Saturday, June 28, 2008

ಶೋಧನೆಸಿದ್ದಾರ್ಥ ಮತ್ತೊಮ್ಮೆ ಕಣ್ಣುಜ್ಜಿ ನೋಡಿದ. ಹೌದು. ಅನುಮಾನವೇ ಇಲ್ಲ. ಇದು ತನ್ನದೇ ಹೆಸರು. ಓದುತ್ತಿದ್ದ ಪತ್ರಿಕೆಯನ್ನು ಮತ್ತೊಮ್ಮೆ ಕಣ್ಣಿನ ಬಳಿ ಎಳೆದುಕೊಂಡು ಖಾತರಿ ಮಾಡಿಕೊಂಡ. ತನ್ನ ಪ್ರಿಯ ಪತ್ರಿಕೆಯಾದ ಸಿಂಚನಕ್ಕೆ ಅವನು ಆಗಾಗ ಕಥೆಗಳನ್ನು ಕಳುಹಿಸುತ್ತಿದ್ದುದುಂಟು. ಆದರೆ ಈಗ್ಗೆ ಸುಮಾರು ಆರು ತಿಂಗಳುಗಳಿಂದ ತಾನು ಏನನ್ನೂ ಬರೆದದ್ದೇ ಇಲ್ಲ. ಡಾಕ್ಟರೇಟಿಗಾಗಿ ಥೀಸೀಸ್ ತಯಾರಿಸುವಲ್ಲಿ ನಿರತನಾಗಿರುವವನಿಗೆ ಕಥೆಗಳ ಬಗ್ಗೆ ಆಲೋಚಿಸಲೂ ಸಮಯವಿರಲಿಲ್ಲ. ಅದೂ ಅಲ್ಲದೇ ತನ್ನ ಪೂರ್ವ ಸ್ವೀಕೃತ ಕಥೆಗಳೆಲ್ಲಾ ಈಗಾಗಲೇ ಪ್ರಕಟವಾಗಿ ಸಂಪಾದಕರಲ್ಲಿ ಏನೂ ಉಳಿದಿಲ್ಲ. ಆದರೆ ಇದೇನು? ತನ್ನ ಹೆಸರಿನಲ್ಲಿ ಬಂದಿರುವ ಕಥೆ? ಅವನಿಗೆ ಆಸಕ್ತಿ ಕೆರಳಿತು. ಓದತೊಡಗಿದ. ’ಆತ್ಮಕಥೆ’ ಎಂಬ ಶೀರ್ಷಿಕೆ ಹೊತ್ತ ಆ ಕಥೆ ಅವನಿಗೆ ಬಲು ಪರಿಚಿತವೆನ್ನಿಸಿತು. ಆದರೂ ತನಗೆ ಚೆನ್ನಾಗಿ ನೆನಪಿದೆ. ಈ ಕಥೆಯನ್ನು ತಾನೆಂದೂ ಬರೆದದ್ದಿಲ್ಲ. ಬಹುಶಃ ತನ್ನ ಹೆಸರಿನ ಬೇರೆ ಯಾರೋ ಲೇಖಕನಿರಬಹುದೆಂದುಕೊಂಡು ಸುಮ್ಮನಾದ. ಇದರಬಗ್ಗೆ ಹೆಚ್ಚು ತಲೆಬಿಸಿಮಾಡಿಕೊಳ್ಳಬಾರದೆಂದು ನಿಶ್ಚಯಿಸಿಕೊಂಡ ಸಿದ್ದಾರ್ಥನಿಗೆ ಅದು ಸಾಧ್ಯವಾದದ್ದು ಒಂದು ತಿಂಗಳ ಕಾಲ ಮಾತ್ರ.

ಸಿಂಚನದ ಮುಂದಿನ ತಿಂಗಳ ಪ್ರತಿ ಮನೆಯಲ್ಲಿ ಬಿದ್ದಾಗ ಪತ್ರಿಕೆ ತಿರುವುತ್ತಿದ್ದವನಿಗೆ ಇದ್ದಕ್ಕಿದ್ದಂತೆ "ಆತ್ಮಕಥೆ"ಯ ನೆನಪು ಬಂತು. ಅದರ ಬಗ್ಗೆ ಓದುಗರ ಓಲೆಗಳೇನಾದರೂ ಇರಬಹುದೋ ಎಂದು ಆಸಕ್ತಿಯಿಂದ ಆ ಅಂಕಣದತ್ತ ಕಣ್ಣು ಹಾಯಿಸಿದ.

"ಆತ್ಮಕಥೆ"ಯ ಬಗ್ಗೆ ಒಂದೇ ಒಂದು ಪತ್ರ ಬಂದಿತ್ತು. ಆತ್ಮಕಥೆ ೧೯೫೦ರಷ್ಟು ಹಿಂದೆಯೇ ಯಾವುದೋ ಪತ್ರಿಕೆಯಲ್ಲಿ ’ಗೌತಮ’ ಎಂಬ ಲೇಖಕರ ಹೆಸರಿನಡಿಯಲ್ಲಿ ಪ್ರಕಟವಾಗಿರುವುದಾಗಿಯೂ, ತಮ್ಮ ಅಭಿಮಾನದ ಖ್ಯಾತ ಲೇಖಕ ಸಿದ್ದಾರ್ಥ ಕೃತಿಚೌರ್ಯ ಮಾಡಿರುವುದು ನೋವನ್ನುಂಟುಮಾಡುವ ವಿಷಯವೆಂದು ಓದುಗ ಮಹಾಶಯನೊಬ್ಬ ಕಳಕಳಿಯಿಂದ ಬರೆದಿದ್ದ. ಕೆಳಗೆ ಸಂಪಾದಕರ ಟಿಪ್ಪಣಿ ಇರಬಹುದೇ ಎಂದು ನೋಡಿದ. ಅಂಥದ್ದೇನೂ ಕಂಡುಬರಲಿಲ್ಲ.

ಸಿದ್ದಾರ್ಥ ಮತ್ತೊಮ್ಮೆ ಯೋಚನೆಗೀಡಾದ. ತನ್ನ ಹೆಸರು ಸ್ವಲ್ಪ ವಿರಳವಾದದ್ದೇ. ಅದೂ ಅಲ್ಲದೇ ಅಭಿಮಾನದ ಖ್ಯಾತ ಲೇಖಕ ಎಂದಿದ್ದಾರೆ. ತನಗೆ ತಿಳಿದಿರುವಂತೆ, ಅಭಿಮಾನ, ಖ್ಯಾತಿಯ ಮಜಲಿನಲ್ಲಿರುವ ’ಸಿದ್ದಾರ್ಥ’ ತಾನೊಬ್ಬನೇ. ತನ್ನ ಹೆಸರು ಸತ್ಯನಾರಾಯಣನಂತೆ ಸಾಮಾನ್ಯದ್ದಲ್ಲ. ಇದು ತನ್ನ ಕುರಿತು ಬರೆದಿರುವ ಪತ್ರವೆನ್ನುವುದರಲ್ಲಿ ಅನುಮಾನವಿಲ್ಲ. ಆದರೆ ಕೆಳಗೆ ಸಂಪಾದಕರೇಕೆ ಒಂದು ಟಿಪ್ಪಣಿ ಹಾಕಲಿಲ್ಲ? ತಾನಂತೂ ಈ ಕಥೆಯನ್ನು ಅವರಿಗೆ ಕಳುಹಿಸಿರಲಿಲ್ಲ. ಆದರೂ ಖಾತರಿ ಮಾಡಿಕೊಳ್ಳಲು ತನ್ನ ಡೈರಿಯನ್ನೂ, ಫೈಲನ್ನೂ ಒಮ್ಮೆ ತಿರುವಿಹಾಕಿದ. ಇಲ್ಲ. ಈ ಕಥೆ ತಾನು ಕಳುಹಿಸಿದ ದಾಖಲೆ ಇಲ್ಲವೇ‌ಇಲ್ಲ. ಮತ್ತೆ?.... ಸಂಪಾದಕರಿಗೊಂದು ವಿವರಣಾ ಪತ್ರ ಬರೆದು ಸುಮ್ಮನಾಗುವುದು ಅಂದುಕೊಂಡ. ಹಾಗೆಂದೇ ಪತ್ರ ಬರೆದು ಅಂಚೆಗೆ ಹಾಕಿದ. ಪತ್ರ ಹೀಗಿತ್ತು:

