Tuesday, December 29, 2009

ಕಪಾಟಿನೊಳಗಿನ ನೆನಪುಗಳು


ಭಾಸ್ಕರರಾಯರು ತಮ್ಮ ಹಳೇ ಕಪಾಟನ್ನು ಕೆದರುತ್ತಾ ಕುಳಿತಿದ್ದರು. ಅವರು ನಿವೃತ್ತಿ ಪಡೆದಾಗಿನಿಂದಲೂ ಹಾಗೇ. ಯಾವುದೋ ಲೋಕದಲ್ಲಿದ್ದಂತಿರುವುದು, ಏನನ್ನೋ ನೆನಪುಮಾಡಿಕೊಳ್ಳುವುದು. ಇದ್ದಕ್ಕಿದ್ದಂತೆ ನಗುವುದು. ಗುನುಗುವುದು. ಅಂತೂ ಈ ನಿವೃತ್ತಿ ಎಂಬುದು ಏಕಾದರೂ ಬರುತ್ತದೋ ಎನ್ನುವ ಹಾಗೆ ವರ್ತಿಸಿಬಿಡುತ್ತಿದ್ದರು.

ಹೀಗೊಂದು ದಿನ ತಮ್ಮ ಕಪಾಟಿನೊಳಗಿನ ಹಳೇ ನೆನಪುಗಳನ್ನು ಕೆದರುತ್ತಾ ಕುಳಿತಿದ್ದಾಗ ಸಿಕ್ಕದ್ದು ಒಂದು ಫೋಟೋ. ಅವರ ಹೈಸ್ಕೂಲಿನ ಮಿತ್ರ ಹ್ಯಾರಿ ಜ್ಯೋತಿಕುಮಾರನದ್ದು. ಆಗಿನ ಮೆಥಾಡಿಸ್ಟ್ ಮಿಷನ್ ಶಾಲೆಯಲ್ಲಿದ್ದ ತಮ್ಮ ಸಹಪಾಠಿಗಳ ನೆನಪು ಸ್ವಲ್ಪಸ್ವಲ್ಪವಾಗಿ ಭಾಸ್ಕರರಾಯರನ್ನು ಆವರಿಸತೊಡಗಿತು. ನೆನಪುಗಳು ಅವರಿಗೆ ಬರುತ್ತಿದ್ದದ್ದೇ ಹಾಗೆ - ಬಂದರೆ ಮಹಾಪೂರ... ಇಲ್ಲದಿದ್ದರೆ ತಲೆಕೆರೆದು ಜುಟ್ಟು ಕಿತ್ತುಹಾಕಿದರೂ ನೆನಪೇ ಬರುವುದಿಲ್ಲ.

ಭಾಸ್ಕರರಾಯರು ಓದಿದ್ದು ಪ್ರಾಟೆಸ್ಟೆಂಟ್ ಕ್ರಿಶ್ಚಿಯನ್ ಶಾಲೆಯಲ್ಲಿ. ಆ ಶಾಲೆಯಲ್ಲಿ ಆಗ ಹೆಚ್ಚಿನ ಹೆಸರುಗಳು ಈ ರೀತಿಯಾದಂಥವೇ.. ಅಡಾಲ್ಫ್ ಜಯತಿಲಕ್, ಆಲ್ಬರ್ಟ್ ವೇದರತ್ನ, ಮೆಷಕ್ ಕ್ರಿಸ್ತರಾಜು, ಜಾನ್ ದೇವರಾಜ್, ಪಾಲ್ ಸುದರ್ಶನ್... ಹೀಗೆ. ಆಗೆಲ್ಲಾ ಆ ಹೆಸರುಗಳು ಅವರಿಗೆ ಆಶ್ಚರ್ಯ ಹುಟ್ಟಿಸುತ್ತಿದ್ದುವು. ತಮ್ಮನ್ನು ಕ್ರೈಸ್ತ ಸಂಸ್ಕೃತಿಗೆ ಸಂಪೂರ್ಣ ಒಗ್ಗಿಸಿಕೊಳ್ಳದೇ, ಹಳೇ ಹಿಂದೂ ಸಂಸ್ಕೃತಿಯನ್ನೂ ಬಿಡಲಾಗದೇ, ಯುಗಾದಿಯನ್ನೂ ಕ್ರಿಸ್ಮಸ್ಸನ್ನೂ ಅಷ್ಟೇ ಭಕ್ತಿಯಿಂದ ಆಚರಿಸುತ್ತಿದ್ದ ಈ ಜನರ ವಿಷಯದಲ್ಲಿ ಭಾಸ್ಕರರಾಯರಿಗೆ ಏಕೋ ಒಂದು ಫ್ಯಾಸಿನೇಷನ್ ಇತ್ತು. ಈ ಜನ ಪಶ್ಚಿಮದ ಸಂಸ್ಕೃತಿಗೆ ನಿಜವಾದ ಕೊಂಡಿ ಎಂದು ಅವರುಗಳ ಬಗ್ಗೆ ಈಗ ಆಲೋಚಿಸುತ್ತಿರುವಾಗ ಅನ್ನಿಸುತ್ತದೆ.

ಮೆಥಾಡಿಸ್ಟ್ ಶಾಲೆ ಬಿಟ್ಟನಂತರ ರಾಯರಿಗೆ ಈ ರೀತಿಯ ಜೋಡಿ ಹೆಸರಿನ ಒಬ್ಬ ಮಿತ್ರನೂ ಸಿಗದಿದ್ದದ್ದು ಸೋಜಿಗದ ವಿಷಯವಾಗಿತ್ತು. ಆ ನಂತರ ರಾಯರು ಇಂಥಹ ಹೆಸರನ್ನು ಕೇಳಿದ್ದೂ ವಿರಳ.


ಹ್ಯಾರಿ ಜ್ಯೋತಿಕುಮಾರ್... ತಮ್ಮ ಹೈಸ್ಕೂಲಿನ ಅತ್ಯಂತ ಆಪ್ತ ಮಿತ್ರರಲ್ಲೊಬ್ಬ. ಮನೆಯಲ್ಲೊಮ್ಮೆ ತಿಥಿ ಊಟ ಹಾಕಿದಾಗ ತಮ್ಮ ಎಲೆಯ ಪಕ್ಕದಲ್ಲಿ ಎರಡಾಣೆ ದಕ್ಷಿಣೆ ಇಟ್ಟಿದ್ದದ್ದು, ಪಕ್ಕದಲ್ಲಿ ಕುಳಿತು ಉಂಡವರು ತಮ್ಮ ದಕ್ಷಿಣೆಯನ್ನು ಮರೆತು ಎದ್ದಾಗ ಭಾಸ್ಕರರಾಯರು ತಮ್ಮ ದೊಗಲೆ ಚೆಡ್ಡಿಯ ಆಳವಾದ ಜೇಬಿಗೆ ಆ ಎರಡಾಣೆಯನ್ನೂ ಇಳಿಬಿಟ್ಟಿದ್ದದ್ದು. ನಂತರ ಹ್ಯಾರಿ ಜ್ಯೋತಿಕುಮಾರನನ್ನೂ ಕರೆದುಕೊಂಡು ಕೃಷ್ಣಾ ಥಿಯೇಟರಿನಲ್ಲಿ ಕಂದಲೀಲಾ ಎಂಬ ಸಿನೇಮಾ ನೋಡಲು ಮನೆಯಲ್ಲೂ ಹೇಳದೇ ಹೋಗಿದ್ದದ್ದು - ಎಲ್ಲವೂ ನೆನಪಾಯಿತು. ಭಾಸ್ಕರರಾಯರು ಲೆಕ್ಕ ಹಾಕಿದರು. ಈಗ ತಮಗಾಗಿರುವ ವಯಸ್ಸು ಎಪ್ಪತ್ತು. ಆಗ ಅವರುಗಳು ಹದಿಮೂರು ಹದಿನಾಲ್ಕರ ಪಡ್ಡೆ ಹುಡುಗರು. ಕಂದಲೀಲಾ ಸಿನೇಮಾದ ನೋಡುವಾಗ ಅದರಲ್ಲಿ ನೃತ್ಯಮಾಡುತ್ತಿದ್ದವಳತ್ತ ಖಳನಾಯಕ ಕಣ್ಣು ಹೊಡೆದಾಗ ಅಯ್ಯಯ್ಯೋ ಎಂದು ಕೆನ್ನೆ ತಟ್ಟಿಕೊಂಡು ಶಾಂತಂ ಪಾಪಂ ಎಂದು ಜೋರಾಗಿ ಹೇಳಿದ್ದರೂ ಒಳಗೇ ರೋಮಾಂಚನವಾಗಿತ್ತು. ಐವತ್ತು ವರ್ಷಗಳಿಗೂ ಮಿಂಚಿದ ಈ ಕಾಲಮಾನದಲ್ಲಿ ಈಗ ಏನೆಲ್ಲಾ ಬದಲಾವಣೆಗಳಾಗಿವೆ. ಈಗೀಗಿನ ಹುಡುಗರಂತೂ ಸಿನೇಮಾ ನೋಡುವುದಿರಲಿ, ತಾವೇ ಖುದ್ದಾಗಿ ಕಣ್ಣು ಹೊಡೆದು ರೋಮಾಂಚಿತಗೊಳ್ಳುವ ಹಂತ ತಲುಪಿದ್ದಾರೆ!

ಮೆಟ್ರಿಕ್ ಪಾಸಾದ ನಂತರ ಹ್ಯಾರಿ ಮಂಗಳೂರಿಗೆ ಹೊರಟುಹೋಗಿದ್ದ. ತಾವು ಮಹಾರಾಜಾ ಕಾಲೇಜು ಸೇರಿ ನಂತರ ನೌಕರಿಗೆಂದು ಬೆಂಗಳೂರಿಗೆ ಹೋಗಿದ್ದರು. ಹ್ಯಾರಿ ಹೊರಟ ಹೊಸತರಲ್ಲಿ ಅವನಿಗೆ ಒಂದೆರಡು ಪತ್ರ ಬರೆಯಲು ಭಾಸ್ಕರರಾಯರು ಯತ್ನಿಸಿದ್ದರು. ಅವನು ಅಲ್ಲೇ ಖಾಯಂ ಆಗಿ ಸೆಟಲ್ ಆದನೆಂದು ಅವರಿಗೆ ನಂತರ ತಿಳಿದುಬಂತು. ಈಗ, ಕಡೆಗೆ ಈ ವಾಸ್ತವದಲ್ಲಿ ತಮ್ಮ ಮಗನೊಂದಿಗಿರಲು ಅವರು ಅದೇ ಹಳೆಯ ಮೈಸೂರಿಗೆ ಬಂದಿದ್ದರು. ಈಗ ಹ್ಯಾರಿ ಹೇಗಿರಬಹುದು? ಬದುಕಿದ್ದಾನೋ ಇಲ್ಲವೋ... ಈಗೀಗಂತೂ ಹೆಚ್ಚು ಕಡಿಮೆ, ಪ್ರತಿದಿನವೂ ತಮ್ಮ ಪರಿಚಯಸ್ಥರ ಸಾವಿನ ಸುದ್ದಿ ಬರುತ್ತಲೇ ಇರುತ್ತದೆ - ಹಾಗೆ ನೋಡಿದರೆ ದಿನವೂ ಪತ್ರಿಕೆಯಲ್ಲಿ ತಾವು ಮೊದಲಿಗೆ ನೋಡುವುದೇ ಆಬಿಟ್ಚುಯರಿ ಕಾಲಂ ಅಲ್ಲವೇ! ತಮಗೂ ವಯಸ್ಸಾಗುತ್ತಾ ಬಂದಿದೆ.. ಭಾಸ್ಕರರಾಯರು ಇನ್ನೊಮ್ಮೆ ಆ ಚಿತ್ರದತ್ತ ನೋಡಿದರು. ತಮಗಂತೂ ನಂತರದ ಕಾಲೇಜಿನ, ಉದ್ಯೋಗಕಾಲದ ಸ್ನೇಹಿತರೇ ನೆನಪಾಗದಿರುವಾಗ ಈ ಹ್ಯಾರಿ ಮಾತ್ರ ನೆನಪಾಗುತ್ತರುವುದು ಏಕೆಂದು ಭಾಸ್ಕರರಾಯರಿಗೆ ತಿಳಿಯಲಿಲ್ಲ. ಮೈಸೂರಿನ ರಾಯಲ್ ಸ್ಟುಡಿಯೋದಲ್ಲಿ ಹ್ಯಾರಿಯ ಎಡಭುಜದ ಮೇಲೆ ಕೆನ್ನಯೂರಿ ಬಲಗೈನಿಂದ ಹ್ಯಾರಿಯ ದೇಹವನ್ನು ಬಳಸಿ ತೆಗೆಸಿಕೊಂಡಿದ್ದ ಪಾಸ್ ಪೋರ್ಟ ಸೈಜಿನ ಚಿತ್ರವದು. ಆ ಚಿತ್ರದ ಪ್ರತಿ ತಮ್ಮ ಬಳಿ ಮಾತ್ರವೇ ಇದೆ. ಅದರ ಮತ್ತೊಂದು ಪ್ರತಿಗಾಗಿ ಒಂದಾಣೆ ಕೊಟ್ಟು ಕೊಂಡುಕೊಳ್ಳಲು ಹ್ಯಾರಿಯ ಬಳಿ ಹಣವಿದ್ದಿರಲಿಲ್ಲ! ಚಿತ್ರ ಈಗಾಗಲೇ ಸಾಕಷ್ಟು ಹಳದಿಯಾಗಿತ್ತು.

ಭಾಸ್ಕರರಾಯರು ಚಿತ್ರವನ್ನು ಮತ್ತೊಮ್ಮೆ ಕೈಗೆತ್ತಕೊಂಡು, ಮೇಜಿನ ಮಧ್ಯಭಾಗದಲ್ಲಿರಿಸಿ ನೀಟಾಗಿ ಸವರಿದರು. ಅವರ ಕಣ್ಣುಗಳು ಮಂಜಾದಂತೆನ್ನಿಸಿತು.

"ಏನು ಮಾವಾ ಮಲಗ್ಲಿಲ್ವೇ? ರಾತ್ರಿ ಆ ರಷ್ಯನ್ ಸಿನೇಮಾ ನೋಡಬೇಕೂಂತ ಹೇಳ್ತಿದ್ರಿ..." ಸೊಸೆ ನೀರಜಾ ಕೋಣೆಯೊಳಕ್ಕೆ ಪ್ರವೇಶಿಸಿ ಕೇಳಿದಳು.

"ಈ ಫೋಟೋ ನೋಡಿದ್ಯೇನಮ್ಮಾ... ಇವನು ನನ್ನ ಸ್ನೇಹಿತ.. ಹ್ಯಾರಿ ಜ್ಯೋತಿಕುಮಾರ ಅಂತ... ಹೈಸ್ಕೂಲಲ್ಲಿ ಇಬ್ಬರೂ ಗಳಸ್ಯ ಕಂಠಸ್ಯ ಆಗಿದ್ವು.. ಆಮೇಲವನು ಮಂಗಳೂರಿಗೆ ಹೋದ ನೋಡಿದ್ಯಾ ಅವನ ಅಡ್ರೆಸ್ಸೂ ಬರ್ಕೊಂಡಿದ್ದೀನಿ.."

ನೀರಜಾ ಮಾತನಾಡದೇ ಫೋಟೋದತ್ತ ನೋಡಿದಳು. ಆಕೆಗೆ ನಗು ತಡೆಯಲಾಗಲಿಲ್ಲ. ಜೋರಾಗಿ ನಕ್ಕು "ಏನ್ಮಾವಾ ನೀವು ಹೀಗಿದ್ರಾ... ಒಳ್ಳೇ ಬಫೂನ್ ಇದ್ದಹಾಗಿದ್ದೀರಾ! ಈ ಟೋಪಿ.. ಹಣೆಯ ಮೇಲಿನ ಈ ಸಾದು... ಈ ಹ್ಯಾರಿ ಅನ್ನೋವ್ರೂ ಸಾದು ಇಟ್ಕೊಂಡಿದ್ದಾರೆ!" ಎಂದಳು.

"ಅಯ್ಯೋ... ಆಗೆಲ್ಲಾ ಸ್ಕೂಲಿಗೆ ಟೋಪಿ ಹಾಕ್ಕೊಳ್ದೇ ಹೋದ್ರೆ ನಮ್ಮ ಮೇಷ್ಟ್ರುಗಳು ಬಯ್ಯುತ್ತಾ ಇದ್ದರಮ್ಮಾ... ಕ್ರಿಶ್ಚನ್ ಶಾಲೆಯಾದರೂ ಹೆಚ್ಚಿನಂಶ ಬ್ರಾಹ್ಮಣರೇ ಪಾಠ ಮಾಡ್ತಾ ಇದ್ದಿದ್ದು... ಏನೋ ಒಳ್ಳೇ ಜಾತಿಗೆಟ್ಟವನ ಹಾಗೆ ಬರೀ ಹಣೇಲಿ ಬಂದಿದ್ದೀಯಾ? ನಾಚಿಗೆ ಆಗೊಲ್ವಾ... ಅಂತೆಲ್ಲಾ ಹೇಳ್ತಿದ್ರು.... ಒಂದೊಂದ್ಸರ್ತಿ ಹೋಗು ಟೋಪಿ ಹಾಕ್ಕೊಂಡು ಬಾ ಅಂತ ಮನೇಗೂ ಅಟ್ತಿದ್ರು."

"ಮಾವಾ, ನೀವು ಈಗ ಮಲಗೋದು ವಾಸೀಂತ ಅನ್ಸುತ್ತೆ. ಮಲಗಿ, ಆಮೇಲೆ ರಾತ್ರಿ ಎದ್ದರಬೇಕಲ್ಲಾ."

ನೀರಜಾ ನಿಧಾನವಾಗಿ ಅಲ್ಲಿಂದ ಹೊರಟಳು. ಭಾಸ್ಕರರಾಯರಿಗೆ ಅದೇಕೋ ಹ್ಯಾರಿ ಎಲ್ಲಿದ್ದಾನೆಂದು ತಿಳಿಯಬೇಕೆನ್ನಿಸಿತು ಹ್ಯಾರಿಯನ್ನ ಹುಡುಕಬೇಕು. ಹೇಗೆ? ಐವತ್ತು ವರ್ಷಗಳ ಹಿಂದಿನ ಅವನ ವಿಳಾಸವಿದೆ - ಈಗ ಆ ವಿಳಾಸದಲ್ಲಿ ಹ್ಯಾರಿ ಇರಬಹುದೇ? ಹ್ಯಾರಿ ಅಲ್ಲಿ ಇರುವುದಿರಲಿ ಆ ವಿಳಾಸ ಇನ್ನೂ ಇದ್ದಾತೇ?! ಮಂಗಳೂರಿನಲ್ಲಿ ಕಂಕನಾಡಿಯ ಪಂಪ್ ವೆಲ್ ಹತ್ತಿರ ಹ್ಯಾರಿಯ ಮನೆ... ಈಗ ಆ ಕಂಕನಾಡಿಯಲ್ಲಿ ಎಷ್ಟು ಪಂಪ್ ವೆಲ್ ಗಳಿದ್ದಾವೋ ಏನೋ!

ರಾಯರಿಗೆ ಹ್ಯಾರಿಯೊಂದಿಗಿನ ಒಡನಾಟ ನೆನಪಾಯಿತು. ಆಗ ಸರಕಾರೀ ಶಾಲೆಯಲ್ಲಿ ವಶೀಲಿ ನಡೆಸಿಯೂ ಸೀಟ್ ಸಿಗಲಿಲ್ಲವೆಂದು ಈ ಮಿಷನ್ ಶಾಲೆಯಲ್ಲಿ ಭಾಸ್ಕರರಾಯರನ್ನು ಹಾಕಿದ್ದರು. ಮಿಷನ್ ಎಂದರೆ ರಾಯರ ಮನಸ್ಸಿಗೆ ಬರುತ್ತಿದ್ದುದು ಹೊಲಿಗೆ ಯಂತ್ರ ಮಾತ್ರ. ಮಿಷನ್ ಶಾಲೆಗೆ ಸೇರಿದರೆ ತಾನೆಲ್ಲಿ ದರ್ಜಿಯಾಗಬೇಕಾದೀತೋ ಎಂಬ ಭಯವೂ ಭಾಸ್ಕರರಾಯರಿಗೆ ಆಗ ಕಾಡಿತ್ತು. ಹೈಸ್ಕೂಲಿನ ಆ ಮೂರುವರ್ಷಗಳಲ್ಲಿ ಹ್ಯಾರಿಯೇ ಅವರಿಗೆ ಖಾಯಂ ಆಗಿ ಸ್ನೇಹಿತ. ಫೋರ್ಥ ಫಾರಂನಲ್ಲಿ ಫುಟ್ ಬಾಲ್ ಆಡುವಾಗ ಅವನ ಸ್ನೇಹವಾಯಿತು. ಮೆಟ್ರಿಕ್ ಪಾಸಾಗುವವರೆಗೂ ಇಬ್ಬರೂ ಒಟ್ಟಿಗೆ ಸುತ್ತಿದ್ದೇ ಸುತ್ತಿದ್ದು! ನಂತರ ರಾಯರು ಮಹಾರಾಜಾ ಕಾಲೇಜು ಸೇರಿದರು. ಮಂಗಳೂರಿಗೆ ಹೋದ ಹ್ಯಾರಿ ಓದು ಮುಂದುವರೆಸಲು ಸಾಧ್ಯವಾಗದೇ, ಅಲ್ಲೇ ಎಲ್ಲೋ ಕೆಲಸಕ್ಕೆ ಸೇರಿದ.

ಹ್ಯಾರಿ ಊರಿಗೆ ಹೊರಟದಿನ ರಾಯರು ಅವನನ್ನು ಸೈಕಲ್ ಮೇಲೆ ಡಬ್ಬಲ್ ರೈಡ್ ಕರೆದುತಂದು ಮನೆಯಲ್ಲಿ ಗಲಾಟೆಮಾಡಿ ಮಾಡಿಸಿದ್ದ ಒಬ್ಬಟ್ಟಿನೂಟ ಬಡಿಸಿ ಕಳಿಸಿದ್ದರು. ಹ್ಯಾರಿಯ ತಾಯಿ ಮಂಗಳೂರಿನ ಶಾಲೆಯೊಂದರಲ್ಲಿ ಮೇಡಂ ಆಗಿದ್ದರೆಂದು ಹ್ಯಾರಿ ಹೇಳಿದ್ದ. ಹ್ಯಾರಿಯ ತಂದೆ ತೀರಿಕೊಂಡಿದ್ದರಂತೆ. ಅವನಿಗೊಬ್ಬ ತಮ್ಮ ಒಬ್ಬಳು ತಂಗಿ ಇರುವುದಾಗಿಯೂ ಹೇಳಿದ್ದದ್ದು ಭಾಸ್ಕರರಾಯರಿಗೆ ಮಸಕು ಮಸಕು ನೆನಪು. ಅಂದು ಅವನಿಗೆ ಊಟ ಹಾಕಿಸಿ, ಬಸ್ಸೇರಿಸಿ ಕೈವಸ್ತ್ರ ಹಿಡಿದು ಭಾಸ್ಕರರಾಯರು ಟಾಟಾ ಮಾಡಿದ್ದರು.

ಅವನು ತಮ್ಮನ್ನಿನ್ನೂ ನೆನಪಿನಲ್ಲಿಟ್ಟುಕೊಂಡಿರಬಹುದೇ? ಭಾಸ್ಕರರಾಯರು ನಂತರ ಓದಿದ, ಐದಾರು ವರ್ಷ ತಮ್ಮ ಒಡನಾಟದಲ್ಲಿದ್ದ ಅನೇಕ ಸ್ನೇಹಿತರನ್ನೇ ಮರೆತಿದ್ದಾರೆ. ಜೊತೆಗೆ ಈಗೀಗಂತೂ ತಮಗೆ ಹೆಸರುಗಳೇ ಮರೆತುಹೋಗುತ್ತಿವೆ. ಒಮ್ಮೊಮ್ಮೆ ರಸ್ತೆಯಲ್ಲಿ ಯಾರಾದರೂ ಹಳೆಯ ಸ್ನೇಹಿತರು ಸಿಕ್ಕು "ಏನಯ್ಯಾ ಭಾಸ್ಕರಾ ರಿಟೈರಾದಮೇಲಾದರೂ ಮೈಸೂರಿಗೆ ಬಂದುಬಿಟ್ಟೆ. ಹೊತ್ತು ಕಳೆಯೋದಕ್ಕೆ ಏನು ಮಾಡ್ತಾ ಇದ್ದೀಯಪ್ಪಾ... ಎಷ್ಟು ಜನ ಮಕ್ಳು ನಿನ್ನ ಮಗಂಗೆ?" ಎಂದೆಲ್ಲಾ ಮಾತನಾಡಿಸಿದಾಗ ತಮ್ಮ ಎಂದಿನ ಪುರಾಣ ಬಿಚ್ಚಿ "ಹೀಗೇ ಇರೋ ಒಬ್ಬ ಮೊಮ್ಮಗನ ಜೊತೆ ಆಟ ಆಡ್ತಾ, ವಾಕಿಂಗ ಹೋಗ್ತಾ, ನಡೀತಿದೆ ಜೀವನ. ಆ ದೇವರು ನಮ್ಮನ್ನು ಇಟ್ಟಷ್ಟು ಕಾಲ ಹೇಗೋ ಬದುಕೋದು. ಅವನು ಕರೆಸಿಕೊಂಡಾಗ ನಗ್ತಾ ಹೋಗೋದು. ಒಟ್ನಲ್ಲಿ ವಿನಾದೈನ್ಯೇನ ಜೀವನಂ ಅನಾಯಾಸೇನ ಮರಣಂ - ಇಷ್ಟೇ ಆ ಭಗವಂತನಲ್ಲಿ ನಾನು ಕೇಳಿಕೊಳ್ಳೋದು." ಎಂದು ಉತ್ತರಿಸಿ ಮನೆಗೆ ಬಂದರೂ ಮಾತನಾಡಿಸಿದ್ದು ಯಾರೆಂದು ನೆನಪೇ ಆಗುವುದಿಲ್ಲ. ಮುಂದೆ ಒಂದು ಒಂದೂವರೆ ದಿನವಾದ ಮೇಲೋ, ಎರಡು ದಿನಗಳ ನಂತರವೋ..."ಅರೇ ಮೊನ್ನೆ ಸಿಕ್ಕದ್ದು ನಮ್ಮ ಶಿವಾಜೋಯಿಸರ ಮಗ ಶಂಕರನಾರಾಯಣ ಅಲ್ಲವೇ" ಎಂದು ಇದ್ದಕ್ಕಿದ್ದಂತೆ ನೆನಪು ಮಾಡಿಕೊಂಡು ನಗುವುದು.. ಗುನುಗುವುದು.. ಹೀಗೆ. ಹಾಗಿದ್ದಲ್ಲಿ, ಹ್ಯಾರಿಗೆ ತಮ್ಮ ನೆನಪಿರಬಹುದೇ?

ಹ್ಯಾರಿ ಮೊದಲ ದಿನ ಮನೆಗೆ ಬಂದಾಗ ರಾಯರ ತಾಯಿ ಸ್ವಲ್ಪ ಅನುಮಾನದಿಂದಲೇ ನೋಡಿದ್ದರು. ಮೊದಲೇ ಕ್ರೈಸ್ತರ ಶಾಲೆ. ಭಾಸ್ಕರರಾಯರು ಮನೆಗೆ ಬಂದ ತಕ್ಷಣ ಶಾಲೆಯ ಬಟ್ಟೆ ಬಿಚ್ಚಿ ಒಂದು ಮೂಲೆಗೆ ಒಗೆದು, ಮೊಣಕಾಲು ಮೊಣಕೈಗಳವರೆಗೂ ನೀರೆರಚಿಕೊಂಡು, ಮುಖ ತೊಳೆದು ನಂತರ ಒಳಕೋಣೆ ಪ್ರವೇಶಿಸಬೇಕು. ಅಂಥದ್ದರಲ್ಲಿ ಈ ಕ್ರೈಸ್ತರ ಹುಡುಗ ಮನೆಯೊಳಗೆ ಬರುವುದೆಂದರೆ! ಆಕೆಯಂತೂ ಹ್ಯಾರಿಯನ್ನು ಹೊರಬಾಗಿಲಲ್ಲೇ ನಿಲ್ಲಿಸಿ -

"ನಿಂದು ಯಾವ ಜಾತಿಯಪ್ಪಾ?" ಎಂದು ಕೇಳಿದ್ದರು.

"ನಾವು ಬಡಗಿಗಳು ತಾಯಿ" ಹ್ಯಾರಿ ಹೇಳಿದ್ದ.

"ನಿನ್ನ ಹೆಸರೇನು ಮರಿ?"

"ಶಿವಾಚಾರಿ"

"ನಿಮ್ಮಮ್ಮನ ಹೆಸರು?"

"ಅಮ್ಮ ಪುಟ್ಟಮ್ಮ ಅಂತ. ಅಪ್ಪನ ಹೆಸರು ರಾಮಾಚಾರಿ... ಅವರು ಈಗ ಇಲ್ಲ" ಹ್ಯಾರಿ ಚಿಟ್ಟೆಂದು ಉತ್ತರಿಸಿದ್ದ. ರಾಯರಿಗೆ ಆಶ್ಚರ್ಯವಾಗಿತ್ತು.

"ನೀವು ಮೊಟ್ಟೆ ಮಾಂಸ ತಿಂತೀರಾ?"

"ಛೆ! ಛೇ!... ಇಲ್ಲ ತಾಯಿ."

ಅಷ್ಟಕ್ಕೇ ಹ್ಯಾರಿಗೆ ಮನೆಯೊಳಗೆ ಪ್ರವೇಶ ಸಿಕ್ಕಿತ್ತು. ಅವನನ್ನು ಹೊರಕೋಣೆಯಲ್ಲೇ ಕೂಡಿಸಿ ಮಾತನಾಡಿಸಿ ಕಳುಹಿಸಬೇಕೆಂದು ಅಮ್ಮನ ಅಪ್ಪಣೆಯೂ ಆಯಿತು. "ಏನೋ ನಮ್ಮ ಹಿಂದೂಗಳೇ, ಮೇಲಾಗಿ ಹೋಲೇರ ಹುಡುಗನಂತೂ ಅಲ್ಲ" ಎಂದು ಆಕೆ ತಮಗೆ ತಾವೇ ಸಮಾಧಾನ ಹೇಳಿಕೊಂಡಿದ್ದರು.

ಭಾಸ್ಕರರಾಯರಿಗೆ ಇದೆಲ್ಲಾ ಸೋಜಿಗವೆನ್ನಿಸಿ ಹ್ಯಾರಿಯನ್ನ ಕೇಳಿದ್ದರು. ಆಗವನು ತಾವುಗಳು ಆರ್ಥಿಕ ಮುಗ್ಗಟ್ಟಿನಲ್ಲಿದ್ದಾಗ ಕ್ರೈಸ್ತ ಮಿಷನರಿಗಳು ಸಹಾಯಮಾಡಿದ್ದು. ಆಗ ತಾನೇ ತನ್ನ ತಂದೆ ತೀರಿಕೊಂಡಿದ್ದರಿಂದ ಆಗಿದ್ದ ದುಃಖದಲ್ಲಿ ಅವರಿಗೆ - ಮುಖ್ಯವಾಗಿ ಹ್ಯಾರಿಯ ತಾಯಿಗೆ - ಬೈಬಲ್ ಪಾಠಣ ನೀಡಿದ್ದ ಸಮಾಧಾನ, ಜೊತೆಗೆ ಮಾನವೀಯತೆಯನ್ನೇ ಜೀವನವಾಗಿಸಿಕೊಂಡಿದ್ದ ಆ ಮಿಷನರಿಗಳ ಒಡನಾಟ. ಈ ಎಲ್ಲ ಪ್ರಭಾವಗಳಿಂದ ತಾವುಗಳು ಕ್ರೈಸ್ತ ಮತಕ್ಕೆ ಸಹಜವಾಗಿ ಪರಿವರ್ತೆನೆಗೊಂಡದ್ದು - ಅದರೊಂದಿಗೆ ತನ್ನ ತಾಯಿ ಪುಟ್ಟಮ್ಮ ಮೇರಿಯಾದದ್ದು, ತಾನು ಶಿವಾಚಾರಿ ಹ್ಯಾರಿಯಾದದ್ದು ಎಲ್ಲವನ್ನೂ ಭಾಸ್ಕರರಾಯರಲ್ಲಿ ಹೇಳಿಕೊಂಡಿದ್ದ. ಆಗ್ಗೆ ಹ್ಯಾರಿಯ ಊಟ, ವಿದ್ಯಾಭ್ಯಾಸದ ಖರ್ಚು ಎಲ್ಲವನ್ನೂ ಚರ್ಚ್ ಆಫ್ ಸೌತ್ ಇಂಡಿಯಾದವರೇ ಭರಿಸುತ್ತಿದ್ದರು. ದಿನವೂ ಬೋರ್ಡಿಂಗ್ ಹೋಂನಿಂದ ಸಾಲಾಗಿ ಹ್ಯಾರಿ ಮತ್ತಿತರ ಬೋರ್ಡರುಗಳು ಶಾಲೆಯ ಆವರಣದೊಳಗೆ ಪ್ರವೇಶಿಸುತ್ತಿದ್ದುದೂ ಭಾಸ್ಕರರಾಯರಿಗೆ ನೆನಪಿದೆ. ಆದರೆ ಈ ಎಲ್ಲ ವಿಷಯಗಳ ಸಂಕೀರ್ಣತೆಯನ್ನು ಗ್ರಹಿಸಲು ಭಾಸ್ಕರರಾಯರಿಗೆ ಆಗ ಸಾಧ್ಯವಾಗಿರಲಿಲ್ಲ.

ಆಮೇಲಾಮೇಲೆ ಹ್ಯಾರಿ ಭಾಸ್ಕರರಾಯರಿಗೊಂದು ಅನಿವಾರ್ಯ ಅಂಗವಾಗಿ ಹೋಗಿದ್ದ. ಮನೆಯಲ್ಲಿ ಏನಾದರೂ ಹಬ್ಬ ಹರಿದಿನಗಳಾದರೆ ಹ್ಯಾರಿಗೊಂದು ಆಹ್ವಾನ ಇದ್ದೇ ಇರುತ್ತಿತ್ತು. ಅವನ ಪ್ರವರ್ತನೆ, ಶುಚಿತ್ವವನ್ನು ನೋಡಿದ್ದ ಭಾಸ್ಕರರಾಯರ ತಾಯಿ ಅವನನ್ನು ಒಳಗಿನ ಹಜಾರದವರೆಗೂ ಕರೆತರಲು ಭಾಸ್ಕರರಾಯರಿಗೆ ಅನುಮತಿ ನೀಡಿದ್ದರು. ಬ್ರಾಹ್ಮಣರ ಪಂಕ್ತಿ ಮುಗಿದ ಮೇಲೆ ಹ್ಯಾರಿ ಮತ್ತು ಭಾಸ್ಕರರಾಯರಿಗೆ ಪ್ರತ್ಯೇಕ ಬಡಿಸುವ ಏರ್ಪಾಟನ್ನೂ ಆಕೆ ಮಾಡಿದ್ದರು.

ಹ್ಯಾರಿ ಮಂಗಳೂರಿಗೆ ಹೋದನಂತರ ಒಂದು ಪತ್ರ ಗೀಚಿ ಹಾಕಿದ್ದ. ಅದರಲ್ಲಿ ತನ್ನ ವಿಳಾಸ, ಭಾಸ್ಕರರಾಯರ, ಅವರ ಮನೆಯವರ ಸ್ನೇಹಕ್ಕೆ, ಪ್ರೀತಿಗೆ, ಅಭಿಮಾನಗಳಿಗೆ ಕೃತಜ್ಞತೆ, ಜನ್ಮಜನ್ಮದ ಋಣಾನುಬಂಧದ ಮಾತು ಬಿಟ್ಟರೆ ಬೇರೇನೂ ಇರಲಿಲ್ಲ. ಆ ಪತ್ರವನ್ನೂ ಫೋಟೋದೊಂದಿಗೆ ಇಟ್ಟಂತೆ ಭಾಸ್ಕರರಾಯರಿಗೆ ನೆನಪು. ರಾಯರು ಮತ್ತೆ ಕಪಾಟನ್ನು ಕೆದರತೊಡಗಿದರು.

ಫೋಟೋ ತೆಗೆಸಿಕೊಂಡ ಒಂದು ತಿಂಗಳ ನಂತರ ರಾಯಲ್ ಸ್ಟುಡಿಯೋ ಬಳಿ ಹೋಗಿದ್ದಾಗ ಅವನ ಷೋಕೇಸಿನಲ್ಲಿ ತಮ್ಮಬ್ಬರ ಫೋಟೋವನ್ನು ವಿಸ್ತೃತಗೊಳಿಸಿ ಇಟ್ಟಿದ್ದದ್ದು ಭಾಸ್ಕರರಾಯರಿಗೆ ನೆನಪಾಯಿತು. ಆ ಫೋಟೋ ನೋಡಿದಾಗೆಲ್ಲಾ ಅದನ್ನು ತೆಗೆದೊಯ್ಯಬೇಕೆಂದು ರಾಯರಿಗೆ ಆಸೆಯಾಗುತ್ತಿತ್ತು. ಆದರೆ ಅವರಲ್ಲಿ ಆಗ ಹಣವಿದ್ದಿಲ್ಲ. ಈಗಲೂ ಆ ಫೋಟೋ ಅಲ್ಲೇ ಇರಬಹುದೇ? ಈ ಆಲೋಚನೆ ರಾಯರ ಮೆದುಳನ್ನು ಹೊಗುತ್ತಿದ್ದಂತೆಯೇ ಹೆಗಲ ಮೇಲೆ ವಲ್ಲಿ ಹಾಕಿ ಮೆಟ್ಟಿನೊಳಗೆ ಕಾಲು ತೂರಿಸಿಯೇ ಬಿಟ್ಟರು.

"ಅಮ್ಮಾ ನೀರಜಾ... ನಾನು ಇಲ್ಲೇ ರಾಯಲ್ ಸ್ಟುಡಿಯೋಗೆ ಒಂದು ರೌಂಡ್ ಹೋಗ್ಬರ್ತೀನಮ್ಮಾ."

"ಯಾವ ರಾಯಲ್ ಸ್ಟುಡಿಯೋ ಮಾವಾ?"

"ಇಲ್ಲೇ ಚಿಕ್ಕಮಾರ್ಕೆಟ್ ಹತ್ರ ಸಂದೀಲಿ ಇದ್ಯಲ್ಲಮ್ಮಾ... ನಾವು ಹುಡುಗರಾಗಿದ್ದಾಗ ಆತ ಪ್ಯಾಲೆಸ್ ಫೋಟೋಗ್ರಾಫರ್ ಆಗಿದ್ದನಂತೆ.. ಮಹಾರಾಜರ ಫೋಟೋ ಎಲ್ಲಾ ತೆಗೆದಿದ್ದಾನಮ್ಮಾ. ಅದಕ್ಕೇ ರಾಯಲ್ ಸ್ಟುಡಿಯೋಂತ ಹೆಸರು. ಬೈ ಅಪಾಯಿಂಟ್ ಮೆಂಟ್ ಟು ಹಿಸ್ ಮೆಜೆಸ್ಟಿ... ಫೋಟೋಗ್ರಾಫರ್ ಆಗಿದ್ದ ಅವನು."

"ಅಯ್ಯೋ ಆ ಮುರುಕಲು ರಾಯಲ್ ಸ್ಟುಡಿಯೋನೇ? ಪ್ಯಾಲೆಸ್ ವೈಭವ ಇದ್ದಹಾಗೇ ಇದೆ ಅವನದ್ದೂ.. ನೊಣ ಹೊಡೀತಾ ಕೂತಿದ್ದಾನೆ. ಈಗೆಲ್ಲಾ ಕಲರ್ ಲ್ಯಾಬ್ ಗಳು ಬಂದಮೇಲೆ ಆ ಬ್ಲಾಕ್ ಅಂಡ್ ವೈಟನ್ನ ಯಾರು ಕೇಳ್ತಾರೆ ಮಾವಾ? ಅವನ ಹತ್ತಿರ ಈಗ ಏನಿದೆ ಮಣ್ಣು?"

"ಹಾಗಲ್ಲಮ್ಮಾ.... ಅವನು ಈ ಫೋಟೋದ ಎನ್-ಲಾರ್ಜ್-ಮೆಂಟ್ ಷೋಕೇಸಿನಲ್ಲಿ ಹಾಕಿದ್ದ. ಅದು ಇನ್ನೂ ಇದೆಯೋ ಇಲ್ಲವೋ ಒಂದು ಸರ್ತಿ ನೋಡಿ ಬರೋಣಾಂತ. ಕ್ಯೂರಿಯಾಸಿಟಿ ಅಷ್ಟೇ. ಇದ್ರೆ ತೆಗೊಂಡು ಬರೋದು. ಮೌಂಟ್ ಹಾಕಿದ್ದ ಆ ಫೋಟೋನ ಕೊಟ್ಟೇ ಕೊಡ್ತಾನೆ. ಐವತ್ತು ವರ್ಷದ ಹಿಂದಿನ ಫೋಟೋ ವ್ಯಪಾರ ಆದರೆ ಅವನಿಗೇ ಖುಷಿ ಅಲ್ಲವೇ?"

"ಅಲ್ಲ ಮಾವಾ... ಐವತ್ತೈದು ವರ್ಷದ ಫೋಟೋ.. ನೆಗೆಟಿವ್ ಹೀಗೆ ಅವನು ತೆಗೆದಿದ್ದೆಲ್ಲಾ ಭದ್ರವಾಗಿ ಇಟ್ಟಿದ್ದರೆ ಈಗವನ ಅಂಗಡಿ ಪೂರ್ತಿ ನೆಗೆಟಿವ್ ಆಗಿರುತ್ತೆ ಅಷ್ಟೇ. ಸುಮ್ಮನೆ ನಿಮಗೆಲ್ಲೋ ಭ್ರಾಂತು ಅಷ್ಟೇ.. ಮಲಗಿ, ಮಲಗಿ.. ರಾತ್ರಿ ದೂರದರ್ಶನದಲ್ಲಿ ಬರೋ ರಷ್ಯನ್ ಸಿನೇಮಾ ನೋಡೋವ್ರಂತೆ"

ಭಾಸ್ಕರರಾಯರು ಆಲೋಚಿಸಿದರು. ನೀರಜಾ ಹೇಳುವುದೂ ನಿಜವೇ. ಇದೆಲ್ಲಾ ಸುಮ್ಮನೆ ತಮ್ಮ ನಾಸ್ಟಾಲ್ಜಿಯಾ ಅಷ್ಟೇ. ಈಗ ಈ ಫೋಟೋ ದೊಡ್ಡದು ಮಾಡಿ ಮಾಡುವುದಾದರೂ ಏನು? ಹೋದ ಬಾರಿಯಂತೂ ಶನಿವಾರ ರಾತ್ರಿ ಠಾಕೂರರ ನಾಟಕ ನೋಡೋಕ್ಕೇ ಆಗಲಿಲ್ಲ. ಈ ಸಾರೀನಾದರೂ ಎದ್ದಿರಬೇಕು ಎಂದುಕೊಳ್ಳುತ್ತಾ ಭಾಸ್ಕರರಾಯರು ಮಲಗಿದರು. ಶಾಂತವಾಗಿ ನಿದ್ದೆಯನ್ನೂ ಮಾಡಿದರು.

ಸಂಜೆಗೆ ಅವರ ಮಗ ಮಹೇಶಚಂದ್ರ ಆಫೀಸು ಮುಗಿಸಿಕೊಂಡು ಬರುವವೇಳೆಗೆ ಭಾಸ್ಕರರಾಯರು ನಿದ್ರಿಸುತ್ತಿದ್ದರು. ಸಾಮಾನ್ಯವಾಗಿ ಸಂಜೆ ನಾಲ್ಕಕ್ಕೆ ಸರಿಯಾಗಿ ಏಳುತ್ತಿದ್ದವರು ಅಂದೇಕೋ ಆರು ಘಂಟೆಯಾದರೂ ಎದ್ದಿರಲಿಲ್ಲ.

ಮಹೇಶಚಂದ್ರ ಬಟ್ಟೆ ಬದಲಿಸಿ ಕಾಫಿ ಕುಡಿದವನೇ ನೀರಜಾಳೊಂದಿಗೆ ಹೇಳಿದ -

"ನಾಡಿದ್ದು ಮಂಗಳ ಕೆಮಿಕಲ್ಸ್ ನಲ್ಲಿ ಒಂದು ಸೆಮಿನಾರಿದೆ. 'ಫರ್ಟಿಲೈಸರ್ ಸೀನ್ ಇನ್ ಇಂಡಿಯಾ - ಪ್ರಸಂಟ್ ಗ್ಲಟ್ ಆಂಡ್ ಫ್ಯೂಚರ್ ಪ್ರಾಸ್ಪೆಕ್ಟ್ನ್' ಅಂತ ವಿಷಯ.. ಹೇಗಿದೆ?

"ಸೆಮಾನಾರು ಎಲ್ಲಿ?"

"ಮಂಗಳೂರಿನಲ್ಲಿ... ನಾಳೆ ಸಾಯಂಕಾಲ ಹೊರಡಬೇಕು. ರಾತ್ರಿಗೆ ಸ್ವಲ್ಪ ಟೀ ಮಾಡಿಡು.. ಈವತ್ತೇ ಪೇಪರ್ ತಯಾರು ಮಾಡಬೇಕು. ನಾಳೆ ಆಫೀಸಿನಲ್ಲಿ ಟೈಪ್ ಮಾಡಿಸಿಕೋತೀನಿ.... ಅಪ್ಪ ಯಾಕೆ ಇನ್ನೂ ಎದ್ದಿಲ್ಲ?"

"ಅವರು ಮಧ್ಯಾಹ್ನ ಮಲಗಿದ್ದೇ ಲೇಟಾಗಿತ್ತು. ಈವತ್ತು ಮತ್ತೆ ಕಪಾಟು ತೆರೆದು ಕೂತಿದ್ರು. ಅದ್ಯಾರೋ ಹೈಸ್ಕೂಲಿನ ಸ್ನೇಹಿತನ ಫೋಟೋ ಸಿಕ್ಕಿತೂಂತ ಅದೇ ಜಪ ಮಾಡುತ್ತಾ ಇದ್ದರು."

"ಯಾರದ್ದು? ಶಿವಾಜೋಯಿಸರ ಮಗ ಶಂಕರನಾರಾಯಣ ಅಂತಾ ಇರುತ್ತಾರಲ್ಲಾ.. ಅವರದ್ದಾ?"

"ಅಲ್ಲ.. ಅದೇನೋ ವಿಚಿತ್ರ ಕ್ರಿಶ್ಚಿಯನ್ ಹೆಸರು ಹೇಳುತ್ತಿದ್ದರು... ತಡೀರೀ ಒಂದು ನಿಮಿಷ.. ಆ ಫೋಟೋನೇ ತರುತ್ತೀನಿ. ನೀವೇ ನೋಡೋವ್ರಂತೆ."

ನೀರಜಾ ರಾಯರ ಮೇಜಿನ ಮೇಲಿದ್ದ ಆ ಚಿತ್ರವನ್ನು ಮಹೇಶಚಂದ್ರನಿಗೆ ಒಯ್ದು ಕೊಟ್ಟಳು. ಮಹೇಶಚಂದ್ರ ಫೋಟೋ ನೋಡಿ ಕಿರುನಗೆ ಬೀರಿದ....

"ಓಹ್.. ಅಪ್ಪನ ಸ್ಕೂಲಿನ ಕಾಲದ ಫೋಟೋ.. ಅಪ್ಪ ಇಲ್ಲೇ ಹಾರ್ಡ್ವಿಕ್ ಹೈಸ್ಕೂಲಿನ ವಿದ್ಯಾರ್ಥಿ ಆಗಿದ್ದರು ಕಣೇ.. ಅದಕ್ಕೆ ಆಗ ಮೆಥಾಡಿಸ್ಟ್ ಸ್ಕೂಲೂಂತ ಹೆಸರಿತ್ತು."

"ಹೌದಾ.. ನಮ್ಮ ಲಕ್ಷ್ಮೀಪುರದಲ್ಲಿರೋ ಹಾರ್ಡ್ವಿಕ್ಕೇ?! ನನಗೆ ಗೊತ್ತೇ ಇರಲಿಲ್ಲ,"

ಅಷ್ಟರಲ್ಲಿ ಮಹೇಶಚಂದ್ರ ಫೋಟೋದ ಹಿಂಭಾಗದಲ್ಲಿದ್ದ ವಿಳಾಸವನ್ನು ನೋಡಿದ್ದ.

"ಇದೇನೇ, ಮಂಗಳೂರಿನ ವಿಳಾಸವಿದೆ?"

"ಅದೇ ಹ್ಯಾರಿ ಅಲ್ಲವಾ.. ಆತ ಊರಿಗೆ ಹೋದಮೇಲೆ ಆ ಅಡ್ರಸ್ ಬರೆದಿದ್ದರಂತೆ."

"ಇದೂ ಒಂಥರಾ ಮಜಾ ಕೊಡುತ್ತೆ. ಈ ಫೋಟೋನ ನನ್ನ ಸೂಟ್ಕೇಸಿನಲ್ಲಿ ಹಾಕಿಡು. ಈ ವಿಳಾಸ ಸಿಗುತ್ತದೆಯೇನೋ ನೋಡೋಣ. ಊರೇ ಬದಲಾಗಿ ಹೋಗಿರುತ್ತೆ.. ಆದರೂ ಐವತ್ತು ವರ್ಷದ ಹಿಂದಿನ ವಿಳಾಸ ಇನ್ನೂ ಬದಲಾಗದೇ ಇದೆಯಾ ಅನ್ನೋದನ್ನ ನೋಡಬಹುದು. ಜೊತೆಗೆ ಆತ ಸಿಕ್ಕರಂತೂ ಅದಕ್ಕಿಂತ ದೊಡ್ಡ ಆಕಸ್ಮಿಕ ಬೇರೇನೂ ಇರೋದಿಲ್ಲ. ನಾನು ಮಂಗಳೂರಿನಲ್ಲಿ ಹುಡುಕಿ ಬರುತ್ತೇನೆ. ಈ ಐವತ್ತು ವರ್ಷದ ಕಾಲಮಾನವನ್ನ ಹುಡುಕೋದೂ ಒಂದು ಪ್ರತ್ಯೇಕ ಥ್ರಿಲ್ ನೋಡು."

"ನಿಮಗೆಲ್ಲೋ ತಲೆ ಕೆಟ್ಟಿದೆ ಬಿಡಿ."

"ಹಾಗಾದರೆ ಅವರು ಖಂಡಿತ ಸಿಗುತ್ತಾರೆ ಬಿಡು. ಬಿಹೈಂಡ್ ಎವ್ರಿ ಸಕ್ಸಸ್ ಫುಲ್ ಮ್ಯಾನ್ ದೇರ್ ಈಸ್ ಎ ಸರ್ಪ್ರೈಸ್ಡ್ ಉಮನ್ ಅಂತಾರಲ್ಲಾ ಹಾಗೆ!"

ಇಬ್ಬರೂ ನಕ್ಕರು.

ಮಹೇಶಚಂದ್ರ ತನ್ನ ಮಾರನೆಯ ದಿನದ ಪ್ರಯಾಣಕ್ಕಾಗಿ ತಯಾರಿ ನಡೆಸಿದ. ಸ್ವಲ್ಪ ಹೊತ್ತಿನ ಬಳಿಕ ಭಾಸ್ಕರರಾಯರು ಎದ್ದರು. ಇಬ್ಬರೂ ಸ್ವಲ್ಪ ಹೊತ್ತು ಲೋಕಾಭಿರಾಮ ಹರಟಿದರು. ನಂತರ ಭಾಸ್ಕರರಾಯರು ಆಗತಾನೇ ಆಟ ಮುಗಿಸಿಬಂದ ಮೊಮ್ಮಗನೊಟ್ಟಿಗೆ ಚಾಕಲೇಟ್ ವ್ಯಾಪಾರಕ್ಕೆಂದು ಹೊರಟುಬಿಟ್ಟರು.

ಆ ದಿನ ರಾತ್ರಿ ಮಹೇಶಚಂದ್ರ ತನ್ನ ಸೆಮಿನಾರು ಪೇಪರಿನ ತಯಾರಿ ನಡೆಸಿದ. ತಮ್ಮ ಫ್ಯಾಕ್ಟರಿಗೆ ಮಂಗಳವಾರ ರಜೆಯಿರೋದು ಅದೃಷ್ಟ... ಇಲ್ಲದಿದ್ರೆ ನಾಳೆ ಭಾನುವಾರ, ಪೇಪರ್ ಎಲ್ಲಿ ಟೈಪ್ ಮಾಡಿಸೋದು?! ಎಂದುಕೊಂಡು ತನ್ನಲ್ಲೇ ನಕ್ಕ.

ಭಾಸ್ಕರರಾಯರು ರಾತ್ರಿಯ ರಷ್ಯನ್ ಸಿನೇಮಾ ನೋಡಿದರು.

ಮಹೇಶಚಂದ್ರ ಮಂಗಳೂರಿಗೆ ಹೋದ. ಉಡ್ ಸೈಡಿನಲ್ಲಿ ಅವನಿಗಾಗಿ ಒಂದು ಕೋಣೆ ಕಾಯ್ದಿರಿಸಿದ್ದರು. ಅಂದಿನ ಸೆಮಿನಾರು ಮುಗಿದ ನಂತರ ಸಂಜೆಗೆ ಎಂದಿನಂತೆ ಬಿಡುವಿತ್ತು. ಸಾಧಾರಣ ಕಡಲತೀರಕ್ಕೋ ಅಥವಾ ಯಾವುದಾದರೂ ಸಿನೇಮಾಕ್ಕೋ ಹೋಗುತ್ತಿದ್ದವನು ಈ ಬಾರಿ ಬ್ರೀಫ್ ಕೇಸ್ ತೆಗೆದು ಅದರಲ್ಲಿದ್ದ ಫೋಟೋ ತೆಗೆದ. ಅವನಲ್ಲಿ ಒಂದು ರೀತಿಯ ಅನ್ವೇಷಕ ಭಾವನೆ ತುಂಬಿಕೊಂಡಿತ್ತು. ಹ್ಯಾರಿ ಜ್ಯೋತಿಕುಮಾರ್ ಈ ಐವತ್ತೈದು ವರ್ಷಗಳ ಹಿಂದಿನ ವಿಳಾಸದಲ್ಲಿರುವ ಸಂಭಾವ್ಯತೆ ಕಡಿಮೆ. ಸಂಭಾವ್ಯತೆಯೇನು? ಸಾಧ್ಯವೇ ಇಲ್ಲ. ಆದರೂ ಒಮ್ಮೆ ನೋಡಿಯೇ ಬಿಡುವ ಎಂದು ಅಡ್ವೆಂಚರ್ ನಡೆಸುವೋಪಾದಿಯಲ್ಲಿ ಕಂಕನಾಡಿಗೆ ರಿಕ್ಷಾ ಹತ್ತಿದ. ಕಂಕನಾಡಿಯ ದೊಡ್ಡ ವೃತ್ತದ ಬಳಿ ಇಳಿದು ಯಾರನ್ನೋ ಪಂಪ್ ವೆಲ್ ಎಲ್ಲಿದೆ ಎಂದು ಕೇಳಿದ. ಕೆಕ್ಕರುನೋಟ ಬೀರಿ 'ಮನೆಮನೆಯಲ್ಲೂ ಇದೆ' ಎಂದು ಹೇಳಬಹುದೆಂದು ನಿರೀಕ್ಷಿಸಿದ್ದವನಿಗೆ ಆಶ್ಚರ್ಯ ಕಾದಿತ್ತು - 'ಅಲ್ಲಿ ಎಲ್ಲಿ ಹೋಗಬೇಕು?' ಎಂದು ವ್ಯಕ್ತಿ ಕೇಳಿದ. ಮಹೇಶಚಂದ್ರ ಆಶ್ಚರ್ಯದಿಂದ ಉತ್ತರಿಸಿದ.. 'ಸೋಮಪ್ಪ ಪಂಡಿತರ ಕಾಂಪೌಂಡು.' ವ್ಯಕ್ತಿ ಕಾಂಪೌಂಡಿಗೆ ದಾರಿಯನ್ನೂ ಹೇಳಿಯೇ ಬಿಟ್ಟ - 'ಓ ಅಲ್ಲಿ ನೇರ ಹೋದರೆ ಒಂದು ಹಳೇ ಹೋಟೆಲ್ ಸಿಗ್ತದೆ.. ಸನ್ಮಾನ್ ಹೊಟೇಲ್ ಅಂತ.. ಅದರ ಹಿಂದಿನ ಕಾಂಪೌಂಡೇ ಸೋಮಪ್ಪ ಪಂಡಿತರದ್ದು.'

ಅರೇ ಅಂದುಕೊಂಡ ಮಹೇಶಚಂದ್ರ. ಮೈಸೂರಿನಲ್ಲಿ ಒಂದು ತಿಂಗಳು ಬಿಟ್ಟು ಜಯಲಕ್ಷ್ಮೀಪುರದ ಕಡೆ ಹೋದರೆ ಆ ಪ್ರಾಂತವೇ ಗುರುತು ಹತ್ತುವುದಿಲ್ಲ. ಇಲ್ಲಿ ನೋಡಿದರೆ ಕಳೆದ ಐವತ್ತು ವರ್ಷಗಳಿಂದ ಎಲ್ಲವೂ ಸ್ಥಗಿತವಾದ ಹಾಗೆ ಕಾಣಿಸುತ್ತದೆ ಕಾಂಪೌಂಡಿಗೆ ಬಂದು ವಿಚಾರಿಸಿದಾಗ, ವಿದ್ಯುತ್ ಸರಬರಾಜಿಲ್ಲದ ಒಂದು ಮನೆಗೆ ಮಹೇಶಚಂದ್ರನನ್ನು ಕಳಿಸಿದರು. ಮಹೇಶಚಂದ್ರ ಬಾಗಿಲ ಬಳಿ ನಿಂತು, ತೆರೆದಿದ್ದ ಬಾಗಿಲನ್ನು ಎರಡು ಬಾರಿ ತಟ್ಟಿದ. ಒಂದು ಕೋಳಿ, ಒಂದೈದಾರು ಪಿಳ್ಳೆಗಳು ಆ ತೆರೆದ ಬಾಗಿಲಿನಿಂದ ಹೊರಗೋಡಿ ನೆಲದಮೇಲಿಲ್ಲದ ಕಾಳುಗಳನ್ನು ಹೆಕ್ಕ ತೊಡಗಿದುವು.

"ಬಾಗಿಲು ತೆರೆದೇ ಉಂಟಲ್ಲಾ.. ಯಾರನ ಅದು?" ಎನ್ನುತ್ತಾ ಸುಮಾರು ಮಹೇಶಚಂದ್ರನ ವಯಸ್ಸಿನವನೇ ಆದ ಗಂಡಸು ಬಾಗಿಲ ಬಳಿ ಬಂದು ನಿಂತ.

"ಇಲ್ಲಿ ಹ್ಯಾರಿ ಜ್ಯೋತಿಕುಮಾರ್ ಇದ್ದಾರಾ?"

"ಅವರು ಇಲ್ಲ.. ಎಂತ ಆಗಬೇಕು?"

"ಅಂದರೆ?.. ಎಲ್ಲಿದ್ದಾರೆ?"

"ಈಗವರು ಮೈಸೂರಿನಲ್ಲಿದ್ದಾರಲ್ಲಾ ಮಾರಾಯ್ರೇ? ನಿಮಗೆ ಅವರ ಪರಿಚಯ ಉಂಟಾ?"

ಮಹೇಶಚಂದ್ರ ತಾನು ಬಂದಿದ್ದರ ಕಾರಣ, ಸಂದರ್ಭ ವಿವರಿಸಿದ. ಆಲ್ಬರ್ಟ್ ಅವನನ್ನು ಒಳಕರೆದು ಕೂಡಿಸಿದ. ಮಗಳ ಕೈಯಲ್ಲಿ ಪಕ್ಕದಂಗಡಿಯಿಂದ ಬಾಜಲ್ ತರಿಸಿದ. ಆ ನಂತರ ಅವನಿಗೇ ಅಲ್ಲಿನ ಬೆಳಕಿಲ್ಲದ ಅಂಧಕಾರದ ಬಗ್ಗೆ ಬೇಸರವಾಯಿತೇನೋ."ಇಲ್ಲಿ ಬೇಡ. ಹೊರಗೆ ಹೋಗುವಾ ಅಲ್ಲಾ?" ಎಂದು ಕೇಳಿದ. ಮಹೇಶಚಂದ್ರ ಅವನನ್ನು
ಉಡ್ ಸೈಡ್ ನ ತನ್ನ ಕೋಣೆಗೆ ಕರೆದೊಯ್ದ. ಕೋಣೆಯಲ್ಲಿ ಅವರು ಮತ್ತೆ ಮಾತು ಪ್ರಾರಂಭಿಸಿದರು.

ಆಲ್ಬರ್ಟ್ ಗೆ ತನ್ನಪ್ಪನನ್ನು ಮಹೇಶಚಂದ್ರ ಹುಡುಕಿಬಂದದ್ದು ಆಶ್ಚರ್ಯತರಿಸಿತ್ತು. ಅವನಿಗೆ ತಿಳಿದಂತೆ ಹ್ಯಾರಿಯನ್ನು ಹುಡುಕಿ ಈವರೆಗೆ ಯಾರೂ ತಮ್ಮ ಮನೆಯ ಬಳಿ ಬಂದದ್ದಿಲ್ಲ.
ಮಹೇಶಚಂದ್ರ ಹ್ಯಾರಿಯ ವಿಷಯ ತೆಗೆದ. ಅದಕ್ಕುತ್ತರವಾಗಿ ಆಲ್ಬರ್ಟ್ ತನ್ನ ಸಂಸಾರ ತಾಪತ್ರಯಗಳ ಸರಮಾಲೆಯನ್ನೇ ಬಿಡಿಸಿದ. "ಹ್ಯಾರಿಯವರಿಗೆ ವಯಸ್ಸಾಗಿತ್ತು ಮಾರಾಯ್ರೇ"... ಎಂದು ಪ್ರಾರಂಭಿಸಿದವ ತಮ್ಮ ಸಾಂಸಾರಿಕ ತೊಂದರೆ, ಆರ್ಥಿಕ ಮುಗ್ಗಟ್ಟು, ಎಲ್ಲವನ್ನೂ ಹೇಳಿದ. ಹ್ಯಾರಿ ಶಾಖಾಹಾರಿ ಆಗಿದ್ದನಂತೆ. ಆಲ್ಬರ್ಟ್ ತಾಯಿಗೆ ಭಾನುವಾರ ಮುಂಜಾನೆ ಕೋಳಿ ತಿನ್ನದಿದ್ದರೆ ದಿನವೇ ಸಾಗುತ್ತಿರಲಿಲ್ಲವಂತೆ. ಮೊದಲಿಗೆ ಪಕ್ಕದ ಮನೆಯಲ್ಲೆಲ್ಲಾದರೂ ಸಾರು ಮಾಡಿಸಿ ತರುತ್ತಿದ್ದರು. ಮಕ್ಕಳು ಹುಟ್ಟಿದ ಮೇಲೆ ಮನೆಯಲ್ಲೂ ಮಾಂಸಾಹಾರ ತಯಾರಿ ಪ್ರಾರಂಭವಾಯಿತು. ಆಕೆ ತೀರಿಕೊಳ್ಳುವ ತನಕ ಹ್ಯಾರಿ ಇದನ್ನೆಲ್ಲಾ ಹೇಗೋ ತಡೆದುಕೊಂಡಿದ್ದ. ನಂತರ ಮಾಂಸ ಮಾಡಿದ ದಿನ ವಿಪರೀತ ಸಿಡಿಸಿಡಿ ಮಾಡುವುದು, ಮೀನು ಮಾಡಿದರಂತೂ ಮನೆಯಿಂದಲೇ ಹೊರಟುಬಿಡುವುದೂ... ಹೀಗೆ ನೀರಿನಾಚೆಯ ಮೀನಿನಂತೆ ವಿಲಿವಿಲ ಒದ್ದಾಡಿ ಹೋಗುತ್ತಿದ್ದರಂತೆ. ಹ್ಯಾರಿ ಮೈಸೂರಿನಲ್ಲಿ ಓದಿದ ವಿಷಯ ಆಲ್ಬರ್ಟ್ ಗೆ ತಿಳಿದಿದ್ದಂತಿರಲಿಲ್ಲ. "ನನಗೆ ನನಪು ಇರುವಂತೆ" ಎಂದು ಪ್ರಾರಂಭಿಸಿದವ, ಹ್ಯಾರಿ ಮೇಕ್ಯಾನಿಕ್ ಆಗಿ ಎಲ್ಲೋ ಸೇರಿದವ ಕಡೆಗೆ ಮೆಷಿನ್ ಆಪರೇಟರ್ ಆಗಿ ದುಡಿದು, ಕಡೆಗೊಂದು ದಿನ ಕೆಲಸ ಕೈಲಾಗದೇ ಬಿಟ್ಟು ಬಂದ ವಿಷಯ ಹೇಳಿದ. ಆಲ್ಬರ್ಟ್ ಸಹ ಮಂಗಳೂರು ಕೆಮಿಕಲ್ಸ್ ನಲ್ಲಿ ಅಂಥದೇ ಒಂದು ಕೆಲಸ ಮಾಡುತ್ತಿದ್ದ. (ತಾನು ಅಲ್ಲಿಯ ಸೆಮಿನಾರಿಗೇ ಬಂದಿರುವುದೆಂದು ಮಹೇಶಚಂದ್ರ ಆಲ್ಬರ್ಟ್ ಗೆ ಹೇಳಲಿಲ್ಲ). ಆಲ್ಬರ್ಟ್ ನ ಮಗ ಈಗ ಮಂಗಳೂರಿನ ಹೆಬಿಕ್ ಟೆಕ್ನಿಕಲ್ ಸ್ಕೂಲಿನಲ್ಲಿ, ತಲೆತಲಾಂತರದಿಂದ ಬಳುವಳಿ ಬಂದ ಉದ್ಯೋಗಕ್ಕಾಗಿ ತರಬೇತಿ ಪಡೆಯುತ್ತಿದ್ದಾನಂತೆ.

ಹ್ಯಾರಿ ಮೈಸೂರಿನಲ್ಲಿರುವುದೇಕೆಂದು ಮಹೇಶಚಂದ್ರನಿಗಿನ್ನೂ ಅರ್ಥವಾಗಲಿಲ್ಲ. ಆಲ್ಬರ್ಟ್ ನನ್ನು ಆ ವಿಷಯವಾಗಿಯೂ ಪ್ರಶ್ನಿಸಿದ. "ಅದೇ ಹೇಳಿದೆನಲ್ಲಾ ಮಾರಾಯ್ರೇ" ಎಂದು ಆಲ್ಬರ್ಟ್ ಮತ್ತೆ ಮಾಂಸಾಹಾರ ಸಸ್ಯಾಹಾರದ ವಿಚಾರ ಬಿಚ್ಚಿದ. ಅದರ ಜೊತೆಗೆ ಹ್ಯಾರಿಯ ಕ್ಷೀಣಿಸುತ್ತಿದ್ದ ಆರೋಗ್ಯ, ಊಟ ಔಷಧಿಗಳಿಗೂ ಹಣ ಹೊಂದಿಸಲಾಗದ ತಮ್ಮ ಸ್ಥಿತಿ, ಬದಲಾದ ಜೀವನ ಪದ್ಧತಿಗೆ ಒಗ್ಗಿಕೊಳ್ಳಲಾಗದ ಪರಿಸ್ಥಿತಿ ಎಲ್ಲವನ್ನೂ ಹೇಳಿ ಕಡೆಗೆ "ಆದ್ದರಿಂದ ಚೆನ್ನಾಗಿ ಯೋಚನೆ ಮಾಡಿ, ವೃದ್ಧಾಶ್ರಮಕ್ಕೆ ಸೇರಿಸುವ ತೀರ್ಮಾನ ಮಾಡಿದ್ದು. ನಂತರ ಎಂತ ಉಂಟು ಮಾರಾಯ್ರೆ? ನಾವು ಯಾರಾದರೂ ಒಂದು ತಿಂಗಳಿಗೊಮ್ಮೆ ಹೋಗಿ ನೋಡಿ ಬರ್ತೇವೆ. ಒಮ್ಮೆ ನೋಡಿ ಬರಲಿಕ್ಕೂ ಹಣ ಸಮ ಹೊಂದುವುದಿಲ್ಲ ಮಾರಾಯ್ರೆ. ಮೈಸೂರಂದ್ರೆ ಎರಡುನೂರು ಖರ್ಚಾಗಲಿಕ್ಕೆ ಸಾಕು. ಎಂತ ಮಾಡುವುದೋ ಎಂತದೋ.." ಆಲ್ಬರ್ಟ್ ಮಾತು ಮುಗಿಸಿದ. ಮಹೇಶಚಂದ್ರ ವೃದ್ಧಾಶ್ರಮದ ವಿಳಾಸ ತೆಗೆದುಕೊಂಡು ನಂತರ ಆಲ್ಬರ್ಟ್ ಗೆ ಗುಡ್-ಬೈ ಹೇಳಿದ.

ಮಾರನೆಯ ದಿನವೂ ಸೆಮಿನಾರು ಮಾಮೂಲಿಯಾಗಿಯೇ ನಡೆಯಿತು. ರಾಸಾಯನಿಕ ಗೊಬ್ಬರಗಳ ಮಾರುಕಟ್ಟೆಯ ಪರಿಸ್ಥಿತಿ, ಬರದಿಂದ ಮಾರಾಟಕ್ಕೆ ಬಿದ್ದಿರುವ ಹೊಡೆತ, ಬರಪರಿಹಾರದಿಂದ ಮಾರಾಟ ಹೆಚ್ಚಾಗುವ ಸಂಭವ. ಗೊಬ್ಬರಗಳ ವಿಪರೀತ ಆಮದು.. ಹೀಗೆ ಏನೇನೋ ಚರ್ಚಿಸಿ ಮೈಸೂರಿಗೆ ಮರಳಿದ್ದಾಯಿತು. ಮನೆಗೆ ಬಂದಾಗ ಮುಂಜಾನೆ ಎಂಟೂವರೆ. ಸ್ನಾನ ಇತ್ಯಾದಿಗಳನ್ನು ಮುಗಿಸಿ ಮಹೇಶಚಂದ್ರ ಆಫೀಸಿಗೆ ಹೊರಟುಬಿಟ್ಟ.

ಎರಡುದಿನಗಳ ನಂತರ ಅಗಸರವನು ಮನೆಗೆ ಬಂದಾಗ ಪ್ರಯಾಣದ ಬಟ್ಟೆಗಳನ್ನು ಒಗೆಯಲೆಂದು ನೀರಜಾ ಹಾಕಿದಳು. ಅಭ್ಯಾಸಬಲದಂತೆ ಅಗಸರವ ಎಲ್ಲ ಜೇಬುಗಳನ್ನು ತಡಕಿ ಮಹೇಶಚಂದ್ರನ ಅಂಗಿಯಿಂದ ಒಂದು ಚೀಟಿ ತೆಗೆದುಕೊಟ್ಟ. ನೀರಜಾ ಅದನ್ನು ಅವನಿಂದ ಪಡೆದು ಮಹೇಶಚಂದ್ರನ ಮುಂದೆ ಹಿಡಿದಳು.

"ಓಹ್ ಗಡಿಬಿಡಿಯಲ್ಲಿ ಹೇಳೋದೇ ಮರೆತೆ ನೋಡು. ಮಂಗಳೂರಿನಲ್ಲಿ ಹ್ಯಾರಿ ಜ್ಯೋತಿಕುಮಾರ ಮನೆಗೆ ಹೋಗಿದ್ದೆ. ಆತ ಇಲ್ಲೇ ಹೋಮ್ ಫರ್ ದ ಏಜ್ಡ್ ನಲ್ಲಿದ್ದಾರಂತೆ. ಅವರ ಮಗ ವಿಳಾಸ ಕೊಟ್ಟಿದ್ದಾರೆ. ನಿಜ ಹೇಳಬೇಕೂಂದ್ರೆ ಅವರನ್ನ ಒಂದು ದಿನ ಮನೇಗೆ ಕರಕೊಂಡು ಬರಬೇಕೂಂತ ಇದ್ದೆ. ಅಪ್ಪನಿಗೆ ಒಂದು ಸರ್ಪ್ರೈಸ್ ಕೊಟ್ಟಹಾಗಾಗುತ್ತೆ."

"ಹೋಗ್ಲಿ ಅಂತೂ ನಿಮ್ಮ ಗೊಬ್ಬರಕ್ಕೆ ಮಾರ್ಕೆಟ್ ಪತ್ತೆಹಚ್ಚೋಕ್ಕೆ ಆಗದಿದ್ರೂನೂವೆ, ಅಪ್ಪನ ಹಳೇ ಸ್ನೇಹಿತರನ್ನಂತೂ ಹೇಗೆ ಪತ್ತೆ ಹಚ್ಚಿಬಿಟ್ಟಿರಿ. ಆದರೆ ಹ್ಯಾರಿಗೆ ನಿಮ್ಮಪ್ಪನ ನೆನಪು ಇರಬಹುದೇ?"

"ಅದೇನೋ ನಿಜ... ಆ ಫೋಟೋ ತೆಗೊಂಡು ಹೋಗಿರ್ತೀನಿ. ನೋಡೋಣ. ಜ್ಞಾಪಕ ಬರದೇ ಇದ್ದರೆ ಏನೂ ಮಾಡೊಕ್ಕಾಗಲ್ಲ. ಅಪ್ಪನಿಗೆ ಹ್ಯಾರೀನ ಭೇಟಿಯಾದರೆ ಆಗಬಹುದಾದ ಥ್ರಿಲ್ ಯೋಚಿಸಿ ನೋಡು. ಐವತ್ತೈದು ವರ್ಷಗಳ ನಂತರದ ಮರುಭೇಟಿ. ಅದೇ ಒಂದು ಪ್ರತ್ಯೇಕ ಖುಷಿ ಕೊಡುತ್ತೆ!"

"ನಿಜ. ಹೈಸ್ಕೂಲಿನ ಸ್ನೇಹಿತೆ ಸಿಕ್ಕಿದರೇನೇ ನನಗೆ ವಿಪರೀತ ಖುಷಿಯಾಗುತ್ತೆ, ಅಂಥದ್ದರಲ್ಲಿ ಮೊನ್ನೆ ಎಲ್ಲಾ ಜಪ ಮಾಡುತ್ತಿದ್ದ ಈ ಮಿತ್ರ ಸಿಕ್ಕಿದರೆ! ಕರಕೊಂಡುಬನ್ನಿ. ಮಾವನಿಗೂ ನಾವುಗಳು ಅವರಿಗಾಗಿ ಕೇರ್ ಮಾಡುತ್ತೇವೆ ತೊಂದರೆ ತೆಗೊಳ್ಳತ್ತೇವೆ ಅನ್ನಿಸಿದರೆ ಒಂದು ಬಗೆಯ ಭದ್ರತೆಯ ಭಾವ ಬರುತ್ತದೆ. ಖುಷಿಯೂ ಆಗುತ್ತದೆ."

ಮಹೇಶಚಂದ್ರ ಸಂಜೆ ವೃದ್ಧಾಶ್ರಮಕ್ಕೆ ಹೋದ. ಅಲ್ಲಿ ಹ್ಯಾರಿಯನ್ನು ಭೇಟಿಯಾಗುವುದು ಕಷ್ಟವೇನೂ ಆಗಲಿಲ್ಲ. ಹ್ಯಾರಿಗೆ ಹಳೇ ಚಿತ್ರ ತೋರಿಸಿ ವಿಷಯ ಹೇಳಿದ.

"ಓ ಭಾಸ್ಕರರಾವ್ ಮಗನಾ ಸರ್ ನೀವು?"

"ಹೌದು. ಅಪ್ಪ ಹೋದವಾರ ಪೂರ್ತಿ ನಿಮ್ಮನ್ನೇ ನೆನಪುಮಾಡಿಕೊಳ್ಳತ್ತಾ ಇದ್ದರು. ನೀವು ಈವತ್ತು ನನ್ನ ಜೊತೆ ಬನ್ನಿ. ನಮ್ಮ ಮನೆಯಲ್ಲಿ ಅಪ್ಪನನ್ನ ನೋಡಿದ ಹಾಗಾಗುತ್ತೆ. ಆಮೇಲೆ ನಾನು ನಿಮ್ಮನ್ನ ಇಲ್ಲಿ ವಾಪಸ್ ಬಿಡುತ್ತೇನೆ."

"ನಾನು ನಿಮ್ಮ ಮನೆಗೆ ಬರುವುದೆಂತ ಸರ್... ಶಾಲೆಯಲ್ಲಿ ಬುದ್ಧಿ ಬಲಿಯದಿದ್ದಾಗ ದೋಸ್ತಿ ಮಾಡಿದ್ದು. ನೀವು ಶ್ರೀಮಂತರು.. ನಾನು... ಬೇಡ ಸರ್."

ಮಹೇಶಚಂದ್ರ ಆತ್ಮೀಯವಾಗಿ ಕರೆದ. "ಅಲ್ಲ ಹ್ಯಾರಿ ಅಂಕಲ್ ಬನ್ನಿ ಪರವಾಗಿಲ್ಲ."

"ಏ ಬೇಡ ಸರ್."

"ನನ್ನನ್ಯಾಕೆ ಸರ್ ಅಂತ ಕರೀತೀರಾ? ನಾನು ನಿಮ್ಮ ಆಲ್ಬರ್ಟ್ ವಯಸ್ಸನವನಲ್ಲವೇ.. ಚೆಂದ ಕಾಣೋದಿಲ್ಲ,"

"ನಾನು ಮೆಥಾಡಿಸ್ಟ್ ಶಾಲೆ ಬಿಟ್ಟದ್ದೇ ಏಕವಚನ ಪ್ರಯೋಗ ಸಹ ಬಿಟ್ಟೆ ಸರ್.. ಇದು ಅಭ್ಯಾಸಬಲ ಸರ್."

ಕಡೆಗೂ ಹ್ಯಾರಿ ಜ್ಯೋತಿಕುಮಾರನ್ನು ಒಪ್ಪಿಸಿ ಕಾರಿನಲ್ಲಿ ಕೂಡಿಸುವುದು ಒಂದು ದೊಡ್ಡ ಸಾಹಸವೇ ಆಯಿತು. ಕಾರಿನಲ್ಲಿ ಹೋಗುತ್ತಿದ್ದಾಗ ಹ್ಯಾರಿ ತಮ್ಮ ನೆನಪಿನ ಸುರಳಿ ಬಿಚ್ಚಿದರು.

"ಆಗ ಇಲ್ಲೇ ಗಾಂಧಿ ಸ್ಕ್ನೇರ್ ಉಂಟು ನೋಡಿ, ಅದರ ಬಳಿ ಕೃಷ್ಣಾ ಥಿಯೇಟರ್ ಇತ್ತು. ಈಗ ಒಂದು ಛತ್ರವೋ ಎಂಥದೋ ಆಗಿದೆ. ಅಲ್ಲಿ ಕಂದಲೀಲಾ ಎನ್ನುವ ಸಿನೇಮಾ ಹಾಕಿದ್ರು. ಭಾಸ್ಕರರಾಯರ ಬಳಿ ಆ ದಿನ ಕೇವಲ ನಾಲ್ಕಾಣೆ ಇತ್ತು. ನನ್ನ ಕಿಸೆ ಯಾವಾಗಿನಂತೆ ಖಾಲಿ. ಟಿಕೇಟು ಮೂರಾಣೆ. ಇಬ್ಬರೂ ಹೋಗಿ ಒಂದೇ ಟಿಕೇಟು ಕೊಂಡು ಒಂದಾಣೆ ಬಾಗಿಲಿನವನಿಗೆ ಕೊಟ್ಟದ್ದು. ನಂತರ ಸಿನೇಮ ನೋಡಿದ್ದಾಯಿತು. ಆ ಸಮಯವೇ ಬೇರಿತ್ತು ಸರ್."

ಹ್ಯಾರಿಯನ್ನು ಮನೆಯೊಳಗೊಯ್ದು ಹಾಲ್ ನ ಸೋಫಾದಲ್ಲಿ ಕೂಡಿಸಿದ ಮಹೇಶಚಂದ್ರ, ಭಾಸ್ಕರರಾಯರನ್ನು ಹೊರಕರೆತಂದ.

"ಅಪ್ಪಾ, ಯಾರು ಬಂದಿದ್ದಾರೆ ನೋಡು.. ನಿಂಗೆ ಗೊತ್ತಾಯ್ತಾ?"

ಹ್ಯಾರಿಯ ಕಣ್ಣಂಚಿನಲ್ಲಿ ನೀರಿತ್ತು. ಭಾಸ್ಕರರಾಯರು ಹ್ಯಾರಿಯನ್ನು ನೋಡಿದರು. ಹೆಸರನ್ನು ನೆನಪು ಮಾಡಿಕೊಳ್ಳಲು ಪ್ರಯತ್ನಿಸಿದರು. ಯಾರಿವನು? ತಮ್ಮ ವೃತ್ತಿಯಲ್ಲಿ ತಮ್ಮ ಕೈಕೆಳಗೆ ದುಡಿದ ಅನೇಕ ಮುಖಗಳು ಅವರ ಸ್ಮೃತಿಯಲ್ಲಿ ಹಾಯ್ದು ಹೋದುವು. ಬೆಂಗಳೂರಿನಲ್ಲಿ ಆಚಾರಿ ಎಂಬ ಚಪ್ರಾಸಿ ಇದ್ದ... ಅಲ್ಲ ಅವನ ಮುಖವಲ್ಲ... ಮತ್ಯಾರು? ಗುಮಾಸ್ತೆ ಗುಣಶೇಖರ.. ಅಲ್ಲ - ಅವನಿನ್ನೂ ಬೆಳ್ಳಗಿದ್ದ. ಎಷ್ಟೋ ಜನ ತಮ್ಮ ಕೈ ಕೆಳಗಿದ್ದವರು ಆಗಾಗ ಬಂದು ನಮಸ್ಕಾರ ಹೇಳಿಹೋಗುವುದಿತ್ತು.. ಆದರೆ ಈತ... ಛೇ! ತಮ್ಮ ಮರೆವೆಯ ರೋಗವೇ! ನೆನಪೇ ಆಗುತ್ತಿಲ್ಲವಲ್ಲಾ!

"ಅಪ್ಪಾ ಇವರು ಹ್ಯಾರಿ ಜ್ಯೋತಿಕುಮಾರ್."

ಭಾಸ್ಕರರಾಯರು ಒಂದು ಕ್ಷಣ ಸ್ಥಂಬೀಭೂತರಾದರು. ಐವತ್ತು ವರ್ಷಗಳ ಕಾಲಾಂತರದ ಕಂದರ ಅವರೆದುರು ಬೃಹದಾಕಾರವಾಗಿ ಬಾಯ್ದೆರೆದು ನಿಂತಿತ್ತು. ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ಕುರ್ಚಿಯಲ್ಲಿ ಕುಸಿದರು.

"ನನ್ನ ಹೆಸರು ಭಾಸ್ಕರರಾವ್ ಅಂತ." ನಿಧಾನವಾಗಿ ಹೇಳಿದರು.

ಹ್ಯಾರಿ ಗೋಣು ಹಾಕಿ "ನಮಸ್ಕಾರ" ಎಂದಷ್ಟೇ ಹೇಳಿದ.

ಭಾಸ್ಕರರಾಯರಿಗೆ ಹ್ಯಾರಿ ಎಂದರೆ ಕಂದಲೀಲಾ ಮಾತ್ರ ನೆನಪಗೆ ಬರುತ್ತಿತ್ತು. ಮಿಕ್ಕಂತೆ ಈ ಮನುಷ್ಯ ಎಷ್ಟು ಅಪರಿಚಿತ ಎನ್ನಿಸತೊಡಗಿತು. ಏನಾದರೂ ಮಾತನಾಡಬೇಕು... ಏನು?

"ಈಗ ಎಲ್ಲಿದ್ದೀರಿ?" ಕಷ್ಟದಿಂದ ಕೇಳಿದರು.

"ಇಲ್ಲೇ ಮೈಸೂರಿನ ವೃದ್ಧಾಶ್ರಮದಲ್ಲಿ... ಈ ವಯಸ್ಸಿಗೆ ಕೆಲಸ ಎಂತದು?"

ಅಷ್ಟರಲ್ಲಿ ನೀರಜಾ ಎಲ್ಲರಿಗೂ ಶರಬತ್ ತಂದುಕೊಟ್ಟಳು. ಎಲ್ಲರೂ ಶರಬತ್ ಕುಡಿಯುವವರೆಗೆ ಅಲ್ಲಿ ಗಾಢ ಮೌನ ಆವರಿಸಿತ್ತು. ಮಹೇಶಚಂದ್ರನಿಗೆ ಏನು ಹೇಳಬೇಕೋ ತೋರಲಿಲ್ಲ.... ಇಬ್ಬರೂ ಅಪರಿಚಿತರ ಹಾಗೆ ಏಕಿದ್ದಾರೆ? ಅಪ್ಪನಿಗೆ ಹ್ಯಾರಿಯ ನೆನಪೇ ಆಗಲಿಲ್ಲವೇ?

ಭಾಸ್ಕರರಾಯರು ಎದ್ದು ನಿಂತರು... ಹೇಳುವುದೋ ಬೇಡವೋ ಎಂಬಂತೆ ಕ್ಷೀಣದನಿಯಲ್ಲಿ ಅವರು ಮಾತನಾಡಿದರು.

"ನೋಡಿ ರಿಟೈರಾದ ಮೇಲೆ ನನಗೇನೂ ತೋಚ್ತಾನೆ ಇಲ್ಲ. ಮರೆವೆ ಬೇರೆ. ಬೆಳಿಗ್ಗೆ ಬಿ.ಪಿ.ಮಾತ್ರೆ ತೆಗೆದುಕೊಳ್ಳೋದೇ ಮರೆತುಬಿಟ್ಟೆ ನೋಡಿ.... ನನಗೆ ತಲೆ ಯಾಕೋ ಸ್ವಲ್ಪ ಸುತ್ತುತ್ತಾ ಇದೆ. ನೀವು ಕ್ಷಮಿಸಿದರೆ ನಾನು ಒಳಗೆ ಹೋಗುತ್ತೇನೆ. ನಿಮಗೆ ಬೇಜಾರಾದಾಗ ಬರ್ತಾ ಇರಿ. ನಂಗೂ ಹೊತ್ತು ಹೋಗೊಲ್ಲ. ಆಗ ಮಾತಾಡೋಣ."

"ಸರಿ ಸರ್ ನೀವು ರೆಸ್ಟ್ ತೆಗೂಳ್ಳಿ - ತ್ರಾಸ ಮಾಡಿಕೊಳ್ಳಬೇಡಿ."

ರಾಯರು ಹಿಂದೆ ನೋಡದೇ ಸೀದಾ ಕೋಣೆಯೊಳಕ್ಕೆ ಹೊರಟುಬಿಟ್ಟರು. ಮಹೇಶಚಂದ್ರನಿಗೆ ಇದೇನೋ ಅಸಹಜವೆನ್ನಿಸಿತು. ಹ್ಯಾರಿಯನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ -

"ಒಂದೊಂದ್ಸರ್ತಿ ಅಪ್ಪಂಗೆ ಸಂಪೂರ್ಣ ಮರೆವೆ ಆಕ್ರಮಿಸಿಬಿಡುತ್ತೆ ಅಂಕಲ್... ಟೋಟಲ್ ಬ್ಲಾಕ್ ಔಟ್.. ನೀವು ದಯವಿಟ್ಟು ಬೇಜಾರು ಮಾಡಿಕೋಬೇಡಿ."

ನೀರಜಾ ತನ್ನದೇ ಆದ ಅರ್ಥಗ್ರಹಿಕೆಯನ್ನು ಹ್ಯಾರಿಯ ಸಮಾಧಾನಕ್ಕೋಸ್ಕರ ಅವನ ಮುಂದಿಟ್ಟಳು -

"ನಿಮ್ಮನ್ನು ಇಷ್ಟು ಕಾಲದ ನಂತರ ನೋಡಿದ ಸಂತೋಷದಿಂದಾಗಿ ಮಾತುಗಳು ಹೊರಡದೇ ಇದ್ದಿರಬಹುದು. ಈ ಸಂತೋಷದಿಂದ ಚೇತರಿಸಿಕೊಂಡಾಗ ಅವರು ಸಾಮಾನ್ಯರಂತೆ ಪ್ರತಿಕ್ರಿಯಿಸಬಹುದು. ಆಗ ನಿಮ್ಮನ್ನು ಮತ್ತೆ ಭೇಟಿ ಮಾಡಿಸುವ ಪ್ರಯತ್ನ ಮಾಡಬಹುದಲ್ಲವೇ?"

"ಹಾಗೆ ನೀವುಗಳು ಬೇಜಾರು ಮಾಡಿಕೊಳ್ಳುವುದು ಬೇಡ ಆಯಿತಾ.. ಅವರಿಗೆ ಏನೂ ನೆನಪಿಲ್ಲದಿರಬಹುದು. ಈಗ ನನ್ನ ಮಕ್ಕಳೇ ಮೂರು ತಿಂಗಳಿನಿಂದ ನನ್ನನ್ನು ಕಾಣುವುದು ಮರೆತಿದ್ದಾರೆ. ಇದೇನೂ ಹೆಚ್ಚಿನ ಸಂಗತಿಯಲ್ಲ ಬಿಡಿ."

ಮಹೇಶಚಂದ್ರನಿಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ಹ್ಯಾರಿ ವಾಪಸ್ ಹೋಗುವ ಇಚ್ಛೆ ತೋರಿದರು. ಅವರನ್ನು ಮಹೇಶಚಂದ್ರ ಕಾರಿನಲ್ಲಿ ಕೂಡಿಸಿಕೊಂಡು ವೃದ್ಧಾಶ್ರಮದತ್ತ ಕರೆದೊಯ್ದ. ದಾರಿಯಲ್ಲಿ ದೇವರಾಜಾ ಮಾರ್ಕೆಟ್ಟಿನ ಬಳಿ ಕಾರು ನಿಲ್ಲಿಸಿ ಎರಡು ಕಿಲೋ ತೂಗುವ ಬೇರೆ ಬೇರೆ ಹಣ್ಣುಗಳನ್ನು ಕೊಂಡು ಹ್ಯಾರಿಗೆ ಉಡುಗೋರೆಯಾಗಿ ಕೊಟ್ಟ. ಹೊರಡುವುದಕ್ಕೆ ಮೊದಲು ಕಷ್ಟಪಟ್ಟು ಎರಡು ಮಾತುಗಳನ್ನು ಆಡಿದ.

"ನಾನು ನಿಮ್ಮನ್ನು ಆಗಾಗ ಬಂದು ಕಾಣುತ್ತೇನೆ ಅಂಕಲ್.. ಅಪ್ಪಂಗೆ ಮತ್ತೆ ನೆನಪಾದಾಗ ಮನೇಗೆ ಹೋಗೋಣವಂತೆ."

"ಇರಲಿ. ಸಮಯವಾದರೆ ಬನ್ನಿ. ಸುಮ್ಮನೆ ತೊಂದರೆ ತೆಗೆದುಕೊಳ್ಳಬೇಡಿ ಆಯ್ತಾ?"

ಹ್ಯಾರಿ ಜ್ಯೋತಿಕುಮಾರ್ ಓಡುತ್ತಿದ್ದ ಕಾರಿನತ್ತ ಕೈ ಬೀಸಿದರು. ಮಹೇಶಚಂದ್ರ ಮನೆಗೆ ಬಂದ. ಕಾರಿನ ಬಾಗಿಲು ತೆಗೆಯುತ್ತಿದ್ದಾಗ ಹ್ಯಾರಿ ಜ್ಯೋತಿಕುಮಾರ್ ಗೋಸ್ಕರ ಕೊಂಡಿದ್ದ ಹಣ್ಣುಗಳ ಪ್ಯಾಕೆಟ್ ಅಲ್ಲೇ ಇದ್ದದ್ದು ಕಂಡುಬಂತು. "ಪಾಪ ಮರೆತಿದ್ದಾರೆ" ಎಂದುಕೊಂಡ. ಅದನ್ನು ಒಯ್ದು ಭಾಸ್ಕರರಾಯರಿಗೆ ಕೊಟ್ಟ. "ನಾಳೆ ಯಾವಾಗಲಾದರೂ ಹಣ್ಣು ಕೊಂಡೊಯ್ದು ಹ್ಯಾರಿಯವರಿಗೆ ಕೊಡಬೇಕು" ಎಂದು ನಿರ್ಧರಿಸಿದ.

ಮರುದಿನ ಮೀಟಿಂಗ್ ಇತ್ತು. ನಂತರ ಹುಬ್ಬಳ್ಳಿಯ ಪ್ರವಾಸವಿತ್ತು. ಹಿಂದಿರುಗಿದಾಗ ನೂರಾರು ಕೆಲಸಗಳಿದ್ದುವು. ಹಣ್ಣು ಕೊಳ್ಳಬೇಕೆಂದು ಅವನಿಗೆ ನೆನಪಾದಾಗಲೆಲ್ಲಾ ಅದನ್ನು ಮುಂದೂಡಿ, ಮುಂದೂಡಿ ಕಡೆಗೆ ಮರೆತ. ಮರೆಯುವುದು ಸಹಜ ಧರ್ಮ.

ಭಾಸ್ಕರರಾಯರು ತಮ್ಮ ಮೇಜನ್ನೊಮ್ಮೆ ನೋಡಿದರು. ಮಹೇಶಚಂದ್ರ ಆ ಚಿತ್ರವನ್ನು ಮೇಜಿನಮೇಲೆ ವಾಪಸ್ ಇಟ್ಟಿದ್ದ. ಹ್ಯಾರಿಯ ಭುಜದ ಮೇಲೆ ಕೆನ್ನೆಯೂರಿ ತಗೆಸಿಕೊಂಡಿದ್ದ ತಮ್ಮ ಚಿತ್ರವನ್ನು ಮತ್ತೊಮ್ಮೆ ದಿಟ್ಟಿಸಿದರು. ಅವರ ಕಣ್ಣು ಮಂಜಾಯಿತು. ಫೋಟೋವನ್ನು ಕಪಾಟಿನೊಳಗೆ ಸೇರಿಸಿ ಕಪಾಟಿನ ಬಾಗಿಲನ್ನು ಭದ್ರವಾಗಿ ಮುಚ್ಚಿದರು.

ಏಪ್ರಿಲ್ 1988







No comments: