀತಾ ಇದೆ ಗೊತ್ತಾ?"
"ಹೋಗಲಿ ಬಿಡು ಅಂತೂ ಅತ್ಮವಂಚನೆಯಿಲ್ಲದೆ ಕೆಲಸ ಮಾಡುತ್ತಾ ಇದ್ದೀಯ. ನಮ್ಮದೂ ಇದೆ.. ದರಿದ್ರ ಇಲಾಖೆ. ದಿನ ಬೆಳಗಾದರೆ ಕೊಲೆ, ಲೂಟಿ, ಸುಲಿಗೆ, ಮಾನಭಂಗ, ಅನ್ಯಾಯ.. ನಾವುಗಳು ಕೊಡೋ ಥರ್ಡ್ ಡಿಗ್ರೀ ಎಲ್ಲಾ ನೋಡೀ ನೋಡೀ ಮನಸ್ಸು ಎಷ್ಟು ಜಡ್ಡುಗಟ್ಟಿಹೋಗಿದೇಂದ್ರೆ, ನಮ್ಮವರೇ ಅನ್ಯಾಯ ಮಾಡಿದರೂ, ನಾನೇ ಲೂಟಿ ಮಾಡಿದರೂ ಏನೂ ಅನ್ನಿಸೋದಿಲ್ಲ. ನಿಜ ಹೇಳಬೇಕೂಂತ ಅಂದರೆ ನನ್ನ ಮನಸ್ಸಾಕ್ಷಿಗೆ ವಿರುದ್ಧವಾಗಿ ಯಾರ್‍ಯಾರಿಗೋ ಸಹಾಯ ಮಾಡಿದ್ದೆಲ್ಲಾ ನನ್ನ ಬಡ್ತಿಗೆ ಕಾರಣವಾಗಿದೆ. ಇಲ್ಲದಿದ್ದರೆ ಇಷ್ಟುಹೊತ್ತಿಗೆ ಚಿಂತಲಪೂಡಿ ಪೋಲೀಸ್ ಠಾಣೆಯ ಇನ್‍ಚಾರ್ಜ್ ಆಗಿ ನೀರಿಲ್ಲದೇ ಒಣಗಿ ಸಾಯುತ್ತಿದ್ದೆ. ಇಲ್ಲೇ ನೋಡು, ನಾನು ನನ್ನ ಉದ್ಯೋಗದ ಬಡ್ತಿಗೂ, ವೈಯಕ್ತಿಕ ಅವನತಿಗೂ ಲಿಂಕ್ ಕಂಡುಕೊಂಡದ್ದು.."
ಎರಡನೇ ಪೆಗ್ ಮುಗಿಯುವಷ್ಟು ಹೊತ್ತಿಗೆ ಬಾರ್‌ನ ಮಾಲೀಕ ಕೈ ಹಿಸುಕಿಕೊಳ್ಳುತ್ತಾ ಬಂದ. "ಸರ್, ಹನ್ನೊಂದೂ ಮುಕ್ಕಾಲಾಯಿತು.. ಕ್ಲೋಸ್ ಮಾಡುತ್ತೀನಿ.." ದಾನಯ್ಯ ಗತ್ತಿನಿಂದ ಮತ್ತೊಂದು ಕ್ವಾರ್ಟರ್ ಮತ್ತೆರಡು ಆಮ್ಲೆಟ್ ಹೇಳಿ "ನೀನು ಬಾಗಿಲು ಮುಚ್ಚು, ನಾವು ಎಂದಿನಂತೆ ಮುಗಿದ ಮೇಲೆ ಹಿಂದಿನಿಂದ ಹೋಗುತ್ತೇವೆ" ಎಂದು ಪೋಲೀಸ್ ಭಾಷೆಯಲ್ಲಿ ಹೇಳಿದ. ಅವನು ಸರಿಯೆಂಬಂತೆ ತಲೆಯಾಡಿಸಿ ಹೊರಟುಹೋದ. ಕೋಟೇಶ್ವರ ತನ್ನತ್ತ ನೋಡಿ "ನಾನು ಮಾಡುವ ಜನಸೇವೆಗಿಂತ ಇದು ವಾಸಿ ಅಲ್ಲವೇನೋ ದಾನಯ್ಯ?" ಎಂದು ಕೇಳಿದ್ದ.