"ಜೂನ್ ತಿಂಗಳ ಸಿಂಚನದಲ್ಲಿ ’ಸಿದ್ದಾರ್ಥ’ ಹೆಸರಿನಡಿಯಲ್ಲಿ ಬಂದ ’ಆತ್ಮಕಥೆ’ ಓದಿ ನನಗೆ ಸಾಕಷ್ಟು ಗೊಂದಲವಾಯಿತು. ಜುಲೈ ಸಂಚಿಕೆಯಲ್ಲಿ ಬಂದ ಶ್ರೀಕೃಷ್ಣಕ್ಯಾತನಹಳ್ಳಿ ಅವರ ಪತ್ರ ನೋಡಿ ಆಶ್ಚರ್ಯವೂ ಆಯಿತು. ಈ ಕಥೆಯ ಲೇಖಕರೆನ್ನಲಾದ ಸಿದ್ಧಾರ್ಥರಿಗೂ ನನಗೂ ಏನೂ ಸಂಬಂಧವಿಲ್ಲ. ಇತ್ತೀಚೆಗೆ, ಸುಮಾರು ಆರು ತಿಂಗಳುಗಳಿಂದ ನನ್ನ ಸಂಶೋಧನಾ ಥೀಸೀಸ್‍ನ ತಯಾರಿಯಲ್ಲಿ ನಾನು ನಿರತನಾಗಿರುವುದರಿಂದ ನನಗೆ ಬರೆಯಲು ಸಮಯವೇ ಆಗಿಲ್ಲ. ಈ ಕಥೆಯನ್ನು ನಾನು ಕಳುಹಿಸಿರಬಹುದೆಂದು ಶ್ರೀಕೃಷ್ಣರೊಡಗೂಡಿ ಅನೇಕರು ಭಾವಿಸಿರಬಹುದಾದ್ದರಿಂದ ಈ ಸ್ಪಷ್ಟೀಕರಣ ನೀಡಬಯಸುತ್ತೇನೆ."

ಸಿದ್ದಾರ್ಥನ ತಲೆಯಮೇಲೆ ಒಂದು ಅನಿರೀಕ್ಷಿತ ಸಿಡಿಲೆರಗಿತ್ತು. ಆ ಸಮಸ್ಯೆ ಬಗೆಹರಿಯಿತೆಂಬ ಸಮಾಧಾನ ಪಡೆವ ಆಲೋಚನೆಯಲ್ಲೇ ಆ ಪತ್ರವನ್ನು ಅಂಚೆಗೆ ಹಾಕಿದ್ದದ್ದು. ಆದರೂ ಸಿದ್ದಾರ್ಥನಿಗೆ ಯೋಚನೆಗಳು ಕಾಡುತ್ತಲೇ ಇದ್ದುವು. ಇದೇನಿದು? ಯಾರು ಹೀಗೆ ಬರೆದದ್ದು? ತನ್ನ ಹೆಸರಿಗೆ ಕಳಂಕ ತರಬೇಕೆಂದು ದುರುದ್ದೇಶಪೂರಿತವಾಗಿಯೇ ಹೀಗೆ ಮಾಡಿದ್ದಾರೆಯೇ? ಏನು ವಿಷಯ? ಹೀಗೆ ಇದೇ ಗುಂಗಿನಲ್ಲಿದ್ದ ಸಿದ್ದಾರ್ಥನಿಗೆ ಎರಡು ದಿನಗಳ ನಂತರ ’ಸಿಂಚನ’ದ ಸಂಪಾದಕರಿಂದ ಫೋನ್ ಕರೆ ಅನಿರೀಕ್ಷಿತವಾಗಿ ಬಂತು.

’ಸಿದ್ದಾರ್ಥ, ನಿಮ್ಮ ಪತ್ರ ಬಂದಿದೆ. ಕಥೆಯನ್ನು ನೀವು ಕಳಿಸಲಿಲ್ಲವಾ?’

’ಛೇ ಇಲ್ಲವಲ್ಲ. ನಾನು ಬಹಳ ಬಿಜಿಯಾಗಿದ್ದೇನೆ. ಕಥೆ ಬರೆಯೋಕ್ಕೆ ಟೈಮೇ ಇಲ್ಲ.’

’ಆದರೆ ಕಥೆಯ ಜೊತೆ ಬಂದಿರೋ ವಿಳಾಸ ಮಾತ್ರ ನಿಮ್ಮದೇ ಇದೆಯಲ್ಲಾ? ಒಮ್ಮೆ ಆಫೀಸಿನ ಕಡೆ ಬರುತ್ತೀರಾ?’

’ಏನು? ನನ್ನ ವಿಳಾಸವಾ? ಅದು ಹೇಗೆ? ಸರಿ, ತಕ್ಷಣ ಹೊರಟು ಬಂದುಬಿಡುತ್ತೇನೆ. ಇನ್ನು ಅರ್ಧ ಘಂಟೇಲಿ ಅಲ್ಲಿರುತ್ತೇನೆ.’

ಸಿದ್ದಾರ್ಥನಿಗೆ ಈಗ ಯೋಚನೆಗೀಡಾಯಿತು. ತನ್ನ ವಿಳಾಸ ಅಲ್ಲಿರಲು ಸಾಧ್ಯವೇ ಇದ್ದಿಲ್ಲ. ಇದೊಳ್ಳೇ ಫಜೀತಿಯಾಯಿತು. ಏನೂ ಮಾಡದೆಯೇ ಇರುವ ತನಗೆ ಏಕೆ ಈ ಆರೋಪದ ಕೂಪ? ಯೋಚಿಸುತ್ತಲೇ ತನ್ನ ಚೇತಕ್‍ನ ಕಿಕ್ ಒದ್ದ. ಎಷ್ಟು ಪ್ರಯತ್ನಿಸಿದರೂ ಸ್ಕೂಟರ್ ಚಾಲೂ ಆಗಲೇ ಇಲ್ಲ. ’ಥುತ್ತೇರಿ’ ಎಂದು ಗೊಣಗಿಕೊಳ್ಳುತ್ತಾ ಸಿಂಚನದ ಕಛೇರಿಗೆ ಆಟೋ ಹತ್ತಿ ಹೋದ.

ಕಛೇರಿಯ ರಿಸೆಪ್ಷನ್‍ನಲ್ಲಿ ನಿಂತಿದ್ದ ಬಾಲೆ ಒಳಕ್ಕೆ ಬಿಡಲಿಲ್ಲ. ಸಂಪಾದಕರೇ ಫೋನ್ ಮಾಡಿದ್ದಾರೆ, ಅರ್ಜೆಂಟ್ ವಿಷಯ ಎಂದು ಹೇಳಿದರೂ ಕೇಳದೇ ಅವರಿಗೆ ಫೋನ್ ಹಚ್ಚಿ ಅವರ ಪರವಾನಗಿ ಪಡೆದೇ ಕಳುಹಿಸಿಕೊಟ್ಟಳು. ’ಹೊಸಾ ಬಿಲ್ಡಿಂಗ್, ಎರಡನೇ ಮಹಡಿ’ ಎಂದು ದಾರಿ ತೋರಿಸಲು ಪ್ರಯತ್ನಿಸಿದವಳನ್ನು ಸಿದ್ದಾರ್ಥ ದುರುಗುಟ್ಟಿನೋಡಿ ’ಗೊತ್ತಮ್ಮಣ್ಣೀ, ಈ ಕಾರ್ಯಾಲಯಕ್ಕೆ ನಾನೇನೂ ಹೊಸಬನಲ್ಲ’ ಎಂದು ಕೊಂಕು ನುಡಿದೇ ಸಂಪಾದಕರ ಕೋಣೆಯತ್ತ ಧಾವಿಸಿದ.

ಸಿದ್ದಾರ್ಥ ಕಣ್ಣಗಲಿಸಿ ನೋಡಿದ. ತಾನು ಉಪಯೋಗಿಸುವ ನಸುನೀಲಿ ಬಣ್ಣದ ಮ್ಯಾನಿಫೋಲ್ಡ್ ಕಾಗದ. ಮೇಲೆ ಅಂದವಾಗಿ ರಾಯಲ್‍ಬ್ಲೂನಲ್ಲಿ ಮುದ್ರಿಸಿದ್ದ ತನ್ನ ಹೆಸರು. ಹೌದು ಇದು ತಾನು ಬಳಸುವ ಕಾಗದವೇ ಎನ್ನುವುದರಲ್ಲಿ ಸಂಶಯವಿರಲಿಲ್ಲ. ಈ ಕಾಗದವನ್ನು ತಾನು ಕಥೆಬರೆಯಲು ಮಾತ್ರ ಉಪಯೋಗಿಸುತ್ತಿದ್ದ. ಆದರೆ ಇಲ್ಲಿ ಕಥೆಯನ್ನು ಚಿತ್ತಿಲ್ಲದೇ ಟೈಪ್ ಮಾಡಲಾಗಿತ್ತು. ತಾನು ಅಂದವಾಗಿ ಕೈಯಲ್ಲಿ ಕಥೆ ಬರೆಯುವವ. ಕಥೆಯ ಅಂತ್ಯದಲ್ಲಿ ತನ್ನದೇ ವಿಳಾಸ.

ಸಂಪಾದಕರೊಂದಿಗೆ ಸಿದ್ದಾರ್ಥ ಆ ಕಥೆಯ ಬಗ್ಗೆ ಮಾತನಾಡಿದ. ಇವನು ಸಾಮಾನ್ಯವಾಗಿ ಬರೆಯುತ್ತಿದ್ದ ಕವರಿಂಗ್ ಲೆಟರ್ ಇರಲಿಲ್ಲ. ಅದು ತನ್ನದೇ ಕಥೆಯೆಂದು ಧೃಡೀಕರಿಸಲು ಯಾವ ಭಾಗದಲ್ಲೂ ಅವನ ಸಹಿ ಇರಲಿಲ್ಲ. ಗಡಿಬಿಡಿಯಲ್ಲಿ ಯಾರಿಗಾದರೂ ಹೇಳಿ ಅಂಚೆಗೆ ಹಾಕಿಸಿರಬಹುದೆಂದು ಭಾವಿಸಿ ಸಂಪಾದಕರು ಅದನ್ನು ಮುದ್ರಿಸಿದ್ದರಂತೆ. ಸಿದ್ದಾರ್ಥನಿಗೆ ಸ್ವೀಕೃತಿ ಪತ್ರ ಕಳುಹಿಸಿದ ದಾಖಲೆ ಅವರಲ್ಲಿತ್ತು. ಆದರೆ ಅದು ಸಿದ್ದಾರ್ಥನಿಗೆ ತಲುಪಿಯೇ ಇರಲಿಲ್ಲ.

ಸಿದ್ದಾರ್ಥನಿಗೆ ಏನು ಮಾಡಬೇಕೋ ತೋರಲಿಲ್ಲ. ಸಂಪಾದಕ ತರಿಸಿದ ಟೀ ಹೀರಿ ಸಿಗರೇಟು ಹಚ್ಚಿದ. ಅವನಿಗೆ ಇದು ಯಾವುದೋ ಸಂಚಿನಂತೆ ಅನ್ನಿಸಿತು. ಅವನ ಹೆಸರು ಸ್ಥಿರವಾಗಿ ಎಲ್ಲ ಕಥೆಗಳೂ ಹೆಚ್ಚೂಕಮ್ಮಿ ಸ್ವೀಕೃತವಾಗುವ ಹಂತ ತಲುಪಿದ್ದರಿಂದ ಅವನು ಈಚೆಗೆ ಸ್ವ-ವಿಳಾಸದ ಲಕೋಟೆಗಳನ್ನು ಕಳುಹಿಸುವುದನ್ನ ನಿಲ್ಲಿಸಿದ್ದ. ಈ ಕಥೆಯೊಂದಿಗೂ ಅಂಥ ಲಕೋಟೆಯಿರಲಿಲ್ಲ. ಕಥೆ ಇಟ್ಟು ಕಳುಹಿಸಿದ್ದ ಲಕೋಟೆ ಸಂಪಾದಕರ ಬಳಿ ಇರಲಿಲ್ಲ. ಅದನ್ನು ಬಂದ ತಕ್ಷಣವೇ ಅವರು ಕಸದ ಬುಟ್ಟಿಗೆ ಹಾಕಿದ್ದಿರಬಹುದು. ಅದನ್ನಿಟ್ಟುಕೊಂಡು ಮಾಡುವುದಾದರೂ ಏನಿತ್ತು? ಎಲ್ಲಾ ಎಷ್ಟೊಂದು ಗೊಂದಲಮಯ! ಸಿದ್ದಾರ್ಥ ಸಂಪಾದಕರ ಸಂಶಯಾತ್ಮಕವಾದ ಕಾಕದೃಷ್ಟಿಯಿಂದ ತಪ್ಪಿಸಿಕೊಂಡು ಮನೆಗೆ ಬಂದ. ಮಂಚದ ಮೇಲೆ ಒರಗಿ ಮತ್ತೊಂದು ಸಿಗರೇಟನ್ನು ಬೆಳಗಿಸಿದ. ಸುರಳಿಸುರಳಿಯಾಗಿ ಧೂಮ ಬಿಡುತ್ತಿದ್ದ ಸಿದ್ದಾರ್ಥನಿಗೆ ಮತ್ತೊಂದು ಆಲೋಚನೆ ಹೊಳೆಯಿತು. ತಾನು ಮಾಡಿಸಿದ್ದ ಮ್ಯಾನಿಫೋಲ್ಡ್ ಲೆಟರ್ ಪ್ಯಾಡುಗಳತ್ತ ಗಮನ ಹಾಯಿಸಿದ. ಅವನ ಲೆಕ್ಕದಂತೆ ಇರಬೇಕಾದಷ್ಟು ಸಂಖ್ಯೆಯ ಪ್ಯಾಡುಗಳು ಇದ್ದುವು.

*****

ಮಧ್ಯಾಹ್ನದ ಪೋಸ್ಟಿಗೆ ಬಂದ ’ಕೋಗಿಲೆ’ ಪತ್ರಿಕೆ ನೋಡಿದಾಗ ಅವನಿಗೆ ಮತ್ತೊಮ್ಮೆ ಭಯವಾಯಿತು. ’ಕೋಗಿಲೆ’ಗೂ ಅವನು ಕಥೆ ಕಳಿಸಿರಲಿಲ್ಲ. ಮತ್ತೆ? ಅಂಚೆಯಲ್ಲಿ ಆ ಪತ್ರಿಕೆ ಯಾಕೆ ಬಂತು? ಅವಸರದಿಂದ ಕಣ್ಣು ಹಾಯಿಸಿದ. ಆ ಪತ್ರಿಕೆಯಲ್ಲೂ ಸಿದ್ದಾರ್ಥನ ಹೆಸರಿನಲ್ಲಿ ಒಂದು ಕಥೆ ಬಂದಿತ್ತು. ಕಥೆಯ ಹೆಸರು ’ಆತ್ಮಶೋಧನೆ’. ಅವನಿಗೆ ನಿಜಕ್ಕೂ ಇದೊಂದು ಸಂಚು ಎನ್ನಿಸತೊಡಗಿತ್ತು.

ಎರಡು ತಿಂಗಳು ಕಳೆವಷ್ಟರಲ್ಲಿ ಇನ್ನೂ ಮೂರು ಪತ್ರಿಕೆಗಳಲ್ಲಿ ಇದೇ ರೀತಿ ಕಥೆಗಳು ಸಿದ್ದಾರ್ಥನ ಹೆಸರಿನಲ್ಲಿ ಬಂದಿದ್ದುವು. ’ಆತ್ಮೀಯ’ ’ಆತ್ಮಪರಿಶೀಲನೆ’ ಮತ್ತು ’ಆತ್ಮಾರ್ಪಣ’. ತಮಾಷೆಯೆಂದರೆ ಎಲ್ಲವೂ ೧೯೫೦ರಲ್ಲಿ ’ಮಂಜರಿ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ’ಗೌತಮ’ರ ಕಥೆಗಳೇ ಆಗಿದ್ದುವು.

ಓದುಗರ ಬಾಂಬಿನಂತಹ ಓಲೆಗಳು ಪತ್ರಿಕೆಗಳ ಪುಟಗಳನ್ನಾಕ್ರಮಿಸಿದುವು. ಇದೊಂದು ದೊಡ್ಡ ಸ್ಕೂಪಿನಂತೆ ಕಂಡು ಇದರ ಬಗ್ಗೆ ದೀರ್ಘ ಚರ್ಚೆಗಳು ನಡೆದುವು. ಸಿದ್ದಾರ್ಥ ಎಲ್ಲ ಪತ್ರಿಕೆಗಳ ಕಛೇರಿಗಳಿಗೂ ಹೋಗಿ ಬಂದ. ಎಲ್ಲೆಡೆಯೂ ’ಸಿಂಚನ’ದಲ್ಲಾದ ಪ್ರಸಂಗದ ಪುನರಾವರ್ತನೆಯೇ ಆಗಿತ್ತು. ಅದೇ ನೀಲಿ ಮ್ಯಾನಿಫೋಲ್ಡಿನ ಅಂದವಾಗಿ ಟೈಪಾದ ಕಥೆಗಳು, ಅದೇ ವಿಳಾಸ, ಮತ್ತು ಹೆಚ್ಚು ಕಡಿಮೆ, ಒಂದೇ ಸಮಯದಲ್ಲಿ ಕಳುಹಿಸಲ್ಪಟ್ಟವು. ಆದ್ದರಿಂದಲೇ ಒಂದೆರಡು ತಿಂಗಳುಗಳ ಅಂತರದಲ್ಲಿ ಎಲ್ಲವೂ ಪ್ರಕಟವಾಗಿಬಿಟ್ಟಿದ್ದುವು.

