Sunday, December 27, 2009

ತ್ರಿವಿಕ್ರಮ


Something deep down bothers me.
We seem to be convinced that
it is immoral to be strong
and virtuous to be weak

Gen. K Sunderji


ಏರ್ಪೋರ್ಟಿನ ರಸ್ತಯಲ್ಲಿ ಹಗಲುಗನಸು ಕಾಣುತ್ತಾ ಹೋಗುತ್ತಿದ್ದಾಗ, ಇದ್ದಕ್ಕಿದ್ದಂತೆ ಎದುರಿನ ಕವಲುದಾರಿಯ ಆ ಬದಿಯಿಂದ ಬಂದ ಸೈಕಲ್ಲಿಗೆ ಈ ಬದಿಯಿಂದ ಬಂದ ಆಟೋರಿಕ್ಷಾವೊಂದು ಢಿಕ್ಕಿ ಹೊಡೆದು, ಸೈಕಲ್ ಕೆಳಗುರುಳಿ, ಆಟೋ ಪಲ್ಟಿಹಾಕಿದ ದೃಶ್ಯ ಕಾಣಿಸಿ, ಬಹುಶಃ ಸೈಕಲ್ಲಿನವನು ಖುಷಿಯಲ್ಲಿ ಸೀಟಿ ಹಾಕಿಕೊಂಡು ಬರುತ್ತಿದ್ದು, ಆಟೋವನ್ನು ಗಮನಿಸದೇ ಹೋಗಿರಬಹುದು, ಅಥವಾ ಸ್ಟೈಲಾಗಿ, ಕೈ ಬಿಟ್ಟು, ಸೈಕಲ್ ತಿರುಗಿಸಲು ಯತ್ನಿಸಿರಬಹುದು ಎನಿಸಿತು. ಜನರೇ ಇಲ್ಲದ ಆ ರಸ್ತಯಲ್ಲೇ ನಡೆದರೆ ಸಿಗುವ ಸ್ಮಶಾನದಷ್ಟೇ ಪ್ರಶಾಂತವಾಗಿತ್ತು ಆ ಜಾಗ.

ಸಮೀಪ ಹೋಗಿ ನೋಡಿದಾಗ, ಬಿದ್ದ ಆಟೋರಿಕ್ಷಾದಡಿ ಸೈಕಲ್ ಚಾಲಕನ ಕಾಲು ಸಿಕ್ಕಿಹಾಕಿಕೊಂಡು, ಅವನು ಮೇಲೇಳಲು ಪ್ರಯತ್ನಿಸುತ್ತಿದ್ದ. ಅವನ ಬಳಿಗೆ ನಡೆದು ನಿಂತ ಆಟೋ ಚಾಲಕನ ಮುಖವನ್ನು ನೋಡಿದ ಕೂಡಲೇ ಅದು ಬದಲಾದಂತೆನಿಸಿದ್ದು ಕೇವಲ ಭ್ರಮೆಯಿರಲಾರದು. ಆಟೋದ ಹಿಂಬದಿಯ ಸೀಟಿನಿಂದ ಇಳಿದ ಮಹಿಳೆ ತನ್ನ ಬರಿಗಾಲುಗಳನ್ನು ನೋಡಿಕೊಂಡು ಸುತ್ತಮುತ್ತಲೂ ಚಪ್ಪಲಿಗಳಿಗಾಗಿ ಶೋಧಿಸ ತೊಡಗಿದಳು. ಅಲ್ಲೆಲ್ಲೂ ಯಾರೂ ಕಂಡುಬರಲಿಲ್ಲ. ಕೆಲ ಕಾರುಗಳು ಮಾತ್ರ ವೇಗವಾಗಿ ಬಂದು, ಆ ಸ್ಥಳದಲ್ಲಿ ಸಂಪೂರ್ಣ ನಿಲ್ಲಿಸುವಷ್ಟು ವೇಗ ತಗ್ಗಿಸಿ, ನಡೆದದ್ದು ಅಪಘಾತವೆಂದು ಖಾತ್ರಿಯಾಗುತ್ತಿದ್ದ ಹಾಗೆಯೇ, ಮುಂದೆ ಹೊರಟುಬಿಡುತ್ತಿದ್ದವು. ಭಯಾನಕ ದೃಶ್ಯವೊಂದನ್ನು ನೋಡಿ ಓಡುವ ಜನರಂತೆ, ಇನ್ನೂ ವೇಗವಾಗಿ! ಹೀಗೆ ಅಂತರ್ಧಾನವಾದ ಕಾರುಗಳಲ್ಲಿ ಒಂದಾದರೂ ನಿಂತು, ಸಹಾಯಮಾಡುವ ಪ್ರಯತ್ನ ಮಾಡಬಹುದಿತ್ತು. ಆದರೆ ಯಾರೂ ನಿಲ್ಲಿಸಲಿಲ್ಲ.

ಆಟೋದ ಚಾಲಕ ಏನೂ ತೋರದೆ ಪ್ರತಿಮೆಯಾಗಿ ನಿಂತಿದ್ದ. ಹಿಂದಿನ ಸೀಟಿನಿಂದ ಎದ್ದು ಬಂದ ಹೆಣ್ಣಲ್ಲದೇ ಅಲ್ಲೊಬ್ಬ ಗಂಡೂ ಕುಳಿತಿದ್ದಾನೆಂದು ತಿಳಿದದ್ದು ಅವನು ಹೊರಬಹುವ ಪ್ರಯತ್ನ ಮಾಡಿದಾಗಲೇ. ಮೊದಲಿಗೆ ಸ್ವಲ್ಪ ಉದ್ದಕ್ಕೆ ಬಿಟ್ಟಿದ್ದ ಅರೆನೆರೆತ ಕೂದಲು, ಆಮೇಲೆ ಕೂದಲು ನೆಟ್ಟಿದ್ದ ತಲೆ, ಬೋಳು ಹಣೆ, ಚೀನೀ ಕಂಗಳಂತಹ ಸಣ್ಣ ಕಂಗಳು, ಚಪ್ಪಟೆ ಮೂಗು, ಬೆಳೆಯದ ಅಥವಾ ಬೆಳೆದೂ ಬೋಳಿಸಿದ್ದ ನುಣ್ಣನೆಯ ಮೀಸೆಯ ಭಾಗ, ಹೀಗೆ ಅಂಗುಲಂಗುಲವಾಗಿ ಆ ವ್ಯಕ್ತಿ ಹೊರಬರುವ ಪ್ರಯತ್ನ ಮಾಡುತ್ತಿದ್ದ. ಅವನು ತೊಟ್ಟದ್ದ ಅಂಗಿಯ ಬಿಳಿಯ ಕಾಲರ್-ನಿಂದ ಕೆಳಗೆ, ರೋಜಾಬಣ್ಣದ ಮುಖ್ಯ ಭಾಗ, ನಿಧಾನವಾಗಿ ಮೇಲೆದ್ದು, ಹಂಗಸಿನ, ಅದೇ ಬಣ್ಣದ ಸೀರೆಯ ನೆರಿಗೆಗಳೊಳಗೆ ಲೀನವಾಯಿತು. ತನ್ನ ಸೀರೆಯನ್ನು ಪಾದದಿಂದ ಸ್ವಲ್ಪ ಮೇಲಕ್ಕೆ ಎತ್ತಿಹಿಡಿದ ಹೆಣ್ಣು, ತನ್ನ ಚಪ್ಪಲಿಗಳ ಶೋಧ ಮುಂದುವರೆಸಿದಳು. ಕಷ್ಟದಿಂದ ಮೇಲೇಳಲು ಪ್ರಯತ್ನಿಸುತ್ತಿದ್ದ ಆ ಗಂಡಸಿಗಾಧಾರವಾಗಿ ಆಟೋ ಚಾಲಕ ಮುಂದುವರೆದ. ಅವನ ತೋಳಕೆಳಗೆ ಕೈ ತೂರಿಸಿ, ಅವನಿಗೆ ನಿಲ್ಲಲು ಸಹಾಯ ಮಾಡಿದ. ಅವನು ತನ್ನ ದೇಹದ ಭಾರವನ್ನು ಕಾಲಮೇಲೆ ಹೇರುವಷ್ಟರಲ್ಲಿ, ಆಟೋದ ಆಟೋದ ಭಾರವನ್ನೇ ಕಾಲಮೇಲೆ ಹೊತ್ತ ಸೈಕಲ್ಲಿನವ ಬೊಬ್ಬೆ ಹೊಡೆಯಲಾರಂಭಿಸಿದ.

ಎಲ್ಲರೂ ಅಪಘಾತವನ್ನು ಕಂಡಾಕ್ಷಣ ಕೋರ್ಟು ಕಛೇರಿಯ ಭಯದಿಂದ ಓಡಿಹೋಗುವವರೇ ಆದರೆ, ಈ ಜಗತ್ತಿನಲ್ಲಿ ಮಾನವೀಯತೆಗೆ ಎಡೆಯೆಲ್ಲಿ ಎಂದೆನಿಸಿದಾಗ, ಇಲ್ಲೇನಾದರೂ ಸಹಾಯ ಮಾಡಲೇಬೇಕೆನ್ನಿಸಿತು. ಪ್ರತೀ ವೈಯಕ್ತಿಕ ಸಮಸ್ಯೆಯನ್ನು ಜಗತ್ತಿನ ಸಮಸ್ಯೆಯಾಗಿ ವಿಸ್ತರಿಸಿದಾಗ ಮಾತ್ರ ಇಂಥ ಸಹಾಯ ಮಾಡಲು ಸಾಧ್ಯ. ಇದು ದೊಡ್ಡ ಸಮಸ್ಯೆಯೊಡ್ಡುವ ಅಪಘಾತವಲ್ಲವಾದ್ದರಿಂದ ಇಲ್ಲಾದರೂ ಸಹಾಯ ಮಾಡಲೇಬೇಕೆಂದೆನಿಸಿ ಮುಂದುವರೆಯುತ್ತಿದ್ದಂತೆ, ಆಟೋದ ಚಾಲಕ ತಲೆಯೆತ್ತಿನೋಡಿ ಮಾತನಾಡಲಾರಂಭಿಸಿದ:

"ಸರ್ ದಯಮಾಡಿ ಈ ವಿಷಯವನ್ನ ಪೋಲೀಸರಿಗೆ ತಿಳಿಸಿದರೆ ಉಪಕಾರವಾಗುತ್ತದೆ, ಜೊತೆಗೆ ಇವರನ್ನು ಆಸ್ಪತ್ರೆಗೆ ಸೇರಿಸಲೂ ಅನುಕೂಲವಾಗುತ್ತದೆ. "

ಆಟೋದವನ ಮಾತಿಗೆ ತಲೆಯಾಡಿಸಿ, ಜೇಬು ತಡಕಿ, ಎರಡು ಐವತ್ತು ಪೈಸೆಯ ನಾಣ್ಯಗಳನ್ನು ಹಿಡಿದು, ಟೆಲಿಫೋನ್ ಹುಡುಕಿ ಹೊರಟಾಗ, ಮಧ್ಯಾಹ್ನದ ಸೂರ್ಯ ಮೈಯೊಳಗಿನ ನೀರನ್ನೆಲ್ಲಾ ಬೆವರಿನ ರೂಪದಲ್ಲಿ ಹೀರುತ್ತಿದ್ದ.

*****

ಹೀಗೆ ವೈಯಕ್ತಿಕ ಸಮಸ್ಯೆಗೆ ಜಾಗತಿಕ ಆಯಾಮ ನೀಡಿ ಮುಂದಡಿಯಿಟ್ಟಾಗ, ಸ್ವಲ್ಪ ದೂರದಲ್ಲಿ ಒಂದು ಬೇಕರಿ ಕಾಣಿಸಿತು. ಅವನಲ್ಲಿ ಫೋನಿತ್ತಾದರೂ, ಅವನು ಫೋನ್ ಮಾಡಲು ಅನುಮತಿ ನೀಡಲಿಲ್ಲ. ಮತ್ತಷ್ಟು ದೂರದಲ್ಲಿ ಅವನು ಬೆಟ್ಟು ಮಾಡಿ ತೋರಿಸಿದೆಡೆ ಒಂದ ಔಷಧಿಯಂಗಡಿಯಾಚೆ ಫೋನಿತ್ತು. ಹೊಸದಾಗಿ ಅಲ್ಲೊಂದು ಫೋನ್ ಹಚ್ಚದ್ದಾರೆಂದು ಬೇಕರಿಯವ ಹೇಳಿದ. ಅಲ್ಲಿಗೆ ಹೋದಾಗ, ಹೋದದ್ದು ವ್ಯರ್ಥವನ್ನಿಸಿತು. ಕಾರಣ - ಪೋನಿಗೆ ಬೇಕಾಗಿದ್ದದ್ದು ಎರಡು ಎಂಟಾಣೆಗಳಲ್ಲ, ಒಂದು ರೂಪಾಯಿಯ ನಾಣ್ಯ. ಜೇಬಿನಲ್ಲಿ ತಡಕಿದರೆ, ಅಲ್ಲಿರಲಿಲ್ಲ. ಔಷಧಿಯಂಗಡಿಯಲ್ಲೂ ಬೇಕರಿಯಲ್ಲೂ, ಬೇಕರಿಯ ಪಕ್ಕದ ಪಾನ್ ಅಂಗಡಿಯಲ್ಲೂ ರೂಪಾಯಿ ನಾಣ್ಯ ಸಿಗಲಿಲ್ಲ. ಆಟೋದ ಚಾಲಕನ ಬಳಿ ನಾಣ್ಯವಿರಬಹುದೆಂದು ಮತ್ತೆ ವಾಪಸ್ ನಡೆದು ಬಂದಾಗ ಕಂಡದ್ದೇನು? ನಂಬಲು ಸಾಧ್ಯವಾಗಲಿಲ್ಲ. ಕನಸೇ? ನನಸೇ? ಯಾವುದು? ಈಗ ನಡೆಯುತ್ತಿರುವುದೇ? ಹಿಂದೆ ನೋಡಿದ್ದೇ? ಏನು?

ಆಶ್ಚರ್ಯ - ಭೀತಿ ತುಂಬಿದ ಆಶ್ಚರ್ಯ. ಹಿಂದಿರುಗುವ ವೇಳೆಗೆ ಕಂಡದ್ದು ಸಂಪೂರ್ಣ ಭಿನ್ನ ದೃಶ್ಯ. ಆಟೋದ ಸುತ್ತೂ ಜನರು ನಿಂತಿದ್ದಾರೆ. ಆಟೋದ ಗಾಜುಗಳು ಒಡೆದು ಎಲ್ಲಲ್ಲೂ ಚೂರುಚೂರು, ಚೆಲ್ಲಾಪಿಲ್ಲಿ. ಒಂದು ಗಾಜಿನ ತುಂಡು ವಿಚಿತ್ರರೀತಿಯಲ್ಲಿ ಸೈಕಲ್ಲಿನವನ ಕರುಳಿನಲ್ಲಿ ಸಿಕ್ಕಿಕೊಂಡು, ಸುತ್ತಲೂ ರಕ್ತವೋ ರಕ್ತ. ಒಂದು, ಎರಡು, ನಾಲ್ಕು, ಎಂಟು, ಹದಿನಾರೆಂದು ಜನರು ಸೇರಿ, ಜನರ ಗುಂಪು ಬೆಳೆಯುತ್ತಾ ದೊಡ್ಡದಾಗುತ್ತಿದ್ದಂತೆ ಅದೇ ಸಂಖ್ಯೆಯಲ್ಲಿ ಶವದ ಮೇಲೆ ನೊಣಗಳೂ ಧಾಳಿ ಮಾಡಿದುವು. ಗುಂಪು ಬೆಳೆದು ಬೆಳೆದು ಆ ದೃಶ್ಯದ ಮೇಲೆ ಧಾಳಿಮಾಡಿ, ರಸ್ತೆಯ ಸಂಚಾರಕ್ಕೆ ತಡೆಯೊಡ್ಡಿದಾಗ, ಕುತೂಹಲ ತಾಳಲಾಗದ ಜನರೂ ತಮ್ಮ ವಾಹನಗಳಿಂದ ಇಳಿದುಬರತೊಡಗಿದರು. ಮೈಯೊಳಗಾವರಿಸಿದ ಒಂದು ವಿಚಿತ್ರ ಭಾವನೆಗೆ ಪೋಷಕವಾಗಿ, ಏನೂ ತಿಳಿಯದ ಜನರ ಮಾತುಗಳು ಗೊಬ್ಬರವಾಗತೊಡಗಿದವು. ಏನೂ ನೋಡದ ಜನರು ದೃಶ್ಯವನ್ನು ಕಣ್ಣಾರೆ ಕಂಡಂತೆ ವರ್ಣಿಸಿ ಅಪಘಾತವನ್ನು ಪುನರ್ಸೃಷ್ಟಿಸುತ್ತಿದ್ದ ರೀತಿ ನೋಡಿದಾಗ ಹಿಂದೆ ಕಂಡದ್ದು ಕನಸಿರಬಹುದೇ ಎಂಬ ಅನುಮಾನವೂ ಬಂದದ್ದುಂಟು. ಅಲ್ಲಿ ಚಕ್ರವ್ಯೂಹ ರಚಿಸಿದ್ದ ಜನರ ಗುಂಪಿನೊಳಕ್ಕೆ ಜಾಗ ಮಾಡಿಕೊಂಡು, ನಿಧಾನವಾಗಿ ಆ ಜನಸಮೂಹವನ್ನು ಭೇದಿಸುತ್ತಾ ಶವದ ಬಳಿ ಹೋಗುತ್ತಿದ್ದಾಗ, ಹೊಸ ಜನರಿಂದ ಹೊಸ ಸುದ್ದಿ, ಸುದ್ದಿಯಿಂದ ವಿವರ, ವಿವರಗಳಿಂದ ಹೊಸ ಆಯಾಮಗಳನ್ನು ಪಡೆದ ಈ ಅಪಘಾತ, ಯಾರೊಬ್ಬರ ವೈಯಕ್ತಿಕ ಸಮಸ್ಯೆಯಾಗೂ ಉಳಿದಿರಲಿಲ್ಲ! ಆನಂತರ ಸಂದರ್ಭದ ಅನಿವಾರ್ಯತೆಯಿಂದ ಬಂದ ಪೋಲೀಸರು, ಆಟೋದ ಚಾಲಕನನ್ನು ಬಂಧಿಸಿದರು. ಅವರು ಮಹಜರ್ ನಡೆಸಿ, ಅಲ್ಲಿ ದಾರಿ ಖಾಲಿಯಾಗಲು ನಿಂತಿದ್ದ ಎಲ್ಲ ವಾಹನಗಳಿಗೆ ಬೇರೆ ಮಾರ್ಗ ತೋರಿಸಿಕೊಡುವ ವೇಳೆಗೆ ಪ್ರತ್ಯಕ್ಷ ಸಾಕ್ಷಿಗಳ ಒಂದು ದೊಡ್ಡ ಗುಂಪೇ ಸನ್ನದ್ಧವಾಗಿ ನಿಂತಿತ್ತು. ಗುಂಪಿನ ಜನರಿಗೂ ಶವಕ್ಕೂ ದೂರವನ್ನಳೆಯುವಂತೆ, ಹುರಿಹಗ್ಗದೋಪಾದಿಯಲ್ಲಿ ಅವನ ಕರುಳ ಬಳ್ಳಿ ರಸ್ತೆಯ ಮೇಲೆ ಅಂಕುಡೊಂಕಾಗಿ ಹಬ್ಬಿಕೊಂಡಿತ್ತು. ಕಂಡದ್ದನ್ನು ಕಂಡಂತೆ ಹೇಳಲೆತ್ನಿಸಿದ ಬಾಯನ್ನು ಕಟ್ಟಿದ್ದೇನು? ಬೀಟ್ ರೂಟ್ ಕೋಸಂಬರಿಯಂತೆ ಹೊರಗೆ ಬಂದಿದ್ದ ಸೈಕಲ್ಲಿನವನ ಮಾಂಸದ ಮೇಲೆ, ಮುಸುರಿದ್ದ ನೊಣಗಳೋ, ಅಥವಾ ತನ್ನ ಆಯಾಮಗಳನ್ನು ವಿಸ್ತರಿಸಿಕೊಳ್ಳುತ್ತಿದ್ದ ಈ ಸುದ್ದಿಯ ಭಯಾನಕತೆಯೋ? ಮುಂದೆ, ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಇದೇ ರೀತಿ ಸತ್ತುಬಿದ್ದ ಬೀದಿನಾಯಿಗಳನ್ನು ಕಂಡಾಗಲೂ, ಆ ದೃಶ್ಯವೂ ಇದೇ ಆಯಾಮದ ಭೀಕರತೆ ಪಡೆಯಲಿತ್ತು. ಪೂರ್ವನಿರ್ಧಾರಿತ ನಾಟಕವೆಂಬಂತೆ, ನಡೆಯುತ್ತಿದ್ದ ಈ ಆಟದ ಸೂತ್ರವೆಲ್ಲಿ? ಸೂತ್ರಧಾರಿಯೆಲ್ಲಿ? "ನಾಟಕದಲ್ಲಿ ನಿರ್ದೇಶಕನೇ ದೇವರು, ಆದರೆ ದುರಂತವೆಂದರೆ ಪಾತ್ರಧಾರಿಗಳೆಲ್ಲಾ ನಾಸ್ತಿಕ"ರೆಂದು ಜಾರ್ಕೋ ಪೆಟಾನ್ ಹೇಳಿದ್ದ ಸೂತ್ರ ಇಲ್ಲಿ ವರ್ತಿಸದಿರುವುದಕ್ಕೆ ನಿರ್ದೇಶಕ ಆಗೋಚರವಾಗಿರುವುದೇ ಕಾರಣವಿರಬಹುದೇ? ಪ್ರಶ್ನೆಗಳು ಪ್ರಶ್ನೆಗಳು ಪ್ರಶ್ನೆಗಳು... ಉತ್ತರವೆಲ್ಲಿ? ಉತ್ತರವಿಲ್ಲ. ಆಟೋದಲ್ಲಿದ್ದ ಆ ಹೆಂಗಸೂ ಇಲ್ಲ. ನಿಧಾನವಾಗಿ ಉದ್ಭವವಾದ ಆ ಗಂಡಸೂ ಇಲ್ಲ. ಚಪ್ಪಲಿಗಳೂ ಇಲ್ಲ.

****

ಹೊಟ್ಟೆಯಲ್ಲಿ ತಳಮಳವಾಗಿ, ಉಚ್ಚೆ ಹುಯ್ಯಬೇಕೆಂದೆನ್ನಿಸಿ, ಸುತ್ತ ಕಣ್ಣಾಡಿಸಿದರೆ ಎಲ್ಲೂ ಏಕಾಂತದ ಜಾಗವಿಲ್ಲ. ಇದನ್ನೆಲ್ಲಾ ಯಾರೊಂದಿಗಾದರೂ ತೋಡಿಕೊಳ್ಳಬೇಕೆಂದೆನ್ನಿಸಿದರೂ, ಆ ಜನಜಂಗುಳಿಯ ನಡುವೆ ಒಂದಾದರೂ ಪರಿಚಿತ ಆತ್ಮೀಯ ಮುಖಭಾವ ಕಾಣಿಸದೇ, ಒಂಟಿತನದ ಬೊಂಬಾಯಿ ಭಾವ ಉಂಟಾಯಿತು. ಪೋಲೀಸರಿಗೆ ಹೇಳಬಹುದು, ಆದರೆ ಇಷ್ಟು ಜನ ಪ್ರತ್ಯಕ್ಷ ಸಾಕ್ಷಿಗಳು ತಯಾರಾಗಿ ನಿಂತಿರುವಾಗ, ಅಲ್ಪ ಸಂಖ್ಯಾತನಾಗುವುದು ಸಹಜವೆನ್ನಿಸಿ, ಯಾರೂ ನಂಬಲಾರರೆಂಬ ನಂಬಿಕೆ ಬಲವಾಗಿ ಮನದಲ್ಲಿ ಬೇರೂರಿತು. ಸುತ್ತ ನೋಡಿದರೆ ಎಲ್ಲ ಮುಖಗಳೂ ಏನಾದರೊಂದು ಹೇಳಲು ಕಾತರವಾಗಿ ಕಾಯುತ್ತಿದ್ದಂತೆ ಅನಿಸುತ್ತಿತ್ತೇ ಹೊರತು, ಕೇಳುವ ತಾಳ್ಮೆಯಿದ್ದಂತಹ ಒಂದೂ ಮುಖ ಕಾಣಲಿಲ್ಲ. ಪೋಲೀಸರ ಖಾಕಿ ನೋಡಿದಾಗೆಲ್ಲಾ ನಡೆದಾಡುವ ಕಂಬಗಳ ನೆನಪಾಗುತ್ತಿತ್ತು. ಕೇಳುವ ಕಿವಿಗಳಂತಿರಲಿ, ಹೇಳಿದವರ ಮೇಲೆಯೇ ಈ ಕಂಬಗಳು ಯಾವ ಕ್ಷಣದಲ್ಲಾದರೂ ವಾಲಿಬಿಡಬಹುದಿತ್ತು. ಯಾಕೆ ಎಲ್ಲರೂ ಜಡ್ಡುಗಟ್ಟಿದ್ದಾರೆನ್ನಿಸುತ್ತದೆ. ಮೊನ್ನೆ ವಾರ್ತಾ ಪತ್ರಿಕೆಯಲ್ಲಿ ಹೊಸ ಡಿ.ಐ.ಜಿಯೊಬ್ಬರ ಬಗ್ಗೆ ಬಂದ ಸುದ್ದಿ ನೆನಪಾಯಿತು. ಮಹಾಜನತೆಯ ಅಹವಾಲುಗಳನ್ನು ಅವರು ಶಾಂತಿಯಿಂದ ಕೇಳುತ್ತಿದ್ದಾರೆಂಬ ವಿಷಯ ದೊಡ್ಡ ಸುದ್ದಿಯಾದಾಗ, ಮಿಕ್ಕವರೇನು ಮಾಡುತ್ತಿದ್ದಾರೆಂಬುದು ಯಾರಿಗೂ ಊಹಿಸಲು ಸುಲಭ. ಸುದ್ದಿ ಸುಮ್ಮನೆ ಹಬ್ಬುವುದಿಲ್ಲ. ಕಥೆಗಳಲ್ಲಿಯೇ ಅನೇಕ ವಾಸ್ತವದ ಅಂಶಗಳಿರುವಾಗ, ಸುದ್ದಿ - ಅದು ಗಾಳಿಗುದ್ದಿ ಬಂದ ಸುದ್ದಿಯೇ ಆಗಿರಲಿ, ಅಲ್ಲಿ ವಾಸ್ತವಾಂಶ ಇರುವುದಿಲ್ಲವೇ? ಸೀದಾ ಪೊಲೀಸ್ ಮುಖ್ಯಾಲಯಕ್ಕೆ ಹೋಗಿ ಡಿ.ಐ.ಜಿಯವರನ್ನು ನೋಡಿ ಕಂಡದ್ದನ್ನು ಕಂಡಂತೆ ಹೇಳಬೇಕೆನ್ನಿಸಿದಾಗ, ಆಟೋ ಹತ್ತಲು ಮನಸ್ಸಾಗಲಿಲ್ಲ. ಭೌತಿಕವಾಗಿ ಕಣ್ಣನ್ನು ಆವರಿಸುವ, ಮಾನಸಿಕವಾಗಿ ಆಲೋಚನೆಗಳನ್ನೇ ನುಂಗಿಬಿಡುವಂತಹ, ಆಟೋದ ಕಾರಣವಾಗಿ ಘಟಿಸಿದ ಈ ಭೀಕರ ದೃಶ್ಯ ಎದುರಿಗಿರುವಾಗ ಆಟೋ ಹತ್ತುವುದು ಹೇಗೆ? ಮನಸ್ಸಿಗೆ ಧೈರ್ಯವಾಗಲಿಲ್ಲ. ನಿಧಾನವಾಗಿ ಹೆಜ್ಜೆ ಎಳೆದಾಗ, ಒಂದು ಆಟೋವನ್ನೇ ಎಳೆದೊಯ್ಯುತ್ತಿರುವಷ್ಟು ಪ್ರಯಾಸದ ಭಾವನೆಯಿಂದ ಮುಂದೆ ಸಾಗಿದಾಗ, ಮರೀಚಿಕೆಯಂತೆ ಕಂಡ ದೂರದ ಬಸ್ ಸ್ಟಾಪ್ ಸ್ವಲ್ಪ ಆಸೆ ಹುಟ್ಟಿಸಿತು. ಆಟೋದಲ್ಲಾದರೆ ಒಂಟಿತನವೂ ಇರುತ್ತದೆ. ಇಲ್ಲಾದರೆ ಹಲವು ಜನರಿರಬಹುದೆಂದು ಯೋಚಿಸುತ್ತಿದ್ದಂತೆ ಬಸ್ ನಿಧಾನವಾಗಿ ಬಂದಿತು. ಅಲ್ಲೂ ಯಾವುದೇ ಪರಿಚಿತ ಮುಖ ಕಾಣಲಿಲ್ಲ.

ಹೆಡ್-ಕ್ವಾರ್ಟರ್ಸ್ ನಲ್ಲಿ ಡಿ.ಐ.ಜಿ ಆರನೆಯ ಮಹಡಿಯಲ್ಲಿ ಕುಳಿತುಕೊಳ್ಳುತ್ತಾರೆಂದು ತಿಳಿಯಿತು. ಲಿಫ್ಟ್ ಕೆಳಬರುವುದು ತಡವಾದಾಗ ಆ ಚಡಪಡಿಕೆಯಲ್ಲಿ ಆರೂ ಮಹಡಿಗಳನ್ನು ಮೆಟ್ಟಲ ಮೂಲಕವೇ ಹತ್ತುವ ಆಲೋಚನೆ ಬಂದಿತಾದರೂ, ಬಳಲಿದ ದೇಹ, ಇನ್ನೂ ಹೆಚ್ಚಾಗಿ ಬಳಲಿದ ಮನಸ್ಸು ಒಪ್ಪಲಿಲ್ಲ. ನಿಧಾನವಾಗಿ ತಾಳ್ಮೆ ತಂದುಕೊಳ್ಳುತ್ತಿದ್ದಂತೆ, ಅಷ್ಟೇ ನಿಧಾನವಾಗಿ ಲಿಫ್ಟಿನ ಬಾಗಿಲೂ ತೆರೆಯಿತು.

ಒಳಹೊಕ್ಕು ನಿಂತಾಗ ಕಂಡದ್ದೆಲ್ಲಾ ಪೋಲೀಸ್ ಮುಖಗಳೇ. ನೀಟಾಗಿ ಕತ್ತರಿಸಿದ ಕೂದಲಿನ, ದೈತ್ಯ ದೇಹದ ಸಮವಸ್ತ್ರಧಾರಿಗಳೂ, ಮಫ್ತಿಗಳೂ ಸುತ್ತಲೂ ಆವರಿಸಿ ನಿಂತದ್ದು ನೋಡಿದರೆ ಕುಬ್ಜತೆಯ ಭಾವನೆ, ಆ ಜೋಡಿಕಂಗಳ ತೀಕ್ಷ್ಣ ಪರೀಕ್ಷಾತ್ಮಕ ದೃಷ್ಟಿಯಲ್ಲಿ ತಾನೇ ಅಪರಾಧಿಯೆಂಬ ಭಾವನೆ ಯಾರಿಗಾದರೂ ಉಂಟಾದರೆ, ಅದು ತೀರಾ ಸಹಜವಿತ್ತು. ಲಿಫ್ಟು ಆರನೆಯ ಮಹಡಿಗೇರುತ್ತಿದೆಯೋ, ಅಂತರಿಕ್ಷಕ್ಕೋ ಎಂಬ ಅನುಮಾನ ಬರುವಷ್ಟು ನಿಧಾನವಾಗಿ ಚಲಿಸುತ್ತಿತ್ತು. ಆ ಸಮಯದಲ್ಲೊಮ್ಮೆ ಎವರೆಸ್ಟ್ ಶಿಖರವನ್ನೇ ಹತ್ತಿ ಇಳಿಯಬಹುದಿತ್ತೇನೋ. ಕಡೆಗೊಮ್ಮೆ ಲಿಫ್ಟಿನ ಬಾಗಿಲು ತೆರೆದಾಗ, ಉಸಿರುಗಟ್ಟಿದ್ದ ವಾತಾವರಣಕ್ಕೆ ಆಮ್ಲಜನಕದ ಮಹಾಪೂರ ಬಂದಂತಾಗಿ, ದೀರ್ಘ ಉಸಿರೆಳೆದುಕೊಂಡರೂ, ತತ್ತರಿಸುವಂತಾಯಿತು. ಚೇತರಿಸಿಕೊಂಡು ಹೊರಗಡಿಯಿಡುವಷ್ಟರಲ್ಲಿ ಲಿಫ್ಟ್ ತಾನೇತಾನಾಗಿ ಮುಚ್ಚಿಕೊಳ್ಳಲು ಪ್ರಾರಂಭವಾಗಿ, ಇದ್ದಕ್ಕಿದ್ದಂತೆ ಆಲೋಚನೆಗಳಿಂದ ಎಚ್ಚರಗೊಂಡಾಗ, ಒಂದು ವಿಚಿತ್ರ ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳುವುದರಿಂದ ತಪ್ಪಿಸಿಕೊಂಡ ಹಾಗಾಯಿತು.

ಡಿ.ಐ.ಜಿಯವರ ಕೋಣೆಯ ಹೊರಗೆ ಕಪ್ಪು ಹಿನ್ನೆಲೆಯಲ್ಲಿ, ಬಂಗಾರದಕ್ಷರಗಳಲ್ಲಿ ಬರೆದಿದ್ದ ಹೆಸರೇ ಆಪ್ಯಾಯಮಾನವಾಗಿದೆಯೆನಿಸಿ, ಕಾರ್ಯದರ್ಶಿಯ ಬಳಿ ಚೇಟಿಕೊಟ್ಟು, ಒಳಹೋಗಲು ಪರವಾನಗಿ ದೊರೆತು, ಬಾಗಿಲು ತೆರೆದು ಒಳಗಡಿಯಿಟ್ಟಾಗ, ಹವಾನಿಯಂತ್ರಣ ಯಂತ್ರದ ಲಘು ಶಬ್ದವೂ ಸಂಗೀತದ ಸ್ವರಗಳಂತೆ ಕೇಳಿಸಿದ್ದು ನಿಜ. ಮೆತ್ತನೆಯ ಪ್ರತಿಭಟನೆಯ ಸ್ವರ ಅದರಿಂದ ಹೊಮ್ಮಿದರೂ, ವಿಶೇಷ ಲಘುತ್ವದ ಭಾವನೆ ಮುದ ನೀಡಿತು. ನೆತ್ತಿಯ ಮೇಲಿದ್ದ ಎಷ್ಟೋ ಆತಂಕದ ಭಾವನೆಯನ್ನು ಮೆತ್ತೆಯ ಮೇಲೆ ಇಳಿಸಿದಂತಾಯಿತು.

ಡಿ.ಐ.ಜಿ, ಪಕ್ಕದ ಕುರ್ಚಿಯಲ್ಲಿ ಕುಳಿತಿದ್ದ ನಡುವಯಸ್ಕನ ಅಹವಾಲನ್ನು ತಾಳ್ಮೆಯಿಂದ ಕೇಳುತ್ತಿದ್ದರು. ಇಬ್ಬರಲ್ಲಿ ಪರಿಚಿತರು ಯಾರು, ಆತ್ಮೀಯರು ಯಾರು ಎಂಬ ಪ್ರಶ್ನೆ ಉದ್ಭವಿಸಿದಾಗ ಕಂಡದ್ದು ಹ್ಯಾಂಗರಿಗೆ ನೇತುಹಾಕಿದ್ದ ಡಿ.ಐ.ಜಿಯವರ ಸಮವಸ್ತ್ರ. ಪೋಲೀಸರು ಸಮವಸ್ತ್ರ ಕಳಚಿದಾಗ ಆತ್ಮೀಯರಂತೆ ಕಾಣುತ್ತಾರೆಂದು ತಿಳಿದಾಗ, ಪರಿಚಿತ ಭಾವನೆಯೇನೂ ಉಂಟಾಗಲಿಲ್ಲ. ಆದರೆ ಪಕ್ಕದ ನಡುವಯಸ್ಕ ಪರಿಚಿತನಂತೆ ಕಂಡ. ಆತ್ಮೀಯನಂತೆ ಅಲ್ಲ. ನಡುವಯಸ್ಕ ತನ್ನ ಅಹವಾಲನ್ನು ಮುಂದುವರೆಸುತ್ತಿದ್ದಂತೆ, ದೃಷ್ಟಿಯೂ ಮುಂದುವರೆದು ಕೋಣೆಯ ಸುತ್ತ ಅಡ್ಡಾಡಿತು. ಆದರೆ ದೃಷ್ಟಿ ಮತ್ತೆ ನಡುವಯಸ್ಕನತ್ತ ಕೇಂದ್ರೀಕೃತವಾಗುತ್ತಿದ್ದ ಹಾಗೆ ಅವನಾಡುತ್ತದ್ದ ಮಾತುಗಳ ಬಗೆಗೂ ಗಮನ ಹರಿಯಿತು. ನೆರೆತ ಚಿಗುರುಗೂದಲ ತಲೆ, ಅಲ್ಲಂದ ಕಾಲರಿಲ್ಲದ ಕುರ್ತಾ, ನಡುಗುವ ಕೈಗಳು, ಅಲ್ಲಿ ನಡುಗುವ ಕೈಬರಹದಲ್ಲಿ ಬರೆದ ಅರ್ಜಿ, ಹೀಗೆ ದೃಷ್ಟಿ ಕೆಳಕೆಳಗೆ ಹೋಗುತ್ತಿದ್ದಂತೆ, ಕಂಡದ್ದು, ಪಕೃತಿದತ್ತ ಕಾಲಿನಂತೆಯೇ ಕಾಣುತ್ತಿದ್ದ ಮರದ ಪಾದ. ದೃಷ್ಟಿ ಪಾದದ ಮೇಲಿದ್ದಾಗ ಕೇಳಿಸಿದ ಅವನ ಮಾತುಗಳು ಹೊಸ ಅರ್ಥ ಸ್ಫುರಿಸಿದಂದಾಯಿತು - "ಹಣ ಖರ್ಚಾದರೂ ಪರವಾಗಿಲ್ಲ ಸ್ವಾಮಿ, ಜೀವ ಉಳಿದರೆ ಸಾಕಾಗಿದೆ" ಎಂದು ಆ ವ್ಯಕ್ತಿ ಹೇಳುತ್ತಿದ್ದಂತೆ, ತುಂಬಿ ಬಂದ ಕಣ್ಗಳು ಯಾರವು? ಈಗವನ ವೈಯಕ್ತಿಕ ಸಮಸ್ಯೆಯೂ ಒಂದ ಜಾಗತಿಕ ರೂಪ ತಾಳಲಿದ್ದು, ಈ ಪ್ರಪಂಚದಲ್ಲಿ ಎಲ್ಲೆಲ್ಲೂ ಅನ್ಯಾಯ, ಅರಾಜಕತೆ ತುಂಬಿದೆಯೆನ್ನಿಸಿ, ಜಗತ್ತಿನ ಭವಿಷ್ಯದ ಬಗ್ಗೆ ತೀವ್ರ ಭೀತಿಯುಂಟಾಗಿ ಬೆವರು ಹರಿದಾಗ, ಅದನ್ನು ಹೀರುವ ಉತ್ಸಾಹಿ ಸೂರ್ಯನನ್ನೂ, ಹವಾನಿಯಂತ್ರಣ ಹೊರಗೇ ಬಂಧಿಸಿಟ್ಟಿದ್ದರಿಂದ, ಜೇಬಿನೊಳಗಿನ ರುಮಾಲನ್ನು ತೆಗೆದು ಒರೆಸಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಯಿತು.

******

ನಡುವಯಸ್ಕನ ಅಹವಾಲು ಕೇಳಿದ ಡಿ.ಐ.ಜಿ, ಏನಾದರೂ ಬಂದೋಬಸ್ತು ಮಾಡುವ ಆಶ್ವಾಸನೆ ನೀಡಿದರು. ಕುಂಟುತ್ತಾ ಆತ ಹೊರನಡೆಯುತ್ತಿದ್ದಂತೆ, ಕಾಫಿ ಕುಡಿದು ಹೋಗಲು ಡಿ.ಐ.ಜಿ ಅವನನ್ನು ತಡೆದರು. ನಂತರ ಇತ್ತ ಹಾಯ್ದ ಡಿ.ಐ.ಜಿಯ ತವಕದ ನೋಟಕ್ಕೆ ಉತ್ತರವೆಂಬಂತೆ, ಅಂದಿನ ಘಟನೆಯ ಸಂಪೂರ್ಣ ವರದಿ ಬಾಯಿಂದ ಹೊರಬಿತ್ತು. ಎಲ್ಲ ಹೇಳಿದ ನಂತರವೂ ಡಿ.ಐ.ಜಿಯವರ ಕಿರುನಗೆ, ಬದಲಾಗದ ಮುಖಚಹರೆ, 'ಇಂಥ ಕಥೆಗಳನ್ನು ಗಂಟೆಗೆರಡು ಕೇಳುತ್ತೇನೆ.' ಎಂಬಂತಹ ನೋಟ ಮಾಸದೇ, ಅದೇ ನೋಟ ಮುಂದುವರೆದು ಭೇದಿಸಿನೋಡುವಂತಹ ಸೀಳುನೋಟವಾಗಿ ಪರಿವರ್ತನೆಗೊಂಡಾಗ, ಅದನ್ನೆದುರಿಸಲಾಗದೇ ಸೂರು ದಿಟ್ಟಿಸಬೇಕಾಯಿತು. ಸೂರಿನಿಂದಲೂ ಗೋಡೆಗಳಿಂದಲೂ, ಡಿ.ಐ.ಜಿಯ ಮುಖದಿಂದಲೂ ಒಂದೇ ರೀತಿಯ ಭಾವನೆಗಳು: ಮುಂದೇನು? ಇಷ್ಟನ್ನು ತಾನೇ ಹೇಳಿದ್ದು ಯಾಕೆ? ನೋಡಿದ್ದಾಯಿತು. ಸುಮ್ಮನೆ ಮನೆಗೆ ಹೋಗಿದ್ದರಾಗುತ್ತಿತ್ತು. ಜಗತ್ತಿನ ಅನ್ಯಾಯಗಳಿಗೆ ಆತ್ಮಸಾಕ್ಷಿಯಾಗಿ ನಿಲ್ಲುವ ಅಧಿಕಾರವನ್ನು ಕೊಟ್ಟವರು ಯಾರು? ಯಾಕೆ ಈ ಪ್ರಯತ್ನ? ಅವರ ಭಾವನೆಗಳಿಗೆ ಉತ್ತರ ದೊರೆಯದೇ ತಡಕಾಡಿ, ಜೇಬಿನಿಂದ ಮತ್ತೊಮ್ಮೆ ರುಮಾಲು ತೆಗೆದು, ಮುಖ ಒರೆಸಿಕೊಳ್ಳುವಷ್ಟರಲ್ಲಿ, ಕಾಫಿ ಮುಗಿದಿತ್ತೆಂಬುದು ಗಮನಕ್ಕೇ ಬಂದಿರಲಿಲ್ಲ. ಗಮನ ಸೆಳೆವ ಕೆಲಸವನ್ನೂ ಡಿ.ಐ.ಜಿಯೇ ಮಾಡಬೇಕಾಯಿತು.

ಡಿಐಜಿಯವರ ಕೋಣೆಯಿಂದ ಹೊರಬಂದಾಗ ಒಂದು ಥರದ ನಿರಾಳ ಭಾವ ಇದ್ದದ್ದು ಕಾಫಿ ಕುಡಿದದ್ದರಿಂದಲೋ, ಡಿಐಜಿಗೆ ಎಲ್ಲವನ್ನೂ ತಿಳಿಸಿದ್ದರಿಂದಲೋ ತಿಳಿಯದೇ, ಮತ್ತೆ ಅಪಘಾತ ನಡೆದ ಸ್ಥಳಕ್ಕೆ ಹೋಗುವ ಯೋಚನೆ ಮಾಡವಷ್ಟು ಧೈರ್ಯವೂ ಬಂದುಬಿಟ್ಟಿತ್ತು. ಇಷ್ಟೆಲ್ಲಾ ಘಟಿಸುವ ವೇಳೆಗೆ ಸೂರ್ಯ ತನ್ನ ತಾಪಕ್ಕೆ ತಾನೇ ರೋಸಿ ಅರಬ್ಬೀ ಸಮುದ್ರದಲ್ಲಿ ಮುಳುಗುಹಾಕಿದ್ದ. ಹೆಜ್ಜೆ ಮುಂದಿರಿಸುತ್ತ ನಡೆದಾಗ ಹಿಂದಿನಿಂದ ಏನೋ ಶಬ್ದವಾದಂತಾಗಿ ಸ್ವಲ್ಪ ಭಯವಾಯಿತು. ಯಾರಾದರೂ ಹಿಂಬಾಲಿಸುತ್ತಿದ್ದಾರೆಯೇ? ತಿರುತಿರುಗಿ ನೋಡಿಕೊಂಡು, ಕತ್ತುನೋವು ತರಿಸಿಕೊಂಡರೂ ಮುಂದೆ ಸಾಗಿದಾಗ ಒಂದು ಸಿಗರೇಟ್ ಸೇದಬೇಕೆನ್ನಿಸಿತು. ಹಾಗೆಂದೇ ಒಂದು ಅಂಗಡಿಯ ಮುಂದೆ ನಿಂತಾಗ, ಬಂದ ಹೆಜ್ಜೆಯ ಸಪ್ಪಳ, ಹಿಂದಿಯ ಭೀತಿಗೆ ಕಾರಣವಿಲ್ಲದಿಲ್ಲ ಎಂಬುದನ್ನು ನಿರೂಪಿಸಿಬಿಟ್ಟಿತು. ಲಟಕ್, ಲಟಕ್ ಎಂದು ಶಬ್ದಮಾಡುತ್ತಾ ನಡೆದು ಬಂದವನು ಕುಂಟ ನಡುವಯಸ್ಕ:

"ಈವತ್ತಿನ ಆಕ್ಸಿಡೆಂಟು ಭಯಾನಕವಾಗಿತ್ತಲ್ಲ? ಅದು ನಡೆದಾಗ ನಾನೂ ಅಲ್ಲೇ ಇದ್ದೆ, ನಿಮ್ಮನ್ನ ನೋಡಿದೆ"

ಅನಿರೀಕ್ಷಿತವಾಗಿ ಮಾತನಾಡಿದ ಅವನನ್ನು ಕಂಡು ಭಯವಾದರೂ, ಜೀವಕ್ಕೆ ಹೆದರಿ ಡಿಐಜಿಗೆ ಅಹವಾಲು ಕೊಡುತ್ತಿದ್ದುದು, ಆ ಮುಖದ ದೈನ್ಯತೆ, ಆತ್ಮೀಯವಲ್ಲದಿದ್ದರೂ, ಪರಿಚಿತವೆನ್ನಿಸಿದ ಈ ಮೂರ್ತಿಯನ್ನು ನೋಡಿದಾಗ ಎಲ್ಲವನ್ನೂ ಅವನಲ್ಲಿ ತೋಡಿಕೊಳ್ಳಬೇಕೆಂದೆನ್ನಿಸಿ, ಪ್ರಾರಂಭಿಸಿದ್ದಕ್ಕೆ:

"ನಿಮಗೆ ಯಾಕೆ ಇಲ್ಲದ ಉಸಾಬರಿ? ಸುಮ್ಮನೆ ನಿಮ್ಮಷ್ಟಕ್ಕೆ ನೀವು ಹೋಗಬಹುದಿತ್ತಪ್ಪ. ಜೀವ ಹೋಗುವಂಥದ್ದೇನೂ ಆಗಲಿಲ್ಲವಲ್ಲಾ ಅಲ್ಲಿ?" ಎಂದು ಹೆದರಿಸುವ ಧ್ವನಿಯಲ್ಲ ಹೇಳಿದ.

ನಿಜ. ಯಾಕೆ ಇಲ್ಲದ ಉಸಾಬರಿ? ಲೋಕಕ್ಕೆ ಆತ್ಮಸಾಕ್ಷಿಯೇ ಬೇಡವೆಂಬ ಪರಿಸ್ಥಿತಿ ಉದ್ಭವವಾಗಿರುವಾಗ ಆ ಭೂಮಿಕೆಯನ್ನು ಮೈಮೇಲೆ ಕೊಡವಿಕೊಳ್ಳುವುದರಲ್ಲಿ ಯಾವ ಅರ್ಥವೂ ಇಲ್ಲ. ಮುಂದೆ ನಡೆಯುತ್ತಿದ್ದಂತೆ, ಆ ನಡುವಯಸ್ಕನೂ ಜೊತೆಜೊತೆಗೆ ಕುಂಟಿದ. ಅವನಿಂದ ತಪ್ಪಿಸಿಕೊಳ್ಳಬೇಕೆನಿಸಿ, ಯೋಚಿಸುತ್ತಾ ಅವನತ್ತ ನೋಡಿದಾಗ, ಅವನ ಮುಖ ಪರಿಚಿತ ಎನ್ನಿಸಿದ್ದ ಏಕೆಂಬುದರೆ ಎಳೆ ಸಿಕ್ಕಂತಾಯಿತು: ಉದ್ದನೆಯ ಅರೆನೆರೆತ ಕೂದಲು ಸಣ್ಣದಾಗಿ ಕತ್ತರಿಸಿದ್ದರೂ, ಆ ಕೂದಲು ನೆಟ್ಟ ತಲೆ, ಬೋಳು ಹಣೆ, ಚೀನಿ ಕಂಗಳಂತಹ ಸಣ್ಣ ಕಂಗಳು, ಚಪ್ಪಟೆ ಮೂಗು, ಬೆಳೆಯದ, ಅಥವಾ ಬೆಳೆದೂ ಬೋಳಿಸಿದ ನುಣ್ಣನೆಯ ಮೀಸೆಯ ಭಾಗ, ಹೀಗ ಅಂಗುಲಂಗುಲವಾಗಿ ಗಮನಿಸುತ್ತಿದ್ದಂತೆ, ಅವನ್ಯಾರೆಂಬ ಅನುಮಾನ ಉಳಿಯಲಿಲ್ಲ. ಆದರೆ ಅವನೂ ಅಲ್ಲ ಉಳಿಯಲಿಲ್ಲ. ತಪ್ಪಿಸಿಕೊಳ್ಳುವ ಅವಶ್ಯಕತೆ, ಅವನಿಗೇ ಇನ್ನೂ ಹೆಚ್ಚಾಗಿತ್ತು ಎನ್ನಿಸಿತು. ಆದರೂ ಅವನು ಡಿಐಜಿಯ ಬಳಿ ಬಂದದ್ದು ಏಕೆ? ಅವನಿಗೂ ಜೀವಾಪಾಯವೇ ಎಂಬ ಪ್ರಶ್ನೆಗಳೆಲ್ಲಾ ಪ್ರಶ್ನೆಗಳಾಗಿಯೇ ಉಳಿದುವು. ಮಾಯಾನಗರಿಯ ಜನಜಂಗುಳಿಯಲ್ಲಿ ಯಾರಿಗೂ ತಿಳಿಯದಂತೆ ಕರಗಿಹೋಗುವ ಕಲೆಯನ್ನು ಕರಗತಮಾಡಿಕೊಂಡಿದ್ದವನನ್ನು ಹೆಕ್ಕಿ ತೆಗೆಯುವುದು ಕಷ್ಟವಾಗಿತ್ತು. ವಿಷಯ ಮೂರನೆಯ ಆಯಾಮವನ್ನೂ ಪಡೆಯುತ್ತಿರುವಾಗ, ಅಪಘಾತದ ಸ್ಥಳಕ್ಕೆ ಮತ್ತೊಮ್ಮೆ ಕತ್ತಲಲ್ಲಿ ಹೋಗುವುದು ಅಪಾಯದಿಂದ ಕೂಡಿದ ಕೆಲಸವೆಂದಂನ್ನಿಸಿ, ಮನೆಯತ್ತ ಹೆಜ್ಜೆ ಹಾಕಿದರೂ, ರಸ್ತೆಯ ಒಂಟಿತನ ಮನೆಯಲ್ಲೇನೂ ಪರಿಹಾರವಾಗುವುದಿಲ್ಲ, ಎಂದೂ ತಿಳಿದಿತ್ತಾದ್ದರಿಂದ, ಅಷ್ಟೇನೂ ಉತ್ಸಾಹ ತೋರದೇ ಮನೆಗೆ ನಡೆದು ಹೋದದ್ದಾಯಿತು. ನಂಬಿಕೆಗಳನ್ನು ಕಳೆದುಕೊಳ್ಳುತ್ತಿರುವ ಸಮಯದಲ್ಲಿ, ನಂಬುವುದು ಯಾರನ್ನು? ಆತ್ಮೀಯವಾಗಿ ಕಂಡುಬಂದ ಮುಖಚಹರೆಯೂ ಅದರಡಿಯಲ್ಲಿರಿಸಿಕೊಂಡಿರುವ ಗುಟ್ಟುಗಳನ್ನು ಬಿಟ್ಟುಕೊಡದೇ ಕಾಡುವ ಈ ಕಾಲದಲ್ಲಿ, ಡಿಐಜಿತಾನೇ ನಂಬಲರ್ಹ ವ್ಯಕ್ತಿಯೇ? ಇವನ್ಯಾವ ಗಿಡದ ತೊಪ್ಪಲು?

*****

ರಸ್ತೆಯಲ್ಲಿರುವ ಮುಖಗಳೆಲ್ಲಾ ತಲೆಯೊಡೆಯಲು ಸಿದ್ಧವಾಗಿವೆ ಎಂಬ ಅಪನಂಬಿಕೆ ಹೊತ್ತು ಮನೆಗೆ ಬಂದಾಗ ಭೀತಿ ಇಳಿದಿರಲಿಲ್ಲ. ಡಿಐಜಿಯವರನ್ನು ನೋಡಿದ ನಂತರ, ಅವರ ಕೋಣೆ ಹೊಕ್ಕು ಬಂದ ವ್ಯಕ್ತಿಯಿಂದಾಗಿಯೇ ಘಟಿಸಿದ ಈ ಘಟನೆಯನ್ನು ನೆನಪಿಸಿಕೊಳ್ಳಲೂ ಭಯವಾಗುತ್ತಿತ್ತು. ಯಾವುದು ವಾಸ್ತವ? ಪತ್ರಿಕೆಯ ವರದಿಯೇ? ಅಥವಾ ಈಗ ಕಂಡದ್ದೇ? ಅಥವಾ ಎರಡೂ ಸುಳ್ಳೇ? ಏನು ಮಾಡಬೇಕು? ಎಲ್ಲೋ ಅಗೋಚರ ಸುಳಿಯೊಂದರಲ್ಲಿ ಸಿಕ್ಕಿ, ಕೈಗೇನೂ ಸಿಕ್ಕದಿದ್ದಾಗ ಖಾಕಿ ಬಣ್ಣದ ಹುಲ್ಲುಕಡ್ಡಿಯನ್ನೇ ಹಿಡಿದು ಭಾರ ಹೇರಬೇಕಾಯಿತು. ಮಿಕ್ಕಂತೆ ಸಂತಾಪದ ಮಾತು ಕೇಳುವುದನ್ನು ಬಿಟ್ಟರೆ ಬೇರೇನೂ ಆಗಲಾರದು. ಹಾಗಾದರೆ ಈಗ ನಡೆದದ್ದನ್ನು ಡಿಐಜಿಗೆ ವರದಿಯೊಪ್ಪಿಸುವುದೇ? ತನಗೇ ರಕ್ಷಣೆ ಬೇಕೆಂದು ದೈನ್ಯದಿಂದ ಬೇಡಿಕೊಂಡ ವ್ಯಕ್ತಿಯಿಂದ ಪ್ರಾಣಾಪಾಯವಿದೆ ಎಂಬುದು ಒಂದು ಕಡೆ. ಸಂಜೆಯ ಅಪಘಾತದಲ್ಲಿ ಅನಂತ ಪ್ರತ್ಯಕ್ಷ ಸಾಕ್ಷಿಗಳು ಕೊಟ್ಟಿರುವ ಸಾಕ್ಷ್ಯ ಒಂದು ಕಡೆ. ಈ ನಡುವಿನ ಸತ್ಯದ ಮುಳ್ಳು ವಾಲುವುದೆತ್ತ? ಚುಚ್ಚುವುದ್ಯಾರನ್ನು? ಅದನ್ನು ಉದ್ಧರಿಸುವವರು ಯಾರು? ಡಿಐಜಿಯವರ ಪ್ರತಿಕ್ರಿಯೆ ಈ ಹಿನ್ನೆಲೆಯಲ್ಲಿ ಹೇಗಿದ್ದೀತು?:

"ಅಲ್ರೀ, ನಾನು ತಾನೇ ಯಾರನ್ನ ನಂಬೋದು? ಆ ಮನುಷ್ಯ ತನ್ನ ಜೀವಕ್ಕೇ ಅಪಾಯ ಅನ್ನುತ್ತಾನೆ. ಇಲ್ಲಿ ನೋಡಿದರೆ ಅವನಿಂದಲೇ ಅಪಾಯಾಂತ ದೂರು. ಹೀಗೆ ಹೆದರಿ ಬಂದ ಪ್ರತಿ ವ್ಯಕ್ತಿಗೂ ಪೋಲೀಸ್ ರಕ್ಷಣೆ ಬೇರೆ ಬೇಕು. ನಾವು ಎಲ್ಲರಿಗೂ ರಕ್ಷಣೆ ಕೊಡುತ್ತಾ ಹೋದರೆ ಅರ್ಧ ಜನಸಂಖ್ಯೆ ಪೋಲೀಸರಾಗಿ, ಮಕ್ಕರ್ಧ ಜನರಿಗೆ ಭದ್ರತೆ ಕೊಡಬೇಕಾಗುತ್ತದೆ. ಮೇಲಾಗಿ ಪೋಲೀಸರೂ ಮನುಷ್ಯರಲ್ಲವೇ? ಅವರಿಗೂ ಭದ್ರತೆ ಬೇಕಾಗುತ್ತದೆ... ಇದಕ್ಕೆ ಕೊನೆಯೆಲ್ಲಿ? ಸ್ವಲ್ಪ ಧೈರ್ಯ ತಂದುಕೊಂಡು ನಮಗೆ ತನಿಖೆ ನಡೆಸೊಕ್ಕೆ ಅವಕಾಶ ಕೊಡಬಹುದಲ್ಲಾ."

ಅದೂ ನಿಜವೇ. ಸತ್ತವನ ದೇಹದ ಪೋಸ್ಟ್ ಮಾರ್ಟೆಂ ವರದಿ ಇನ್ನೂ ಬರಬೇಕು. ಫೊರೆನ್ಸಿಕ ಲ್ಯಾಬ್ ಗೆ ಕಳಿಸಿದ ಗಾಜಿನ ಚೂರುಗಳ ವರದಿಯೂ ಬರುವ ತನಕ, ಹೇಳಿದ್ದನ್ನು ನಂಬುವುದಕ್ಕೆ ಆಧಾರವೇ ಇಲ್ಲವಾಗುತ್ತದೆ. ಬಂಧಿಸಿದ ಆಟೋದವನಿಗೆ ಥರ್ಡ್ ಡಿಗ್ರಿ ಕೊಟ್ಟು ಬಾಯಿಬಿಡಿಸಬಹುದು, ಇಲ್ಲವೇ ಯಾರಾದರೂ ಅವನನ್ನು ಜಾಮೀನಿನ ಮೇಲೆ, ಅಥವಾ ವಕೀಲರ ಸಹಾಯದಿಂದ ಬಿಡಿಸಿಕೊಂಡು ಹೋದರೆ?! ಇನ್ಶಾ ಅಲ್ಲಾ ಹಾಗಾಗದಿರಲಿ!!

ಅಂದು ಸಂಜೆ ದೂರದರ್ಶನ ವಾರ್ತೆಯಲ್ಲೂ ಈ ಅಪಘಾತ ಪ್ರಮುಖ ಸ್ಥಾನ ಪಡೆದಿತ್ತು. ಜೊತೆಗೆ ಇನ್ನೆಲ್ಲೋ ನಡೆದ ಒಂದು ಕೊಲೆಯ ವಿಷಯವೂ. ಅಲ್ಲೂ ಯಾರೋ ಆಟೋ ನಿಲ್ಲಿಸಿ, ಒಳಗಿದ್ದ ಸಂಚಾರಿಯನ್ನು ಹೊರಗೆಳೆದು ಮಚ್ಚಿನಿಂದ ಕೊಚ್ಚಿಹಾಕಿದ್ದರಂತೆ. ಕೇಳುತ್ತಿದ್ದಂತೆ ಮೈ ಉರಿದು ಬೆವರಿತು. ಬೆವರುತ್ತಲೇ ನಡುಕವೂ ಹತ್ತಿಕೊಂಡಿತು. ಅಂಥಹ ಶೆಕೆ, ಅದರಲ್ಲಿ ನಡುಕ. ಹಿಂದೆಂದೂ ಹೀಗಾಗಿರಲಿಲ್ಲ. ಹಾಗೇ ಕುಳಿತಿದ್ದಾಗ, ದಿನವೂ ಪತ್ರಿಕೆಗಳಲ್ಲಿ ಈ ವಾರ್ತೆಗಳನ್ನು ಒಂದೇ ಏಕತಾನತೆಯಿಂದ ಓದುವುದೂ, ದೂರದರ್ಶನದಲ್ಲಿ ನೋಡುವುದೂ ನೆನಪಾಗಿ, ಆ ಎಲ್ಲ ವಾರ್ತೆಗಳಿಗೂ ಈಗ ಹೊಸ ಅರ್ಥವ್ಯಾಪ್ತಿಯೊಂದು ಹಬ್ಬಿ, ಜಾಗತಿಕ ಸಮಸ್ಯೆಯೊಂದು ತೀರ ಹತ್ತಿರ ಬಂದು, ಆತ್ಮೀಯವಾಗಿ ಮಾತನಾಡಿಸಿದ ವೈಯಕ್ತಿಕ ಸಮಸ್ಯೆ ಆಗಿಹೋಯಿತು.

ಆ ರಾತ್ರೆ ಅದ್ಭುತವಾದ ನಿದ್ದೆಯೂ ಬಂದಾಗ, ಭಗವಂತನಿಗೆ ಈ ವರದಾನಕ್ಕಾಗಿ ಕೃತಜ್ಞತೆ ಹೇಳಬೇಕೆನ್ನಿಸಿತು. ಬಳಲಿದ ಮನಕ್ಕೆ ತಂಪಾದ ನಿದ್ರೆಗಿಂತ ಬೇಕಾದ್ದು ಬೇರೇನು? ಅಂದಿನ ಸೂರ್ಯೋದಯ ಎಂದಿನಂತಿರಲಿಲ್ಲ. ಹೊಸ ಉತ್ಸಾಹ ಹೊಸ ಹುರುಪು ಮೈಗೂಡಿತ್ತು. ಪುಕ್ಕಲರಾಗಿ ಜೀವನ ಕಳೆಯುವುದೆಷ್ಟುದಿನ? ಎಲ್ಲೋ ಒಂದೆಡೆ ಭಂಡ ಧೈರ್ಯ ತಂದುಕೊಳ್ಳದಿದ್ದರೆ ತರಕಾರಿಯ ಹಾಗೆ ಸಿಕ್ಕಸಿಕ್ಕ ಚಾಕುಗಳಿಂದ ಕೊಚ್ಚಿಸಿಕೊಂಡು ಉಸಿರುಬಿಡಬೇಕಾಗುತ್ತದೆ. ಎಲ್ಲೋ ಒಂದೆಡೆ ಎಲ್ಲ ಹಂಗನ್ನೂ ತೊರೆಯಬೇಕೆಂದು ನಿರ್ಧರಿಸಿದಾಗಲೇ ಡಿಐಜಿಯವರ ಫೋನು ಬಂದಿತು.

"ನಿನ್ನೆ ಸಿಕ್ಕ ನಿಮ್ಮ ಟಿಪ್ ಆಫ್ ನಿಂದ ಅನುಕೂಲವಾಯಿತು. ಫೊರೆನ್ಸಿಕ್ ವರದಿ ಬಂದಿದೆ. ಆಟೋ ಚಾಲಕನ ಕೈಬೆರಳುಗಳು ಸ್ಪಷ್ಟವಾಗಿವೆ. ಪೋಸ್ಟ್ ಮಾರ್ಟೆಂ ಕೂಡಾ. ಇದು ಕೊಲೆ ಎಂಬುದಕ್ಕೆ ಆಧಾರ ಒದಗಿಸೋ ಹಾಗೆಯೇ ಇದೆ. ನಿನ್ನೆ ರಾತ್ರಿ ಆ ಕುಂಟನನ್ನೂ ಬಂಧಿಸಿದ್ದೇವೆ. ಆಟೋ ಚಾಲಕ ಅವನನ್ನೂ ಐಡೆಂಟಿಫೈ ಮಾಡಿದ್ದಾನೆ. ಥ್ಯಾಂಕ್ಸ್"

ಜಗತ್ತನ್ನೇ ಉದ್ಧರಿಸಿದ ಭಾವನೆ ಉಂಟಾಗುವುದು ಸಹಜವಿತ್ತು. ಆದರೆ ಖುಶಿಗಳು ನಿರಂತರವಾಗಿ ಇರುವುದಾದರೆ, ಜೀವನ ಬರಡು, ಎಂಬುದನ್ನು ನಿರೂಪಿಸಲೆಂಬಂತೆ, ಮತ್ತೊಂದು ಫೋನ್ ಕರೆ ಬಂತು. ಈ ಬಾರಿ ಬಂದದ್ದು ನಮ್ರತೆಯ ವಿಧೇಯತೆಯ ಧ್ವನಿ. "ನೀವು ನಿನ್ನೆ ಡಿಐಜಿಯವರ ಜೊತೆ ಮಾತಾಡಿದ್ದು ನಮಗೆ ಗೊತ್ತಾಗಿದೆ. ನಮ್ಮ ಖಾಸಗೀ ವಿಷಯಕ್ಕೆ ತಲೆ ಹಾಕುವುದು ನಿಮಗೇ ಒಳ್ಳೆಯದಲ್ಲ".

ಉತ್ತರವಾಗಿ ಒಂದು ವಾದವನ್ನು ಮಂಡಿಸಿದ್ದಕ್ಕೆ, ಮತ್ತೆ ತಾಳ್ಮೆಯಿಂದ, ಸಣ್ಣ ಮಕ್ಕಳಿಗೆ ವಿವರಿಸುವಂತೆ ನಿಧಾನ ದನಿಯಿಂದ ಅವನು ಮನಸ್ಸಿಗೆ ನಾಟುವಂತೆ ಹೇಳಿದ. ಸಿನೇಮಾದಲ್ಲಿ ತೋರುವ ಖಳನಿಗೂ, ರಮಿಸುವ ದನಿಯ ಇವನಿಗೂ ತುಂಬಾ ವ್ಯತ್ಯಾಸವಿದೆಯೆನಿಸಿತು. ಪ್ರೀತಿಯಿಂದ ಲಲ್ಲೆಗರೆದು, ಮಕ್ಕಳಿಗೆ ಅನ್ನ ತಿನ್ನಿಸುವ ತಾಯಿಯ ಧ್ವನಿಯಲ್ಲಿ ಹೇಳಿದಾಗ, ಅವನ ಬಗ್ಗೆ ಒಂದು ಪ್ರೀತಿಯೂ, ಗೌರವವೂ, ಹುಟ್ಟಿಕೊಂಡಿತು. ಅದೇ ಕ್ಷಣಕ್ಕೆ ಅಲ್ಲಿನ ಗಾಂಭೀರ್ಯ ಭೀತಿಯನ್ನೂ ಹುಟ್ಟಿಸಿತು. ಈಗ ಮಾಡಿರೋ ತಪ್ಪಿಗೆ ಶಿಕ್ಷೆಯನ್ನಂತೂ ಅನುಭವಿಸುವುದು ಕಾವ್ಯನ್ಯಾಯವಾದರೂ, ಮುಂದೆ ಆಗಬಹುದಾದ ಅನಾಹುತ ತಪ್ಪಿಸಲು ಹೀಗೆ ರಮಿಸುತ್ತಿರುವುದಾಗಿ ಆತ ಹೇಳಿದ. ಹೀಗೆ ಬಂದ ಕರೆಗೆ ಪ್ರತಿಕ್ರಿಯೆ ಏನು? ಹೇಗಿದ್ದರೂ ಕೈ ಮುರಿದೋ, ಕಾಲು ಮುರಿದೋ, ತಲೆಯೊಡೆದೋ ಸೇಡು ತೀರಿಸಿಕೊಳ್ಳಲು ತಯಾರಿರುವ ಈ ಜನರಿಗೆ ಹೆದರಿ ಸುಮ್ಮನಾದರೂ ಅಪಾಯ. ಏನಾದರೂ ಮಾಡಿದರೂ ಅಪಾಯ. ಪ್ರಿಯ ಸ್ನೇಹಿತರಾದ ಡಿಐಜಿಗೆ ಹೇಳಿ ರಕ್ಷಣೆ ಪಡೆಯಬಾರದೇಕೆ? ಅಥವಾ ಮುಂದಾಗಬಹುದಾದ ಅನಾಹುತಕ್ಕೆ ಮೊದಲೇ ವೈಯಕ್ತಿಕ ನೆಲೆಯಲ್ಲಿ ಒಂದೆರಡು ತಯಾರಿಗಳನ್ನು ಮಾಡಿಟ್ಟಿದ್ದರೆ?

*******

ಮತ್ತೆ ಡಿಐಜಿಯವರ ಕಾರ್ಯಾಲಯದತ್ತ ಹೆಜ್ಜೆ ಹಾಕುತ್ತಿದ್ದಂತೆ, ಒಂಟಿತನದ ತೀವ್ರ ಭಾವನೆ ಕಾಡಿತು. ಈಗ ಈ ದುಗುಡಗಳನ್ನು, ದ್ವಂದ್ವಗಳನ್ನು ಆತ್ಮೀಯವಾಗಿ ತೋಡಿಕೊಳ್ಳಲು ಯಾರೂ ಇಲ್ಲವಲ್ಲಾ ಎನ್ನಿಸಿತು. ಡಿಐಜಿಯವರ ಬಳಿ ತೋಡಿಕೊಳ್ಳುವುದೂ ಅಪಾಯ, ಅವರು ತಾನೇ ಎಷ್ಟರ ಮಟ್ಟಿಗಿನ ಅಂತಃಕರಣದಿಂದ ನೋಡಿಯಾರು? ಹೀಗೆ ಈಚೆಗೆ ಗೆಳೆಯನೊಬ್ಬ "ಶಾದಿ ಕರ್ಲೋ, ಜಿಂದಗೀಮೇ ಸಹಾರಾ ಚಾಹಿಯೇ" ಎಂದು ಹೇಳಿದ್ದಕ್ಕೆ "ಸಹಾರಾ, ಜಗತ್ತಿನ ಅತ್ಯಂತ ದೊಡ್ಡ ಮರುಭೂಮಿ, ಗೊತ್ತುಂಟೋ" ಎಂದು ಮಾತು ಹಾರಿಸಿದ್ದುಂಟು. ಆ ಮಿತ್ರ "ಗೊತ್ತಿಲ್ಲ" ಎಂದು ಉತ್ತರಿಸಿದ್ದೂ ಉಂಟು.

ಈಗ ಈ ದ್ವಂದ್ವಗಳ ಬೆನ್ನೇರಿ ಹೋಗುವಾಗ ಬಾಳ ಸಂಗಾತಿಯೊಬ್ಬಳಿದ್ದಿದ್ದರೆ ..... ಒಮ್ಮೆ ಯಾರನ್ನಾದರೂ, ಇಂಥ ಸಂದರ್ಭದ ಸ್ವಾರ್ಥಕ್ಕಾಗಿ ಲವ್ ಮಾಡಿದ್ದರೆ.... ಎಂಬೆಲ್ಲಾ ಆಲೋಚನೆಗಳು ಅಡ್ಡಾದಿಡ್ಡಿಯಾಗಿ ಹರಿದಾಡಿ, ಹಾಗೇನಾದರೂ ಆಗಿದ್ದರೆ, ಅವಳೂ ಈ ಅಪಾಯದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿರಲಿಲ್ಲವೇ ಎಂದೂ ಅನ್ನಿಸಿದಾಗ, ಎದುರಿಗೆ ನಿಂತದ್ದು ಹಿಂದಿನ ಬೃಹದಾಕಾರದ ಪ್ರಶ್ನೆಯೇ - "ಸಹಾರಾ ಯಾವುದು? ಜೊತೆಯೋ, ಮರುಭೂಮಿಯೋ?"

ತಲೆಯಲ್ಲಿ ಯುದ್ಧ ನಡೆಸಿ ಹುಚ್ಚನಾದಾಗ ಅದಕ್ಕೆ ಕಾರಣ ಕೇವಲ ಭೀತಿ ಎಂಬುದು ಆಗ ತಿಳಿದಿರಲಿಲ್ಲ. ಡಿಐಜಿಯ ಕಾರ್ಯಾಲಯದತ್ತ ಹೆಜ್ಜೆ ಹಾಕುವಾಗ, ಸುತ್ತಲಿನ ಜಗತ್ತು ಪೂರ್ತ ಅನುಮಾನದಿಂದ ಕೋಪದಿಂದ ದಿಟ್ಟಿಸುತ್ತರುವಂತನ್ನಿಸಿತು. ಜೊತೆಗೆ ಮತ್ತೊಂದು ಅನುಮಾನವೂ - ಅನುಮಾನ ಯಾರಿಗೆ ಜಗತ್ತಿಗೋ... ಅಥವಾ ದ್ವಂದ್ವಗಳನ್ನು ಹೊತ್ತು ನಡೆಯುತ್ತಿರುವವನಿಗೋ. ಬಸ್ ಹತ್ತುವಾಗ ಕಂಡಕ್ಟರ್ ಕೂಡಾ ಕೊಲ್ಲುವಂತೆ ನೋಡಿದ. ಬದಿಗೆ ನಿಂತಿದ್ದ ವ್ಯಕ್ತಿ ಕೇಳಿದ ಪ್ರಶ್ನೆಗಳೂ ಹಾಗೇ ಇದ್ದುವು. "ಎಲ್ಲಿಗೆ?" "ಯಾಕೆ?" ಇತ್ಯಾದಿ. ಇವನೂ ಆ ಗುಂಪಿಗೇ ಸೇರಿದವನೇ? ಕಾರಣ "ನಿಮಗ್ಯಾಕೆ ಇಲ್ಲದ ಉಸಾಬರಿ" ಎಂಬ ಉಪದೇಶದ ಮಾತುಗಳನ್ನೂ ಹೇಳಿದ.

ಡಿಐಜಿಯ ಕಾರ್ಯಾಲಯದಲ್ಲಿ ಕಾರ್ಯದರ್ಶಿಯೆದುರು ಚೀಟಿ ಬರೆಯುತ್ತಾ ಕುಳಿತಾಗ ಅವನೂ "ಯಾಕೆ ಸರ್, ನಿಮಗೆ ಬೇರೇನೂ ಸಮಸ್ಯೆಗಳಿಲ್ಲಾಂತ ಈ ಲೋಕೋದ್ಧಾರದ ಕೆಲಸ ಮಾಡುತ್ತಿದ್ದೀರೇನು? ಮುಂದೆ ಬರುವ ಕೋರ್ಟಿನ ಸಮನ್ ಗಳನ್ನು ನಿಭಾಯಿಸುವುದು ಕಷ್ಟ. ದುಷ್ಟರಿಂದ ದೂರವಿರುವುದೇ ಒಳಿತಲ್ಲವೇ?" ಎಂದು ಕೇಳಿದಾಗ ಇವನೂ...... ಈ ಧಂಧೆಯಲ್ಲಿ ಸಾಚಾ ಯಾರು, ಖೋಟಾ ಯಾರು? ಯಾರು ಯಾವ ಧಂಧೆಗೆ ಸಾಚಾ?

ಮತ್ತೆ ಡಿಐಜಿಯವರ ಸಂದರ್ಶನ ಮುಗಿಸಿ ಹೊರಬಂದಾಗ ಧೈರ್ಯದ ಭಾವನೆಯೇನೂ ಉಂಟಾಗಲಿಲ್ಲ. "ಈ ಘಟನೆಯ ಒಂದು ಕೊಂಡಿ ಮಾತ್ರ ನಮಗೆ ಸಿಕ್ಕಿದೆ. ಅದರ ಸರಪಳಿ ಎಲ್ಲಿಗೆ ಹೋಗುತ್ತದೋ ಅದೂ ಗೊತ್ತು, ಆದರೆ ಸರಪಳಿ ಎಳೆದು ಇದನ್ನು ನಿಲ್ಲಿಸುವ ದಾರಿ ಗೊತ್ತಿಲ್ಲ. ಏಕೆಂದರೆ ಸರಪಳಿಯ ಅಂತ್ಯಕ್ಕಿಂತ, ಕೊಂಡಿಗಳು ಮುಖ್ಯವಾಗುವ ನಮಗೆ ಅರ್ಧದಾರಿ ಹೋಗುವಷ್ಟರಲ್ಲಿಯೇ ಸರಪಳಿ ಕಡಿದಿರುವುದು ತಿಳಿಯುತ್ತದೆ. ಮತ್ತೆ ಹೊಸಕೊಂಡಿ, ಹೊಸ ಸರಪಳಿ ಹುಡುಕಿ ಹೋಗಬೇಕು. ಇದು ಅನುಭವದ ಮಾತು. ವೈಯಕ್ತಿಕವಾಗಿ ನನ್ನನ್ನ ಕೇಳುವುದಾದರೆ, ನೀವು ಇದರಿಂದ ದೂರ ಇರೋದೇ ಒಳ್ಳೆಯದು." ಎಂದು ಆತ ಹೇಳಿದಾಗ, ಹೇಡಿತನದ ಒಳ್ಳೆಯ ಗುಣಗಳು ಎಲ್ಲರಲ್ಲೂ ಎಷ್ಟು ವಿಪುಲವಾಗಿವೆ ಎಂದು ಮನವರಿಕೆಯಾಯಿತು. ಹೊರಬರುತ್ತಿದ್ದಂತೆ, ನಿಜಕ್ಕೂ ಇದನ್ನೆಲ್ಲ ಹಂಚಿಕೊಳ್ಳಲು ಒಂದು ಗಟ್ಟಿ ಹೃದಯದ ಸಹಾರಾ ಬೇಕೇಬೇಕೆನಿಸಿದ್ದೂ ಉಂಟು.

ಎಂದಿನಂತೆ ಸಮಯಕ್ಕೆ ಸರಿಯಾಗಿ ಹೋಗಲಾಗದೇ, ತಡವಾದುದಕ್ಕೆ ಆತಂಕ ಪಡುತ್ತಾ ಹೊರಬಂದು ಆಫೀಸಿನತ್ತ ಹಜ್ಜೆ ಹಾಕುತ್ತಿದ್ದಾಗ ಯಾರೋ ಹಿಂಬಾಲಿಸಿದ ಭಾವನೆ. ಅಥವಾ ಭ್ರಮೆ. ಭ್ರಮೆಯ ಬಗ್ಗೆ ನಂಬಿಕೆ ಗಟ್ಟಿಯಾಗುತ್ತಾ ಹೋದಾಗ ಅದು ವಾಸ್ತವವಾಗಿ ಪರಿವರ್ತನೆಗೊಳ್ಳುವುದೂ ಉಂಟು. ರಸ್ತೆ ಸ್ವಲ್ಪ ನಿರ್ಜನವಾಗುತ್ತಿದೆ ಎನ್ನಿಸಿದಂತೆ ಭಯವೂ ಜಾಸ್ತಿಯಾಯಿತು. ಯಾರೋ ಬಂದು ಕಾಲರ್ ಪಟ್ಟಿ ಹಿಡಿದು, ಕೆನ್ನೆಯ ಮೇಲೆ ಬಾರಿಸಿ, ಕಬ್ಬಿಣದ ಸಲಾಕೆಯಿಂದ ಕಾಲಿಗೆ ಬಲವಾಗಿ ಪೆಟ್ಟುಕೊಟ್ಟದ್ದು ಅನುಭವಕ್ಕೆ ಬಂತು. ಹಿಂದಿರುಗಿ ನೋಡಿದಾಗ ಆ ವ್ಯಕ್ತಿ ನಸುನಕ್ಕ:

"ಇದು ಮೊದಲ ಪಾಠಮಾತ್ರ. ಕಲಿತರೆ ಒಳ್ಳೆಯದು." ಎಂದು ಕರಗಿಹೋದ. ಅವನಷ್ಟೇ ಅಲ್ಲ ತಲೆ ತಿರುಗಿಸಿದಾಗ ಒಂದಿಷ್ಟು ಸಮಯ ಜಗತ್ತೇ ಕರಗಿಹೋಗುತ್ತದೆ. ಕಡೆಗೊಮ್ಮೆ, ಭಂಡತನಕ್ಕೂ, ಈಗಿವನು ಕೊಟ್ಟಿದ್ದ ಜೀವನದ ಪಾಠಕ್ಕೂ, ಧೈರ್ಯಕ್ಕೂ, ಭಯಕ್ಕೂ ಕೊಂಡಿಗಳನ್ನರಸುತ್ತಾ ಎದ್ದು ನಿಲ್ಲಲು ಯತ್ನಿಸಿದಾಗ ಒಂದು ಸುಂದರ ಹೆಣ್ಣು: "ಸಹಾಯ ಮಾಡಲೇ?" ಎಂದು ಕಾತರದಿಂದ ಬಳಿಗೆ ಬರುತ್ತಿದ್ದಂತೆ, ಮಾನವೀಯತೆಯ ಬಗ್ಗೆ ಕಳೆದುಕೊಳ್ಳುತ್ತಿದ್ದ ಎಲ್ಲ ನಂಬುಗೆಗಳೂ ಮರುಕಳಿಸಿದಂತಾಗಿ, ಅವಳ ಸೌಂದರ್ಯ ಜಗತ್ತನ್ನು ಇನ್ನೂ ಸುಂದರವಾಗಿಸುತ್ತಿದೆ ಎನ್ನಿಸಿ, ಅವಳು ಬಳಿ ಬರದಿದ್ದರೆ ಅದೇ ದೊಡ್ಡ ಉಪಕಾರ ಎಂದು, ಸದ್ಯಕ್ಕವಳು ಏನೂ ನೋಡಿಲ್ಲವೆಂದೂ ಮನವರಿಕೆ ಮಾಡಿಕೊಡುವ ಯತ್ನ ಸಫಲವಾಗುತ್ತಿದ್ದಂತೆ, ಸಂಭಾಷಣೆಗೆ ಮತ್ತೊಂದು ಬಾಲಂಗೋಚಿ ಸೇರಿಕೊಂಡಿತ್ತು. ಮುಂದೆಂದಾದರೂ, ಸಂದರ್ಭ ಒದಗಿ ಬಂದರೆ ಜೀವನದಲ್ಲೊಂದು ಸಹಾರಾ ಆಗಬಹುದೆಂದು ಸೂಚಿಸಿದಾಗ, ವಿಚಿತ್ರ ಬಡಬಡಿಕೆಗಳನ್ನು ಕೇಳಿ, ಏನೂ ಅವಳಿಗರ್ಥವಾಗದೇ ಚಕಿತಳಾಗಿ ಕರುಣೆಯ ದೃಷ್ಟಿ ಬೀರುತ್ತಲೇ ಎರಡು ಹೆಜ್ಜೆ ಹಿಂದೆ ಹೋದಳು.

ಕಷ್ಟಪಟ್ಟು ಮತ್ತೆ ಪೋಲೀಸ್ ಹೆಡ್ ಕ್ವಾರ್ಟರ್ಸ್ ಗೆಂದು ಆಟೋರಿಕ್ಷಾವನ್ನೇ ಹಿಡಿಯಲು ಧೈರ್ಯಮಾಡಿ ಎರಡು ಹೆಜ್ಜೆ ಕುಂಟಿದಾಗ ಅವಳ ದನಿ ಕೇಳಿಸಿತು: "ನಿಮ್ಮ ಹೆಸರೇನು ತಿಳಿದುಕೊಳ್ಳಬಹುದೇ?"

ಪ್ರಶ್ನೆಗೆ ಮುಖದಲ್ಲಿ ತುಂಟನಗೆಯೊಂದು ಅರ್ಥಗರ್ಭಿತವಾಗಿ ಹೊಮ್ಮುತ್ತಿದ್ದಂತೆ ಉತ್ತರವೂ ಅ ಪ್ರಯತ್ನವಾಗಿ ಹೊರಹೊಮ್ಮಿತ್ತು.

ಮೇ 1989



No comments: