skip to main |
skip to sidebar
ಸಾಲ ಸೋಲ
ನಾಲ್ಕನೆಯ ಬಾರಿಗೆ ರಮಣಾರೆಡ್ಡಿಯ ಮನೆಯ ಬಳಿ ಹೋಗಿ ಬಂದದ್ದಾಯಿತು. ಈ ತಿಂಗಳಿನಲ್ಲಿ ನಾಲ್ಕನೆಯ ಬಾರಿ. ಅವನು ಇರಲಿಲ್ಲ. ಹಾಗೆ ನೋಡಿದರೆ ಅವನು ಕೈಗೆ ಸಿಗುವುದೇ ಕಷ್ಟ. ಎಲ್ಲೆಲ್ಲಿ ಹುಡುಕಿದರೂ ನಾಪತ್ತೆ. ಮನೆಯಲ್ಲೇ ಇದ್ದು ತಾನು ಇಲ್ಲವೆಂದು ಹೇಳುತ್ತಾನೇನೋ ಎನ್ನುವ ಗುಮಾನಿ ಕೂಡಾ ಇತ್ತು.
ಅವನಿಗೆ ಸಾಲ ಕೊಡಲು ಪ್ರಾರಂಭಮಾಡಿ ಇದೀಗ ಮೂರು ವರ್ಷಗಳಾಗಿವೆ. ಮೊದಲ ಬಾರಿಗೆ ಮನೆಯಲ್ಲಿ ಏನೋ ತೊಂದರೆ ಎಂದು ಹೇಳಿ ನೂರರ ಗರಿಗರಿ ನೋಟು ಕೊಂಡೊಯ್ದಿದ್ದ. ಅಲ್ಲಿಂದಲೇ ಈ ಸಾಲದ ವ್ಯವಹಾರ ಪ್ರಾರಂಭವಾದದ್ದು. ಬ್ಯಾಂಕಿನಲ್ಲಿ, ಅಲ್ಲಿ-ಇಲ್ಲಿ ಹಾಕಿದರೆ ಸುಮ್ಮನೆ ಖರ್ಚುಮಾಡಿಬಿಡುವ ಆಕರ್ಷಣೆ ಇರುತ್ತದೆಂದು, ಹೀಗೆ ಕೇಳಿದವರಿಗೆಲ್ಲಾ ಕೇಳಿದಾಗಲೆಲ್ಲಾ ಸಾಲ ಕೊಡುವುದು ಒಂದು ವಿಚಿತ್ರ ದುರಭ್ಯಾಸವಾಗಿಬಿಟ್ಟಿತ್ತು. ರಮಣಾರೆಡ್ಡಿಯ ಬಳಿಯಾದರೆ ಇರುತ್ತದೆ. ಅವನ ಅವಶ್ಯಕತೆಗಳಿಗೆ ಸ್ಪಂದಿಸುವುದು ಮಾನವ ಸಹಜ ಧರ್ಮ ಎಂದೆಲ್ಲಾ ಸಮಾಧಾನ ಹೇಳಿಕೊಂಡದ್ದೂ ಆಗಿತ್ತು. ಹೀಗೆ ಪ್ರಾರಂಭವಾದ ಈ ಲಾವಾದೇವಿ ಮುಂದುವರೆದಿದೆ. ಅಂದು ಕೊಟ್ಟ ನೂರು ರೂಪಾಯಿನ ಬಗ್ಗೆ ಮರೆತುಹೋಗುವಷ್ಟು ದಿನಗಳು ಕಳೆದಿವೆ. ಆ ಮೊತ್ತವನ್ನು ಹಾಳು ಬಿದ್ದ ನಾನ್ ಪರ್‌ಫಾರ್ಮಿಂಗ್ ಅಸೆಟ್ ಎಂದು ಮನದ ಲೆಕ್ಕಪತ್ರದಿಂದ ತೆಗೆದು ಹಾಕಲು ನಡೆದಿರುವ ಪ್ರಯತ್ನಗಳು ಅನೇಕ. ಆದರೆ ಯಾವುದೂ ಸಫಲಯತ್ನವಲ್ಲ.
ರಮಣಾರೆಡ್ಡಿ ಒಬ್ಬ ವಿಚಿತ್ರ ಮನುಷ್ಯ. ಅವನಿಗೆ ನೂರು, ಹತ್ತು, ಒಂದು, ಎಂಟಾಣೆ ಎಂಬ ಪರಿವೆಯಿಲ್ಲ. ಈ ರೀತಿಯ ಚಿಲ್ಲರೆ ಸಾಲಗಳನ್ನು ಅವನು ಎಷ್ಟೋ ಬಾರಿ ಪಡೆದಿದ್ದಾನೆ. ಚಿಕ್ಕ ಮೊತ್ತವಾದಷ್ಟೂ ನೆನಪಿನಲ್ಲಿಟ್ಟುಕೊಳ್ಳುವುದೂ ಕಷ್ಟ, ಕೊಡಲಾಗುವುದಿಲ್ಲವೆಂದು ಹೇಳುವುದೂ ಕಷ್ಟ.
ಹನ್ನೆರಡು ತಿಂಗಳ ಹಿಂದೆ ಬಲ್ಬಿನ ಕಂಪನಿಯೊಂದರ ಜಾಹೀರಾತು ಸ್ಪರ್ಧೆಯಲ್ಲಿ ಬಂದ ಐದುಸಾವಿರ ರೂಪಾಯಿಯ ಬಹುಮಾನವನ್ನು, ನೇರವಾಗಿ, ಆ ನೋಟುಗಳನ್ನು ಎಣಿಸುವ ಮೊದಲೇ ಕೊಂಡೊಯ್ದಿದ್ದ. ಇಷ್ಟು ದೊಡ್ಡ ಮೊತ್ತದ ಸಾಲವನ್ನು ನೀಡಿದ್ದದ್ದು ಅದೇ ಮೊದಲಾಗಿತ್ತು. ಇದು ಇಷ್ಟಪಟ್ಟು ಕೊಟ್ಟ ಸಾಲವಲ್ಲ. ಆ ಹಣದ ಬಗೆ ಏನೇನೋ ಯೋಜನೆಗಳಿದ್ದುವು. ಹೀಗಾಗಿಯೇ ಈ ಹಣದೆದುರು ನೂರು ಇನ್ನೂರರ ಚಿಲ್ಲರೆ ಸಾಲಗಳು ತೃಣಸಮಾನವಾಗಿ ಕಾಣುತ್ತಿದ್ದದ್ದು.
ಆದರೆ ಆಶ್ಚರ್ಯವೆಂದರೆ ರಮಣಾರೆಡ್ಡಿಯ ಮುಖ ನೋಡಿದಾಕ್ಷಣ ಅವನ ಬಗ್ಗೆ ಕಳೆದುಕೊಂಡಿರುವ ಇಡೀ ನಂಬಿಕೆ ಜಾದೂವಿನ ರೀತಿಯಲ್ಲಿ ಮತ್ತೆ ಪ್ರತ್ಯಕ್ಷವಾಗಿಬಿಡುತ್ತದೆ. ಅಷ್ಟು ಸಾಚಾತನದ ದೀನ ಮುಖವನ್ನು ಹೊತ್ತ ಮತ್ತೊಬ್ಬನನ್ನು ಕಂಡಿಲ್ಲ. ಪ್ರತಿಬಾರಿಯೂ ಸಾಲ ಪಡೆದ ಕೂಡಲೇ ಹಿಂದಿನ ಸಾಲದ ಮೊತ್ತವನ್ನೆಲ್ಲಾ ನೆನಪು ಮಾಡಿ ಖಚಿತವಾದ ಒಂದು ಸಂಖ್ಯೆಯನ್ನು ನೀಡಿ, ಮರೆತಿರಬಹುದಾದ ಲೆಕ್ಕವನ್ನೆಲ್ಲಾ ನೆನಪುಮಾಡಿ ಎಲ್ಲವನ್ನೂ ಒಂದೇ ಏಟಿಗೆ ಹಿಂದಿರುಗಿಸಿಕೊಡುತ್ತೇನೆನ್ನುವ ಹೊಸಭರವಸೆ ಹುಟ್ಟಿಸುವ ಈ ತಾಳಕ್ಕೆ ಯಾರಾದರೂ ಕುಣಿಯಲೇ ಬೇಕು.
ಹನ್ನೆರಡು ತಿಂಗಳ ಹಿಂದೆ ನಡೆದದ್ದೂ ಅದೇ..
"ನಮಸ್ತೇ ಸಾಬ್, ಹೇಗಿದ್ದೀರಿ?"
"ಓಹೋ ರಮಣಾರೆಡ್ಡಿ, ಇದೇನು ಗಾಳಿ ಈ ಕಡೆಗೆ ತಿರುಗಿದೆ?"
"ಏನಿಲ್ಲಾ ಸಾಬ್, ನಿಮಗೆ ಬಹುಮಾನ ಬಂತೂಂತ ಕೇಳಿದೆ. ಮುಬಾರಕ್ ಹೇಳಿಹೋಗೋಣಾಂತ ಬಂದೆ"
"ಥ್ಯಾಂಕ್ಸ್.. ಟೀ ಕುಡೀತೀಯಾ ರಮಣಾರೆಡ್ಡಿ? ನಾನೂ ನಿನ್ನ ಜೊತೆಗೆ ಒಂದರ್ಧ ಟೀ ಹಾಕಬಹುದು.. ಅಂದಹಾಗೆ ನಿಮ್ಮ ಸಹಕಾರ ಸಂಘ ಹೇಗಿದೆ? ಈ ಮಧ್ಯೆ ಹೊಸ ಬಿಜನೆಸ್ ಎನಾದರೂ ಪ್ರಾರಂಭ ಮಾಡಿದೆಯಾ?"
"ನಮ್ಮ ದಂಧೆಗಳು ಇದ್ದದ್ದೇ ಬಿಡಿ ಸಾಬ್. ಅದರದ್ದೇನು? ದಿನಕ್ಕೊಂದು ನಡೆಯುತ್ತಲೇ ಇರುತ್ತೆ. ಈಗ ನಿಮ್ಮ ಸಿಹಿ ಸುದ್ದಿಯೊಂದಿಗೊಂದು ಮೀಠಾ ಖಬರ್.. ಏನು ಗೊತ್ತಾ? ಇಲ್ಲೀ ತನಕ ನೀವು ಕೊಟ್ಟಿದ್ದಿರಲ್ಲಾ ಪಾಂಚ್‍ಸೌಪಂದ್ರಾ ಸಾಲ.. ಐನೂರಹದಿನೈದು ರೂಪಾಯಿ.. ಅದನ್ನು ಬೇಗನೇ ವಾಪಸ್ ಮಾಡುತ್ತೀನಿ... ಒಂದು ಒಳ್ಳೇ ಧಂಧೆ ನಾನೇ ಚಾಲೂ ಮಾಡೋಣಾಂತ..."
"ಪಾಂಚ್‍ಸೌಪಂದ್ರಾ ಯಾವುದು?"
"ಇದೇನ್ ಸಾಬ್ ಹೀಗೆ ಹೇಳ್ತೀರಿ? ನೀವು ಕೊಟ್ಟ ರಕಮಿನ ಬಗ್ಗೆ ನೀವೇ ಮರೆತುಬಿಟ್ಟರೆ ಹೇಗೆ? ಜೀವನದಲ್ಲಿ ಬರ್‌ಬಾದ್ ಆಗಿಹೋಗ್ತೀರಿ ಅಷ್ಟೇ. ನಮ್ಮ ಪರೇಶಾನಿಗಳು ನಮಗೆ ಇರುತ್ತಾವಾಗಲೀ, ಸಮಯಕ್ಕೆ ಸಹಾಯ ಮಾಡುವ ನಿಮ್ಮನ್ನು ಮರೆಯೋಕ್ಕೆ ಸಾಧ್ಯವಾ? ನೋಡಿ, ಮೊದಲು ಕೊಟ್ಟ ನೂರು ರೂಪಾಯಿ, ಆಮೇಲೆ ಒಂದು ಸರ್ತಿ ಕ್ಯಾಮರಾಗೇಂತ ಟೂಹಂಡ್ರೆಡ್ ಎ.ಎಸ್.ಎ ಸಾಕುರಾ ಫಿಲ್ಮ್ ಕೊಟ್ಟಿದ್ದರಲ್ಲಾ.. ಅದರ ನೂರ ಹದಿನೈದು ರೂಪಾಯಿ, ನಿಮ್ಮ ಫಿಲ್ಮೋತ್ಸವ್ ಟಿಕೇಟುಗಳು ತಂದಾಗ ನನ್ನಲ್ಲೇ ಉಳಿದ ಪಚಾಸ್, ಬಳ್ಳಾರಿಗೆ ಹೋಗೊಕ್ಕೆ ಮೊದಲು ಕೊಟ್ಟಿದ್ದ ಢಾಯಿಸೌ.. ಹಿಸಾಬ್ ನೋಡಿ.. ಬರಾಬರ್ ಇರ್ತದೆ.."
ಅಷ್ಟರಲ್ಲಿ ಒಳಗಿನಿಂದ ಧರ್ಮಪತ್ನಿಯ ಕರೆಬಂತು. "ಸ್ವಲ್ಪ ಒಳಕ್ಕೆ ಬಂದು ಟೀ ತೆಗೊಂಡು ಹೋಗುತ್ತೀಯಾ?" ಟೀಗೆಂದು ಒಳಹೊಕ್ಕಾಗ ಅವಳ ಅಲ್ಲೇ ತಾಕೀತು ಮಾಡಿದಳು: "ಮತ್ತೆ ಅವನಿಗೆ ಸಾಲಕೊಟ್ಟು ಶಿವಶಿವ ಅನ್ನಬೇಡ.. ಹುಷಾರು.."
"ಛೇ ಎನು ಮಾತುಗಳಾಡುತ್ತಿದ್ದೀ? ಅವನು ತೆಗೊಂಡಿರೋ ಸಾಲ ವಾಪಸ್ ಮಾಡೋ ಮಾತಾಡುತ್ತಿದ್ದಾನೆ".
ರಮಣಾರೆಡ್ಡಿ ಟೀ ಇಟ್ಟಕೂಡಲೇ ಲೋಟವನ್ನು ಕೈಗೆತ್ತಿಕೊಂಡು, ಸುರ್ ಎಂದ ಲೋಟದಿಂದ ಟೀ ಹೀರಿ ಒಮ್ಮೆ ಚಪ್ಪರಿಸಿ ಲೊಚಗುಟ್ಟಿದ: "ಭಾಬಿ ಕೈಯಾಗಿನ್ ಚಾ ಕುಡಿದು ಭಾಳ ದಿನ ಆದ್ವು ನೋಡಿ ಸಾಬ್"
"ರಮಣಾರೆಡ್ಡಿ - ಏನೋ ಹೊಸ ಧಂಧೆ ಅಂದೆ?"
"ಹೌದು ಸಾಬ್.. ಒಂದು ಹೊಸಾ ಕಾರು ತೆಗೊಳ್ಳೋಣ ಅಂತ. ಡೀಸಲ್ ಅಂಬಾಸಿಡರ್.."
"ಇದೇನು ಜೋಕಾ? ನಿನಗೆಯಾಕಯ್ಯಾ ಕಾರು ಅದೂ ಅಂಬಾಸಿಡರ್??"
"ನೀವೇನೇ ಹೇಳಿ ಸಾಬ್. ಕಾರಂತೂ ನಾನು ಬರಾಬ್ಬರ್ ಕೊಳ್ಳೊಂವ. ಆದರೆ ಒಂದು ವಿಷಯ ನೀವೇ ಹೇಳಬೇಕು. ಇಂಥದ್ರಲ್ಲೆಲ್ಲ ನನ್ನ ಧಿಮಾಕ್ ಓಡೋದಿಲ್ಲ."
"ನಿನ್ನ ದಿಮಾಕ್ ಓಡದೇ ಇರುವ ವಿಷಯಗಳೂ ಇವೆಯಾ? ಏನದು?"
"ಕಾರ್ ಮಾತ್ರ ನೋಡಿದ್ದೀನಿ ಸಾಬ್. ಮೆಟಡಾರ್ ಇಂಜಿನ್.. ಭಾಳ ಚೆನ್ನಾಗಿದೆ. ಬಿಳಿ ಬಣ್ಣದ್ದು. ಆದರೆ ಅದನ್ನು ಉಪಯೋಗಿಸೊಕ್ಕೆ ಏನು ಮಾಡಬೇಕು? ಇಲ್ಲೇ ಪ್ರೈವೇಟ್ ಕಂಪನಿಯವರು ತಿಂಗಳಿಗೆ ದೋಹಜಾರ್ ಬಾಡಿಗೇಗೆ ತೆಗೊಳ್ಳೋಕ್ಕೆ ತಯಾರು.. ಅಥವಾ ಡ್ರೈವರ್ ಇಟ್ಟು ಸ್ವಂತ - ಟೂರಿಸ್ಟ್ ಟ್ಯಾಕ್ಸಿಯ ಹಾಗೆ ಓಡಿಸೋದು. ಕಿಲೋಮೀಟರಿನ ಹಿಸಾಬ್ ಪ್ರಕಾರ. ಎರಡರ ಹಿಸಾಬೂ ನೋಡಿ ಯಾವುದು ಫಾಯಿದೆ ಅಂತ ನೀವೇ ಹೇಳಿ ಸಾಬ್.."
ಹೀಗೇ ಮಾತಿಗೆಳೆದು ’ಹಿಸಾಬ್’ ನೋಡಿಕೊಂಡ. ಇನ್ನೇನು ಅವನ ಜ್ಞಾನಾರ್ಜನೆ ಮುಗಿದು ಎದ್ದ ಎನ್ನುವಷ್ಟರಲ್ಲಿ ಅಸಲೀ ರಾಗವನ್ನು ಪ್ರಾರಂಭಿಸಿದ....
"ಸಾಬ್ ನೀವೇ ನೋಡಿದ್ದೀರಿ. ಇದು ಒಳ್ಳೇ ಧಂಧೆ ಅಂದಿದ್ದೀರಿ. ರೊಕ್ಕಕ್ಕೆ ಧೋಕಾ ಇಲ್ಲಾಂತ ಹೇಳಿದ್ದೀರಿ. ಕಾರಿಗೆ ಸ್ವಲ್ಪ ರೊಕ್ಕ ಕಮ್ಮಿ ಬಿದ್ದಿದೆ. ನೀವು ಈಗ ಸಹಾಯ ಮಾಡಿದರೆ ಮೂರು ತಿಂಗಳ ಬಾಡಿಗೆ ಪೂರಾ... ಅಂದರೆ ಛೇ ಹಜಾರ್ ರೂಪಾಯ್ ಆರು ಸಾವಿರ.. ನಿಮಗೆ ಕೊಟ್ಟುಬಿಡುತ್ತೇನೆ. ಹೇಗಿದ್ದರೂ ಸೊಸೈಟಿಯ ನೌಕರಿಯಿದೆ. ಮನೇ ಖರ್ಚಿಗೆ ತೊಂದರೆ ಇಲ್ಲಾ.. ಈ ಧಂಧೆ ಸರಿಯಾಗಿ ಕೂತುಕೊಂಡರೆ ನೌಕರಿಗೆ ಜೈ ಅಂತ ಗುಡ್‌ಬೈ ಹೇಳಿ ಆರಾಮಾಗಿರೋಣಾಂತ. ಈಗ ಮಾತ್ರ ನೀವು ಕೈಬಿಡಬಾರದು. ಮಿಕ್ಕ ರೊಕ್ಕ ಕೈಯಲ್ಲಿದೆ. ಒಂದೈದಾರು ಸಾವಿರ ಮಾತ್ರ ಕಮ್ಮಿ ಬಿದ್ದಿದೆ. ಅದು ಸಿಕ್ಕರೆ...."
"ರಮಣಾರೆಡ್ಡಿ, ಒಂದೇ ಸರ್ತಿ ಏಕವಾಗಿ ಐದಾರು ಸಾವಿರ ಕೇಳಿದರೆ ಹೇಗೆ ಮಾರಾಯಾ? ನಾನು ಎಲ್ಲಿಂದ ತರೋದು? ಮರದ ಮೇಲೆ ಹಣ ಬೆಳೆಯುತ್ತಾ, ನೀನೇ ಹೇಳು.."
"ಮರದ ಮೇಲೆ ಬೆಳೆಯೋದಿಲ್ಲಾ ಸಾಬ್, ಬಲ್ಬಿನಲ್ಲಿ ಬೆಳಗುತ್ತೆ! ಹ್ಹಿಹ್ಹಿ..ನಿಮಗೆ ನನ್ನ ಮೇಲೆ ನಂಬಿಕೆ ಇಲ್ಲವಾ ಸಾಬ್. ಮೂರು ತಿಂಗಳಲ್ಲಿ ಚುಕ್ತಾ ಮಾಡ್ತೀನಿ.. ನೀವೇ ಎಲ್ಲ ಹಿಸಾಬೂ ನೋಡಿದ್ದೀರ. ನನ್ನ ಮೇಲೆ ನಿಮಗೆ ನಂಬಿಕೆ ಹೊರಟು ಹೋಯಿತೇ? ಹೋಗಲಿ ರೊಕ್ಕ ನನಗಲ್ಲ, ಕಾರು ಮಾರುವ ಮಾಲೀಕನಿಗೆ ಕೊಡಿ. ಸರಿಯಾ? ಆಗಲಾದ್ರೂ ನಾನು ಈ ಧಂಧೆ ನಡೆಸುವ ಕೋಶಿಶ್ ಮಾಡುತ್ತಿದ್ದೀನಿ ಅನ್ನುವ ನಂಬಿಕೆ ನಿಮಗೆ ಬರಬಹುದು!"
ಹೀಗ ಮಾತಿನಲ್ಲಿ ಎಳೆದಾಡಿದ. ಹಿಂದೆ ಹೋದ ಐದುನೂರ ಹದಿನೈದು ವಾಪಸ್ಸು ಬರಬೇಕಾದರೆ ಇದೇ ಮಾರ್ಗವೆಂದು ಸೂಕ್ಷ್ಮವಾಗಿ ಸೂಚಿಸಿ ಬೆದರಿಸಿದ. ಇದೂ ಒಂದು ರೀತಿಯ ಇಮೋಷನಲ್ ಬ್ಲಾಕ್ ಮೆಯಿಲ್. ಕಡೆಗೂ ಹಾಗೆ ಹೀಗೆ ಮಾಡಿ ಕೈಯಲ್ಲಿದ್ದ ದುಡ್ಡನ್ನು ಕಸಿದು ಹೊರಟುಬಿಟ್ಟ. ಆದಿನದ ಘಟನೆಯನ್ನು ನೆನಪುಮಾಡಿಕೊಂಡಾಗಲೆಲ್ಲಾ, ರಮಣಾರೆಡ್ಡಿಯ ಬುದ್ಧಿವಂತಿಕೆಯನ್ನು ಮೆಚ್ಚದಿರುವುದು ಸಾಧ್ಯವೆ ಇಲ್ಲದಂತಾಗಿದೆ. ಇದ್ದಕ್ಕಿದ್ದಂತೆ, ಬರಬೇಕಿದ್ದ ಹಣದ ಮೊತ್ತ ಐನೂರಹದಿನೈದರಿಂದ ಐದುಸಾವಿರದೈನೂರಹದಿನೈದಕ್ಕೆ ಏರಿತ್ತು.
ಸಾಲದಲ್ಲಿ ಸಿಲುಕಿ ಒದ್ದಾಡುವುದು ಹೊಸ ವಿಷಯವಾಗಿರಲಿಲ್ಲವಾದರೂ, ಸಾಲ ಕೊಟ್ಟು ಕೋಡಂಗಿಯಾದದ್ದು ಇದೇ ಮೊದಲು. ಸಾಲ ಪಡೆದವನೇನೋ ಈರಭದ್ರನಾಗಿ ಕಾರನ್ನು [ಉಪದೇಶ ಪಡೆದ ’ಹಿಸಾಬ್’ಗೆ ವಿರುದ್ಧವಾಗಿ, ಕಂಪನಿಯವರಿಗೆ ನೀಡದೇ] ಓಡಾಡಿಸಿಕೊಂಡು ಸುಖವಾಗಿದ್ದ. ಆದರೆ ಸಾಲ ನೀಡಿದ ಶುಭಕಾರ್ಯಕ್ಕಾಗಿ ಬಸ್ಸಿನಲ್ಲಿ ಅವನ ಮನೆಗೆ ಹೋಗಿಬರುತ್ತಾ ಚಪ್ಪಲಿ ಸವೆಸಿದ್ದಾಗಿತ್ತು.
ಈ ಬಾರಿ ಅವನ ಮನೆಗೆ ಹೋದಾಗ ದೃಢವಾದ ನಿರ್ಣಯಗಳಿದ್ದವು. ಗಲಾಟೆ ಮಾಡಬೇಕು. ಕಟುಕನಾಗಬೇಕು. ಕುಟುಕಿ ಮಾತನಾಡಬೇಕು. ಗದರಿ ಗಲಾಟೆ ಮಾಡಬೇಕು. ಬಿಡಲೇ ಬಾರದು. ವಿಶೇಷವಾಗಿ ಕ್ರಿಕೆಟ್ ಮ್ಯಾಚ್ ನಡೆಯುತ್ತಿದ್ದ ದಿನದಂದು ಅವನ ಮನೆಯನ್ನು ರೈಡ್ ಮಾಡಿದರೆ ಅವನು ಸಿಗದೇ ತಪ್ಪಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಟಿ.ವಿ ಜೋರಾಗಿ ನಡೆಯುತ್ತಿರುವಾಗ ಮನೆಯಲ್ಲಿಲ್ಲವೆಂದು ಹೇಳಿ ಕಳಿಸುವುದೂ ಸಾಧ್ಯವಿಲ್ಲದ ಮಾತೇ. ಹಾಗೂ ಅವನಿಲ್ಲವೆಂದರೆ ಪರವಾಗಿಲ್ಲ, ಬರುವವರೆಗೂ ಕಾಯಲು ಅಭ್ಯಂತರವಿಲ್ಲವೆಂದು ಅಲ್ಲೇ ಪಟ್ಟು ಹಿಡಿದು ಕುಳಿತುಕೊಳ್ಳಬೇಕು. ಅವನು ತರಿಸುವ ಸಿತಾರ, ಆಂಧ್ರಭೂಮಿ ನೋಡುತ್ತಾ ಚಂದಮಾಮಾದ ಬೆಂಬಿಡದ ಭೇತಾಳನಾಗಬೇಕು.
ಇಷ್ಟೆಲ್ಲಾ ತಯಾರಿ ನಡೆಸಿ, ಮಹೆದೀಪಟ್ಟಣಂನಲ್ಲಿದ್ದ ಅವನ ಮನೆಗೆ ಎರಡು ಬಸ್ ಬದಲಾಯಿಸಿ ಹೋದದ್ದಾಯಿತು. ರಮಣಾರೆಡ್ಡಿಯ ಬಳಿ ಹಣ ವಸೂಲುಮಾಡುವಾಗ ಅವನ ಮನೆಗೆ ತಿರುಗಾಡಿದ ಬಸ್ ಚಾರ್ಜನ್ನೂ ವಸೂಲು ಮಾಡಬೇಕೆಂಬ ದುಷ್ಟ ಆಲೋಚನೆ ಬಂದದ್ದೂ ಉಂಟು. ಚಪ್ಪಲಿಯ ಮೇಲೆ ಕಣ್ಣಾಡಿಸಿ, ಇದರ ಮೊಬಲಗನ್ನೂ ವಸೂಲು ಮಾಡಬೇಕು ಎಂದು ಯೋಚಿಸಿದ್ದುಂಟು. ಈ ಇಂಥ ವಿಕೃತಾಲೋಚನೆಗಳ ನಡುವೆಯೇ ರಮಣಾರೆಡ್ಡಿಯ ಮನೆಯ ಬಾಗಿಲನ್ನು ಕಾತರದಿಂದ ತಟ್ಟಿದ್ದಾಯಿತು.
ಬಾಗಿಲು ತೆರೆಯುವುದು ಸ್ವಲ್ಪ ತಡವಾಯಿತು. ಟಿ.ವಿಯ ಸದ್ದು ಕೇಳಿಸುತ್ತಿದೆಯೇ ಎಂದು ಕಾತರದಿಂದ ಆಲಿಸಿದರೂ ಏನೂ ಕೇಳಲಿಲ್ಲ. ರಮಣಾರೆಡ್ಡಿಯ ಹೆಂಡತಿ ಬಾಗಿಲು ತೆರೆದಳು. ಅವಳ ಕೈಯ್ಯಲ್ಲೊಂದು ಹಸುಗೂಸು.
"ರಮಣಾರೆಡ್ಡಿ ಇಲ್ಲವಾ?" [ಇಲ್ಲವೆನ್ನುತ್ತಾಳೆಂಬ ನಿರೀಕ್ಷೆಯಲ್ಲಿ, ಒಳಕ್ಕೆ ಹೊಕ್ಕು ಕೂತೇ ಬಿಡುವ ಪ್ಲಾನಿನ ನಿರೀಕ್ಷೆಯಲ್ಲಿ] ಪ್ರಶ್ನೆಯನ್ನು ಕೇಳಿದರೆ ಆಕೆ "ಇದ್ದಾರೆ" ಎಂದು ಉತ್ತರ ಕೊಟ್ಟುಬಿಟ್ಟಳು!.. ಆದರೆ ಮೂಲೆಯಲ್ಲಿ ಶಬ್ದಮಾಡದೇ ಕೂತಿದ್ದ ಟಿವಿಯ ಖಾಲೀ ತೆರೆ ನೋಡುತ್ತಲೇ --
"ಎಲ್ಲಿ?"
"ರೂಮಿನಲ್ಲಿದ್ದಾರೆ.. ಬನ್ನಿ"
ಆಕೆಯ ಹಿಂದೆಯೇ ಕೋಣೆಯನ್ನು ಹೊಕ್ಕಾಗ ಆದದ್ದು ಆಘಾತವೇ. ರಮಣಾರೆಡ್ಡಿ ಎಂದು ಗುರುತು ಹಿಡಿಯಲಾಗದಂತಹ ವ್ಯಕ್ತಿಯೊಬ್ಬ ಉದ್ದನೆಯ ಈಜಿಚೇರಿನ ಮೇಲೆ ಅರ್ಧಕುಳಿತು ಅರ್ಧ ಮಲಗಿದ್ದ.
"ಇದೇನು?"
"ನಾಲ್ಕು ದಿನದ ಕೆಳಗೆ ಸರ್ವಿಸಿಂಗ್‍ನಿಂದ ಕಾರು ತರುತ್ತಿದ್ದಾಗ ರಾತ್ರೆ ಮಾಸಾಬ್ ಟ್ಯಂಕ್ ಹತ್ತಿರ ಯಾರೋ ಅಡ್ಡಬಂದರತೆ. ಅವರನ್ನು ತಪ್ಪಿಸಲು ಹೋಗಿ ಗೋಡೆಗೆ ಗುದ್ದಿ ಆಕ್ಸಿಡೆಂಟಾಯಿತು. ನೀವು ಕುಳಿತುಕೊಳ್ಳಿ, ನಾನು ಟೀ ತರ್ತೀನಿ." ಬೇಡ ಅನ್ನುವಷ್ಟರಲ್ಲಿ ಅವಳು ಅಡುಗೆಮನೆಗೆ ಹೊರಟುಹೋಗಿದ್ದಳು.
ಅತ್ತ ರಮಣಾರೆಡ್ಡಿ ಮಾತು ಪ್ರಾರಂಭಿಸಿದ
"ಕೂತ್ಕೊಳ್ಳಿ ಸಾಬ್"
ಆ ದೃಶ್ಯ ನೋಡಲು ಕಷ್ಟದ್ದೇ ಆಗಿತ್ತು. ಕತ್ತಿನಬಳಿ ಗಾಜು ತರಚಿಕೊಂಡು ಚರ್ಮ ಹರಿದಿತ್ತಂತೆ. ಅಲ್ಲಿ ಮೂವತ್ತು ಹೊಲಿಗೆ ಹಾಕಿದ್ದಾರೆಂತೆ. ನೋಡಲಂತೂ ದಾರುಣವಾಗಿತ್ತು. ಇನ್ನೂ ಹೊಲಿಗೆ ಬಿಚ್ಚಿರಲಿಲ್ಲ. ತಲೆಯಮೇಲೆ ಸಣ್ಣ ಗಾಯಗಳಾಗಿದ್ದುವೆಂದು ಅಲ್ಲೂ ಪಟ್ಟಿ ಕಟ್ಟಿದ್ದರು. ಅವನನ್ನು ನೋಡಿ ಕೋಪಮಾಡಿಕೊಳ್ಳುವಂತೆಯೂ ಇರಲಿಲ್ಲ - ಕನಿಕರಿಸುವಂತೆಯೂ ಇರಲಿಲ್ಲ.
ರಮಣಾರೆಡ್ಡಿಯ ಹೆಂಡತಿ ಬಂದು ಮಗುವನ್ನು ಅವನ ಕೈಗಿತ್ತು ಮತ್ತೆ ಅಡುಗೆಮನೆ ಪ್ರವೇಶಿಸಿದಳು. ಅವನ ಅವಸ್ಥೆ ನೋಡಲಾಗದೇ ಆ ಮಗುವನ್ನು ಅವನಿಂದ ಬಿಡಿಸಿ ಕೈಗೆತ್ತಿಕೊಂಡದ್ದಾಯಿತು. ಆ ಮಗು ಜೋರಾಗಿ ಅಳಲು ಆರಂಭಿಸಿ ಮತ್ತೆ ರಮಣಾರೆಡ್ಡಿಯ ಕಡೆಗೇ ವಾಲಿ ಅವನ ತೊಡೆಯೇರಿ ಕೂತುಕೊಂಡಿತು.
ರಮಣಾರೆಡ್ಡಿ ಕ್ಷೀಣ ಸ್ವರದಲ್ಲಿ ಹೇಳಿದ:
"ಸಾಬ್, ನಿಮ್ಮ ರೊಕ್ಕ ಬಹಳ ತಡ ಮಾಡಿಬಿಟ್ಟೆ. ಈಗ ಕಾರಿನ ಇನ್ಶೂರೆನ್ಸ್ ಬರುವುದಿದೆ. ಬಂದ ಕೂಡಲೇ ಕೊಟ್ಟುಬಿಡುತ್ತೇನೆ. ಕಾರನ್ನೂ ಮಾರಿಹಾಕುತ್ತೇನೆ. ಎಲ್ಲಿಯ ಪರೇಶಾನ್ ಧಂಧೆ ಸಾಬ್ ಇದು??"
ರಮಣಾರೆಡ್ಡಿ ಬಹಳ ಕಷ್ಟಪಟ್ಟು ಮಾತನಾಡುತ್ತಿದ್ದ. ಅವನನ್ನು, ಅವನ ಅವಸ್ಥೆಯನ್ನೂ ನೋಡುವುದು ಕಷ್ಟದ ಮಾತೇ ಆಗಿತ್ತು.
"ರಮಣಾರೆಡ್ಡಿ, ನೀನೀಗ ಆಯಾಸ ಮಾಡಿಕೋಬೇಡ. ಅದರ ಬಗ್ಗೆ ಆಮೇಲೆ ಮಾತಾಡೋಣ. ಮೊದಲು ನೀನು ಹುಷಾರಾಗು."
ಅಷ್ಟರಲ್ಲಿ ಅವನ ಹೆಂಡತಿ ಟೀ ತಂದುಕೊಟ್ಟು, ರಮಣಾರೆಡ್ಡಿಯ ತೊಡೆಯಮೇಲಿದ್ದ ಮಗುವನ್ನು ಎತ್ತಿಕೊಂಡಳು.
"ಕಾರಿಗೇನಾಗಿದೆ?"
"ಕಾರ್ ಪೂರಾ ಜಖಂ ಆಗಿದೆ ಮಸ್ತ್ರೇ.. ಅದಕ್ಕೆ ಇನ್ಶೂರೆನ್ಸ್ ಇದ್ದದ್ದರಿಂದ ಬಚಾವ್ ಆಗೀವಿ. ಇಲ್ಲಾಂದರೆ ಪೂರಾ ಡುಬಾಯಿಸಿಬಿಡುತ್ತಿದ್ದೆವು. ಇವರನ್ನು ನೋಡಿ, ಹಾಂಗ ಹೊರಳೋಕ್ಕೂ ಆಗ್ತಾ ಇಲ್ಲ. ನಾಲ್ಕು ದಿನದಿಂದ ಹೀಂಗೇ ಬಿದ್ದಾರೆ. ನುಂಗೋಕ್ಕೂ ಆಗ್ತಾ ಇಲ್ಲ.. ಮಾತಿಗೂ ತ್ರಾಸಾಗಲಿಕ್ಕೆ ಹತ್ತದ.. ನನಗೆ ಎನೂ ತೋರುತ್ತಿಲ್ಲ. ಜೊತೆಗೆ ಮಗು ಬೇರೆ..."
"ಹೊಲಿಗೆ ಯಾವಾಗ ತೆಗೀತಾರಂತಮ್ಮಾ?"
"ಇನ್ನೊಂದು ನಾಲ್ಕೈದು ದಿನ ಬಿಟ್ಟು ಬರೂಕ್ಕ ಹೇಳಾರ ಮಾಸ್ತ್ರೇ. ಅಲ್ಲೀವರ್ಗೂ ಅಸ್ಪತ್ರೇಲೇ ಇರೂದೂ ಒಳೇದೂಂತ ಹೇಳಿದ್ದರ್ರಿ. ಆದ್ರ ಈಗ ನಮಗಿರೊ ರೊಕ್ಕದ ಪರಿಸ್ಥಿತಿನಾಗ ಅದೂ ಖರ್ಚು ಯಾಕಂತ ನಾನೇ ನೋಡ್ಕೋತೀನಂತ ಹೇಳಿ ಮನೀಗ್ ಒಯ್ದು ತಂದೀನಿ. ಆ ದಿನ ಇನ್ನು ಅರ್ಧ ಘಂಟೆ ತಡ ಆಗಿದ್ರೆ ಇವ್ರು ಉಳೀತನೇ ಇರಲಿಲ್ಲಾಂತ ಹೇಳಿದ್ದರ್ರಿ." ಎನ್ನುತ್ತಾ ಆಕೆ ಬಿಕ್ಕಳಿಸಿದಳು.
ರಮಣಾರೆಡ್ಡಿ ಏನೋ ಹೇಳಬೇಕೆಂದು ಬಾಯಿ ತೆರೆದ. ಅವನು ಮಾತನಾಡುವುದು ಬೇಡವೆಂಬ ಸೂಚನೆ ಕೊಟ್ಟಿದ್ದಾಯಿತು. ಇದ್ದಕ್ಕಿದ್ದಂತೆ ಒಳಗೆ ಅಡಗಿದ್ದ ಮಾನವೀಯತೆ ಸಹಜವಾಗಿ ಜಾಗೃತವಾಯಿತು:
"ಹಣದ ಕಷ್ಟ ಅಂದೆ. ನಾಡಿದ್ದು ಆಸ್ಪತ್ರೆಗೆ ಹೋದರೆ ಬಿಲ್ ಕೊಡೋಕ್ಕೆ, ಔಷಧಿ ತರೋಕ್ಕೆ ಹಣ ಇದೆಯಾ?"
"ಇಲ್ರೀ ಮಾಸ್ತ್ರೇ..ಏನೋ ಒಂದು ದಾರಿ ಆ ತಿಮ್ಮಪ್ಪಾನೇ ತೋರಿಸ್ತನೆ. ಯಾರಾದರೂ ಕೊಡದೇ ಇರುವರೇ? ಅದರಲ್ಲೂ ಈ ಇಂಥ ಪರಿಸ್ಥಿತಿನಾಗ ಕಟುಕರೂ ಕರಗ್ತಾರ್ರೀ.."
"ಇರಲಿ, ಯಾರನ್ನಾದರೂ ಮನೆ ಕಡೆ ಕಳಿಸಮ್ಮಾ. ನನ್ನ ಹತ್ತಿರ ಐನೂರು ರೂಪಾಯಿಯಿದೆ. ಕಳಿಸಿಕೊಡುತ್ತೇನೆ."
ಮನೆಯ ಕಡೆಗೆ ಹೊರಟಾಗ ಮನಸ್ಸಿನಲ್ಲಿದ್ದದ್ದು ರಮಣಾರೆಡ್ಡಿಯ ಚಿತ್ರ. ಈ ವಿಷಯವನ್ನು ಹೆಂಡತಿಗೆ ತಿಳಿಸಿದ್ದೂ ಆಯಿತು. ಈ ಇಂಥ ಸಂದರ್ಭದಲ್ಲಿ ತಾನೂ ಹೀಗೆ ಮಾಡುತ್ತಿದ್ದೆ ಎಂದವಳು ಹೇಳಿದ್ದು ಮನಸ್ಸಿಗೆ ಮುದ ನೀಡಿತು. ರಮಣಾರೆಡ್ಡಿಗೆ ಐನೂರು ರೂಪಾಯಿ ಕಳಿಸಿದ್ದೂ ಆಯಿತು.
ಈ ಘಟನೆಯಾಗಿ ಸಾಕಷ್ಟು ದಿನಗಳಾಗಿವೆ. ರಮಣಾರೆಡ್ಡಿ ಅವನಿಗೆ ಬಂದ ಇನ್ಶೂರೆನ್ಸ್ ಹಣದಲ್ಲಿ ಹಳೆಯ ಕಾರನ್ನು ಪೂರ್ತಿ ರಿಪೇರಿ ಮಾಡಿದ. "ಕಾರಿದ್ರೆ ಆಮದನಿಯಾದರೂ ಇರುತ್ತೆ ಸಾಬ್" ಎಂದು ಹೇಳಿದ್ದಕ್ಕೆ ತಲೆದೂಗಿದ್ದಾಗಿತ್ತು. ಈಗ ರಮಣಾರೆಡ್ಡಿಯಿಂದ ಬರಬೇಕಿದ್ದ ಮೊತ್ತ ಆರುಸಾವಿರದ ಹದಿನೈದು ರೂಪಾಯಿಗಳು. ಅಂದು ಸಂಭವಿಸಿದ ಅಪಘಾತದ ಗಾಯಕ್ಕೆ ಹಾಕಿದ್ದ ಹೊಲಿಗೆಯ ಗುರುತುಗಳು ಕೂಡಾ ರಮಣಾರೆಡ್ಡಿಯ ಕತ್ತಿನಿಂದ ಮಾಯವಾಗುತ್ತಿವೆ. ಈ ಆರುಸಾವಿರದ ಹದಿನೈದು ರೂಪಾಯಿಯ ವಸೂಲಿಗಾಗಿ ಅವನ ಬಳಿಗೆ ಆಗಾಗ ಹೋಗುವುದು ಒಂದು ಹವ್ಯಾಸವಾಗಿಬಿಟ್ಟಿದೆ. ಈ ತಿಂಗಳಲ್ಲಿ ಇದು ನಾಲ್ಕನೇ ಬಾರಿ.. ಹೋಗಿ ಅವನಿಲ್ಲ ಅನ್ನಿಸಿಕೊಂಡು ವಾಪಸ್ಸಾದದ್ದು.
ಮನೆಗೆ ಹಿಂದಿರುಗಿ ಮಂಚದ ಮೇಲೆ ಉರುಳಿದಾಗ ಕೆಟ್ಟ ಆಲೋಚನೆಯೊಂದು ಮೂಡುತ್ತದೆ. ಹೆಂಡತಿಯನ್ನು ಕರೆದು ಒಂದು ಪ್ರಶ್ನೆ ಹಾಗಬೇಕನ್ನಿಸುತ್ತದೆ:
"ಅಕಸ್ಮಾತ್ ರಮಣಾರೆಡ್ಡಿಗೆ ಮತ್ತೊಮ್ಮೆ ಆಕ್ಸಿಡೆಂಟಾದರೆ ಏನು ಮಾಡಬಹುದು? ಮತ್ತೆ ಅವನಿಗೆ ಸಾಲ ಕೊಡುತ್ತೇವೆಯೇ, ಅಥವಾ ಕಡಾಖಂಡಿತವಾಗಿ ಇಲ್ಲಾಂತ ಹೇಳುತ್ತೀವಾ?"
"ಅಯ್ಯೋ ನಿನ್ನ ಬೆಪ್ಪುತನವೇ.. ನನ್ನ ಅಂದಾಜಿನ ಪ್ರಕಾರ ಆಕ್ಸಿಡೆಂಟ್ ಅಲ್ಲ, ಅವನು ಹಾಗೇ ಬಂದು ಕೇಳಿದರೂ ಅವನ ಕಾಲಿಗೆರಗಿ ಸಾಲ ಕೊಡುತ್ತೀ.. ನಿನಗೆ ತಾಕತ್ತಿದ್ದರೆ ಇಲ್ಲ ಅನ್ನುವ ಪದವನ್ನು ಪ್ರಯೋಗಮಾಡು ನೋಡೋಣ"
ಅವಳ ಸವಾಲಿಗೆ ಇಲ್ಲ ಅನ್ನುವ ಧೈರ್ಯವೇ ಬರುವುದಿಲ್ಲ. ಮುಂದಿನ ಭಾನುವಾರ ಕ್ರಿಕೆಟ್ ಮ್ಯಾಚ್ ಇದೆ. ರಮಣಾರೆಡ್ಡಿಯ ಮನೆಗೆ ಹೋಗಬೇಕು. ಮಲಗಿದಾಗ ನೂರುರೂಪಾಯಿಯ ಅರವತ್ತು, ಹತ್ತು ರೂಪಾಯಿಯದೊಂದು ಹಾಗೂ ಐದು ರೂಪಾಯಿಯದೊಂದು ನೋಟು ಎಲ್ಲವೂ ಏಕಕಾಲಕ್ಕೆ ಮನದೆದುರಿಗೆ ನರ್ತನ ಮಾಡುತ್ತವೆ.
ಅಷ್ಟರಲ್ಲಿ ಮನೆಯ ಘಂಟೆಯ ಶಬ್ದವಾಗುತ್ತದೆ. ಹೆಂಡತಿ ಬಾಗಿಲುತೆಗೆದು ಕೂಗುತ್ತಾಳೆ "ಓ ರಮಣಾರೆಡ್ಡಿ ಬಾ, ಬಾ. ಸಾಹೇಬರು ನಿನ್ನ ವಿಷಯಾನೇ ಮಾತನಾಡುತ್ತಾ ಇದ್ದರು...."
೧೯೮೬
1 comment:
Characterisation has come out well. I liked the way you ended the story.
jayadev
Post a Comment