ಶ್ರೀಕೃಷ್ಣಕ್ಯಾತನಹಳ್ಳಿ ಈ ರಹಸ್ಯವನ್ನು ಸ್ಫೋಟಿಸಿದ ಹೀರೋ ಆಗಿಬಿಟ್ಟಿದ್ದ. ಸಿದ್ದಾರ್ಥನಿಂದ ಎಲ್ಲರೂ ಒಂದು ವಿವರಣೆಯನ್ನು ನಿರೀಕ್ಷಿಸಿದ್ದರು. ಈ ಗೊಂದಲಗಳ ನಡುವೆ ತನ್ನ ಥೀಸೀಸ್ ಕೆಲಸ ನಿಲ್ಲಿಸಬೇಕಾಗಿ ಬಂದ ಸಿದ್ದಾರ್ಥನಿಗೆ ಹೇಗೆ ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ಕೆಲ ಪತ್ರಿಕಾ ಸಂದರ್ಶಕರು ಬಂದರೂ ಈ ವಿಷಯ ಅವರೊಂದಿಗೆ ಮಾತನಾಡಲು ನಿರಾಕರಿಸಿದ ಸಿದ್ದಾರ್ಥ ಇದರ ಮೂಲವನ್ನು ಶೋಧಿಸಲು ಯತ್ನಿಸಬೇಕೆಂದು ನಿರ್ಧರಿಸಿದ.

ಮೊಟ್ಟಮೊದಲನೆಯದಾಗಿ ಶ್ರೀಕೃಷ್ಣಕ್ಯಾತನಹಳ್ಳಿಯನ್ನು ಭೇಟಿ ಮಾಡಲೆಂದು ಸಿದ್ದಾರ್ಥ ಹೊರಟ. ಶ್ರೀಕೃಷ್ಣನ ವಿಳಾಸವನ್ನು ’ಸಿಂಚನ’ದ ಸಂಪಾದಕರಿಂದ ಪಡೆದು ಹಲವಾರು ಗಲ್ಲಿ ಸುತ್ತಿ ಅವನ ಮನೆಗೆ ಹೋದಾಗ ಶ್ರೀಕೃಷ್ಣ ಇರಲಿಲ್ಲ. ಒಂದೇ ವಾರದಲ್ಲಿ ನಾಲ್ಕುಬಾರಿ ಹೋದರೂ ಶ್ರೀಕೃಷ್ಣ ಸಿಗಲಿಲ್ಲ. ಅವನು ಶ್ರೀಕೃಷ್ಣನ ಬಗ್ಗೆ ರೋಸಿಹೋಗಿದ್ದ. ಆದರೂ ಕಡೆಯ ಪ್ರಯತ್ನವೆಂಬಂತೆ ಅವನಿಗೊಂದು ಪತ್ರ ಹಾಕಿದ. ತಾನು ಇಂಥ ದಿನ ಬರುವುದಾಗಿಯೂ, ಅಂದು ಆ ಸಮಯಕ್ಕೆ ಮನೆಯಲ್ಲಿದ್ದರೆ ಉಪಕಾರವಾಗುವುದೆಂದೂ ಸಿದ್ದಾರ್ಥ ಪತ್ರದಲ್ಲಿ ಬರೆದಿದ್ದ. ಆದರೆ ಮತ್ತೆ ಐದನೆಯ ಬಾರಿಯೂ ಸಿದ್ದಾರ್ಥನಿಗೆ ನಿರಾಶೆಯೇ ಕಾದಿತ್ತು. ಅಂದೂ ಶ್ರೀಕೃಷ್ಣ ಮನೆಯಲ್ಲಿರಲಿಲ್ಲ. ಆದರೆ ಸಿದ್ದಾರ್ಥನ ಪತ್ರ ತಲುಪಿತ್ತಾದ್ದರಿಂದ ಹಳೇ ಮಂಜರಿಯ ಪ್ರತಿಗಳನ್ನು ಬೈಂಡ್ ಮಾಡಿಸಿಟ್ಟಿದ್ದ ಒಂದು ದಪ್ಪ ಪುಸ್ತಕವನ್ನು ಅವನಿಗಾಗಿ ತೆಗೆದಿರಿಸಿದ್ದ. ಸಿದ್ದಾರ್ಥ ಅವುಗಳನ್ನೊಮ್ಮೆ ತಿರುವಿಹಾಕಿದ. ೧೯೫೦ನೆಯ ಇಸವಿ ಫೆಬ್ರವರಿ ತಿಂಗಳಿನಿಂದ ಜೂನ್‍ವರೆಗೂ ಕ್ರಮವಾಗಿ ಪ್ರತೀ ತಿಂಗಳೂ ’ಗೌತಮ’ರ ಕಥೆಗಳು ’ಆತ್ಮೀಯ’ ’ಆತ್ಮಕಥೆ’ ’ಆತ್ಮಶೋಧನೆ’ ’ಆತ್ಮಪರಿಶೀಲನೆ’ ’ಆತ್ಮಾರ್ಪಣೆ’ ಈ ಕ್ರಮದಲ್ಲಿ ಪ್ರಕಟವಾಗಿದ್ದುವು. ಸೋಜಿಗದ ವಿಷಯವೆಂದರೆ ಶ್ರೀಕೃಷ್ಣಕ್ಯಾತನಹಳ್ಳಿ ಐದೂ ಕಥೆಗಳಿಗೂ ತನ್ನ ಪ್ರತಿಕ್ರಿಯೆಯನ್ನು ಸಂಪಾದಕರಿಗೆ ಪತ್ರ ಕಳಿಸುವ ಮೂಲಕ ಸೂಚಿಸಿದ್ದ. ಅಷ್ಟಲ್ಲದೇ ತನಗೆ ಅನಿವಾರ್ಯ ಕೆಲಸವಿರುವುದರಿಂದ ಹೋಗಬೇಕಾಗಿದೆಯೆಂದೂ, ಈ ವಿಷಯ ಚರ್ಚಿಸಲು ತಾನೇ ಭಾನುವಾರ ಸಿದ್ದಾರ್ಥನ ಮನೆಗೆ ಬರುವುದಾಗಿಯೂ, ಶ್ರೀಕೃಷ್ಣ ಮನೆಯಲ್ಲಿ ಹೇಳಿ ಹೋಗಿದ್ದ.

ಸಿದ್ದಾರ್ಥನ ಗೊಂದಲ ಕಡಿಮೆಯಾಗಲೇ ಇಲ್ಲ. ಇತ್ತೀಚೆಗಂತೂ ಮನಶ್ಶಾಂತಿಯೇ ಇಲ್ಲವಾಗಿದೆ. ತಾನೇನೂ ಮಾಡದೆಯೇ ಹೀಗೆ ಅನಿರೀಕ್ಷಿತವಾಗಿ ಇಂಥ ಕೂಪದಲ್ಲಿ ಸಿಲುಕಿಕೊಳ್ಳುವುದು ಯಾರಿಗಾದರೂ ಸೋಜಿಗದ ಸಂಗತಿಯೇ ಸರಿ. ಸಿದ್ದಾರ್ಥ ಭಾನುವಾರಕ್ಕಾಗಿ ಕಾಯತೊಡಗಿದ. ತನ್ನ ಅನೇಕ ಕಥೆಗಳಲ್ಲಿ ಕಾಯುವುದನ್ನು ವಿಭಿನ್ನ ಸಂಕೇತಗಳ ಮೂಲಕ ಸಿದ್ದಾರ್ಥ ಚಿತ್ರಿಸಿದ್ದುಂಟು. ಆದರೆ ಕಾಯುವ ಅನುಭವ ನಿಜಕ್ಕೂ ಇಷ್ಟು ಭೀಕರವಾಗಿರಬಹುದೆಂದು ಅವನಿಗೆ ತಿಳಿದೇ ಇರಲಿಲ್ಲ.

ಭಾನುವಾರ ಬೆಳಿಗ್ಗೆ ಹೇಳಿದ ಸಮಯಕ್ಕೆ ಸರಿಯಾಗಿ ಶ್ರೀಕೃಷ್ಣಕ್ಯಾತೇಹಳ್ಳಿ ಬಂದ. ಅಥವಾ ಆತ ಬಂದರು ಅನ್ನಬಹುದು. ಅರವತ್ತು ವಸಂತಗಲನ್ನು ಕಂಡ ಕಂಗಳಿಗೆ ಇತ್ತೀಚೆಗಷ್ಟೇ ಪೊರೆ ಬಂದು, ಶಸ್ತ್ರಚಿಕಿತ್ಸೆಯಾಗಿ, ಅವರ ಅರವತ್ತೊಂದನೆಯ ವಸಂತವನ್ನು ದಪ್ಪ ಗಾಜಿನ ಚೂರುಗಳ ಮೂಲಕ ಅವರು ನೋಡುತ್ತಿದ್ದರು. ಅಷ್ಟೇ ವಸಂತಗಳನ್ನು ಕಂಡ ಅವರ ಕಾಲಿಗೆ ಏನೂ ದಣಿವಾದಂತೆ ಕಾಣಲಿಲ್ಲ. ಯುವಕನಂತೆ ಠಾಕೊಠೀಕಾಗೆ ನಡೆದು ಬಂದ ಶ್ರೀಕೃಷ್ಣರನ್ನು ಸಿದ್ದಾರ್ಥ ಪರಿಚಯಮಾಡಿಕೊಂಡ. ಕಾಫಿಹೀರುತ್ತಾ ಅವರಿಬ್ಬರೂ ಮಾತಿಗಿಳಿದರು.

ಶ್ರೀಕೃಷ್ಣ ಹೇಳಿದ್ದಿಷ್ಟು. ಸಣ್ಣವರಿದ್ದಾಗ ಆತ ಗೌತಮರ ಕಥೆಗಳನ್ನು ಓದಿ ವಿಪರೀತ ಪ್ರಭಾವಿತರಾಗಿದ್ದರು. ಆದರೆ ಅವರು ಓದಿದ್ದದ್ದು ಗೌತಮರ ಈ ಐದು ಕಥೆಗಳನ್ನು ಮಾತ್ರ. ಸಿದ್ದಾರ್ಥನ ಕಥೆಗಳನ್ನು ಓದಿದಾಗ ಅವರಿಗೇಕೋ ಗೌತಮರೇ ಈ ಕಥೆಗಳನ್ನು ಬರೆದಂತನ್ನಿಸಿತ್ತು. ಅದೇ ಶೈಲಿ, ಅದೇ ರೀತಿಯ ಪದಪ್ರಯೋಗ, ಅದೇ ಸಂಕೇತಗಳು, ಅಂತೂ ಸಿದ್ದಾರ್ಥ ಗೌತಮರ ಪಡಿಯಚ್ಚೆನ್ನಿಸಿದ್ದ. ಆದರೆ ’ಸಿಂಚನ’ದಲ್ಲಿ ’ಆತ್ಮಕಥೆ’ ನೋಡಿದಾಗ ಅವರಿಗೆ ಸಿಡಿಲೆರಗಿದಂತಾಗಿತ್ತು. ತಕ್ಷಣವೇ ಬೈಂಡ್ ಮಾಡಿಸಿದ್ದ ಹಳೇ ’ಮಂಜರಿ’ಯ ಪ್ರತಿಯನ್ನು ತೆಗೆದು ನೋಡಿದ್ದರು. ಸಂಪೂರ್ಣ ಅದೇ. ಅದೇ ಪದಗಳು, ಅದೇ ಶೀರ್ಷಿಕೆ, ಅದೇ ಸ್ಥಳದಲ್ಲಿ ಕಾಮ, ಪೂರ್ಣವಿರಾಮಗಳು! ಅದಕ್ಕೇ ಸಿಂಚನಕ್ಕೆ ಆತ ಪತ್ರ ಬರೆಯಬೇಕೆಂದು ನಿರ್ಧರಿಸಿ ಬರೆದದ್ದು.

ಅದೇಕೋ ಸಿದ್ದಾರ್ಥನಿಗೆ ಶ್ರೀಕೃಷ್ಣನೊಂದಿಗಿನ ಭೇಟಿ ಅಷ್ಟು ಉಪಯುಕ್ತವೆನ್ನಿಸಲಿಲ್ಲ. ತಾನು ಈ ಕಥೆಗಳನ್ನು ಪತ್ರಿಕೆಗೆ ಕಳುಹಿಸಿದ ವ್ಯಕ್ತಿಯ ಹುಡುಕಾಟದಲ್ಲಿದ್ದರೆ, ಈ ಪತ್ತೆ ಕಾರ್ಯ ಎತ್ತೆತ್ತಲೋ ಹೋಗುತ್ತಿತ್ತು. ಆ ನಿರಾಶೆಯಲ್ಲಿಯೇ ಮನೆಯಲ್ಲಿ ಮಲಗಿದ್ದ ಸಿದ್ದಾರ್ಥನಿಗೆ ಆ ಕಥೆಗಳನ್ನು ಮತ್ತೊಮ್ಮೆ ಓದಬೇಕೆನ್ನಿಸಿತು. ತನಗೆ ಬಂದಿದ್ದ ಪತ್ರಿಕೆಯ ಪ್ರತಿಗಳನ್ನು ತೆಗೆದು ಎಲ್ಲವನ್ನೂ ಮತ್ತೊಮ್ಮೆ ಓದಿದ. ಅವೆಲ್ಲಾ ತನ್ನದೇ ಕಥೆಗಳು ಎನಿಸುವಷ್ಟರ ಮಟ್ಟಿಗೆ ತನ್ನನ್ನು ಅದರೊಂದಿಗೆ ಗುರುತಿಸಿಕೊಳ್ಳಬಲ್ಲವನಾಗಿದ್ದ. ಹೌದು. ಇವು ತಾನೇ ಬರೆದಿರಬೇಕಿದ್ದ ಕಥೆಗಳು. ಸಿದ್ದಾರ್ಥನಿಗೆ ಏನು ಮಾಡಲೂ ತೋರಲಿಲ್ಲ. ಒಮ್ಮೆ ಮಂಜರಿ ಪತ್ರಿಕೆಯ ಕಾರ್ಯಾಲಯಕ್ಕೆ ಹೋಗೆ ಬಂದರೆ ಹೇಗೆಂಬ ಆಲೋಚನೆ ಬಂದ ಕೂಡಲೇ ಅಲ್ಲಿಗೆ ಹೊರಡಲು ಅನುವಾದ. ಸದ್ಯದ ಪರಿಸ್ಥಿತಿಯಲ್ಲಿ ಅದೊಂದೇ ಅವನಿಗೆ ಕಂಡ ದಾರಿಯಾಗಿತ್ತು. ಹಾಗೆಂದೇ ಹೊರಟುಬಿಟ್ಟ.

’ಮಂಜರಿ’ಯ ಕಾರ್ಯಾಲಯಕ್ಕೆ ಹೋದರೂ ಅಲ್ಲಿ ಏನು ಮಾಡಬೇಕೆಂಬುದರ ಬಗ್ಗೆ ಅವನಿಗೆ ನಿರ್ದಿಷ್ಟ ಅಜೆಂಡಾ ಇರಲಿಲ್ಲ. ಅವನು ಮೂಲತಃ ಆ ನಿಗೂಢ ವ್ಯಕ್ತಿಯ ಶೋಧನೆಯಲ್ಲಿದ್ದ. ಸಂಪಾದಕರು ಬಿಡುವಾಗಿದ್ದಾರೆಂದು ಅಲ್ಲಿದ್ದವರು ಹೇಳಿದ್ದರಿಂದ ಅವರೊಂದಿಗೇ ನೇರವಾಗಿ ಮಾತನಾಡುವುದೆಂದು ಅವರ ಕೋಣೆಗೆ ಹೊಕ್ಕು ಅವರನ್ನು ಮಾತಿಗೆ ಎಳೆದ. ಸಂಪಾದಕರಿಗೆ ಈ ವಿಷಯಗಳ ಬಗ್ಗೆ ಹೆಚ್ಚೇನೂ ತಿಳಿದಿರಲಿಲ್ಲ. ಮುವ್ವತ್ತಾರು ವರುಷಗಳ ಹಿಂದಿನ ಕಡತಗಳು ಎಲ್ಲಾದರೂ ಇದ್ದಾವೆಯೇ? ಆದರೂ ಛಲಬಿಡದ ಸಿದ್ದಾರ್ಥನ ಪಟ್ಟು ನೋಡಿ ರೋಸಿ ಹೋದರೋ, ಅಥವಾ ಕನಿಕರದಿಂದಲೋ, ಸಿದ್ದಾರ್ಥನಿಗಾಗಿ ಅಲ್ಲಿ ಇಲ್ಲಿ ಎನೇನೋ ತೆಗೆದು ನೋಡಿದರು ಆತ. ಒಂದು ಲೇಖಕನ ಐದು ಕಥೆಗಳನ್ನು ಕ್ರಮವಾಗಿ ತಿಂಗಳಿಗೊಂದರಂತೆ ಪ್ರಕಟಿಸಿದ್ದು ’ಮಂಜರಿ’ಯ ಇತಿಹಾಸದಲ್ಲಿ ಒಮ್ಮೆ ಮಾತ್ರವಾಗಿತ್ತು. ಗೌತಮರ ಐದು ಕಥೆಗಳ ಮೊದಲಾಗಲೀ ನಂತರವಾಗಲೀ ಅವರು ಈ ಪತ್ರಿಕೆಗೆ ಏನೂ ಬರೆದದ್ದೇ ಇಲ್ಲ. ಹಾಗೆ ನೋಡಿದರೆ ಗೌತಮರ ಹೆಸರು ಸಹ ಯಾರಿಗೂ ನೆನಪಿಲ್ಲ. ಇತ್ತೀಚೆಗೆ ನಡೆದ ಗೊಂದಲಗಳಿಂದಾಗಿ ಅವರೂ ಎಚ್ಚೆತ್ತುಕೊಂಡಿದ್ದರು. ಸಂಪಾದಕರಿಗೆ ಈ ಗೊಂದಲಗಳ ಬಗ್ಗೆ ತಿಳಿದಿತ್ತಾದರೂ, ಅವರ ಆಸಕ್ತಿಮಾತ್ರ ಹಳೆಯ ಮಂಜರಿಗಳನ್ನು ತೆಗೆದು ಇದು ನಿಜವೆಂದು ಓದಿ ಖಾತ್ರಿ ಪಡಿಸುಕೊಳ್ಳುವಲ್ಲಿಗೆ ಮಾತ್ರ ಸೀಮಿತವಾಗಿತ್ತು.

ಸಿದ್ದಾರ್ಥನ ಒತ್ತಾಯದ ಮೇರೆಗೆ ಗೌತಮರ ವಿಳಾಸ ಹುಡುಕುವ ಕಾರ್ಯವೂ ಪ್ರಾರಂಭವಾಯಿತು. ಅದೃಷ್ಟವಶಾತ್ ಹಿಂದಿನ ಸಂಪಾದಕರು ಪ್ರತೀತಿಂಗಳೂ ಪ್ರಕಟಿಸುವ ಲೇಖನಗಳನ್ನೂ, ಕರ್ತೃಗಳ ಹೆಸರು-ವಿಳಾಸಗಳನ್ನು ಒಂದು ದಪ್ಪ ಪುಸ್ತಕದಲ್ಲಿ ಡೈರೆಕ್ಟರಿಯಂತೆ ತಯಾರಿಸಿಟ್ಟಿದ್ದರು. ’ಮಂಜರಿ’ಯ ಪ್ರಸಾರಸಂಖ್ಯೆ ಬಳೆದ ನಂತರ ಈ ಪದ್ಧತಿಯನ್ನು ಕೈಬಿಡಲಾಗಿತ್ತು. ಬಹಳ ಕಷ್ಟಪಟ್ಟನಂತರ ಬಹಳ ಪರಿಶ್ರಮದಿಂದ ಆ ಪುಸ್ತಕವನ್ನು ಹೊರಗೆಳೆದು ನೋಡಿದ್ದಾಯಿತು. ಅದರಲ್ಲಿದ್ದ ವಿಳಾಸಗಳಲ್ಲಿ ಗೌತಮರ ವಿಳಾಸವೂ ಇತ್ತು. ಸಿದ್ದಾರ್ಥನಿಗೆ ಅಂದು ಸಾಧಿಸಿದ್ದೇ ಸಾಕೆನ್ನಿಸಿ ಆ ವಿಳಾಸವನ್ನು ಹಿಡಿದು ಮನೆಗೆ ಹಿಂದಿರುಗಿದ. ಹಿಂದಿರುಗಿದ ನಂತರ ಮುಂದೇನು ಮಾಡಬೇಕೆಂದು ಅಲೋಚಿಸತೊಡಗಿದ.

****

ಅದೊಂದು ತಾಲ್ಲೂಕು ಕೇಂದ್ರವಾಗಬಲ್ಲಂತಹ ಸಣ್ಣ ನಗರ. ಸಂಪಾದಕರಿಂದ ವಿಳಾಸ ಪಡೆದು ಮನೆಗೆ ಬಂದಾಗ ಗೌತಮರ ಊರಿಗೆ ಹೋಗಿ ಅವರನ್ನು ನೋಡಿಬರಬೇಕೆಂದು ಸಿದ್ದಾರ್ಥ ನಿರ್ಧರಿಸಿದ್ದ. ಗೌತಮ ಇನ್ನೂ ಬದುಕಿರಬಹುದೇ? ೧೯೫೦ರಲ್ಲಿ ಬರೆದವರೆಂದರೆ ಬಹುಶಃ ಬದುಕಿರಲೂ ಬಹುದು. ಒಮ್ಮೆ ಸಿದ್ದಾರ್ಥನಿಗೆ ಸೋಜಿಗವೆನ್ನಿಸಿದ್ದೆಂದರೆ, ಈಗ ತಾನು ಕಂಡುಹಿಡಿಯಹೊರಟಿರುವುದಾದರೂ ಏನು ಎನ್ನುವ ವಿಚಾರ. ಕಥೆ ಕಳುಹಿಸಿದವನ ಶೋಧನೆ ಬಿಟ್ಟು ಕಥೆಗಾರನ ಶೋಧನೆ ಪ್ರಾರಂಭವಾಯಿತಲ್ಲಾ! ಆದರೂ ಅದೇಕೋ ಹೋಗಿಯೇ ಬರಬೇಕು ಅಂತ ಅವನಿಗನ್ನಿಸಿತು. ಅದರಿಂದ ಏನು ತಿಳಿಯುತ್ತದೋ ತಿಳಿಯಲಿ. ಎಲ್ಲಿ ಯಾವ ಕ್ಲೂ ಸಿಗಬಹುದೋ ಯಾರಿಗೆ ಗೊತ್ತು. ಹಾಗೆಂದು ನಿರ್ಧರಿಸಿದ ಸಿದ್ದಾರ್ಥ ಆರುನೂರು ಕಿಲೋಮೀಟರುಗಳಿಗಿಂತ ಹೆಚ್ಚು ದೂರವಿದ್ದ ಈ ಸಣ್ಣ ಊರಿಗೆ ಬಂದು ಸೇರಿದ್ದ. ಈ ಊರನ್ನು ಅವನು ಹಿಂದೆಂದೂ ನೋಡಿರಲಿಲ್ಲ. ಬಸ್ ಸ್ಟಾಂಡಿನಲ್ಲಿ ಬಸ್ ಇಳಿದಾಗ ಅಲ್ಲಿಯೇ ಬದಿಯಲ್ಲಿದ್ದ ಲಾಡ್ಜಿನಲ್ಲಿ ಕೋಣೆ ತೆಗೆದುಕೊಂಡ. ಸ್ನಾನ ಮಾಡಿ ಹೊರಬಂದನಂತರ ಒಮ್ಮೆ ಊರು ಸುತ್ತಿ ಬರೋಣವನ್ನಿಸಿತು. ರಸ್ತೆಗಿಳಿದಾಗ ಏಕೋ ಊರೆಲ್ಲಾ ಪರಿಚಿತವೆನ್ನಿಸಿ ನೇರ ಗೌತಮರ ಮನೆಗೆ ಹೋದರೆ ಹೇಗೆಂದು ಆಲೋಚಿಸಿದ. ಗೌತಮರ ವಿಳಾಸವನ್ನು ರೂಮಿನಲ್ಲಿಯೇ ಬಿಟ್ಟು ಬಂದಿದ್ದ. ಆದರೂ ಅದೇಕೋ ಅವನಿಗೆ ಮನೆಯ ವಿಳಾಸ ತಿಳಿದಂತೆ ಭಾಸವಾಗುತ್ತಿತ್ತು. ನೇರ ಆಟೋದವನ ಬಳಿ ಹೋಗಿ:

’ಕೃಷ್ಣಾ ಥೇಟರಿನ ಹತ್ತಿರ ಹೋಗಬೇಕು’ ಅಂದ.

’ನೀವು ಈ ಊರಿಗೆ ಬಹಳ ದಿನಗಳ ಮೇಲೆ ಬರುತ್ತಾ ಇದ್ದೀರಿ ಅನ್ನಿಸುತ್ತೆ. ಕೃಷ್ಣಾ ಥೇಟರು ಈಗ ಫರ್ಹೀನ್ ಆಗಿದೆ’

’ಸರಿ ಎಷ್ಟು?’

’ಹತ್ತು ರೂಪಾಯಿ ಕೊಡಿ’

’ನಾಲ್ಕು ಕಿಲೋಮೀಟರಿಗೆ ಹತ್ತು ರೂಪಾಯಿಯಾ?’

’ಈಗ ಮಹಾತ್ಮಾ ಗಾಂಧಿ ಮಾರ್ಗ ಒನ್ ವೇ ಆಗಿದೆ. ಆದ್ದರಿಂದ ನಾವು ಸುತ್ತು ಹಾಕಿಕೊಂಡು ಇಂದಿರಾ ಮಾರ್ಗದ ಮೂಲಕ ಹೋಗಬೇಕು. ಅದಕ್ಕೇ ಬೆಲೆ ಹೆಚ್ಚು.’

’ಎಂಟು ಕೊಡುತ್ತೇನೆ.’

’ಸರಿ ಹತ್ತಿ.’

ಸಿದ್ದಾರ್ಥನಿಗೆ ತಾನು ವರ್ತಿಸುತ್ತಿದ್ದ ರೀತಿ ಆಶ್ಚರ್ಯ ತಂದಿತ್ತು. ಈ ಊರಿಗೆ ಮೊಟ್ಟಮೊದಲಬಾರಿ ಬರುತ್ತಿದ್ದರೂ ಏಕೆ ಇಷ್ಟು ಪರಿಚಿತವೆನ್ನಿಸುತ್ತಿದೆ? ಹಾಗೇ ಆಲೋಚಿಸುತ್ತಾ ಪಕ್ಕದ ಗಲ್ಲಿಯಲ್ಲಿ ಅತ್ತಿತ್ತ ನೋಡುತ್ತಾ ಫರ್ಹೀನ್ ಥೇಟರಿನ ಬಳಿ ಬಂದಿಳಿದ. ಆಟೋದವನಿಗೆ ಹಣ ಕೊಟ್ಟು ಪಕ್ಕದ ಗಲ್ಲಿಯಲ್ಲಿ ನೇರ ನಡೆದು ಹೊರಟ. ರಸ್ತೆಯಂಚಿನಲ್ಲಿ ಎಡಕ್ಕೆ ತಿರುಗಿ ಅಲ್ಲಿದ್ದ ಡೊಂಕು ರಸ್ತೆಯ ಮೂಲಕ ನಡೆದು ಮೂರನೆಯ ಗೇಟು ತೆಗೆದ. ಅವನಿಗಿದೆಲ್ಲಾ ವಿಸ್ಮಯಕರವಾಗಿತ್ತು. ಏನಿದು? ಜೀವನದಲ್ಲಿ ಮೊದಲಬಾರಿಗೆ ಇತ್ತ ಬರುತ್ತಿದ್ದರೂ ಎಲ್ಲಾ ಪರಿಚಿತವಾಗುರುವಂತೆ ಅನ್ನಿಸುತ್ತಿದೆಯಲ್ಲಾ? ವಿಳಾಸ ಹೋಟೇಲಿನ ಕೋಣೆಯಲ್ಲೇ ಇತ್ತು. ಆದರೂ ಹೋಗಿ ಮನೆಯ ಬಾಗಿಲು ಬಡಿದ. ತೆರೆದಾಗ ಕಂಡದ್ದು ಐವತ್ತೈದರ ಸುಮಾರಿನ ಹೆಂಗಸು.

’ಗೋಮತಿಯ... ಗೋಮತೀದೇವಿಯವರಲ್ಲವಾ?’

ಅದೇಕೆ ವೃದ್ಧ ಹೆಂಗಸಿಗೆ ಏಕವಚನಪ್ರಯೋಗ ಯಾಕೆ ಮಾಡಿದನೋ ತಿಳಿಯದೆಯೇ ನಾಲಿಗೆಯನ್ನು ಕಚ್ಚಿಕೊಂಡ. ತನ್ನ ಪರಿಚಯ ಹೇಳಿಕೊಂಡು ಅದೇ ಗೌತಮರ ಮನೆಯೆಂದು ಖಾತ್ರಿ ಪಡಿಸಿಕೊಂಡ. ಇಲ್ಲಿಗೆ ಬಂದ ಉದ್ದೇಶ ಸಹ ತಿಳಿಸಿದ. ಒಳಗೆ ಹೋಗೆ ನಿಂಬೆ ಶರಬತ್ ತಂದ ಗೋಮತೀದೇವಿ ಆಸಕ್ತಿಯಿಂದ ಎಲ್ಲವನ್ನೂ ಕೇಳಿದರು. ಆಕೆಗೇನೋ ಇದು ವಿಚಿತ್ರ ಕಥೆ ಎನ್ನಿಸುತ್ತಿತ್ತು. ಸಿದ್ದಾರ್ಥನಿಗೂ ಇದು ಎಷ್ಟು ವಿಚಿತ್ರವೆನ್ನಿಸಿತ್ತೆಂದರೆ ಕೃತಕ ಕಟ್ಟುಕಥೆಯಂತೆ ಕಂಡುಬಂತು. ಗೌತಮನ ಬಗೆಗೆ ಸಿದ್ದಾರ್ಥ ವಿಚಾರಿಸಿದ.....

ಗೋಮತೀದೇವಿ ಗೌತಮರ ಚರಿತ್ರೆಯ ಪುಟಗಳನ್ನು ತಿರುವಿಹಾಕಿದರು. ಆದೆ ಗೌತಮರ ಹೆಂಡತಿಯಂತೆ. ’ಆತ್ಮಾರ್ಪಣ’ ಕಥೆ ಪ್ರಕಟವಾದ ಒಂದು ತಿಂಗಳಿಗೇ ಗೌತಮ ಸತ್ತಿದ್ದರೆಂದು ಆಕೆ ಹೇಳಿದರು. ಆಗ ಗೌತಮರಿಗಿನ್ನೂ ಇಪ್ಪತ್ತೆಂಟು ವರ್ಷ ವಯಸ್ಸು.

ಹೊರಗೆ ಬಹಳ ಸಂಭಾವಿತನಾಗಿ ಕಾಣುತ್ತಿದ್ದ ಗೌತಮನಿಗೆ ದುರ್ವ್ಯಸನಗಳಿದ್ದುವಂತೆ. ಅವನಿಗೆ ಇನ್ನೂಬ್ಬರ ದುಃಖದಿಂದ ಸಂತೋಷಿಸುವ ವಿಕೃತ ಭಾವವಿತ್ತು. ಗೋಮತಿಯನ್ನು ಆತ ಅನೇಕ ಬಾರಿ ದನ ಬಡಿದಂತೆ ಬಡಿಯುತ್ತಿದ್ದುದುಂಟಂತೆ. ಆದರೆ ಇವೆಲ್ಲವನ್ನೂ ಸಹಿಸಿದ ಗೋಮತೀ ದೇವಿಗೆ ಆಕೆಯೇ ಹೇಳಿದಂತೆ ಅವನ ಒಂದು ಚಾಳಿ ಮಾತ್ರ ಸಹಿಸಲಾಗಲಿಲ್ಲ. ಅನೈಸರ್ಗಿಕ ಹಾಗೂ ವಿಕೃತ ರತಿಕ್ರೀಡೆಯಲ್ಲಿ ಭಾಗವಹಿಸಲು ಆಕೆಯನ್ನು ಬಲಾತ್ಕರಿಸುತ್ತಿದ್ದದ್ದು ಮಾತ್ರೆ ಆಕೆಗೆ ಸಹ್ಯವಾಗಲೇ ಇಲ್ಲ. ಇದಲ್ಲದೇ ಎಷ್ಟೋ ಬಾರಿ ಬೇರೆ ಹುಡುಗಿಯರನ್ನೂ ಗುಪ್ತವಾಗಿ ಮನೆಗೆ ಕರೆತರುತ್ತಿದ್ದುದುಂಟು. ಇವೆಲ್ಲಾ ಆಕೆಗೆ ಸಹ್ಯವಿರಲಿಲ್ಲ. ಅತಿಕಾಮಿಯಾದ ಗೌತಮನಿಗೆ ಸಂಭೋಗಕ್ಕೆ ಸಮಯವೆಂಬುದೇ ಇರಲಿಲ್ಲ. ಹಗಲು ರಾತ್ರಿಯೆನ್ನದೇ ದಣಿವಾರಿಸಿಕೊಳ್ಳಲೂ ಬಿಡದೇ ಅವನಾಡುತ್ತಿದ್ದಾ ಆಟಗಳು ತಡೆಯಲು ಅಸಾಧ್ಯವಾದವು. ಕಡೆಗೊಂದು ದಿನ ಅವನಿಗೇ ಜೀವನದಲ್ಲಿ ವಿರಕ್ತಿ ಹುಟ್ಟಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಬಿಟ್ಟ.

ಯಾರೊಂದಿಗೂ ಹೇಳದ ಈ ರಹಸ್ಯವನ್ನು ಗೋಮತಿ ಯಾವ ಸಂಕೋಚವೂ ಇಲ್ಲದೇ ಸಿದ್ದಾರ್ಥನಿಗೆ ಹೇಳಿದ್ದು ಅವನಿಗೆ ಬಹಳ ಆಶ್ಚರ್ಯವುಂಟುಮಾಡಿತ್ತು. ಆಕೆಗೂ, ಮೂವತ್ತಾರು ವರ್ಷಗಳಕಾಲ ಒಡಲಿನಲ್ಲಿನ ಕೆಂಡದಂತೆ ಕಾಪಾಡಿಕೊಂಡಿದ್ದ ಈ ರಹಸ್ಯವನ್ನು ಇವನಿಗೆ ಹೇಳಿದ ಕಾರಣ ತಿಳಿಯದೇ ಜಿಜ್ಞಾಸೆಯಾಯಿತು. ಗೌತಮ ಸಂಭಾವಿತನಾಗಿ ಬದುಕಿದ್ದ. ಹಾಗೇ ಅದೇ ಗೌರವದೊಂದಿಗೇ ಸತ್ತಿದ್ದ. ಸತ್ತ ಮುವ್ವತ್ತಾರು ವರುಷಗಳ ನಂತರ ಅವನ ಹೆಸರಿಗೆ ಮಸಿ ಬಳಿಯುವ ಪ್ರಯತ್ನವೇಕೆ? ಅಥವಾ ಈಗ ಸತ್ಯ ಹೇಳಿದರೆ ಅವನಿಗಾದರೂ, ತನಗಾದರೂ ಏನೂ ವ್ಯತ್ಯಾಸವಾಗುವುದಿಲ್ಲ ಎಂಬ ಆಂತರಿಕ ಆಲೋಚನೆಯಿಂದ ಹೇಳಿದ್ದಿರಬಹುದೇ? ಈ ಮಥನದಲ್ಲಿ ತೊಡಗಿರುವಾಗಲೇ -

"ಬಂದೆ" ಎನ್ನುತ್ತಾ ಕೋಣೆಯೆಡೆಗೆ ಹೊರಟ ಸಿದ್ಧಾರ್ಥ.

"ಏನು?"

"ಶೌಚಕ್ಕೆ ಹೋಗಬೇಕು"

"ಓ ಶೌಚ ಈಗ ಅಲ್ಲಿಲ್ಲ. ಮನೆ ರಿಪೇರಿ ಮಾಡಿಸಿದಾಗ ಅದೇಕೋ ವಾಸ್ತು ಪ್ರಕಾರ ಅದು ಸಮರ್ಪಕ ಸ್ಥಳವಲ್ಲವೆಂದು ತಿಳಿದು ಅದನ್ನು ಕೋಣೆಯನ್ನಾಗಿಸಿ ಬದಲಾಯಿಸಿದೆ. ಈಗ ಶೌಚ ಆಚೆ ಬದಿಯಲ್ಲಿದೆ."

ಮೂತ್ರ ವಿಸರ್ಜಿಸಿಬಂದ ಸಿದ್ದಾರ್ಥ ಇದ್ದಕ್ಕಿದ್ದಂತೆ ಕೇಳಿದ:

"ನಿಮಗೆ ವಾಸ್ತು ಶಾಸ್ತ್ರದಲ್ಲಿ ಎಂದಿನಿಂದ ನಂಬಿಕೆ ಶುರುವಾಯಿತು? ಅಂದಹಾಗೆ ಗೌತಮ ಆತ್ಮಹತ್ಯೆ ನಿಜವೇ ಅಥವಾ ಅದು ಕೊಲೆಯಿರಬಹುದೇ?"

ಗೋಮತೀದೇವಿಗೆ ಒಂದು ಕ್ಷಣ ಭಯವಾದಂತೆನ್ನಿಸಿತು. ಮುಖ ಬಿಳುಚಿಕೊಂಡಿತು. ಒಂದು ಬಗೆಯ ಅಪರಾಧೀ ಭಾವ ಒಡಮೂಡಿತು.

"ಯಾಕೆ?"

"ಏನಿಲ್ಲಾ ಹೀಗೇ..ಕೊಲೆ ಇರಬಹುದೂಂತ ಅನ್ನಿಸಿತ್ತು."

"ಇಲ್ಲ ಇಲ್ಲ ಅದು ಖಂಡಿತವಾಗಿಯೂ ಆತ್ಮಹತ್ಯೆಯೇ"

ಸಿದ್ದಾರ್ಥನಿಗೆ ಮುಂದೇನು ಮಾತನಾಡಬೇಕೋ ತಿಳಿಯಲಿಲ್ಲ. ಗೌತಮನ ಕಥೆಗಳನ್ನು ತನ್ನ ಹೆಸರಿನಲ್ಲಿ ಕಳಿಸಿರಬಹುದಾದ ನಿಗೂಢ ವ್ಯಕ್ತಿಯ ಬಗೆಗೆ ಅವರು ಕೆಲವೇಳೆ ಚರ್ಚಿಸಿದರು. ಆದರೆ ಅದರಿಂದ ಹೇಳಿಕೊಳ್ಳುವಂತಹ ಪ್ರಯೋಜನವೇನೂ ಆಗಲಿಲ್ಲ. ತನ್ನ ಪ್ರಶ್ನೆಗಳಿಗೆ ಉತ್ತರವನ್ನು ಶೋಧಿಸಲು ಬಂದಿದ್ದ ಸಿದ್ದಾರ್ಥನಿಗೆ ಇನೂ ಹೆಚ್ಚಿನ ಪ್ರಶ್ನೆಗಳೆದ್ದಿದ್ದುವು. ತನಗೂ ಗೌತಮನಿಗೂ ಏನಾದರೂ ಸಂಬಂಧವಿದೆಯೇ? ಅನೈಸರ್ಗಿಕ ಸಾವನ್ನುಂಡ ಗೌತಮನ ಭೂತದ ಕಾಟವೇ? ತನಗೆ ಈ ಊರೇಕೆ ಇಷ್ಟು ಪರಿಚಿತವೆನ್ನಿಸುತ್ತಿದೆ? ಅದು ಗೌತಮನ ಛಾಯೆಯೇ?

ಹೀಗೇ ಉದ್ಭವವಾದ ಪ್ರಶ್ನೆಗಳನ್ನೆಲ್ಲಾ ಅಲ್ಲಗಳೆಯುತ್ತಾ ಬಂದರೂ, ಅದೇಕೋ ತನ್ನ ವರ್ತಮಾನಕ್ಕೊ ಗೌತಮನ ಚರಿತ್ರೆಗೂ ನಿಕಟ ಸಂಬಂಧವಿದ್ದಂತೆ ಅವನಿಗೆ ಅನ್ನಿಸಿತ್ತು. ಹೀಗೆ ಆಲೋಚಿಸುತ್ತಲೇ ಅವನು ಊರಿಗೆ ಹೊರಟ. ಒಂದು ವೈಜ್ಞಾನಿಕ ಮನೋಭೂಮಿಕೆಯಲ್ಲಿ ಬೆಳೆದಿದ್ದ ಸಿದ್ದಾರ್ಥನಿಗೆ ಯಾವುದನ್ನೂ ಒಪ್ಪಿಕೊಳ್ಳುವುದು ಕಷ್ಟವಾಗಿತ್ತು. ಆದರೂ ಎಷ್ಟು ವಿಚಿತ್ರ? ಕಾಕತಾಳೀಯತೆಯ ಮಿತಿಯೆಲ್ಲಿ? ಅಷ್ಟೆಲ್ಲಾ ವಿಕೃತಾಭ್ಯಾಸಗಳಿದ್ದು ಸತ್ತರೂ ಗೌತಮ ಜನರ ದೃಷ್ಟಿಯಲ್ಲಿ ಉತ್ತಮೋತ್ತಮನಾಗಿದ್ದ. ಚಿತ್ತಶುದ್ಧಿಯಿಂದ ಯಾವ ಅಪರಾಧೀ ಪ್ರಜ್ಞೆಯೂ ಇಲ್ಲದೇ ಬದುಕುತ್ತಿದ್ದ ತನಗೆ ಅಪಕೀರ್ತಿ, ಆರೋಪಣೆ. ಕಥೆಗಳನ್ನು ಕಳುಹಿಸಿದ ನಿಗೂಢ ವ್ಯಕ್ತಿಯ ಶೋಧದಲ್ಲಿ ತಿಳಿದದ್ದು ಏನೇನೋ ವಿಷಯಗಳು. ಒಂದಕ್ಕೊಂದು ಸಂಬಂಧವಿಲ್ಲವೆನ್ನಿಸಿದರೂ ಗಾಢ ಸಂಬಂಧವಿರುವ ವಿಷಯಗಳು.

ಮನೆಗೆ ಬಂದಾಕ್ಷಣ ಥೀಸೀಸ್ ತಕ್ಷಣ ಮುಗಿಸಬೇಕೆಂದು ಸಿದ್ದಾರ್ಥ ನಿರ್ಧರಿಸಿದ. ಕಥೆಗಳ ಬಗೆಗೆ ಆಲೋಚಿಸುವುದೂ ಬೇಡ ಎಂದುಕೊಂಡು ತಾನು ಈ ವರೆವಿಗೆ ಕಥೆಗಳನ್ನೆಲ್ಲಾ ಒಂದೊಂದಾಗಿ ಸುಟ್ಟುಹಾಕಿದ.. ನೆನೆಪುಗಳನ್ನೇ ಸುಡುವಂತೆ. ಮತ್ತೆಂದೂ ಕಥೆಗಳನ್ನು ಬರೆಯುವ ಸಾಹಸ ಮಾಡಬಾರದೆಂದು ದೃಢವಾಗಿ ನಿಶ್ಚಯಿಸಿ ಸುಡುತ್ತಿದ್ದ ಬೆಂಕಿಯಿಂದ ಒಂದು ಸಿಗರೇಟನ್ನು ಬೆಳಗಿಸಿಕೊಂಡ.

1 comment:

NANDAN PRASAD said...

Makes a good interesting read.
good story. quite different from run of the mill

jayadev