Saturday, November 28, 2009

ಭಾಸ್ಕರರಾಯರು ಬರೆದದ್ದೇನು?

ನೇಪಥ್ಯ

ಭಾಸ್ಕರರಾಯರು ಹೊಸಪುಸ್ತಕದ ಹೊಸಫ್ಟವೊಂದನ್ನು ತೆರೆದರು. ಏನಾದರೂ ಬರೆಯಬೇಕು. ಏನು? ಬಹುಶಃ ಅವರಿಗೇ ಆ ಬಗ್ಗೆ ಖಾತ್ರಿ ಇರಲಿಲ್ಲವೆನ್ನಿಸುತ್ತದೆ. ಹೊಸದಾಗಿ ಬರೆವುದೆಂದರೇನು? ತಮ್ಮ ಹಳೇ ಕಥೆಯನ್ನೇ? ಆತ್ಮ ಚರಿತ್ರೆಯನ್ನೇ? ಜೀವನದ ರಸಕ್ಷಣಗಳ ಸುಂದರ ನೆನಪಿನ ಮಾಲೆಯನ್ನೆ? ಕೇವಲ ಹಿಂದಿನ ದಿನದ ದಿನಚರಿಯನ್ನೆ? ಒಂದು ಪತ್ರವನ್ನೆ? ಬೇರೊಬ್ಬರ ಹಣೆಬರಹವನ್ನೆ? ಈ ಇಂಥ ಪ್ರಶ್ನೆಗಳೆಲ್ಲಾ ಭಾಸ್ಕರರಾಯರನು ಕಾಡಿದ್ದಿರಬಹುದು. ಈ ಎಪ್ಪತ್ತರ ಇಳಿವಯಸ್ಸಿನಲ್ಲಿ, ನಡುಗುವ ಕೈಗಳಲ್ಲಿ ಬರೆವುದಾದರೂ ಏನನ್ನು? ಬರೆದರೂ ಅದರ ಪರಿಣಾಮ ಎಷ್ಟರಮಟ್ಟಿಗೆ? ಬರೆದದ್ದರಿಂದ ಚರಿತ್ರೆಯನ್ನು ಅಳಿಸಲು ಸಾಧ್ಯವೇ? ಇಲ್ಲವೆನ್ನಿಸುತ್ತದೆ. ಹೋಗಲಿ ಮುಂದೆ ಭವಿಷ್ಯದ ದಿಕ್ಕನ್ನದರೂ ಬದಲಾಯಿಸಬಹುದೇ? ಗೊತ್ತಿಲ್ಲ. ಈ ಲೋಕದ ಬಗ್ಗೆ ಬರೆದು ನಮ್ಮ ಕಾಲದಲ್ಲಿ ಹೀಗಿರಲಿಲ್ಲ ಅನ್ನಬಹುದೇ? ಆ ಕಾಲದಲ್ಲಿ ಭಾಸ್ಕರರಾಯರು ಏನನ್ನಾದರೂ ಬರೆದಿದ್ದರೆ ಬಹುಶಃ ಈಗ ಅದರ ಪರಿಣಾಮ ತಿಳಿಯಬಹುದಿತ್ತೇನೋ..... ಆದರೆ ಈಗ ಬರೆಯಲಿರುವುದರ ಪರಿಣಾಮ ಜೀವನದುದಕ್ಕೂ ತಿಳಿದೀತೋ.. ತಿಳಿಯದೇ ಉಳಿದೀತೋ. ಮೈಸೂರಿನ ಮೂಲೆಯೊಂದರಲಿ ಕುಳಿತು ಬರೆವ ತಮ್ಮ ಬರವಣಿಗೆಯನ್ನು ಓದುವವರಾದರೂ ಯಾರು? ಬಹುಶಃ ತಾವೊಬ್ಬರೇ. ಜೊತೆಗೆ...? ಹಾಗಾದರೆ ಈಗ ಬರೆಯಲೇ ಬೇಕೆ? ಈ ಪ್ರಶ್ನೆ ಎದುರಾದಾಗ, ತಮ್ಮ ಬರವಣಿಗೆಯನ್ನು ಓದುವ ಒಂದೇ ವ್ಯಕ್ತಿಯ ಮುಖ, ರಾಯರ ಮನಸ್ಸಿನಲ್ಲಿ ಹಾಯ್ದು ಹೋಯಿತು. ಹಿಂದೆ, ರಾಯರು ಹೆಚ್ಚು ಬರೆದವರಲ್ಲ, ಹಿಂದೇನಾದರೂ ರಾಯರು ಬರೆದಿದ್ದರೆ, ಅದೆಷ್ಟು ಜನರ ವಿಧಿಬರಹವಾಗಿ ಪರಿಣಮಿಸುತ್ತಿತ್ತೋ ತಿಳಿಯದು... ಈಗವರು ಬರೆಯಬೇಕಾದ್ದೇನು ಅದರ ಪರಿಣಾಮ ಏನಿರಬಹುದು ಎಂದು ಆಲೋಚಿಸದೆಯೇ ಲೇಖನಿಯನ್ನು ಕೈಗೆತ್ತಿಕೊಂಡಾಗ, ಅವರ ಕೈ ಮೀರಿದ ಶಕ್ತಿಯೊಂದು
ಸಹಜವಾಗಿ ಅವರಿಂದ ಏನನ್ನೋ ಬರೆಸುತ್ತಾ ಹೋಯಿತು.


ಎಂಟನೆಯ ಮುಖ್ಯ ರಸ್ತೆ.

ಎಂಟನೆಯ ಮುಖ್ಯರಸ್ತೆಯ ಹದಿನಾರನೇ ನಂಬರ್ ಮನೆಯ ಬಳಿ ಗೇಟಿನ ಮುಂದೆ ಬೇಸರದಿಂದ ಕಾದು ನಿಂತಿರುವ ಕುಮುದಾಳಿಗೆ ಅನತಿದೂರದಿಂದ ತಮ್ಮ ಮನೆಯೆಡೆಗೆ ಹೆಜ್ಜೆ ಹಾಕುತ್ತಿರುವ ಆಕೃತಿಯ ಬಗ್ಗೆ ಅನುಮಾನವೇ ಇರಲಿಲ್ಲ. ಕುಮುದಾ ಈ ನಿರೀಕ್ಷೆಯಲ್ಲಿಯೇ ಇದ್ದಾಳೆ. ಬೆಳಿಗ್ಗೆ ಒಂಬತ್ತು ಗಂಟೆಗೇ ಬರುತ್ತೇನೆಂದ ಗೆಳತಿ ಲಲಿತ ಬಂದಿರಲಿಲ್ಲವಾದ್ದರಿಂದಲೇ ಕುಮುದಾ ಕಾತರದಿಂದ ಗೇಟಿನ ಬಳಿ ನಿಂತದ್ದು. ಲಲ್ಲೂ ಮನೆ ಸಂಈಪಿಸುತ್ತಿದ್ದಂತೆಯೇ ಅಂತೂ ಕಡೆಗೂ ಬಂದಳಲ್ಲ ಎಂದು ನಿಟ್ಟುಸಿರಿಡುತ್ತಲೇ ಕುಮುದಾ ಒಳ ಹಜಾರ ಪ್ರವೇಶಿಸಿ ಬೆತ್ತದ ಕುರ್ಚಿಗೆ ಬೆನ್ನೂರಗಿಸುತ್ತಾಳೆ. ಸರಸರನೆ ಒಳಬಂದ ಲಲ್ಲೂ ಮಾತಿಗೆ ತೊಡಗುತ್ತಾಳೆ.

"ಸಾರೀಮ್ಮಾ, ಲೇಟಾಯ್ತು.."

"ಬಾರೇ, ಬಾ.. ನಿಂಗೋಸ್ಕರಾನೇ ಕಾದೂ ಕಾದೂ ಸುಸ್ತಾಯ್ತು. ಅಲ್ಲ... ಯಾಕೇ ಇಷ್ಟು ತಡ ಮಾಡಿದೆ?"

ಲಲ್ಲೂಳ ಮುಖ ಕೆಂಪೇರುತ್ತದೆ.

"ಅನಿರುಧ್ ಬಂದಿದ್ರು ಕಣೇ.. ಅದಕ್ಕೇ..."

"ಅರ್ಥವಾಯ್ತು ಬಿಡು."

ಕುಮುದಾ ವ್ಯಂಗ್ಯದ ದನಿಯಲ್ಲಿ ಹೇಳುತ್ತಿದ್ದಂತೆ ಲಲ್ಲೂ ನಾಚಿಕೆಯಿಂದ ತಲೆ ತಗ್ಗಿಸುತ್ತಾಳೆ. ನಂತರ ಅವಳು ಯಾಂತ್ರಿಕವಾಗಿ ವ್ಯಾನಿಟಿ ಬ್ಯಾಗಿನಿಂದ ಒಂದಿಷ್ಟು ಕಾರ್ಡುಗಳನ್ನು ಹೊರಗೆಳೆಯುತ್ತಾಳೆ.

"ಏ ಕುಮು, ನಿಮ್ಮ ತಂದೆಯ ಹೆಸರೇನೇ?"

"ಹಾಗಾದರೆ ನಿನ್ನ ಮದುವೆಗೆ ನನಗೇ ಇನ್ವಿಟೇಷನ್ ಇಲ್ಲಾನ್ನು.. ಇರಲಿ... ನನಗೂ ಒಂದಿನ ಮದುವೆ ಆಗದೇ ಇರುತ್ತಾ? ... ಸೇಡು ತೀರಿಸಿಕೊಳ್ಳುತ್ತೀನಿ.."

"ಛೇ... ಹಾಗಲ್ಲ ಕಣೇಮ್ಮಾ" ಲಲ್ಲೂ ಮಾತನಾಡುತ್ತಲೇ ಕುಮುದಾಳ ತಂದೆಯ ಹೆಸರಿಗೆ ಹಿರಿಯರ ಕರೆಯೋಲೆ ಬರೆದು "ನಿಮ್ಮ ತಂದೆಗೆ ಕೊಟ್ಬಿಡೇ" ಎನ್ನುತ್ತಲೇ ತನ್ನ, ಅನಿರುದ್ಧನ ಜಂಟಿ ಹೆಸರಿಸುವ ಕರೆಯೋಲೆಯ ಮೇಲೆ ಕುಮುದಾಳ ಹೆಸರು ಬರೆದು ಕೊಡುತ್ತಾಳೆ. ಇಬ್ಬರೂ ಕೆಲಹೊತ್ತು ಲೋಕಾಭಿರಾಮ ಹರಟುತ್ತಾರೆ. ನಂತರ ಲಲ್ಲೂ ಕುಮುದಾಳ ಮದುವೆಯ ಪ್ರಸ್ತಾಪ ಮಾಡುತ್ತಾಳೆ.

ಕುಮುದಾ ಹೆದರಿದಂತೆ ಲಲ್ಲೂಳ ಬಾಯಿ ಮುಚ್ಚಿ..
"ಈ ವಿಷಯ ಮಹಡಿ ಮೇಲೆ ಕೂತು ಮಾತಾಡೋಣ... ಯಾಕೇಂದ್ರೆ ನನಿನ್ನೂ ಮನೇಲಿ ಸಿದ್ದಾರ್ಥನ ವಿಷಯ ಕೇಳೇ ಇಲ್ಲ... ನೀನೆಲ್ಲಾದರೂ ರಾದ್ಧಾಂತ ಮಾಡಿಬಿಟ್ಟೀಯ ಮತ್ತೆ....."

ಇಬ್ಬರೂ ತೆರೆದ ಮಹಡಿಯ ಮೇಲೆ ಹೋಗಿ ಬಿಸಿಲು ಕಾಯಿಸಿಕೊಳ್ಳುತ್ತಾ ಮೈ ಚಾಚುತ್ತಾರೆ. ಕುಮುದಾ ತನ್ನ ಬಗ್ಗೆ ಹೇಳತೊಡಗುತ್ತಾಳೆ.