ಮತ್ತೊಂದು ಪೆಗ್ ಮುಗಿಯುವಷ್ಟರಲ್ಲಿ ದಾನಯ್ಯ ಅವನನ್ನು ಸಾಕಷ್ಟು ಹೊಗಳಿದ್ದೆ. ಅದಕ್ಕೆ ಕಾರಣ ಅವನ ಬಗ್ಗೆ ಬಹಳ ಒಳ್ಳೆಯ ಮಾತುಗಳನ್ನು ತಾನು ನಿಜವಾಗಿಯೂ ಕೇಳಿದ್ದ. ಅವನಿಗೆ ಅಮಲೇರುತ್ತಾ ಹೋಯಿತು. ಇದ್ದಕ್ಕಿದ್ದಂತೆ ಅವನು ತತ್ವಜ್ಞಾನಿಯ ಧಾಟಿಯಲ್ಲಿ ಮಾತನಾಡತೊಡಗಿದ.
"ನೋಡು ನೀನಿನ್ನೂ ಜಾಸ್ತಿ ಹೊಗಳಿದರೆ ನನಗೆ ತಡೆಯೋಕ್ಕೆ ಆಗೋದಿಲ್ಲ. ಜಗತ್ತಿನ ಕಣ್ಣಿಗೇ ಮಣ್ಣೆರಚಿದ್ದೀನಿ.. ನೀನೂ ಇಷ್ಟು ಮೋಸಹೋಗುತ್ತೀಯಾಂತ ತಿಳಿದುಕೊಂಡಿರಲಿಲ್ಲ. ನಾನೇನು ಮಹಾ ಸಾಚಾ ಸತ್ಯವಂತಾಂತ ಅಂದುಕೊಂಡಿದ್ದೀಯಾ? ನಿರ್ಮಲ್ ನಲ್ಲಿದ್ದಾಗ ಹೈದರಾಬಾದಿನಲ್ಲಿ ಒಂದು ಮನೆ ಕಟ್ಟಿಸಿದೆ. ಐವತ್ತು ಸಾವಿರ ವರದಕ್ಷಿಣೆ ಕೊಟ್ಟು ಮಗಳಿಗೆ ಮದುವೆ ಮಾಡಿದೆ.. ನನ್ನ ಮೇಲೆ ಈಗ ಬ್ಯಾಂಕಿನ ಎನ್‌ಕ್ವಯರಿ ನಡೀತಾ ಇದೆ.. ಈ ಮಧ್ಯೆ ಜನಸೇವೆಯ ಮಾತುಗಳು ನನಗೆ ವರ್ತಿಸುವುದು ಒಂದು ವಿರೋಧಾಭಾಸವೇ.."
ಇದ್ದಕ್ಕಿದ್ದಂತೆ ಕೋಟೇಶ್ವರ ಮಾಡಿದ ಈ ಘಟಸ್ಫೋಟ ನನಗೆ ಆಶ್ಚರ್ಯ ಉಂಟುಮಾಡಿತ್ತು. ಅವನೇನು ಹೇಳುತ್ತಿದ್ದಾನೆಂದು ನನಗೆ ಅರ್ಥವೇ ಆಗಲಿಲ್ಲ. ಈ ರೀತಿಯ ಅನಿರೀಕ್ಷಿತ ತಿರುವುಗಳು ನನಗೆ ಆಘಾತವನ್ನುಂಟುಮಾಡುತ್ತವೆ.. ನಾನು ಏನೂ ತೋಚದೇ ತೊದಲಿದೆ:
"ವರದಕ್ಷಿಣೆ?"
"ಹೌದು.. ಐವತ್ತು ಸಾವಿರ. ನನ್ನ ಮಗಳು ಹೋಗಿ ಯಾವನೋ ರೆಡ್ಡಿಯ ಕೈಲಿ ಹೊಟ್ಟೆ ಉಬ್ಬಿಸಿಕೊಂಡು ಬಂದಳು.. ಅವನು ಮಾಡಿದ ಬ್ಲಾಕ್‍ಮೈಲ್‌ಗೆ ತೆತ್ತ ಹಣ ಇದು. ಅದಕ್ಕೆ ಸಿಕ್ಕ ಪ್ರಚಾರ ಏನು ಗೊತ್ತಾ? ಕೋಟೇಶ್ವರ ತನ್ನ ಜೀವನದ ಆದರ್ಶದಂತೆ ಮಗಳಿಗೂ ಅಂತರ್ಜಾತೀಯ ವಿವಾಹ ಮಾಡಿಸಿದ!! ಹೀಗಾಗಿ ನನ್ನ ಕೀರ್ತಿಯ ಇಮ್ಮಡಿಯಾಯಿತು. ವರದಕ್ಷಿಣೆ ಕೊಟ್ಟಿದ್ದು ಯಾರಿಗೂ ಗೊತ್ತಿಲ್ಲ. ಕಥೆಯ ಹಿಂದಿನ ವ್ಯಥೆ ಇದು..."
"ಎನ್‌ಕ್ವೈರಿ?"
"ಹುಂ.. ಅದೂ ಇದೆ. ಅಧಿಕಾರ, ಹಣದ ದುರುಪಯೋಗ, ರೈತರಿಗೆ ಮೋಸ ಇತ್ಯಾದಿ.. ನಾನಿನ್ನೂ ನಿನ್ನ ಅತಿಥಿಯಾಗಿ ಜೈಲಿಗೆ ಬಂದಿಲ್ಲವಾದರೆ ಅದಕ್ಕೆ ನನ್ನ ಹಿಂದಿರುವ ಕೀರ್ತಿಯೇ ಕಾರಣ.."
ಪ್ರತಿಭಟನೆಯ ಕೆಂಡವಾಗಿದ್ದ ಕೋಟೇಶ್ವರ ಈ ರೀತಿ ತಪ್ಪೊಪ್ಪಿಗೆಯ ಸ್ಥಿತಿಗೆ ಜರ್ರನೆ ಇಳಿಯಬಹುದೆಂದು ದಾನಯ್ಯ ನಿರೀಕ್ಷಿಸಿರಲಿಲ್ಲ. ತಾನು ಅವನನ್ನು ಹೊಗಳಿದ್ದು ವಿಪರೀತವಾಯಿತೇನೋ. ಹೊಗಳಿಕೆಗೂ, ಖೈದಿಗಳ ಬಾಯಿ ಬಿಡಿಸಲು ನೀಡುವ ಥರ್ಡ್ ಡಿಗ್ರಿಗೂ ಸಾಮ್ಯ ಕಂಡದ್ದು ಅವನಿಗೆ ಇಲ್ಲಿ ಕಂಡಿತು. ದಾನಯ್ಯನಿಗೆ ಈಗೀಗ ಅನ್ನಿಸುತ್ತದೆ: ಆದಿನ ಅವನಿಗೆ ಅಷ್ಟೊಂದು ಅಮಲೇರದಿದ್ದರೆಯೇ ಚೆನ್ನಿರುತ್ತಿತ್ತೇನೋ. ಅಥವಾ ಕೋಟೇಶ್ವರನ ಮಾತುಗಳು ದಾನಯ್ಯನ ಹೊಗಳಿಕೆಗೆ ಪ್ರತಿಭಟನೆಯ ಈ ರೂಪದಲ್ಲಿ ಬರುತ್ತಿತ್ತೇ? ಅಂತೂ ಅಂದಿನ ಘಟನೆ ದಾನಯ್ಯನ್ನನ್ನು ಆಶ್ಚರ್ಯದಲ್ಲಿ ಮುಳುಗಿಸಿತ್ತು.
ನಾಲ್ಕನೇ ಪೆಗ್ ಮುಗಿಯುವಾಗ ಅವನು ತನ್ನ ನಿರ್ಮಲ್ ಸಾಹಸಗಳ ಬಗ್ಗೆ ಹೇಳಿಮುಗಿಸಿಯಾಗಿತ್ತು. ಎಲೆಕ್ಟ್ರಿಕ್ ಮೋಟಾರುಗಳ ಸಾಲ ಕೊಡುವಾಗ ಕಂಪನಿಗಳೊಂದಿಗೆ ಕಮಿಷನ್ ಮಾತನಾಡಿದ್ದಲ್ಲದೇ, ಸರಕಾರ ಸಣ್ಣ ರೈತರಿಗೆ ಕೊಡುತ್ತಿದ್ದ ಮೂರನೇ ಒಂದು ಭಾಗ ಸಬ್ಸಿಡಿಯನ್ನೂ ನೇರ ಉಪಯೋಗಿಸಿಕೊಂಡಿದ್ದನಂತೆ. ಮಗಳ ಮದುವೆಯ ಒತ್ತಡ ಬಂದಾಗ, ತುರ್ತಾಗಿ ಬೇಕಾದ ಹಣಕ್ಕೆ, ಏನೂ ಮಾಡಲು ತೋರದೇ, ಕ್ರಾಪ್ ಲೋನಿನೊಂದಿಗೇ, ಹದಿನೈದು ಜನರ ಬಳಿ ಎಲೆಕ್ಟ್ರಿಕ್ ಮೋಟಾರ್ ಸಾಲಕ್ಕೂ ಬೆರಳು ಮುದ್ರೆ ಹಾಕಿಸಿಕೊಂಡುಬಿಟ್ಟನಂತೆ. "ಮುಂದಿನ ವಾರ ಎನ್‍ಕ್ವೈರಿ ಇದೆಯೋ.. ಏನು ಮಾಡಬೇಕೋ ತಿಳೀತಾ ಇಲ್ಲ...." ಎಂದು ಅಂದು ಹೇಳಿದ್ದ.
ದಾನಯ್ಯನಿಗೆ ಕೋಟೇಶ್ವರ ಮತ್ತೂ ಮತ್ತೂ ನಿಗೂಢವಾಗುತ್ತಾ ಹೋದ. ಪೋಲೀಸ್ ಇಲಾಖೆಯಲ್ಲಿದ್ದೂ ದಾನಯ್ಯ ಹಣ ಮಾಡಿ ಸಿಕ್ಕಿ ಹಾಕಿಕೊಳ್ಳುವ ಅಪಾಯದ ಹಂತ ತಲುಪಿರಲಿಲ್ಲ. ಆದರೆ ಕೋಟೇಶ್ವರ ಈ ಅತಿರೇಕದ ಹಂತಕ್ಕೆ ಬಲುಬೇಗ ಇಳಿದು ಬಿಟ್ಟ. ಅವನು ಇನ್ನಷ್ಟು ಜಾಗರೂಕನಾಗಿರಬೇಕಿತ್ತು ಅಂತ ದಾನಯ್ಯನಿಗೆ ಅನ್ನಿಸಿತು. ಮನುಷ್ಯ ಸಾಮಾಜಿಕ ಮನ್ನಣೆಗೆ ಪಾತ್ರನಾಗುತ್ತಿದ್ದಂತೆ ಅದನ್ನು ಕೂಡಲೇ ದುರುಪಯೋಗ ಪಡಿಸಿಕೊಳ್ಳುವ ದೌರ್ಬಲ್ಯಕ್ಕೆ ಒಳಗಾಗಬಹುದೆಂದು ಅವನಿಗೆ ಗೊತ್ತಿರಲೇ ಇಲ್ಲ..
ಆದಿನ ಕುಡಿತದ ಅಮಲಿನಲ್ಲಿ ತಾನು ಏನೇನು ಹೇಳಿದ್ದನೋ ದಾನಯ್ಯನಿಗೆ ನೆನಪಿಲ್ಲ. ಎಲ್ಲ ಮುಗಿಯುವ ವೇಳೆಗೆ ಕೋಟೇಶ್ವರ ಅಲ್ಲೇ ವಾಂತಿ ಮಾಡಿಕೊಂಡ. ಕರುಳೇ ಕಿತ್ತು ಬರುವಂತೆ ಹೊಟ್ಟೆಯಲ್ಲಡಗಿಸಿದ್ದ ಸಂಪೂರ್ಣವನ್ನೂ ಕಕ್ಕಿದ. ಹಿಂದಿನ ಬಾಗಿಲಿನಿಂದ ಇಬ್ಬರೂ ಹೊರಬಂದರು. ಆಗಲೂ ಹಾಸ್ಯದ ಪ್ರವೃತ್ತಿಯನ್ನು ಬಿಡದ ಕೋಟೇಶ್ವರ "ಬಿಲ್?" ಎಂದು ಕೇಳಿದ್ದ... ದಾನಯ್ಯ "ನಮ್ಮ ಕೆಲಸದಲ್ಲಿನ ಕೆಲ ಸವಲತ್ತುಗಳಲ್ಲಿ ಇದೂ ಒಂದು" ಎನ್ನುತ್ತಾ ನಕ್ಕುಬಿಟ್ಟಿದ್ದ.
ಅದು ನೆನಪಾದಾಗ ದಾನಯ್ಯನಿಗೆ ಕೋಟೇಶ್ವರನ ಸಾವಿಗೆ ಇರಬಹುದಾದ ಕಾರಣದ ಎಳೆ ಸಿಕ್ಕಂತೆನ್ನಿಸಿತು. ತಪಾಸಣೆಯ ವರದಿ ಬಂದಿರಬೇಕು. ಕೋಟೇಶ್ವರನ ಮೇಲಿನ ಆಪಾದನೆಗಳು ಸಾಬೀತಾಗಿರಬೇಕು. ಅದಕ್ಕೆ ಹೆದರಿ ಏನಾದರೂ ಕೋಟೇಶ್ವರ ಆತ್ಮಹತ್ಯೆ ಮಾಡಿಕೊಂಡನೇ? ಇರಬಹುದು. ಕೋಟೇಶ್ವರನ ನೆನಪಾದಾಗ ಅವನಿಗೆ ದುಃಖ ಉಮ್ಮಳಿಸುತ್ತದೆ. ಗ್ಲಾಸಿನಲ್ಲಿದ್ದ ದ್ರವವನ್ನು ಒಂದೇ ಬಾರಿಗೆ ಗಂಟಲಿಗಿಳಿಸಿ ನಿಧಾನವಾಗಿ ಬಾರಿನಿಂದ ಹೊರಬಂದ. ಒಂದು ಪಾನ್ ಹಾಕಿ ನೇರವಾಗಿ ಮನೆ ಸೇರಿದ.
ಬೆಳಿಗ್ಗೆ ಎದ್ದಾಗ ಮನಸ್ಸು ಸ್ವಲ್ಪ ಚೇತರಿಸಿಕೊಂಡಿತು. ಭಾವನೆಗಳಿಗೆ ಅಣೆಕಟ್ಟು ಹಾಕಿ ಯಂತ್ರಮಾನವನಂತೆ ಕೆಲಸಮಾಡುವುದನ್ನು ಈ ಇಲಾಖೆಗೆ ಸೇರಿದಂದಿನಿಂದ ದಾನಯ್ಯ ರೂಢಿಸಿಕೊಂಡಿದ್ದ. ಠಾಣೆಗೆ ಬಂದತಕ್ಷಣ ರಂಗಾ ರೆಡ್ಡಿಯ ಕೋಣೆಗೆ ಹೋದ.
"ಕೋಟೇಶ್ವರರಾವ್ ಕೇಸು ಏನಾಯಿತು? ಆತ್ಮಹತ್ಯೆಗೆ ಮೋಟಿವ್ ತಿಳೀತಾ?"
"ಎಲ್ಲಾ ವಿಚಿತ್ರವಾಗಿದೆ.. ಆತ್ಮಹತ್ಯೆಗೆ ಕಾರಣವೇ ಸಿಗುತ್ತಿಲ್ಲ."
"ಬ್ಯಾಂಕಿನ ಎನ್‍ಕ್ವೈರಿ ನಡೀತಿತ್ತಂತಲ್ಲಾ, ಅದರ ವರದಿ ಏನಾದರೂ....."
"ಅದೇ ಆಶ್ಚರ್ಯ ನೋಡು.. ಅದರ ವರದಿ ಮೂರು ದಿನಗಳ ಹಿಂದೆ ಬಂದಿದೆ.... ಹಿ ವಾಸ್ ನಾಟ್ ಫೌಂಡ್ ಗಿಲ್ಟಿ. ಯಾರೋ ಹೊಟ್ಟೇಕಿಚ್ಚಿನಿಂದ ಈ ಕೆಲಸ ಮಾಡಿರಬಹುದೂಂತ ಬ್ಯಾಂಕಿನ ಮಿತ್ರರು ಹೇಳಿದರು. ಅವನು ಅಂಥವನು ಅಲ್ಲವೇ ಅಲ್ಲವಂತೆ. ಬ್ಯಾಂಕಿನಲ್ಲಿ ಅವನಿಗೆ ತುಂಬಾ ಒಳ್ಳೇ ಹೆಸರಿತ್ತು... ಅದಕ್ಕೇ ವಿಷಯ ತುಂಬಾ ಗಹನವಾಗಿದೆ.."
ದಾನಯ್ಯನಿಗೆ ನಿಜಕ್ಕೂ ಆಶ್ಚರ್ಯವಾಯಿತು. ಬ್ಯಾಂಕಿಗೆ ಹೋಗಿ ಖಾತರಿ ಪಡಿಸಿಕೊಂಡು ಬರೋಣವೆಂದುಕೊಂಡರೂ ರಂಗಾರೆಡ್ಡಿಯನ್ನು ನಂಬದಿರಲು ಕಾರಣವೇ ಇರಲಿಲ್ಲ. ಇದೇ ಆಲೋಚನೆಯಲ್ಲಿಯೇ ಈಗ ಒಂದು ವಾರ ಕಳೆದ.
ಹೀಗಿರುತ್ತಿರಲು ದಾನಯ್ಯನ ಸೋದರಮಾವನ ಮಗ ಬಂದ. ಪೋಚಂಪಾಡ್ ಪ್ರಾಜೆಕ್ಟ್ ನೋಡಲು ಶ್ರೀರಾಮ ಸಾಗರಕ್ಕೆ ಬರುತ್ತೀಯಾ ಎಂದು ಕೇಳಿದ. ಅವನ ಅಫಿಷಿಯಲ್ ಕೆಲಸಕ್ಕೆ ತಾನ್ಯಾಕೆ ಅನ್ನಿಸಿದರೂ, ನಿರ್ಮಲ್‌ನಿಂದ ಕೇವಲ ಆರು ಕಿಲೋಮೀಟರ್ ದೂರದಲ್ಲಿರುವ ಪೋಚಂಪಾಡ್‌ಗೆ ಹೋಗುವ ತೀವ್ರತೆ ಕಾಡಿತು. ಹೊರಟ. ಅವನು ಶ್ರೀರಾಮಸಾಗರದ ಅಣೆಕಟ್ಟಿನ ಬಳಿ ಇಳಿದ. ದಾನಯ್ಯ ನಿರ್ಮಲ್ ಚಿತ್ರಕಲೆಯೆಂದೇ ಖ್ಯಾತಿಗೊಂಡ ಕೆಲ ಪೈಂಟಿಂಗ್ ತರುವ ನೆಪದಲ್ಲಿ ನಿರ್ಮಲ್‍ಗೆ ಬಂದ.
ನಿರ್ಮಲ್‌ನಲ್ಲಿ ಇಳಿಯುತ್ತಿದ್ದಂತೆ ನೇರ ಸಹಕಾರ ಸಂಘಕ್ಕೆ ಹೋದ. ಅಲ್ಲಿಯ ಎಂ.ಡಿ.ಗೆ ಕೈ ಕುಲುಕಿ ತನ್ನ ಪರಿಚಯವನ್ನು ಹೇಳಿಕೊಂಡ. ಹಾಗೂ ಕೋಟೇಶ್ವರನ ಬಗ್ಗೆ ವಿಚಾರಿಸಿದ. ಮುಖ್ಯವಾಗಿ ಕೋಟೇಶ್ವರ ಸಾಲ ಕೊಟ್ಟ ಹದಿನೈದು ರೈತರಲ್ಲಿ ಯಾರನ್ನಾದರೂ ನೋಡಬೇಕೆಂದು ಅವನ ಆಸೆಯಾಗಿತ್ತು. ಹಾಗೇ ನಡೆಯಿತು ಸಹ! ಸಹಕಾರ ಸಂಘಕ್ಕೆ ದಾಸರಿ ಸಂಗಯ್ಯನೆಂಬವನು ಬಂದಿದ್ದ. ಅವನನ್ನು ಮಾತನಾಡಿಸಿದಾಗ ನಡೆದ ಕಥೆ ತಿಳಿಯಿತು. [ಅಥವಾ ತಿಳಿಯಿತೆಂದು ದಾನಯ್ಯ ಭಾವಿಸಿದ]
ಎನ್‍ಕ್ವೈರಿಗೆ ಕೆಲದಿನಗಳ ಮೊದಲು ಈ ಹದಿನೈದು ಮಂದಿಗೂ ನೋಟಿಸ್ ಬಂದಿತ್ತಂತೆ. ಅವರುಗಳಲ್ಲೊಬ್ಬ ಹೈದರಾಬಾದಿಗೆ ಬಂದು ಕೋಟೇಶ್ವರನನ್ನು ಭೇಟಿಯಾದಾಗ, ನೋಟೀಸಿನಲ್ಲಿ ನಮೂದಾಗಿದ್ದ ಸಾಲದ ಹಣ ಹಿಂದಿರುಗಿಸಿ ಸೊಸೈಟಿಗೆ ಕಟ್ಟಿಬಿಡು ಎಂದು ಹೇಳಿದನಂತೆ. ಎನ್‍ಕ್ವೈರಿಗೆ ಎರಡು ದಿನ ಮುಂಚೆ ಹೋಗಿ ಮಿಕ್ಕವರಿಗೆಲ್ಲಾ, "ನಿಮ್ಮ ಹಣ ನಿಮಗೆ ಕೊಟ್ಟುಬಿಡುತ್ತೇನೆ... ನಾಳೆ ಎನ್‍ಕ್ವೈರಿಯಲ್ಲಿ ಕೇಳಿದರೆ, ಸಾಲ ತೆಗೆದುಕೊಂಡಿದ್ದೇವೇಂತ ಹೇಳಿಬಿಡಿ" ಎಂದು ಹೇಳಿ ತಪ್ಪಿಸಿಕೊಂಡಿದ್ದ. ಇವನ ಮೇಲೆ ಅಪರಿಮಿತ ನಂಬಿಕೆಯಿದ್ದ ಅವರುಗಳೂ ಇವನ ಮಾತಿನ ಆಧಾರವಾಗಿ ಹಾಗೇ ಮಾಡಿದರು. ಈಗಲೋ ಆಗಲೋ ದಾನಯ್ಯ ಬಂದು ತಮ್ಮ ಹಣ ಹಿಂದಿರುಗಿಸಬಹುದು ಎಂದು ನಂಬಿದ್ದ ಸಂಗಯ್ಯ, ಕೋಟೇಶ್ವರ ತೀರಿಕೊಂಡದ್ದು ಕೇಳಿ ರೋಧಿಸಿದ.
ದಾನಯ್ಯ ಸಹಕಾರ ಸಂಘದಿಂದ ಹೊರಬಿದ್ದ. ಅಲ್ಲಿನ ಪೈಂಟರುಗಳ ಸೊಸೈಟಿಗೆ ಹೋಗಿ ಅವರ ಷೋರೂಮಿನಲ್ಲಿ ಒಂದು ಪೈಟಿಂಗ್ ಕೊಂಡುಕೊಂಡ. ಹಾಗೂ ಮಾರನೆಯ ದಿನ ಹೈದರಾಬಾದಿಗೆ ಹಿಂದಿರುಗಿದ. ಹೈದರಾಬಾದಿಗೆ ಬಂದಾಗ ರಂಗಾರೆಡ್ಡಿಗೆ ನಡೆದ ವಿಷಯ ಹೇಳಿ.. "ಅವನು ಆತ್ಮಹತ್ಯೆ ಮಾಡಿಕೊಂಡದ್ದಕ್ಕೆ ತರ್ಕ ಇನ್ನೂ ಸಿಗುತ್ತಿಲ್ಲ" ಎಂದ
ರಂಗರೆಡ್ಡಿ "ಅವನು ಸತ್ತದ್ದಕ್ಕೆ ಕಾರಣ ನಾನು ಹೇಳುತ್ತೇನೆ. ಅವನ ಆತ್ಮಸಾಕ್ಷಿ ಜಾಗೃತವಾಗಿತ್ತು" ಎಂದ. ದಾನಯ್ಯನಿಗೇನೋ ಕೋಟೇಶ್ವರ ಈ ಪ್ರಪಂಚದಲ್ಲಿ ಬದುಕುವ ರೀತಿಯ ಅನಿವಾರ್ಯತೆಯನ್ನು ಪ್ರಶ್ನಿಸಿ ಹೊರಟುಹೋದ ಅನ್ನಿಸಿತ್ತು. ಚಕ್ಕನೆ ವೆಂಕಟಾಚಲನನ್ನು ಕೇಳಿದ
"ಹಾಗಾದರೆ ನಾವು ಸಾಯದಿರುವುದಕ್ಕೆ ನಮ್ಮ ಆತ್ಮಸಾಕ್ಷಿ ಸತ್ತಿರುವುದೇ ಕಾರಣವಾ?"
"ಇರಬಹುದು. ಈ ದಿನ ಸಂಜೆ ನೀಲಿಮಾ ಬಾರಿನ ಸ್ಪೆಷಲ್ ರೂಮಿನಲ್ಲಿ ಮೂರು ಪೆಗ್ ಸ್ಕಾಚ್ ಹಾಕಿದ ಮೇಲೆ ಇಂಥ ಗಹನ ಪ್ರಶ್ನೆಗಳಿಗೆ ಉತ್ತರವನ್ನು ನಾವು ಜೊತೆಯಾಗಿ ಕಂಡುಕೊಳ್ಳಬಹುದು" ಎಂದ ರಂಗಾರಡ್ಡಿ.
ದಾನಯ್ಯನಿಗೇಕೋ ತಾನು ತನ್ನೊಳಗಿನ ತನ್ನನ್ನೇ ಕೊಂದಿದ್ದೇನೆ ಅನ್ನಿಸಿ ಆ ಬಗ್ಗೆ ಯೋಚಿಸುತ್ತಲೇ ಒಂದು ಸಿಗರೇಟು ಬೆಳಗಿಸಿದ.
No comments:
Post a Comment