One is never a virgin twice
Malcolm Bradbury
Malcolm Bradbury
ಈಗನ್ನಿಸುತ್ತಿದೆ. ಆ ಕವಿತೆ ಪ್ರಕಟವಾಗಬಾರದಿತ್ತು. ಅದು ದುರಾದೃಷ್ಟವಶಾತ್ ಪ್ರಕಟವಾದದ್ದರಿಂದಲೇ ಈ ಸಂಬಂಧಗಳ ಕೊಂಡಿ ಬೆಳೆದದ್ದು. ಇಲ್ಲದಿದ್ದರೆ ಇವೆಲ್ಲಾ ಘಟಿಸುತ್ತಲೇ ಇರಲಿಲ್ಲ. ಹೌದು ಕೆಲವು ತಿಂಗಳುಗಳ ಹಿಂದೆ ಅವಳ ಹೆಸರಿನಲ್ಲಿ ಒಂದು ಕವಿತೆ ಅಚ್ಚಾಗಿತ್ತು. ಅದನ್ನು ಅವಳೇನೂ ಒಳ್ಳೆಯ ಕವೆತೆಯೆಂದು ಪರಿಗಣಿಸಿರಲಿಲ್ಲ. ಯಾವಾಗಲೋ ಕಾಲೇಜಿನಲ್ಲಿದ್ದಾಗ ತಾನೂ ಕವಿತೆ ಬರೆಯಬಲ್ಲೆ ಎಂದು ತೋರಿಸಿಕೊಳ್ಳಲು ಬರೆದದ್ದು. ಕೇವಲ ಅಹಂ ಸಲುವಾಗಿ. ಆದರೆ ಅವಳ ಗಂಡ ಬಲವಂತವಾಗಿ ಅದನ್ನು ಪತ್ರಿಕೆಯೊಂದಕ್ಕೆ ಪ್ರಕಟಣೆಗಾಗಿ ಕಳಿಸಬೇಕೆಂದು ಪಟ್ಟು ಹಿಡಿದಿದ್ದರಿಂದ ಅದು ಪತ್ರಿಕೆಗೆ ಹೋಯಿತು. ಆಶ್ಚರ್ಯವೆಂಬಂತೆ ಅದು ಪ್ರಕಟವೂ ಆಯಿತು.
ಆ ಕವಿತೆಯೇ ಈ ಕಥೆಯ ಮೂಲ. ಈಗಲೇ ಹೇಳಿಬಿಡುವುದು ಒಳಿತು. ಇದೊಂದು ಪ್ರೇಮ ಕಥೆ. ಹಿಂದೆ ಬಂದ ಎಷ್ಟೋ ಪ್ರೇಮ ಕಥೆಗಳ ಪುನರಾವರ್ತನೆ. ಆದರೆ ಇದನ್ನು ಬರೆಯುತ್ತಿರುವುದು ಕವಯತ್ರಿಯಾಗಲೀ ಅಥವಾ ಸಾಹಿತಿಯಾಗಲೀ ಅಲ್ಲ. ಆಕೆ ಒಬ್ಬಳು ಪ್ರೇಮಿ. ದಿನಚರಿಯ ಪುಟಗಳಲ್ಲಿ ದಾಖಲಿಸಬೇಕಿದ್ದ ವಿವರಗಳನ್ನು ಇಲ್ಲಿ ಸಂಗ್ರಹಿಸಿ ಕೊಡುತ್ತಿದ್ದಾಳೆ. ಅಷ್ಟೇ. ಇದು ಒಂದು ಉತ್ತಮ ಆತ್ಮಕಥನವಾಗಬಹುದಿತ್ತೇನೋ. ಆದರೆ ಆ ಬಗ್ಗೆಯೂ ಅವಳಿಗೆ ಭರವಸೆಯಿಲ್ಲ. ಏಕೆಂದರೆ ಈ ಕಥೆಗೆ ಒಂದು ಚೌಕಟ್ಟಿಲ್ಲ. ಈ ಕಥೆ ಜೀವನದಷ್ಟೇ ಅಸಂಗತವಾಗಿದೆ.
ಹೌದು ಕವಿತೆ ಪ್ರಕಟವಾಯಿತು. ಅದರಿಂದೇನಾಯಿತು? ಸಾಮಾನ್ಯವಾಗಿ ಆಗಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಆ ಕವಿತೆಯ ಜೊತೆ ತಾನು ಕಾಲೇಜಿನಲ್ಲಿದ್ದಾಗ ತೆಗೆಸಿಕೊಂಡಿದ್ದ ಚಿತ್ರ, ಮತ್ತು ಆಕೆಯ ವಿಳಾಸವೂ ಪ್ರಕಟವಾಗಿತ್ತು. ಬಹುಶಃ ಅದು ಇರದಿದ್ದರೆ ಈ ಕಥೆಯ ಅವಶ್ಯಕತೆಯೇ ಇರುತ್ತಿರಲಿಲ್ಲವೇನೋ. ಪತ್ರಿಕೆ ಮಾರುಕಟ್ಟೆಗೆ ಬಂದ ಎರಡು ದಿನಗಳಲ್ಲೇ ಅವಳಿಗೆ ಒಂದು ಪತ್ರ ಬಂದಿತು. ಮೊದಲ ಕವಿತೆ ಪ್ರಕಟವಾದದ್ದಕ್ಕೆ ಬಂದ ಮೊದಲ ವೈಯಕ್ತಿಕ ಪತ್ರ!
*
ಅವಳ ಕೈಯಲ್ಲಿದ್ದ ಪತ್ರವನ್ನು ಮತ್ತೊಮ್ಮೆ ನೋಡಿದಳು:
ಮಾನ್ಯ ಶ್ರೀಮತಿ ಲಾವಣ್ಯ ಅವರಿಗೆ
ವಂದನೆಗಳು.
ಮೊನ್ನೆ ನೀವು ಅಶೋಕನ ಹೆಸರಿಗ ಬರೆದ ಪತ್ರ ತಲುಪಿದೆ. ದುರಾದೃಷ್ಟವಶಾತ್ ಸ್ಕೂಟರ್ ಅಪಘಾತದಲ್ಲಿ ಹೋದ ತಿಂಗಳು ೨೦ರಂದು ಅಶೋಕ ತೀರಿಕೊಂಡ. ನಿಮ್ಮ ಪತ್ರ ನೋಡಿದರೆ ನಿಮಗೆ ಈ ವಿಷಯ ತಿಳಿದಿಲ್ಲವೆಂದು ಗೊತ್ತಾಗುತ್ತದೆ. ಅಶೋಕನ ವಿಳಾಸದ ಪುಸ್ತಕದಲ್ಲಿದ್ದ ಎಲ್ಲರಿಗೂ ಪತ್ರ ಬರೆದಿದ್ದೆವು. ನಿಮ್ಮ ವಿಳಾಸ ಅಲ್ಲಿರಲಿಲ್ಲವಾದ್ದರಿಂದ ನಿಮಗೆ ತಿಳಿಸಲಾಗಲಿಲ್ಲ ಕ್ಷಮಿಸಿ.
ಅಶೋಕನೊಟ್ಟಿಗೆ ನಿಮ್ಮ ಸಂಬಂಧ ಯಾವರೀತಿಯದ್ದು ಗೊತ್ತಿಲ್ಲ. ಅವನಿಂದ ನಿಮಗೆ ಏನಾದರೂ ಬರಬೇಕಿದ್ದರೆ [ಹಣ, ಪುಸ್ತಕಗಳು ಇತ್ಯಾದಿ] ದಯಮಾಡಿ ತಿಳಿಸಿ. ಅವನ ಪರವಾಗಿ ನಾನು ಕೊಡಲಾದರೆ ಕೊಡುತ್ತೇನೆ. ಈ ವಿದಾಯದ ದುಃಖದಲ್ಲಿ ನೀವೂ ಭಾಗಿಗಳಾಗಿದ್ದೀರಿ ಎಂಬ ಅರಿವು ನನಗಿದೆ. ಆದರೆ ಎಲ್ಲರಿಗೂ ಒಂದಲ್ಲ ಒಂದು ದಿನ ವಿದಾಯ ಹೇಳಲೇಬೇಕಾದ್ದು ಅನಿವಾರ್ಯ ಅಲ್ಲವೇ?
ಇತಿ ವಿಶ್ವಾಸಿ
ಸಂದೀಪ್ [ಅಶೋಕನ ಅಣ್ಣ]
ಈ ಅಶೋಕ ಹೇಗಿದ್ದಿರಬಹುದು? ಮಣ್ಣಲ್ಲಿ ಮಣ್ಣಾಗಿ ಅಥವಾ ಬೆಂಕಿಯಲ್ಲಿ ಬೂದಿಯಾಗಿ ಹೋಗಿರುವ ಆತನ ಮುಖವನ್ನು ಆಕೆ ನೋಡಿರಲಿಲ್ಲ. ಹೋಗಲೀ ಚಿತ್ರವನ್ನಾದರೂ ಕಂಡಿರಲಿಲ್ಲ. ಆತ ತನಗೆ ಕೊಡಬೇಕಾದ್ದೇನಾದರೂ ಇತ್ತೇ? ಅದನ್ನು ಆತನ ಅಣ್ಣನಿಗೆ ಪತ್ರ ಬರೆದು ತರಿಸಿಕೊಳ್ಳಬೇಕೇ? ಹಾಗೇನೂ ಇದ್ದಂತಿಲ್ಲ. ಬದಲಿಗೆ ತಾನೇ ಅವರಿಗೆ ಕೊಡಬೇಕಾದ್ದು ಸಾಕಷ್ಟಿರಬಹುದು. ಹೌದು ಏನು ಕೊಡಬೇಕು? ಯಾಕೆ ಕೊಡಬೇಕು? ತಮ್ಮಿಬ್ಬರ ನಡುವಣ ಸಂಬಂಧ ಎಂಥದ್ದು? ಅವಳಿಗೆ ಒಂದೂ ಸ್ಪಷ್ಟವಾಗಿ ತಿಳಿಯುತ್ತಿಲ್ಲ. ಎಲ್ಲಾ ಮಸಕು ಮಸಕು. ಆದರೂ ಅವರಿಬ್ಬರಲ್ಲಿ ಗಾಢ ಸಂಬಂಧ ಬೆಳೆದಿತ್ತು. ಅವನ ಮರಣದೊಂದಿಗೆ ಅದು ಕಡಿದುಹೋಯಿತೇ? ಅಥವಾ ಇನ್ನೂ ಇದೆಯೇ? ಅವಳಿಗೆ ಗೊತ್ತಾಗುತ್ತಿಲ್ಲ.
ಕ್ಷಮಿಸಿ, ಚೂರು ಚೂರಾದ ಚಿತ್ರಗಳನ್ನು ಅಸಂಗತವಾಗಿ ನಿಮ್ಮ ಮುಂದೆ ಇಡುವ ಪ್ರಯತ್ನ ನಡೆಯುತ್ತಿದೆ. ಬಹುಶಃ ಪೂರ್ಣಗೊಂಡಾಗ ಈ ಚಿತ್ರ ಇನ್ನಷ್ಟು ಸ್ಪಷ್ಟಗೊಳ್ಳಬಹುದು.
ಹಾಂ ಅವಳ ಕವಿತೆಯ ವಿಷಯ ಚರ್ಚಿಸುತ್ತಿದ್ದೆವು. ಹೌದು. ಅದಕ್ಕೆ ಅವಳಿಗೆ ಒಂದು ಪ್ರತಿಕ್ರಿಯಾತ್ಮಕ ಪತ್ರ ಬಂದಿತ್ತು. ಆ ದಿನ ಆ ಪತ್ರ ಬಂದ ಖುಷಿಯಲ್ಲಿ ಅದರಲ್ಲೇನು ಬರೆದಿದೆ ಅನ್ನುವುದನ್ನೇ ಅವಳು ಸರಿಯಾಗಿ ಗಮನಿಸಿರಲಿಲ್ಲ. ಪ್ರತಿಕ್ರಿಯೆಯೊಂದನ್ನು ಆಹ್ವಾನಿಸುವಷ್ಟರ ಅರ್ಹತೆ ಆ ಕವಿತೆಗಿದೆ ಅನ್ನುವುದೇ ಅವಳಿಗೆ ಸಮಾಧಾನ ತಂದಿತ್ತು. ಪತ್ರದ ಒಕ್ಕಣೆ, ಪದಗಳ ಬಳಕೆ, ಆ ಪತ್ರವನ್ನು ಒಬ್ಬ ಪಳಗಿದ ಕಥೆಗಾರ ಮಾತ್ರ ಬರೆಯಬಲ್ಲ ಅನ್ನಿಸುವಂತಹ ಪತ್ರವದು.
*
ಕೈಯಲ್ಲಿರುವ ಪತ್ರವನ್ನು ಪಕ್ಕದಲ್ಲಿಟ್ಟು ಅದಕ್ಕೆ ಒಂದು ಉತ್ತರವನ್ನು ಬರೆಯಬೇಕೆಂದು ಅವಳು ಯೋಚಿಸಿದಳು. ಕಾಗದ, ಪೆನ್ನು ತಂದು ಒತ್ತಿಗೆಂದು ಒಂದು ಪತ್ರಿಕೆಯನ್ನು ಕೈಗೆತ್ತಿಕೊಂಡಳು. ಅದೇಕೋ ಕಾಗದ ಬರೆಯುವುದಕ್ಕೆ ಬದಲು ಪತ್ರಿಕೆಯ ಪುಟಗಳನ್ನು ತಿರುವಿಹಾಕಬೇಕು ಅನ್ನಿಸಿತು. ಒಳಗೆ ನೋಡಿದರೆ ಅಶೋಕನ ಕಥೆ. ಎಲ್ಲೆಲ್ಲಿಂದಲೂ ಅವನು ಆವರಿಸಿಬಿಡುತ್ತಿದ್ದಾನೆ ಅನ್ನಿಸಿತು. ಪತ್ರಿಕೆಯ ದಿನಾಂಕವನ್ನು ನೋಡಿದಳು: ಅಶೋಕ ಮರಣಿಸಿದ ನಂತರ ಪ್ರಕಟವಾಗಿರುವ ಕಥೆ ಅದು. ಪಾಪ! ಇದ್ದಿದ್ದರೆ ಖುಷಿ ಪಡುತ್ತಿದ್ದ ಅನ್ನುವುದರಲ್ಲಿ ಅನುಮಾನವಿಲ್ಲ. ಕಾಗದ, ಪೆನ್ನು ಬದಿಯಲ್ಲಿಟ್ಟು ಕತೆ ಓದಲು ಪ್ರಾರಂಭಿಸಿದಳು. ಈ ಕಥೆ ತನಗೆ ಗೊತ್ತು ಎಂದು ಅವಳಿಗನ್ನಿಸಿತು. ಈಗೀಗ ಅವಳಿಗೆ ಯಾವ ಕಥೆಯನ್ನೋದಿದರೂ ಹಾಗನ್ನಿಸುತ್ತಿದೆ.. "ಮುಂಜಾನೆಯ ಚುಮುಚುಮು ಬೆಳಕು, ಆಫಿಸಿನಲ್ಲಿ ರೇಗಾಡುವ ಬಾಸ್, ಪ್ರೇಮ ಪ್ರಕರಣಗಳು, ಸಾವು, ವ್ಯವಸ್ಥೆ.." ಹೀಗೆ ಎಲ್ಲರೂ ಗೊತ್ತಿರುವುದನ್ನೇ ಮತ್ತೆ ಮತ್ತೆ ಹೇಳುತ್ತಿದ್ದಾರೆನ್ನಿಸುತ್ತದೆ. ಆದ್ದರಿಂದಲೇ ಇರಬೇಕು ಅವಳು ಕಾವ್ಯಪ್ರೇಮಿಯಾಗಿರುವುದು. ಅಶೋಕನ ಕಥೆಯನ್ನು ಓದಿದಾಗಲೂ ಅಷ್ಟೇ ಗೊತ್ತಿರುವ ಕಥೆ ಹೇಳಿ ಪಲಾಯನವಾದದ ಸುಳ್ಳು ಅಂತ್ಯ ಕೊಟ್ಟಿದ್ದಾನೆ ಅನ್ನಿಸಿತು. ಜೀವನದ ಮುಳ್ಳಿನ ಹಾದಿಯ ಮೇಲೆ ನಡೆದು ಸುಖದ ಸುಪ್ಪತ್ತಿಗೆ ಸೇರುವ ಅದೇ ಹಳೆಯ ಕಥೆ. "ಬರೀ ಸುಳ್ಳು" ಎಂದು ಅವನಿಗೆ ಹೇಳಬಹುದಿತ್ತು. ಆದರೆ ಸಾಧ್ಯವಿಲ್ಲವಲ್ಲಾ.
ಇವಳ ಈ ಕಥೆ ಮಸುಕುಮಸುಕಾಗಿದೆ ಅಲ್ಲಾ? ಇದಕ್ಕೆ ಒಂದು ಸ್ವರೂಪವನ್ನು ಕೊಡಲು ಅವಳಿಗೆ ಆಗುತ್ತಿಲ್ಲ. ಆಕೆ ಒಳ್ಳೆಯ ಕಥೆಗಾರ್ತಿ ಅಲ್ಲ ಅನ್ನುವುದು ಅವಳ ಭಾವನೆ. ತನ್ನ ಮನಸ್ಸಿಗೆ ಬಂದದ್ದನ್ನು ಹಾಗೆಯೇ ಹೇಳುತ್ತಾಳೆ. ಹಾಂ.. ಅಂದಹಾಗೆ ಆದಿನ ಬಂದ ಪತ್ರದ ವಿಷಯಕ್ಕೆ ಮತ್ತೆ ಅವಳು ಬರಲೆತ್ನಿಸಿದ್ದಳು. ಒಳ್ಳೆಯ ಕತೆಗಾರ ಬರೆದಂತಹ ಪತ್ರ ಎಂದು ಹೇಳಿದ್ದಳಲ್ಲಾ.. ಹೌದು.. ಅದು ನಿಜ. ಯಾಕೆಂದರೆ ಅವನು ಆ ಪತ್ರದಲ್ಲಿ ಕವಿತೆಯ ಬಗೆಗೆ ಏನೂ ಬರೆದಿರಲಿಲ್ಲ. ಬರೇ ಅವಳ ಬಗ್ಗೆ ಬರೆದಿದ್ದ. ಅಷ್ಟೇ. ಆಕರ್ಷಕವಾದ ಅವಳ ಫೋಟೋದ ಬಗ್ಗೆ. ಅವನು ಬರೆದಿದ್ದದ್ದು ಅವಳು ಇಪ್ಪತ್ತರ ಹರೆಯದಲ್ಲಿ ತೆಗೆಸಿಕೊಂಡಿದ್ದ ಆ ಚಿತ್ರದ ಬಗ್ಗೆ. ಕಾಲಗಮನದಲ್ಲಿ ತನ್ನನ್ನು ಎಂಟು ವರ್ಷ ಹಿಂದಕ್ಕೆ ಆತ ಕರೆದೊಯ್ದಿದ್ದ. ಹಾಗೆ ನೋಡಿದರೆ ವರ್ತಮಾನದಲ್ಲಿ ಯಾವ ಮೌಲ್ಯವೂ ಇಲ್ಲದ ಆ ಪತ್ರವನ್ನು ಅವಳು ನಾಶಮಾಡಬೇಕಿತ್ತು. ಮದುವೆಯಾಗಿರುವ ಅವಳನ್ನು, ಅವಳ ಸೌಂದರ್ಯವನ್ನು ಹೊಗಳಿ ಬರೆದಿರುವ ಯುವಕನ ಪತ್ರದೊಂದಿಗೆ ತನಗೇನು ಕೆಲಸ? ಅಂದು ಅದನ್ನು ತನ್ನ ಗಂಡನಿಗೂ ಅವಳು ತೋರಿಸಿದ್ದಳು. ಅರ್ಥಾತ್ ಅವಳು ಆ ಪತ್ರದ ಮತ್ತಿನಲ್ಲಿ ಪೂರ್ತಿಯಾಗಿ ಮೈಮರೆತಿರಲಿಲ್ಲ. ಆದರೂ, ಆದರೂ... ಈ ಚರಿತ್ರೆಯ ಕಲ್ಪನಾಲೋಕಕ್ಕೆ ಎಳೆದೊಯ್ಯುವುದರಲ್ಲಿ ಅಶೋಕ ಸಫಲನಾಗಿದ್ದ. ಆದ್ದರಿಂದಲೇ ಅಶೋಕನ ಪತ್ರಕ್ಕೆ ಆಕೆ ಉತ್ತರ ಬರೆದುಹಾಕಿದ್ದಳು.
*
ಮಾನ್ಯ ಸಂದೀಪ್
ವಂದನೆಗಳು
ನಿಮ್ಮ ಪತ್ರ ತಲುಪಿದೆ. ಅಶೋಕರ ಸಾವಿನ ವಿಷಯ ತಿಳಿದು ಬಹಳ ಬೇಸರವಾಯಿತು. ಇಷ್ಟು ಸಣ್ಣ ವಯಸ್ಸಿನಲ್ಲೇ ಅವರಿಗೆ ಹೀಗಾದದ್ದು ನನಗೆ ಆಘಾತವನ್ನುಂಟುಮಾಡಿದೆ. ಅಶೋಕರ ಕಥೆಗಳು ನನಗೆ ಅತ್ಯಂತ ಪ್ರಿಯವಾಗಿದ್ದುವು. ಇತ್ತೀಚೆಗೆ ಪ್ರಕಟವಾದ ಅವರ ಕಥೆಯಂತೂ ಅದ್ಭುತ. ಇಂತಹ ಒಳ್ಳೆಯ ಕಥೆಗಾರನನ್ನು ಕಳೆದುಕೊಂಡೆವೆಲ್ಲಾ ಎಂಬ ದುಃಖ ನನ್ನನ್ನು ಆವರಿಸಿದೆ.
ಅವರಿಂದ ನನಗೆ ಬರಬೇಕಾದ್ದಾಗಲೀ, ನನ್ನಿಂದ ಅವರಿಗೆ ಹೋಗಬೇಕಾದ್ದಾಗಲೀ ಏನೂ ಇಲ್ಲ. ನಮ್ಮಿಬ್ಬರ ವ್ಯವಹಾರ ಕೇವಲ ಕತೆಗಾರ-ಅಭಿಮಾನಿ ನಡುವಿನ ವ್ಯವಹಾರವಾಗಿತ್ತು. ನಿಮ್ಮ ಸೌಜನ್ಯಕ್ಕಾಗಿ ಧನ್ಯವಾದಗಳು. ಅಶೋಕರ ನಷ್ಟ ಭರಿಸುವ ಶಕ್ತಿ ನಿಮಗೆ ದೊರೆಯಲಿ, ಹಾಗೆ ಅವರ ಆತ್ಮಕ್ಕೂ ಶಾಂತಿ ದೊರೆಯಲೆಂದು ಹಾರೈಸುತ್ತೇನೆ.
ವಿಶ್ವಾಸಿ
ಲಾವಣ್ಯ
ಸಂದೀಪನ ಪತ್ರಕ್ಕೆ ಉತ್ತರಿಸಬೇಕೆಂಬ ವಾಸ್ತವ ಕಾಡಿದಾಗ ಮೇಲಿನ ಸಾಲುಗಳನ್ನು ಯಾಂತ್ರಿಕವಾಗಿ ಗೀಚಿಹಾಕಿದ್ದಳು. ಪತ್ರ ಬರೆಯುವಾಗ ತಾನು ಸುಳ್ಳು ಹೇಳುತ್ತಿದ್ದಾಳೆಂದು ಅವಳಿಗೆ ಗೊತ್ತಿತ್ತು. ಆತ್ಮವಂಚನೆ ಮಾಡಿಕೊಳ್ಳುತ್ತಿದ್ದಳೆಂಬ ಅರಿವಿತ್ತು. ಲೇಖನಿಯಿಂದ ಹೊರಹೊಮ್ಮಿದ ಕೆಲವೇ ಪದಗಳಲ್ಲಿ ಒಂದು ಗಾಢ ಸಂಬಂಧವನ್ನು ಅವಳು ಕತ್ತರಿಸಿದ್ದಳು. ಅದಕ್ಕೇ ಈ ಕಥೆ ಹೇಳುವ ಮೊದಲೇ ಅವಳು ಅಂದುಕೊಂಡಿದ್ದಳು -- ಮೂರ್ತವಾಗಿ ಅಭಿವ್ಯಕ್ತಿಸುವ ಪದಗಳಿಗಿಂತ ಅಮೂರ್ತ ಸಂಕೇತಗಳೇ ತನಗೆ ಹೆಚ್ಚು ಪ್ರಿಯ. ಏಕೆಂದರೆ ಅಲ್ಲಿ ಅಷ್ಟರ ಮಟ್ಟಿಗಾದರೂ ಪ್ರಾಮಾಣಿಕತೆ ಇರುತ್ತದೆ.
ಅವಳ ಕಥೆ ನಿಮಗೆ ಸಂಪೂರ್ಣವಾಗಿ ಅರ್ಥವಾಗುತ್ತಿಲ್ಲವೇನೋ. ಹೌದು ಅದನ್ನು ಮೂರ್ತವಾಗಿ ಅಭಿವ್ಯಕ್ತಿಸಲು ಅವಳಿಂದ ಆಗುತ್ತಿಲ್ಲ. ಹಾಗೆಯೇ ಅದು ಅಮೂರ್ತವಾಗಿ ಉಳಿದಷ್ಟೂ ಓದುಗರು ತಮ್ಮ ಮನೋಭಾವಕ್ಕೆ ತಕ್ಕಂತೆ ಅರ್ಥೈಸಿಕೊಳ್ಳುವ ಸಾಧ್ಯತೆಯಿದೆ ಅನ್ನಿಸುತ್ತಿರುವುದರಿಂದ ಅವಳು ಇದೇ ರೀತಿಯಲ್ಲಿ ಇದಕ್ಕೊಂದು ಸ್ವರೂಪ ಕೊಡಲು ಪ್ರಯತ್ನಮಾಡಿದ್ದಳು. ಅವಳಿಗೆ ಬಂದ ಆ ಪತ್ರಕ್ಕೆ ತಾನು ಉತ್ತರಿಸಿದ್ದು ನಿಜ. ಅಶೋಕ ನೋಡಿದ್ದ ಇಪ್ಪತ್ತರ ಹರೆಯದ ಕನ್ಯೆಯ ಶೈಲಿಯಲ್ಲಿ ಉತ್ತೇಜಕವಾಗಿ ಆಕೆ ಉತ್ತರಿಸಿದ್ದಳು. ಅದಕ್ಕೆ ಅವಳ ಆತ್ಮರತಿ ಕಾರಣವೋ, ಅವನು ಬರೆದ ಪತ್ರವೇ ಕಾರಣವೋ, ಒಂದೂ ಸ್ಪಷ್ಟವಾಗಿ ಅರ್ಥವಾಗಿರಲಿಲ್ಲ. ಕಾದು ನೋಡಿದರೆ ಅರ್ಥ ತಿಳಿದೀತೆಂದು ಭಾವಿಸಿದ್ದಳು. ಆದರೂ ಹೀಗೆ ಅಮೂರ್ತವಾದ ಸಂಬಂಧಗಳು ಕಾಲಗಮನದಲ್ಲಿ ಹೊಸ ಹೊಸ ಸ್ವರೂಪ ಪಡೆಯುತ್ತಾ ಹೋಗುತ್ತವೆ. ಈ ಸಂಬಂಧವೂ ಇನ್ನಷ್ಟು ಸ್ಪಷ್ಟವಾಗಲು ಅವಳು ಕಾಯಬೇಕಿತ್ತು. ಹಾಗೆಂದೇ ಅಶೋಕನ ಉತ್ತರಕ್ಕಾಗಿ ಅವಳು ಕಾಯುತ್ತಾ ಕುಳಿತಿದ್ದಳು.
*
ಕಾಯುತ್ತಾ ಕುಳಿತಿದ್ದಳು. ಅವಳ ಗಂಡನ ಸುಳಿವು ಇನ್ನೂ ಇರಲಿಲ್ಲ. ಸಂದೀಪನಿಗೆ ಬರೆದ ಪತ್ರವನ್ನು ಅಂಚೆಗೆ ಹಾಕಿ ಬಂದದ್ದೂ ಆಗಿತ್ತು. ಸಮಯ ಮೀರಿದರೂ ತನ್ನ ಗಂಡನಿನ್ನೂ ಬಂದಿಲ್ಲ. ಏಕೆ ತಡವಾಗಿರಬಹುದು? ಕಡೆಗೂ ಅವನು ಆಫೀಸಿನಿಂದ ಬಂದಾಗ ಅವನಿಗೆ ಸಂದೀಪನ ಪತ್ರದ ವಿಷಯ ಹೇಳಿದ್ದಳು. "ಅಶೋಕ ತೀರಿಕೊಂಡನಂತೆ".. ಅದಕ್ಕೆ ಗಂಡ ನಿರ್ಲಿಪ್ತವಾಗಿ ಮುಗುಳ್ನಕ್ಕಿದ್ದ. "ಹೌದೇನು ಪಾಪ?".. ಇಂಥಾ ಸ್ಥಿತಪ್ರಜ್ಞತೆಯನ್ನು ಅವಳು ಎಂದೂ ಕಂಡಿರಲಿಲ್ಲ. ಕೇವಲ ಯಾವುದೋ ಪತ್ರಿಕೆಯ ಒಂದು ವರದಿಯನ್ನು ಓದಿದಂತೆ ಅವನು ಪ್ರತಿಕ್ರಿಯಿಸಿದ್ದ. ಏನೂ ಸಂಬಂಧವೇ ಇಲ್ಲವೆಂಬಂತೆ. ಅದೂ ನಿಜವೇ. ಅವನಿಗೂ ಅಶೋಕನಿಗೂ ಇರುವ ಸಂಬಂಧವಾದರೂ ಏನು? ಅಶೋಕನ ಸಂಬಂಧವನ್ನು ಬೆಳೆಸಿಕೊಂಡವಳು ತಾನಲ್ಲವೇ? ಆದರೂ ಈ ಮನುಷ್ಯನೇಕೆ ಮಂಜುಗಡ್ಡೆಯಾಗಿದ್ದಾನೆಂದು ಅವಳಿಗೆ ಅರ್ಥವಾಗಿರಲಿಲ್ಲ.
ಪತ್ರದ ಉತ್ತರಕ್ಕಾಗಿ ಅವಳು ಕಾಯುತ್ತಿದ್ದಾಗ ಅದು ಬಂದೇ ಬಿಟ್ಟಿತ್ತು. ಎರಡನೇ ಪತ್ರದ ಧೋರಣೆ ಸಂಪೂರ್ಣವಾಗಿ ಬದಲಾಗಿ ಅಶೋಕ ಬಹಳ ಭಾವುಕವಾಗಿ ಪತ್ರವನ್ನು ಬರೆದಿದ್ದ. ಆ ಪತ್ರವನ್ನು ಓದಿದಾಗ ತಾನು ಎಲ್ಲೋ ಪ್ರವೇಶಿಸಬಾರದ ಪ್ರಾಂತದೊಳಕ್ಕೆ ಹೊಕ್ಕುಬಿಡುತ್ತಿದ್ದಾಳೆಂಬ ಭಾವನೆ ಅವಳಿಗುಂಟಾಗಿತ್ತು. ತಾನೇನು ಮಾಡುತ್ತಿದ್ದಳೋ ಅವಳಿಗೇ ತಿಳಿದಿರಲಿಲ್ಲ. ಅಶೋಕನೊಂದಿಗೆ ತಾನು ಮಾತನಾಡಬೇಕು ಅನ್ನಿಸಿತ್ತು. ಇದು ಒಳ್ಳೆಯ ಗೃಹಿಣಿಯ ಲಕ್ಷಣವಲ್ಲ. ಮದುವೆಯಾಗಿರುವ ತಾನು ಈ ವ್ಯವಹಾರವನ್ನು ಮುಂದುವರೆಸಬಾರದು ಎನ್ನುವ ಲೌಕಿಕ ಅವಳನ್ನು ಕಾಡಿದರೂ ಅವಳ ದೇಹದಲ್ಲಿ ಇಪ್ಪತ್ತರ ಬಿಸಿರಕ್ತ ಪ್ರವಹಿಸಿದಂತಾಗಿ ಅವಳಿಗೆ ಯಾವುದರ ಪರಿವೆಯೂ ಇಲ್ಲದಾಯ್ತು. ತನ್ನ ಪತಿಗೆ ಮೋಸ ಮಾಡುತ್ತಿರಬಹುದೋ ಅನ್ನುವ ಭಾವನೆಯೂ ಅವಳನ್ನು ಕಾಡಲಿಲ್ಲ. ಅಶೋಕನೊಂದಿಗಿನ ವ್ಯವಹಾರ ಒಂದು ಅಯಸ್ಕಾಂತದತೆ ಅವಳನ್ನು ಸೆಳೆದಿತ್ತು. ಈ ಪತ್ರವ್ಯವಹಾರ ತನ್ನ ಜೀವನಕ್ಕೆ ಸಫಲತೆಯನ್ನು ಕೊಡಬಹುದು ಎಂದೆಲ್ಲಾ ಅವಳಿಗೆ ಅನ್ನಿಸಿಬಿಟ್ಟಿತು. ಯಾಕೋ ತಾನು ಅಶೋಕನನ್ನು ಗಾಢವಾಗಿ ಪ್ರೇಮಿಸಿತ್ತಿದ್ದೇನೆ ಅನ್ನುವ ಯೋಚನೆ ಅವಳನ್ನು ಕಾಡತೊಡಗಿತ್ತು.
*
"ಏನು ಯೋಚನೆ ಮಾಡುತ್ತಾ ಇದ್ದೀಯ? ಕಾಫಿ ಗೀಫಿ ಇಲ್ಲವೋ ಹೇಗೆ? ಅಶೋಕ ಸತ್ತದ್ದು ಅಷ್ಟೊಂದು ಶೋಕಕ್ಕೆ ಕಾರಣವಾಗಿದೆಯಾ?" ಎಂದು ಗಂಡ ಕೇಳಿದ. ಇಲ್ಲೂ ಅಶೋಕನನ್ನು ಎಳೆದು ತರುವ, ಕಾಫಿಗೂ ಸತ್ತ ಮನುಷ್ಯನನ್ನು ಕಾರಣವಾಗಿಸುವ ಇವನ ಮನೋಧರ್ಮದ ಬಗ್ಗೆ ಅವಳಿಗೆ ನಗು ಬಂದಿತ್ತು. ಅವಳು ಅಡುಗೆ ಮನೆಯನ್ನು ಪ್ರವೇಶಿಸಿದಾಗ ಆತನೂ ಅವಳನ್ನು ಹಿಂಬಾಲಿಸಿದ್ದ. ಪ್ರೀತಿಯ ಸಮಾಧಾನದ ಮಾತುಗಳನ್ನು ಆಡಿದ್ದ.
ಮತ್ತೆ ಅವಳಿಗೆ ಭಯ ಕಾಡಿತ್ತು. ಅವಳ ಕಥೆ ಎಲ್ಲೆಲ್ಲೋ ಹೋಗಿತ್ತು. ಹೌದು, ಅವಳು ಹೇಳಿದಂತೆ ಅವರ ಪತ್ರವ್ಯವಹಾರ ಮುಂದುವರೆದಿತ್ತು. ತಾನು ಮದುವೆಯಾಗಿರುವ ವಾಸ್ತವವನ್ನು ಅವಳು ಅಶೋಕನಿಗೆ ತಿಳಿಸಿಯೇ ಇರಲಿಲ್ಲ. ತಿಳಿಸುವ ಅವಶ್ಯಕತೆ ಅವಳಿಗೆ ಕಂಡುಬಂದಿರಲಿಲ್ಲ. ಅವನನ್ನು ಆಕೆ ರಾಯಚೂರಿಗೂ ಆಹ್ವಾನಿಸಿಬಿಟ್ಟಿದ್ದಳು. ಇದು ಎಂಥ ಭಂಡ ಧೈರ್ಯ ಎಂದು ಅವಳಿಗನ್ನಿಸದಿರಲಿಲ್ಲ. ಅಶೋಕ ಬಂದು ವಾಸ್ತವದ ಸ್ಫೋಟವಾದರೆ ಆಗಲಿ, ಇಲ್ಲದಿದ್ದರೆ ಇದು ಹೀಗೇ ಮುಂದುವರೆಯಲಿ ಅನ್ನುವುದು ಅವಳ ಯೋಚನೆಯಾಗಿತ್ತು. ಹಾಗೆಂದು ಮದುವೆಯಾಗಿಲ್ಲ ಎನ್ನುವಂತಹ ಸೂಚನೆಯನ್ನೂ ಅವಳು ಅಶೋಕನಿಗೆ ನೀಡಿರಲಿಲ್ಲ. ಅಶೋಕನಾಗಿ ಅಶೋಕನೇ ಮುಂದುವರೆಯುತ್ತಿದ್ದ. ಅವಳು ಅದನ್ನು ಪೋಷಿಸುತ್ತಾ ಬಂದಿದ್ದಳು ಅಷ್ಟೇ. ಅದಕ್ಕೆ ಕಾರಣ, ಆಂತರ್ಯದಲ್ಲಿ ಅವಳು ಅಶೋಕನನ್ನು ಪ್ರೀತಿಸುತ್ತಿದ್ದಳೇನೋ. ಆದರೆ ಅವಳಿಗೆ ನಿಜಕ್ಕೂ ಮೊದಲ ಬಾರಿಗೆ ಭಯವಾದದ್ದು ಅಶೋಕನ ಮುಂದಿನ ಪತ್ರದ ಒಕ್ಕಣೆ ನೋಡಿ. ಆ ಬಾರಿ ಅವನು ನೇರವಾಗಿ ಅವಳನ್ನು ’ಚಿನ್ನಾ’ ಎಂದು ಸಂಬೋಧಿಸಿದ್ದ.
*
’ಚಿನ್ನಾ’ ಎಂದಾಗ ಅವಳಿಗೆ ಕೋಪ ಬಂದಿತ್ತು. ’ಅದೇನು ಅಕ್ಕಸಾಲಿಗರ ಹಾಗೆ ಚಿನ್ನ, ಬಂಗಾರಾಂತ ಕರೆಯೋದು.. ನನ್ನ ಹೆಸರು ಲಾವಣ್ಯ.. ಹಾಗಂತಲೇ ಕರೆಯಬಾರದೇ?’ ಎಂದು ಅವಳು ಗಂಡನ ಮೇಲೆ ರೇಗಿದ್ದಳು. ’ಈ ದಿನ ನೀನು ಬೇರೆಯೇ ಲೋಕದಲ್ಲಿರುವಹಾಗಿದೆ? ಏನಾಗಿತ್ತಂತೆ ಅಶೋಕನಿಗೆ?’ ಎಂದು ಅವನು ಪ್ರಶ್ನಿಸಿದ್ದ. ’ಅಪಘಾತ’ ಎಂದು ಹೇಳಿದಳು ’ಅಯ್ಯೋಪಾಪ.. ಚಿಕ್ಕ ಹುಡುಗಾಂತ ಕಾಣುತ್ತೆ’ ಎಂದು ಅವನು ಲೊಚಗುಟ್ಟಿದ್ದ. ಅವಳಿಗೆ ಅದನ್ನು ಕೇಳಿ ಮೈಯೆಲ್ಲಾ ಉರಿದಿತ್ತು. ಈ ಕೃತಕ ಸಹಾನುಭೂತಿ ಯಾರಿಗೆ ಬೇಕು ಎಂದು ಅವಳಿಗೆ ಅನ್ನಿಸಿತ್ತು.
ಸಂಬಂಧಗಳು ಸ್ಪಷ್ಟವಾಗುತ್ತಿದೆ ಎಂದು ಅಂದುಕೊಂಡಾಗಲೇ ತಲೆಬುಡ ತಿಳಿಯಂದಂತಾಗುತ್ತಿತ್ತು. ಎಲ್ಲವೂ ಒಂದು ರೀತಿಯಲ್ಲಿ ಅಸಂಗತ. ಚಿನ್ನಾ ಎಂದು ಸಂಬೋಧಿಸಿದ ಪತ್ರದಲ್ಲಿ ಅಶೋಕ ನೇರವಾಗಿ ಮದುವೆಯ ಪ್ರಸ್ತಾಪ ಮಾಡಿದ್ದ. ಅಶೋಕನ ಮೊದಲ ಪತ್ರ ಬಂದಾಗಿನಿಂದಲೂ ಅವಳು ಮುಟ್ಟಾಗಿರಲಿಲ್ಲ. ಒಂದು ಮಟ್ಟದಲ್ಲಿ ಅಶೋಕನಿಗೆ ತನ್ನ ರಹಸ್ಯವನ್ನು ಸ್ಫೋಟಮಾಡುವ ಅನಿವಾರ್ಯತೆ ಅವಳಿಗೆ ಕಂಡುಬಂದಿತ್ತು. ಒಂದು ಥರದಲ್ಲಿ ತಾನು ಮಾನಸಿಕ ಹಾದರ ಮಾಡಿದ್ದೇನೆ ಎಂದೂ ಅವಳಿಗೆ ಅನ್ನಿಸಿತ್ತು. ತನ್ನ ತಾಯ್ತನದ ಅರಿವು ಅವಳ ಕತ್ತಿಗೆ ಪಾವಿತ್ರ್ಯದ ಬಂಧನವನ್ನು ಹಾಕುತ್ತಿದ್ದಂತೆ ಅವಳಿಗೆ ಭಾಸವಾಗಿತ್ತು. ಒಂದು ರೀತಿಯ ವಿಶೇಷ ಪಾಪ ಭೀತಿ ಅವಳನ್ನು ಆವರಿಸಿಬಿಟ್ಟಿತ್ತು. ಈ ಪ್ರಕರಣವನ್ನು ಇಲ್ಲಿಯೇ ಮುಗಿಸಬೇಕೆಂದು ಮೊದಲ ಬಾರಿಗೆ ಅವಳಿಗೆ ಅನ್ನಿಸಿತ್ತು. ಆದರೂ ತೀವ್ರವಾಗಿ ತನ್ನ ಮನಸ್ಸನ್ನು ಕಾಡುತ್ತಿದ್ದ ಈ ವ್ಯಕ್ತಿ ಹೀಗೆ ಅರಿವಿಲ್ಲದಂತೆಯೇ ಅವಳ ಜೀವನದಲ್ಲಿ ಪ್ರವೇಶಿಸಿ ಈ ರೀತಿಯ ಬೃಹದಾಕಾರದ ಪಾತ್ರವನ್ನು ಆಕ್ರಮಿಸಿಕೊಂಡದ್ದು ಹೇಗೆಂದು ತಿಳಿಯುವ ಕುತೂಹಲ ಅವಳನ್ನು ಬಿಟ್ಟಿರಲಿಲ್ಲ. ಗಟ್ಟಿಮನಸ್ಸು ಮಾಡಿ ಆ ಕಲ್ಪನಾಲೋಕದ ವ್ಯಕ್ತಿಗೆ ಅವಳು ಪತ್ರವನ್ನ ಬರೆದೇ ಬಿಟ್ಟಿದ್ದಳು: "ಕೆಲವು ದಿನಗಳ ನನ್ನ ಅನುಮಾನ ನಿಜವಾಗಿದೆ. ನಿನಗೊಂದು ಸಿಹಿ ಸುದ್ದಿ. ನಾನು ತಾಯಿಯಾಗಲಿದ್ದೇನೆ. ಈ ದಿನವೇ ಡಾಕ್ಟರ ಬಳಿಗೆ ಹೋಗಿದ್ದೆ.."
*
’ಡಾಕ್ಟರ ಹತ್ತಿರ ಚೆಕಪ್‌ಗೆ ಹೋಗಿದ್ದೆಯಾ?’ ಗಂಡ ಕೇಳಿದ
’ಹುಂ’
’ಆ ವಿಷಯ ಮಾತಾಡಿದೆಯಾ?’
’ಮಾತಾಡಿದೆ.’
’ಏನಂದರು?’
’ಅಡ್ಡಿಯಿಲ್ಲ, ಸರಿ ಅಂದರು.’
’ಹಾಗಾದರೆ ಯಾವಾಗಂತೆ?’
’ನಾಳೆ ಮೂರನೇ ತಾರೀಕಿಗಂತೆ.’
’ಸರಿ, ಒಳ್ಳೆಯದಾಯಿತು’
ಗಂಡ ಇನ್ನೂ ಏನೇನೋ ಕೇಳಿದ್ದ. ಅವನ ಒಂದೊಂದು ಪ್ರಶ್ನೆಯೂ ಅವಳ ಮನದ ಆಳವನ್ನು ಕೆದಕಿದಂತೆ ಆಗಿತ್ತು. ಅಶೋಕನಿಗೆ ಅವಳು ಪತ್ರ ಬರೆದದ್ದು ಕಳೆದ ತಿಂಗಳು ಹದಿನೆಂಟರಂದು. ಬೆಂಗಳೂರಿಗೆ ಅದು ಹತ್ತೊಂಬತ್ತು ಅಥವಾ ಇಪ್ಪತ್ತಕ್ಕೆ ತಲುಪಿದ್ದಿರಬಹುದು. ಅಶೋಕ ಎಂದೂ ಉತ್ತರಿಸಲು ತಡಮಾಡಿದ್ದವನಲ್ಲ. ಆದರೆ ಅವಳಿಗೆ ಆ ನಂತರ ಒಂದು ಭಾವನೆ ತೀವ್ರವಾಗಿ ಕಾಡಿತ್ತು. ಮದುವೆಯಾದ ಆರುವರ್ಷಗಳಲ್ಲಿ ಬರದಿದ್ದ ತಾಯ್ತನ ಅಶೋಕನ ಪರಿಚಯವಾದ ಕೂಡಲೇ ಉಂಟಾದದ್ದು ಹೇಗೆ? ಹೆಣ್ಣಿನ ಜೀವನದ ಸಾಫಲ್ಯತೆ ಇರುವುದೇ ತಾಯ್ತನದಲ್ಲಿ ಎನ್ನುವ ಗಟ್ಟಿ ನಂಬಿಕೆ ಅವಳಿಗಿತ್ತು.. ಅವಳಿಗೆ ಹುಟ್ಟಬಹುದಾದ ಕೂಸಿಗೆ ಅವನ ಮನೆಯ ಹೆಸರನ್ನು ನೀಡಬೇಕೆಂಬ ವಿಚಿತ್ರ ಬಯಕೆ ಅವಳಿಗೆ ಯಾಕೆ ಉಂಟಾಯಿತೋ ಅವಳಿಗೆ ತಿಳಿದಿರಲಿಲ್ಲ. ಆದರೆ ಅಶೋಕನಿಂದ ಪತ್ರವೇ ಬರಲಿಲ್ಲ. ಅವಳಿಗೆ ಆ ಸಂಬಂಧವನ್ನು ಸುಲಭವಾಗಿ ಕಡಿದು ಹಾಕಲು ಸಾಧ್ಯವೇ ಆಗಿರಲಿಲ್ಲ. ಇದ್ದಕ್ಕಿದ್ದಂತೆ ಅವಳ ಗಂಡ ಸಿಡಿಲೆರಗುವಂತಹ ನಿರ್ಧಾರವನ್ನು ತನ್ನ ಕಿವಿಯಲ್ಲಿ ಹಾಕಿದ್ದ.. ಅವಳಿಗೆ ಆ ಅನುಮಾನವೂ ಬಂದಿತ್ತು. ಆದರೆ ಅವನಿಗೆ ಅಶೋಕನ ಈ ವಿಷಯ ತಿಳಿದಿತ್ತೇನು?
*
’ಅಶೋಕನ ವಿಷಯ ಹೇಗೆ ಗೊತ್ತಾಯಿತು?’ ಗಂಡ ಕೇಳಿದ್ದ
’ಅವರಣ್ಣನಂತೆ ಸಂದೀಪ್ ಅಂತ..’
’ಹೋಗಲಿ ಬಿಡು. ಅವರುಗಳ ಸಂಪರ್ಕ ಸಂಪೂರ್ಣವಾಗಿ ಕಡಿದಂತೆ ಅಲ್ಲವೇ?’
’ಹಾಗೆಂದೇ ಅನ್ನಿಸುತ್ತದೆ. ಅವರಿಗೊಂದು ಪತ್ರ ಬರೆದು ಹಾಕಿದೆ.’
’ಗರ್ಭಪಾತಕ್ಕೆ ತೊಂದರೆ ಇಲ್ಲ ತಾನೇ?’
’ಇಲ್ಲವಂತೆ. ಎರಡು ಘಂಟೆಯಲ್ಲಿ ಮುಗಿಯುತ್ತದಂತೆ. ನಂತರ ನಾನು ಮಾಮೂಲು ವ್ಯಕ್ತಿ.’
’ಒಳ್ಳೆಯದಾಯಿತು ಬಿಡು. ನೀನು ಮಾಮೂಲಾಗಿದ್ದರೇನೇ ಚೆನ್ನ.’
ಅವರುಗಳ ಸಂಭಾಷಣೆ ಹೀಗೇ ಮುಂದುವರೆದಿತ್ತು.
ಈ ಕಥೆ ನಿಮಗೆ ಇನ್ನೂ ಮಸಕಾಗಿದೆ ಎಂದು ಅವಳಿಗೆ ಗೊತ್ತಿತ್ತು. ಆದರೆ ಇದಕ್ಕಿಂತ ಹೆಚ್ಚಿನ ಸ್ವರೂಪವನ್ನು ಈ ಕಥೆಗೆ ನೀಡಲು ಅವಳಿಂದ ಸಾಧ್ಯವಾಗಿರಲಿಲ್ಲ. ವಾಸ್ತವಗಳು ಹಾಗೆಯೇ ಸ್ವಲ್ಪ ಅಸಂಗತವಾಗಿರುತ್ತವೆ. ಪ್ರೇಮ ಪ್ರೀತಿಗಳ ಇತಿಹಾಸ ಹೀಗೇ ದುರಂತದಲ್ಲಿ ಮುಕ್ತಾಯಗೊಳ್ಳುವುದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಅಂದಹಾಗೆ ತನ್ನ ಗಂಡನ ನಿರ್ಧಾರದ ಬಗ್ಗೆ ಅವಳು ಹೇಳಿದ್ದಳು.. ಅದು ಆಗಲೇಬೇಕೆಂದು ಅವನು ಹಠ ಹಿಡಿದಿದ್ದರಿಂದ ಅವಳೂ ಒಪ್ಪಿದ್ದಳು. ಎಷ್ಟಾದರೂ ಇಬ್ಬರೂ ಕೂಡಿ ಬಾಳಬೇಕೆಂದಿದ್ದರು, ಹಾಗೂ ಅವಳಿಗೆ ಹೆಚ್ಚಿನ ವಯಸ್ಸೇನೂ ಆಗಿರಲಿಲ್ಲ. ಕೇವಲ ಇಪ್ಪತ್ತೆಂಟು ಅಷ್ಟೇ. ಮುಂದೆ ಮಕ್ಕಳಾಗಲೂ ಬಹುದು. ಮಾರನೆಯ ದಿನ ಮೂರನೆಯ ತಾರೀಖಾಗಿತ್ತು. ಅಶೋಕ ಸತ್ತ ಹದಿಮೂರನೆಯ ದಿನ. ಅದೇ ದಿನ ಅವಳ ಗರ್ಭಪಾತದ ಮುಹೂರ್ತವೂ ಇಡಲಾಗಿತ್ತು. ಅದರೊಂದಿಗೆ ಅವಳೆಂದೂ ಕಂಡಿರದ ಅಶೋಕನ ಸಂಪೂರ್ಣ ಕೊಂಡಿಗಳೂ ಕಳಚಿಹೋಗಬಹುದು ಎಂದು ಅವಳಿಗನ್ನಿಸಿತ್ತು. ಬರಲಿರುವ ನಾಳೆಗಾಗಿ ಅವಳು ಕಾತರದಿಂದ ಕಾಯದಿದ್ದರೂ, ಬರಲಿರುವ ನಾಳೆಗಳಿಗಾಗಿ, ದೊರೆಯಬಹುದಾದ ಸಾಫಲ್ಯಕ್ಕಾಗಿ ಅವಳು ಕಾತರದಿಂದ ಕಾಯುತ್ತಿದ್ದಳು. ಅವಳು ಮೊದಲೇ ಹೇಳಿದಂತೆ.. ಕಾದರೆ ಎಲ್ಲರಿಗೂ ಇದರಲ್ಲಿ ಇನ್ನೂ ಹೆಚ್ಚಿನ ಅರ್ಥ ಗೋಚರಿಸಬಹುದಿತ್ತೇನೋ..
೧೯೮೭
1 comment:
good theme. I liked the central idea. I liked the technique too. choice of words needs a review. At many places if you rework the words it would turn out a much better story. Of course, I am aware you wrote it 20 years back ! Overall, a good work.
jayadev
Post a Comment