ಕುಮುದಾಳ ಕಥನ

ನಾನು ಸಿದ್ಧಾರ್ಥನನ್ನು ಭೇಟಿಯಾದ ರೀತಿ ನೆನಪು ಮಾಡಿಕೊಂಡರೆ ನಿಜಕ್ಕೂ ಆಶ್ಚರ್ಯವಾಗುತ್ತದೆ. ಆ ದಿನ ಅವನ ಪಿಎಚ್‍ಡಿ ಥೀಸಿಸ್‍ನ ಪಬ್ಲಿಕ್ ಡಿಫೆನ್ಸ್ ಇತ್ತು. ಅಲ್ಲಿ ತರಲೆ ಮಾಡಿ ಪ್ರಶ್ನೆಗಳನ್ನು ಕೇಳೋಣವೆಂದೇ ನಾನು ಸೆನೆಟ್ ಹಾಲಿಗೆ ಹೋದೆ. ಆದರೆ ಅವನು ಪ್ರಬಂಧ ಮಂಡಿಸಿದ ರೀತಿಗೆ ಬೆರಗಾಗಿ, ಯಾವ ಪ್ರಶ್ನೆ ಕೇಳಬೇಕೆಂದೇ ನನಗೆ ತಿಳಿಯಲಿಲ್ಲ. ಆದಿನವೇ ಅವನ ಪರಿಚಯ ಔಪಚಾರಿಕವಾಗಿ ಆಗಿ, ಮೊದಲ ಬಾರಿಗೆ ಪರಸ್ಪರ ಮಾತಾಡಿದೆವು. ಆ ನಂತರ ನನ್ನ ಸಂಶೋಧನೆಯಲ್ಲಿ ಉದ್ಭವಿಸಿದ ಅನೇಕ ತೊಡಕುಗಳನ್ನು ಅವನು ಸಹಜವೆಂಬಂತೆ ಪರಿಹರಿಸಿಬಿಟ್ಟ. ನಾನು ಅವನನ್ನು ಪೀಡಿಸಿ ಗಲಾಟೆ ಮಾಡಿದ್ದಕ್ಕೆ, ನನ್ನ ಪಿರಿಪಿರಿ ತಾಳಲಾರದೇ ಸಿಗರೇಟ್ ಸೇದುವುದನ್ನು ಬಿಟ್ಟ. ಆ ದಿನವೇ ನಮ್ಮ ಪ್ರೇಮಾಂಕುರವಾಗಿರಬಹುದೆಂದು ನನ್ನ ಊಹೆ. [ಆದರೂ ಕ್ರಮೇಣ ಘಟಿಸುವ ಪ್ರೇಮದಂತಹ ಅನುಭವಕ್ಕೆ ಒಂದು ಕಾಲಮಾನದಲ್ಲಿ ನಿಖರವಾಗಿ ಆರಂಭವನ್ನು ಹುಡುಕುವುದು ತಪ್ಪಾದೀತು] ಎಲ್ಲಕ್ಕಿಂತ ದೊಡ್ಡ ದುರಂತವೆಂದರೆ ನಾವುಗಳು ಇಷ್ಟೆಲ್ಲಾ ಒಡನಾಟ ಹೊಂದಿರುವಾಗ್ಯೂ ನಾವಿಬ್ಬರೂ, ಒಬ್ಬರನ್ನೂಬ್ಬರು ಪ್ರೀತಿಸುತ್ತೇವೆಂದು ಈವರೆಗೂ ಹೇಳಿಕೊಂಡಿಲ್ಲ. ಇನ್ನು ಮದುವೆಯ ಪ್ರಸ್ತಾಪ ದೂರ. ಬಹುಶಃ ಪ್ರೀತಿ ಮಾತಿಗೆ ನಿಲುಕದ ಅನುಭವವಾದ್ದರಿಂದ ಹೀಗಿರಬಹುದು. ಮನಸ್ಸೇ ಅವನದಾಗಿರುವಾಗ ಮಾತಿನಂತಹ ಕೃತಕ ಸಾಧನಗಳು ಬೇಕೇ? ಆದರೂ, ಈ ಮನಸ್ಸು ಹೃದಯಗಳೆಂಬ ಅಮೂರ್ತ ವಿಷಯಗಳೂ ಕಡೆಗೆ ಮದುವೆಯೆಂಬ ಸಾಮಾಜಿಕ ಕ್ರಿಯೆಯಲ್ಲಿ ಪರ್ಯಾವಸನವಾಗಲೇಬೇಕಾದ್ದರಿಂದ, ಎಂದಾದರೂ ಮಾತಾಡಲೇ ಬೇಕು. ಅದಕ್ಕೆ ಸಂದರ್ಭ ಒದಗೆ ಬಂದಿಲ್ಲವೇನೋ. ಬಹುಷಃ ಸಿದ್ದಾರ್ಥನ ಮನೆಯಲ್ಲೋ ನನ್ನ ಮನೆಯಲ್ಲೋ ಮದುವೆಯ ಪ್ರಸ್ತಪ ಬಂದ ದಿನ ನಾವಿಬ್ಬರೂ ಈ ಬಗ್ಗೆ ಮಾತಾಡಿಕೊಳ್ಳಬಹುದು.

ನಾನು ಇಷ್ಟಲ್ಲಾ ಹೇಳಿದರೂ ನನಗೆ ಈ ವಿಷಯದ ಬಗ್ಗೆ ಇನ್ನೂ ಖಾತ್ರಿಯಿಲ್ಲ. ಸಿದ್ದಾರ್ಥ ನನ್ನೆಡೆಗೆ ತೋರಿಸುವ ಸಂಯಮವೇ ನನ್ನ ಅನುಮಾನಕ್ಕೆ ಕಾರಣವಿರಬೇಕು. ಅವನೂ ನಾನು ಭಾವಿಸಿದ ಹಾಗೆಯೇ ಭಾವಿಸಿದ್ದಾನೆಯೇ? ಅಥವಾ ಅವನಿಗಿದು ಕಾಮದಿಂದೀಚೆಗಿನ ಶುದ್ಧ - ಪರಿಶುದ್ಧ ಸ್ನೇಹ ಮಾತ್ರವೋ? ನನಗೆ ಆಗಾಗ ಅನ್ನಿಸುವುದುಂಟು - ಈ ಜಗತ್ತಿನಲ್ಲಿ ಕಾಮದ ಸುತ್ತ ಹೆಣೆಯದ ಸಂಬಂಧಗಳು ಬರೇ ದೈಹಿಕವಾಗಿ ಮಾತ್ರ ಇರುತ್ತದೇನೋ. ಮಾನಸಿಕವಾಗಿ ಎಷ್ಟೆಲ್ಲಾ ಜನರನ್ನು ನಮ್ಮ ತೋಳ್ತಕ್ಕೆಯಲ್ಲಿ ಕಲ್ಪಿಸಿಕೊಂಡುಬಿಟ್ಟಿರುತ್ತೇವೆ! ಇದರಲ್ಲಿ ಸಿದ್ದಾರ್ಥ ಎಷ್ಟನೆಯವನು? ಕಡೆಯವನೇ?? ಇರಲಿ. ಆದರೆ ಒಂದು ಮಾತ್ರ ನನಗೆ ಸ್ಪಷ್ಟ, ನಾನು ಮದುವೆಯಾಗುವುದಕ್ಕೆ ಮೊದಲು - ಅದು ಯಾರೊಂದಿಗೇ ಇರಲಿ - ನನಗೆ ಸಿದ್ಧಾರ್ಥನೊಂದಿಗಿನ ಸಂಬಂಧ ಸ್ಪಷ್ಟವಾಗುವುದು ಅಗತ್ಯ. ಮೊನ್ನೆ ನನಗೆ ಅಪೆಂಡಿಸೈಟಿಸ್ ಆಪರೇಷನ್ ಆದಾಗ ಅವನು ಬಂದು ನನ್ನನ್ನು ನೋಡಿದ್ದೇ ಕೊನೆ. ಅಂದೇ ಅವನು ಮಂಗಳೂರಿಗೆ ಹೊರಟ. ನಂತರ ಅವನ ಪತ್ರ ಬರಬಹುದೆಂದು ಈ ವರೆಗೂ ಕಾದದ್ದಾಯಿತು. ಇನೂ ಕಾಯುತ್ತೇನೆ. ಮಾತಿಗೆ ನಿಲುಕದ ವಿಷಯವಲ್ಲವೇ? ಅದಕ್ಕೆ ಅಕ್ಷರರೂಪ ಕೊಡಲು ತಡವಾದೀತು. ಬರೆಯುತ್ತಾನೆ ಎಂಬ ನಂಬಿಕೆಯೇ ನನಗೆ ಧೈರ್ಯ. ಅವನ ಪತ್ರ ಬಂದರೆ ಎಲ್ಲವೂ ಸ್ಪಷ್ಟವಾಗಬಹುದು. ಪತ್ರ ಈ ದಿನ ಬರಬಹುದೇ? ಜೀವನದುದ್ದಕ್ಕೂ ಯಾವುದೋ ಸ್ಪಷ್ಟೀಕರಣಕ್ಕೆ ಕಾಯುತ್ತಿದ್ದೇವೆ ಎಂದೆನ್ನಿಸುವುದಿಲ್ಲವೇ? ಆ ಸ್ಪಷ್ಟೀಕರಣ ದೊರೆಯುವುದೆಂದೋ... ದೊರೆತರೂ, ನಾವು ಸ್ಪಷ್ಟೀಕರಣ ಎಂದುಕೊಂಡದ್ದು ನಿಜಕ್ಕೂ ಸ್ಪಷ್ಟವಾಗಿಯೇ ಇರುತ್ತದಾ?

ಅಂಚೆಯವನ ಪ್ರವೇಶ, ನಿರ್ಗಮನ

ಅಂಚೆಯವನು ರಸ್ತೆಯಗುಂಟ ನಡೆದು ಬಂದು, ಗೇಟ್ ತೆರೆದು, ಮನೆಯೊಳಕ್ಕೆ ಪ್ರವೇಶಿಸಿ, ಒಂದು ಪತ್ರವನ್ನು ತೂರಿ, "ಪೋಸ್ಟ್" ಎಂದು ಅರಚಿ, ಗೇಟ್ ತೆರೆದು, ಮುಂದಿನ ಮನೆಯತ್ತ ಹೊರಟುಬಿಟ್ಟ.

ವಿಶ್ವಾಸನ ತಾಯಿಯ ಸ್ವಗತ

ನಾನು ಬರೆದು ಹಾಕಿದ ಪತ್ರ ಈ ವೇಳೆಗೆ ಅವರಿಗೆ ತಲುಪಿರಬಹುದೇ? ನನಗೆ ಕರುಳ ಬೇನೆ ಅಂತ ವಿಶ್ವಾಸ ನಾಲ್ಕಿ ದಿನಗಳ ಹಿಂದೆ ಪತ್ರ ಹಾಕಿದ್ದನಂತೆ. ಪಾಪ ಅವರು ಇನ್ನೆಲ್ಲಿ ಹೆದರಿಬಿಟ್ಟಾರೋ ಅಂತ ನನಗೆ ಭಯವಾಗುತ್ತಾ ಇದೆ. ಹೆಚ್ಚಿನ ನೋವೇನೂ ಇಲ್ಲ, ಚಿಂತೆಗೆ ಕಾರಣವಿಲ್ಲ ಎಂದು ನಾನು ಬರೆಯಲುಪಕ್ರಮಿಸಿದ ಪತ್ರ ಕಡೆಗೆ ಎಲ್ಲಿ ಅಂತ್ಯವಾಯಿತು? ನಲವತ್ತೈದು ಐವತ್ತು ವರ್ಷಗಳ ಹಿಂದೆ ಅವರು ತಮ್ಮ್ ಯೌವನದ ಹುಚ್ಚಿನಲ್ಲಿ ಬರೆದಿದ್ದ ಪತ್ರಕ್ಕೆ ಇಷ್ಟು ಸುದೀರ್ಘಕಾಲದ ನಂತರ ಉತ್ತರಿಸುವ ಅವಶ್ಯಕತೆಯಾದರೂ ಏನಿತ್ತು? ಸುಮ್ಮನೆ ಕರುಳಬೇನೆಯ ಬಗ್ಗೆ ಬರೆದಿದ್ದರಾಗುತ್ತಿರಲಿಲ್ಲವೇ? ನನಗೆಲ್ಲೋ ವೃದ್ಧಾಪ್ಯದ ಭ್ರಾಂತು ಎಂದು ಕೇಳಿದವರೆಂದಾರು. ಅಗ ನಾನು ಇದೇ ವಿಶ್ವಾಸನನ್ನು ಹೊಟ್ಟೆಯಲ್ಲಿ ಹೊತ್ತು ತವರಿಗೆ ಬಂದಿದ್ದೆ. ತಾಯಿಯ ಮನೆಯಲ್ಲಿದ್ದ ಸಂಭ್ರಮದ ವಾತಾವರಣದಲ್ಲಿ ಅವರಿಗನುಭವವಾಗಿದ್ದ ಏಕಾಕಿತನದ ಅನುಭವದರಿವು ನನಗಿರಲಿಲ್ಲ. ಮತ್ತೆ ಆಗ, ಆ ಕಾಲದಲ್ಲಿ ಗಂಡನ ಪತ್ರಕೆ ಉತ್ತರಿಸುವುದೇ? ಆ ಉದ್ಧಟತನದ ಧೈರ್ಯವೂ ನನಗಿರಲಿಲ್ಲ. ಗಂಡನನ್ನು ತಲೆಯೆತ್ತಿ ನೋಡಿ ಮಾತನಾಡಿಸಲೂ ಹೆದರುತ್ತಿದ್ದ ಕಾಲವದು. ಆಗ ನಾನೇನಾದರೂ ಪತ್ರ ಬರೆದಿದ್ದರೆ ಮನೆಯಲ್ಲೆಲ್ಲರೂ ಗೇಲಿ ಮಾಡುವವರೇ. ಅಪ್ಪ ಒಂದಿಷ್ಟು ಬುದ್ಧಿಮಾತನ್ನೂ ಹೇಳುತ್ತಿದ್ದರೇನೋ. ಬಹುಶಃ ಆ ದಿನ ಅವರಿಗಾದ ಏಕಾಕಿತನದ ಅನುಭವ, ಪರಕೀಯತೆಯ ಭಾವನೆ ಇಂದು ನನ್ನದಾಗಿರಬಹುದು.

ನಿನ್ನೆ ಅಂಚೆಗೆ ಹಾಕಿದ ಪತ್ರದ ಬಗ್ಗೆ ಯೋಚಿಸುವುದು ಬಿಟ್ಟು ಕಾಲಮಾನದಲ್ಲಿ ಐವತ್ತು ವರ್ಷ ಹಿಂದಕ್ಕೆ ಹೋದಾಗ ನನಗೆ ಮೈಯಲ್ಲಿ ವಿಚಿತ್ರ ಭಾವನೆಗಳು. ಜಿರಲೆಯೊಂದು ಮೈಯೊಳಗೆ ಸಂಚರಿಸಿದ ಹಾಗೆ ವಿಲಿವಿಲಿ. ಬಹುಶಃ ಮುಖವೂ ಕೆಂಪೇರಿರಬಹುದು. ಸದ್ಯ ಎದುರಿಗೆ ಕನ್ನಡಿಯಿಲ್ಲ. ಆಗ ನಾನು ಪತ್ರ ಬರೆದಿದ್ದರೆ ಅವರನ್ನು ಏನೆಂದ ಸಂಬೊಧಿಸುತ್ತಿದ್ದೆ? ಪ್ರಿಯಾ? ನನ್ನ ದೈವ? ಈ ಜಗತ್ತಿನಲ್ಲಿ ಅತ್ಯಂತ ಪ್ರೀತಿಪಾತ್ರರಾದ ಪತಿದೇವರಿಗೆ..? ಅಥವಾ ಔಪಚಾರಿಕವಾಗಿ ಅವರಿಗೆ ಬರುತ್ತಿದ್ದ ಪತ್ರಗಳಂತೆ, ಅದರ ಒಕ್ಕಣೆಯಂತೆ ಭಾಸ್ಕರರಾಯರೇ ಎಂದೇ? ನಿನ್ನೆ ನಾನು ಪತ್ರ ಬರೆದಾಗ ಆ ಸಮಸ್ಯೆ ಉದ್ಭವವಾಗಲಿಲ್ಲ ಏಕೆ? ಐವತ್ತು ವರ್ಷಗಳಲ್ಲಿ ನಾವು ಅಷ್ಟೊಂದು ಗೆಳೆಯರಾಗಿಬಿಟ್ಟೆವಾ? ಮುಟ್ಟು ನಿಂತ ಮೇಲೆ ಎಂಧ ನಾಚಿಕೆ? ನಿನ್ನೆಯಂತೂ ನೇರವಾಗಿ ಏಕವಚನಕ್ಕಿಳಿದು ಪ್ರಿಯ ಭಾಸ್ಕರ ಎಂದ ಬರೆದದ್ದು ನೋಡಿ ಅವರಿಗೆ ಕೋಪ ಬಂದಿರಬಹುದೇ? ಅಥವಾ ಮುದುಕಿಯಾಗುತ್ತಿದ್ದ ಹಾಗೆ ನಿನ್ನ ತುಂಟಾಟ ಹೆಚ್ಚಾಯಿತು ನೋಡು ಅಂತ ಗೇಲಿ ಮಾಡಬಹುದೇ? ಇಷ್ಟು ದಿನ ಅವರನ್ನು ನೇರವಾಗಿ ಕಣ್ಣೆತ್ತಿಯೂ ನೋಡದ ನಾನು ಈ ಹೊಸ ಸಖ್ಯ ತೋರುವುದರಲ್ಲಿ ಅರ್ಥವೇನು? ಬಹುಶಃ ಎಂದಿಗಿಂತ ಹೆಚ್ಚಾಗಿ ಇಂದು ನಾವಿಬ್ಬರೂ ಒಬ್ಬರಿಗೊಬ್ಬರು ಅವಶ್ಯವಾಗಿದ್ದೇವೆ ಎಂದು ನನಗನ್ನಿಸಿರಬಹುದು. ಅವರಿಗೊ ಹಾಗೇ ಅನ್ನಿಸಿರಬಹುದೇ? ಅಂದಹಾಗೆ ಕಡೆಗೂ ನಿನ್ನೆಯ ಪತ್ರದಲ್ಲಿ ಕರುಳಬೇನೆಯ ಪ್ರಸ್ತಾಪ ಮಾಡಲೇ ಇಲ್ಲವಲ್ಲಾ........

ಪತ್ರದ ಪೂರ್ಣಪಾಠ

ಈ ದಿನ ಲೇಖನಿ ಹಿಡಿದು ಮೇಜಿನ ಮುಂದೆ ಕುಳಿತಾಗ ನನ್ನೆದುರು ನಿಂತದ್ದು ನಿನ್ನದೇ ಚಿತ್ರ. ಅದನ್ನು ನೋಡುತ್ತಿದ್ದ ಹಾಗೇ ನನಗೆ ನನ್ನ ಒಂಟಿತನದ ತೀವ್ರ ಅನುಭವವಾಯಿತು. ನಾನು ಇಲ್ಲಿ... ನೀನು ಅಲ್ಲಿ. ಎಷ್ಟು ದಿನ ಈ ದೂರ? ನನಗಂತೂ ಈ ಒಂಟಿತನ ಬೇಸರ ತಂದುಬಿಟ್ಟಿದೆ. ನಾವಿಬ್ಬರೂ ಒಟ್ಟಿಗೆ ಇರುವ ದಿನಗಳು ದೂರವಿಲ್ಲವೆಂದು ನನಗನ್ನಿಸುತ್ತಿದೆ. ಶುಭಸೂಚಕವೇ?

ಏನೇ ಆಗಲೀ, ಕೆಲದಿನಗಳ ಮಟ್ಟಿಗಾದರೂ ನೀನು ಇಲ್ಲಿಗೆ ಬರಬಹುದಲ್ಲವೇ? ಈಗ ನೀನು ಇಲ್ಲಿಗೆ ಬಂದರೆ ಮುಂದೆ ನಡಯಬೇಕದ್ದನ್ನು ನಾವು ಕೂಡಿಯೇ ಆಲೋಚಿಸಬಹುದು. ಆಗ ನನಗೂ ಸ್ವಲ್ಪ ನೆಮ್ಮದಿ. ಒಂಟಿತನ ಎಂತೆಂಥ ಸಂದರ್ಭದಲ್ಲಿ ಕಾಡುತ್ತದೆಂದು ನನಗೆ ಈಗೀಗ ಅನುಭವವಾಗುತ್ತಿದೆ. ನೀನು ನನ್ನ ಬಳಿ ಇದ್ದಾಗ, ನಾವು ನಿಜಕ್ಕೂ ಮನ ಬಿಚ್ಚಿ ಮಾತನಾಡಿಯೇ ಇರಲಿಲ್ಲ ಅಲ್ಲವೇ? ಬಹುಶಃ ದೂರವಾದಾಗ ಒಬ್ಬರಿಗೊಬ್ಬರ ಅವಶ್ಯಕತೆಯ ಅರಿವಾಗಬಹುದು. ಎಂದಿಗಿಂತ ಹೆಚ್ಚಾಗಿ, ಈಗ ನನಗೆ ನಿನ್ನ ಸಾಮೀಪ್ಯದ ಅವಶ್ಯಕತೆಯಿದೆ.

ಅಂದಹಾಗೆ ನಾನು ಕರೆದೆನೆಂದು ಬರುವ ಆತುರದಲ್ಲಿ ನಿನ್ನ ಆರೋಗ್ಯವನ್ನು ಕಡೆಗಣಿಸಬೇಡ. ಏಕೆಂದರೆ ಈ ಸ್ಥಿತಿಯಲ್ಲಿ ಆರೋಗ್ಯ ಎಲ್ಲಕ್ಕಿಂತ ಮುಖ್ಯ. ಕಡೆಗೆ ನೀನೊಂದು ಪತ್ರ ಹಾಕಿದರೆ ನಾನೇ ಬಂದರೂ ಬಂದೇನು. ನಿನ್ನಿಂದಬರುವ ಪತ್ರವೇ ನನಗೆ ಸಾಕಷ್ಟು ಸಾಂತ್ವನ ನೀಡುತ್ತದೆ. ನಾನು ನಿನ್ನ ನೆನಪಿನಲ್ಲೇ ಇದ್ದೇನೆ.

ಕುಮುದಾಳ ಪ್ರತಿಕ್ರಿಯೆ...

ಅಂಚೆಯವನು ಹಾಕಿ ಹೋದ ಪತ್ರದ ಒಕ್ಕಣಿಕೆ ನೋಡಿಯೇ ಕುಮುದಾಳಿಗೆ ಒಂದು ರೀತಿಯ ಭೀತಿ ಉಂಟಾಯಿತು. ಲಕೋಟೆಯ ಮೇಲೆ ’ಕುಮುದಾ ಬಾಯಿ’ ಎಂದು ತನ್ನನ್ನು ಗೇಲಿ ಮಾಡಲಿಕ್ಕೆ ಸಿದ್ದಾರ್ಥ ಬರೆದಿರಬಹುದೇ? ತಾನು ಬಹಳ ’ಬಾಯಿ’ ಮಾಡುತ್ತೇನೆಂದು ಅವನು ಆಗಾಗ ಹೇಳುತ್ತಿದ್ದುದುಂಟು. ಅಥವಾ ತನ್ನ ಮನೆಯವರಿಗೆ ತಿಳಿಯದಿರಲೆಂದು ಹೀಗ ಆಟ ಆಡಿರಬಹುದು. ಸಾಲದ್ದಕ್ಕೆ ಕೈ ಬರಹವನ್ನೂ ಬೇಕೆಂದೆ ಬದಲಿಸಿ ಬರೆದಂತಿದೆ. ಕುಮುದಾ ತನ್ನಲ್ಲೇ ’ಛೀ ತುಂಟ’ ಎಂದು ನಗುತ್ತಲೇ ಬೈದು ಪತ್ರವನ್ನು ಎದೆಗವಚಿಕೊಂಡಳು. ಲಲ್ಲೊ ಅಲ್ಲಿ ಉಳಿಯಲು ಇದು ಸರಿಯಾದ ಸಮಯವಲ್ಲವೆಂದು ಭಾವಿಸಿ ಹೊರಟುಬಿಟ್ಟಳು.

ಕುಮುದಾ ನಂತರ ಏಕಾಂತದಲ್ಲಿ ಪತ್ರವನ್ನೊಡೆದಳು. ಮುಖ ಕೆಂಪೇರಿತು. ಪತ್ರದಲ್ಲಿ ಬರೆದಿರುವುದು ಯಾವುದೂ ಸ್ಪಷ್ಟವಾಗಿಲ್ಲವಾದರೂ ಎಲ್ಲವೂ ಸುಸ್ಪಷ್ಟ. ಹಾಗಾದರೆ ಈಗೆ ಸಿದ್ಧಾರ್ಥನ ಬಳಿ ಹೋಗಬೇಕೇ? ಹೇಗೆ ಹೋಗುವುದು? ಮನೆಯಲ್ಲಿ ಏನು ಹೇಳಲಿ? ಅಥವಾ ಸಿದ್ಧಾರ್ಥನಿಗೇ ಒಂದು ಪತ್ರ ಬರೆದು ಸುಮ್ಮನಾದರೆ? ಇಲ್ಲವೇ ನೇರ ಅಪ್ಪನ ಬಳಿಗೆ ಹೋಗಿ ಇದು ಹೀಗೆ, ಹೀಗೆಲ್ಲಾ ಆಗಿದೆ, ಈಗ ಸಿದ್ದಾರ್ಥ ಕರೆದಿದ್ದಾನೆ. ಹೋಗಬೇಕು. ಎಂದು ಸ್ಪಷ್ಟವಾಗಿ ಹೇಳಿಬಿಟ್ಟರೆ?

ಅಥವಾ ಏನಾದರೂ ಸುಳ್ಳು ನೆಪ ಒಡ್ಡಿ ಸಿದ್ದಾರ್ಥನಲ್ಲಿಗೆ ಹೋಗುವದೇ? ಮಂಗಳೂರೆಂದರೆ ಸಾಮಾನ್ಯವೇನು? ಒಂದು ರಾತ್ರಿಯ ಪ್ರಯಾಣ. ಇಲ್ಲೇ ಮೈಸೂರಾಗಿದ್ದರೆ ಮುಂಜಾನೆ ಹೋಗಿ ಸಂಜೆಗೆ ಹಿಂದಿರುಗಬಹುದಿತ್ತು.

ಪ್ರೀತಿಸುವುದರಲ್ಲಿನ ಅನೇಕ ರೋಮಾಂಚನಗಳಲ್ಲಿ ಇಂಥದೂ ಒಂದು ಇರಬಹುದೆಂದು ಅವಳಿಗೆ ತಿಳಿದಿರಲಿಲ್ಲ. ಈಗ ಅಪ್ಪನೆದುರು ಸತ್ಯ ಹೇಳಿದರೆ ಅದರ ಪರಿಣಾಮ ಅರಿತವರ್ಯಾರು? ಅಪ್ಪ ಬೇಡವೆಂದು ಹಠ ಮಾಡಿದರೆ ಆದಿಯಲ್ಲಿಯೇ ಕೊಡಲಿಯೇಟು. ಜೊತೆಗೆ ಅಲಿ ಹೋಗಿ ಎಲ್ಲವನ್ನೂ ಸುಸ್ಪಷ್ಟ ಮಾತನಾಡಿ ಸಾಧ್ಯವಾದರೆ ಸಿದ್ಧಾರ್ಥನನೂ ಕರೆತಂದರೆ ನಂತರ ಅಪ್ಪನೂ ಒಪ್ಪಬಹುದು. ಈಗ ’ನಾನು ಪ್ರೀತಿಸಿದ ಹುಡುಗನೊಂದಿಗೆ ಮದುವ ಇತ್ಯರ್ಥ ಮಾಡಿಕೊಂಡು ಬರಲು ಎರಡು ದಿನ ಮಂಗಳೂರಿಗೆ ಹೋಗುತ್ತೇನೆ’ ಎಂದರೆ ಯಾವ ಮರ್ಯಾದಸ್ಥ ಅಪ್ಪ ತಾನೇ ಒಪ್ಪುತ್ತಾನೆ? ಏನಾದರೊಂದು ಕಾರಣ ಹೇಳಿ ಕದ್ದು ಹೊರಡುವುದೇ ಒಳ್ಳೆಯದು. ಹೇಗೂ ಥೀಸಿಸ್‍ಗಾಗಿ ಮಾಹಿತಿ ಸಂಗ್ರಹಣೆಗೆ ಹೊರಡಬೇಕಿತ್ತು. ಮೊದಲು ಮಂಗಳೂರಿಗೇ ಹೊರಟರಾಯಿತು.

ಕುಮುದಾ ಹೀಗೆ ಆಲೋಚಿಸುತ್ತಿದ್ದಂತೆ, ತನ್ನ ಮಾರನೆಯ ದಿನದ ಪ್ರಯಾಣಕ್ಕಾಗಿ ಮಾನಸಿಕ ತ್ಯಾರಿಯನ್ನೂ ನಡೆಸತೊಡಗಿದ್ದಳು.

ಭಾಸ್ಕರರಾಯರ ಪ್ರತಿಕ್ರಿಯೆ

ಅಂಚೆಯವನು ಹಾಕಿಹೋದ ಪತ್ರದ ಒಕ್ಕಣಿಗೆ ನೋಡಿಯೇ ಭಾಸರರಾಯರಿಗೆ ಒಂದು ರೀತಿಯ ಆನಂದ ಉಂಟಾಯಿತು. ಇಷ್ಟು ಕಾಲಕ್ಕೆ ತಮ್ಮ ಹೆಂಡತಿಯಿಂದ ಅವರಿಗೊಂದು ಪತ್ರ ಬಂದಿತ್ತು. ಭಾಸ್ಕರರಾಯರಿಗೆ ತಕ್ಷಣ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ಪತ್ರ ಬಂದ ಖುಷಿಯಿಂದ ಚೇತರಿಸಿಕೊಳ್ಳಲು ಅವರಿಗೆ ಕೆಲ ಕ್ಷಣಗಳೇ ಹಿಡಿದುವು. ಆಸ್ತಿಯನ್ನಲ್ಲದೇ ತಂದೆತಾಯಿಗಳನ್ನೂ ಹಂಚಿಕೊಂಡ ತಮ್ಮ ಮಕ್ಕಳಿಗೇನನ್ನಬೇಕು? ಒಂದು ದೃಷ್ಟಿಯಿಂದ ಅವರು ಮಾಡುತ್ತಿರುವುದೂ ಸರಿಯಿರಬಹುದು. ಈ ದುಬಾರಿ ಯುಗದಲ್ಲಿ, ಅದರಲ್ಲೂ, ಇಬ್ಬರೂ ಔಷಧಿ ತಿಂದೇ ಜೀವಿಸುವ ವಯಸ್ಸು ಮುಟ್ಟಿದಾಗ, ಇಬ್ಬರನ್ನೂ ಒಬ್ಬನೇ ನೋಡಿಕೊಳ್ಳುವುದೆಂದರೆ ಕಷ್ಟದ ವಿಷಯವೇ. ಆದರೂ ಈ ಬಾರಿ ಅವಕಾಶವಾದಾಗ ಮಹೇಶಚಂದ್ರನಿಗೆ ಹೇಳಿಯೇ ಬಿಡಬೇಕು -- ಇಬ್ಬರೂ ಒಂದೇ ಮನೆಯಲ್ಲೇ ಇರುತ್ತೇವೆಂದು. ಜೀವನ ಪೂರ್ತಿ ಜತೆಜತೆಯಾಗಿದ್ದವರಿಗೆ ಈ ಅಕಾಲ ವಿರಹ ಸಹನೀಯವಾಗುವುದಾದರೂ ಹೇಗೆ? ಭಾಸ್ಕರರಾಯರು ಪತ್ರವನ್ನೊಡೆದು ನೋಡಿದರು. ಪರವಾಗಿಲ್ಲವೇ ಇವಳೂ ಇಷ್ಟು ಧೈರ್ಯ ತಂದುಕೊಂಡು ಪತ್ರ ಬರೆದಿದ್ದಾಳೆ. ಅವಳ ಆರೋಗ್ಯದ ಬಗ್ಗೆ ಬರೆಯುವುದಿರಲಿ, ನನ್ನ ಆರೋಗ್ಯದ ಕಾಳಜಿ ವಹಿಸಿದ್ದಾಳೆ! ಬಾಳಿನ ಈ ಘಟ್ಟದಲ್ಲಿ ಫಾರ್ಮಲ್ ಆಗಿರಬೇಕಾದ ಅವಶ್ಯಕತೆಯೂ ಇಲ್ಲ. ಭಾಸ್ಕರರಾಯರಿಗೆ ಈಗ ನಿಜವಾಗಿಯೂ, ಇವಳು ತಮ್ಮ ಸಮಾನ ಮನೋಧರ್ಮದ ಪತ್ನಿ-ಗೆಳತಿ ಎನ್ನಿಸಿತು. ಹೊಸು ಹುಡುಗಿಯನ್ನು ಪ್ರೀತಿಸುವ ಹುರುಪು ಅವರನ್ನು ತುಂಬಿಕೊಂಡಿತು. ಅವರಿಗೆ ಕೂಡಲೇ ತಮ್ಮ ಹೆಂಡತಿಯನ್ನು ಕಂಡು ಬಿಗಿಯಾಗಿ ಅಪ್ಪಿಕೊಳ್ಳಬೇಕೆಂಬ ಬಯಕೆ ಉಂಟಾಯಿತು. ಎಪ್ಪತ್ತರ ವಯಸ್ಸಿನಲ್ಲಿ ತಮ್ಮ ಅಪ್ಪುಗೆಗೆ ಸಿಕ್ಕುವುದು ಅವಳೊಬ್ಬಳೇ ಅಲ್ಲವೇ? ಮಗನನ್ನು ಹೇಗಾದರೂ ಒಪ್ಪಿಸಿ ಬೆಂಗಳೂರಿಗೆ ಹೊರಟುಬಿಡಬೇಕೆಂದು ರಾಯರು ನಿಶ್ಚಯಿಸಿದರು.

ರಾಯರು ಹೀಗೆ ಆಲೋಚಿಸುತ್ತಿದ್ದಂತೆ, ತಮ್ಮ್ ಮಾರನೆಯ ದಿನದ ಪ್ರಯಾಣಕ್ಕಾಗಿ ಮಾನಸಿಕ ತಯಾರಿಯನ್ನೂ ನಡೆಸತೊಡಗಿದ್ದರು.

ಪತ್ರಿಕಾ ವರದಿ

ಹಾಸನ, ಏಪ್ರಿಲ್ ೦೧
ಬೆಂಗಳೂರಿನಿಂದ ಮಂಗಳೂರಿಗೆ ಹೋಗುತ್ತ್ತಿದ್ದ ರಾಜ್ಯ ಸಾರಿಗೆ ಬಸ್ಸೊಂದು ಈ ದಿನ ಅಪಘಾತಕ್ಕೀಡಾಯಿತು. ಹಾಸನದಿಂದ ೨೫ ಕಿಲೋಮೀಟರ್ ದೂರದಲ್ಲಿ ಸಂಚರಿಸುತ್ತಿದ್ದಾಗ ಬಸ್ಸು ಕಣಿವೆಯೊಂದರೊಳಕ್ಕೆ ಧುಮುಕಿದ್ದರಿಂದ ಈ ಅಪಘಾತ ಸಂಭವಿಸಿದೆಯೆಂದು ತಿಳಿದುಬಂದಿದೆ. ಈ ಅಪಘಾತದಲ್ಲಿ ಹಲವರಿಗೆ ತೀವ್ರ ಗಾಯಕಳುಂಟಾಗಿವೆ. ಒಬ್ಬ ಮಹಿಳೆ ಮೃತಳಾಗಿದ್ದಾಳೆಂದು ವರ್ದಿಯಾಗಿದೆ. ಬಸ್ಸಿನ ಚಾಲಕನನ್ನು ಪೋಲೀಸರು ಬಂಧಿಸಿದ್ದಾರೆ. ತನಿಖೆ ನಡೆದಿದೆ.

ಹದಿನೆಂಟನೆಯ ಮುಖ್ಯರಸ್ತೆ

ಹದಿನೆಂಟನೆಯ ಮುಖ್ಯರಸ್ತೆಯ ಹದಿನಾರನೆಯ ನಂಬರ್ ಮನೆಯೊಳಕ್ಕೆ ಭಾಸ್ಕರರಾಯರು ಹೊಸ ಹುರುಪಿನಿಂದ ಪ್ರವೇಶಿಸಿದರು. ಅಲ್ಲಿ ವಾಸವಾಗಿದ್ದ ತಮ್ಮ ಹೆಂಡತಿ ಕುಮುದಾಬಾಯಿಯನ್ನು ಕೂಡಿಕೊಂಡರು. ಈಗ ಅವರಿಬ್ಬರೂ ಒಂದೇ ಮನೆಯಲ್ಲಿರುವುದೆಂದು ನಿರ್ಧರಿಸಿದ್ದಾರೆ. ಬಹುಶಃ ಆರಾರು ತಿಂತಳು ಒಬ್ಬೊಬ್ಬ ಮನಗಮನೆಯನ್ನಿ ಕಳೆಯುವುದೆಂದು ಒಪ್ಪಂದ ಮಾಡಿಕೊಂಡಿರಬಹುದು. ತಮ್ಮ ಪೆನ್ಷನ್ ನಲ್ಲಿ ಪ್ರತ್ಯೇಕ ಮನೆಯನ್ನೂ ಮಾಡಿ ಬದುಕುವ ಲೆಕ್ಕಚಾರವನ್ನೂ ಹಾಕಿರುವ ಭಾಸ್ಕರರಾಯರು, ಆ ಸಾಧ್ಯತೆಯನ್ನು ಅಲ್ಲಗಳೆಯುವುದಿಲ್ಲವೆನ್ನಿಸುತ್ತದೆ, ಜನರ ನಡುವೆ ಏಕಾಂಗಿಗಳಾಗಿ ಬದುಕುವುದಕ್ಕಿಂತ, ಏಕಾಂತದಲ್ಲಿ ಹೀಗೆ ಒಬ್ಬರಿಗೊಬ್ಬರು ಆಸರೆಯಾಗಿ ಬದುಕುವದೇ ವಾಸಿ ಎಂದೂ ಅವರಿಬ್ಬರೂ ಭಾವಿಸಿರಬಹುದು.

ಒಂದಿಷ್ಟು ಟಿಪ್ಪಣಿಗಳು

ಒಂದಿಷ್ಟು ಚೂರುಚೂರು ಚಿತ್ರಗಳನ್ನು ಕೊಟ್ಟು, ನನ್ನ ಬರಹವನ್ನು ಮುಗಿಸುತ್ತಿದ್ದೇನೆ. ಇದು ನಿಜಕ್ಕೂ ಇಲ್ಲಿಗೇ ಅಂತ್ಯಗೊಳ್ಳುತ್ತದೆಯೇ? ಮುಂದೆ ಬದುಕಿದ್ದವರೆಲ್ಲಾ ಸುಖವಾಗಿ ಬಾಳೀದರೇ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಹುಡುಕಬೇಕಾಗಿದೆ. ಈ ರೀತಿಯ ನಿರೂಪಣೆಯನ್ನು ಮುಗಿಸುವುದು ಸ್ವಲ್ಪ ಕಷ್ಟದ ವಿಷಯವೇ ಸರಿ. ನಿರಂತರ ನಡೆವ ಮಾನವ ವ್ಯಾಪಾರಗಳನ್ನು ಅದರ ಪರಿಪೂರ್ಣತೆಯಲ್ಲಿ ಅರ್ಥಮಾಡಿಕೊಳ್ಳಲು ಯಾರಿಗಾದರೂ ಸಾಧ್ಯವಿದೆಯೇ? ಹೀಗಿರುವಾಗ ತೀರ್ಮಾನಗಳನ್ನು ಕೊಡುವುದೂ ಒಂದು ನಿರ್ದಿಷ್ಟ ಸ್ಪಷ್ಟ ಅಂತ್ಯ ಸೂಚಿಸುವುದೂ ಕಷ್ಟದ ಕೆಲಸ. ಬದಲಿಗೆ ಗ್ರಹಿಕೆಗಳನ್ನು ಅದರ ಎಲ್ಲ ಪ್ರಶ್ನೆಗಳೊಂದಿಗೆ ನೇರವಾಗಿ ಬರೆದರೆ, ಆ ಪ್ರಶ್ನೆಗಳನ್ನು ಪುನರುಚ್ಚರಿಸಿದರೆ, ಜೀವನವನ್ನು ಅರ್ಥೈಸುವತ್ತ ಕೆಲ ದಿಕ್ಸೂಚಿಗಳು ಕಾಣಬಹುದು. ಈ ಎಲ್ಲ ಪ್ರಶ್ನೆಗಳ, ದ್ವಂದ್ವಗಳ ನಡುವೆ ಉತ್ತರ ಸಿಕ್ಕದ, ಬೃಹದಾಕಾರವಾಗಿ ನಿಂತಿರುವ ಪ್ರಶ್ನೆಯೆಂದರೆ ನಿಜಕ್ಕೂ ಆದಿನ

ಭಾಸ್ಕರರಾಯರು ಬರೆದದ್ದೇನು?



No comments: